ಪದ್ಯ ೧೫: ಸಂಜಯನು ಯಾರ ನಡಿಗೆಯನ್ನು ನೋಡಿದನು – ೮?

ಭೂತರವ ಭೇತಾಳ ಕಲಹ ವಿ
ಧೂತ ಜಂಬುಕ ಘೂಕ ಕಾಕ
ವ್ರಾತ ರಭಸಕೆ ಬೆಚ್ಚುವನು ಪಾಂಡವರ ಬಲವೆಂದು
ಆತು ಮರಳಿದು ಹಿಂದ ನೋಡಿ ಪ
ರೇತ ವಿಭವವಲಾ ಎನುತ ಛಲ
ಚೇತನನು ಸಲೆ ಚಂಡಿಯಾದನು ಕಳನ ಚೌಕದಲಿ (ಗದಾ ಪರ್ವ, ೩ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೂತಗಳ ಕೂಗು, ಬೇತಾಳಗಳ ಜಗಳ, ನರಿ ಗೂಬೆ ಕಾಗೆಗಳ ರಭಸಕ್ಕೆ ಪಾಂಡವರ ಸೇನೆ ಎಲ್ಲಿ ಬಂದಿತೋ ಎಂದು ಬೆಚ್ಚುತಿದ್ದನು. ಆಗಾಗ ಏನನ್ನಾದರೂ ಹಿಡಿದು ಹಿಂದಕ್ಕೆ ನೋಡುತ್ತಾ ವೈಭವವು ನಾಶವಾಯಿತಲ್ಲಾ ಎಂದು ಛಲದಿಂದ ಉಗ್ರ ಭಾವವನ್ನು ತಾಳುತ್ತಿದ್ದನು.

ಅರ್ಥ:
ಭೂತ: ದೆವ್ವ, ಪಿಶಾಚಿ; ರವ: ಶಬ್ದ; ಭೇತಾಳ: ದೆವ್ವ; ಕಲಹ: ಜಗಳ; ವಿಧೂತ: ಅಲುಗಾಡುವ; ಜಂಬುಕ: ನರಿ; ಘೂಕ: ಗೂಬೆ; ಕಾಕ: ಕಾಗೆ; ವ್ರಾತ: ಗುಂಪು; ರಭಸ: ವೇಗ; ಬೆಚ್ಚು: ಭಯ, ಹೆದರಿಕೆ; ಬಲ: ಶಕ್ತಿ, ಸೈನ್ಯ; ಆತು: ಮುಗಿದ; ಮರಳು: ಹಿಂದಿರುಗು; ಹಿಂದ: ಭೂತ, ನಡೆದ; ನೋಡು: ವೀಕ್ಷಿಸು; ಪರೇತ: ಹೆಣ, ಶವ; ವಿಭವ: ಸಿರಿ, ಸಂಪತ್ತು; ಛಲ: ದೃಢ ನಿಶ್ಚಯ; ಚೇತನ: ಮನಸ್ಸು, ಬುದ್ಧಿ; ಸಲೆ: ಒಂದೇ ಸಮನೆ, ಏಕಪ್ರಕಾರವಾಗಿ; ಚಂಡಿ: ಹಟಮಾರಿತನ, ಛಲ; ಕಳ: ರಣರಂಗ; ಚೌಕ: ಬಯಲು, ಕಣ, ರಂಗ;

ಪದವಿಂಗಡಣೆ:
ಭೂತ+ರವ +ಭೇತಾಳ +ಕಲಹ +ವಿ
ಧೂತ +ಜಂಬುಕ +ಘೂಕ +ಕಾಕ
ವ್ರಾತ +ರಭಸಕೆ +ಬೆಚ್ಚುವನು +ಪಾಂಡವರ +ಬಲವೆಂದು
ಆತು +ಮರಳಿದು+ ಹಿಂದ + ನೋಡಿ+ ಪ
ರೇತ +ವಿಭವವಲಾ +ಎನುತ +ಛಲ
ಚೇತನನು +ಸಲೆ +ಚಂಡಿಯಾದನು +ಕಳನ +ಚೌಕದಲಿ

ಅಚ್ಚರಿ:
(೧) ದುರ್ಯೋಧನನು ಹೆದರುವ ಪರಿ – ಭೂತರವ ಭೇತಾಳ ಕಲಹ ವಿಧೂತ ಜಂಬುಕ ಘೂಕ ಕಾಕ
ವ್ರಾತ ರಭಸಕೆ ಬೆಚ್ಚುವನು
(೨) ದುರ್ಯೋಧನನನ್ನು ಕರೆದ ಪರಿ – ಛಲಚೇತನನು ಸಲೆ ಚಂಡಿಯಾದನು