ಪದ್ಯ ೬೧: ಯುಧಿಷ್ಠಿರನು ದ್ರೋಣನ ರಥವನ್ನು ಹೇಗೆ ಮುಸುಕಿದನು?

ಅರಸ ಫಡ ಹೋಗದಿರು ಸಾಮದ
ಸರಸ ಕೊಳ್ಳದು ಬಿಲ್ಲ ಹಿಡಿ ಹಿಡಿ
ಹರನ ಮರೆವೊಗು ನಿನ್ನ ಹಿಡಿವೆನು ಹೋಗು ಹೋಗೆನುತ
ಸರಳ ಮುಷ್ಟಿಯ ಕೆನ್ನೆಯೋರೆಯ
ಗುರು ಛಡಾಳಿಸೆ ಧನುವನೊದರಿಸೆ
ಧರಣಿಪತಿ ಹಳಚಿದನು ಹೂಳಿದನಂಬಿನಲಿ ರಥವ (ದ್ರೋಣ ಪರ್ವ, ೧ ಸಂಧಿ, ೬೧ ಪದ್ಯ)

ತಾತ್ಪರ್ಯ:
ಎಲೈ ರಾಜನೇ, ಓಡಿ ಹೋಗಬೇಡ, ಇಲ್ಲಿ ಸಂಧಿಯ ಸರಸ ನಡೆಯುವುದಿಲ್ಲ, ಬಿಲ್ಲನ್ನು ಹಿಡಿ, ನೀನು ಶಿವನನ್ನು ಮೊರೆಹೊಕ್ಕರೂ ನಿನ್ನನ್ನು ಸೆರೆಹಿಡಿಯುತ್ತೇನೆ ಎನ್ನುತ್ತಾ ಬಾಣವನ್ನು ಕೆನ್ನೆಗೆಳೆದು ದ್ರೋಣನು ಆರ್ಭಟಿಸಲು, ಯುಧಿಷ್ಠಿರನು ಬಿಲ್ಲನ್ನೊದರಿಸಿ ದ್ರೋಣನ ರಥವನ್ನು ಬಾಣಗಳಿಂದ ಮುಚ್ಚಿದನು.

ಅರ್ಥ:
ಅರಸ: ರಾಜ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಹೋಗು: ತೆರಳು; ಸಾಮ: ಶಾಂತಗೊಳಿಸುವಿಕೆ; ಸರಸ: ಚೆಲ್ಲಾಟ; ಕೊಳ್ಳು: ಪಡೆ; ಬಿಲ್ಲು: ಚಾಪ; ಹಿಡಿ: ಗ್ರಹಿಸು; ಹರ: ಶಿವ; ಮರೆ:ಆಶ್ರಯ; ಸರಳ: ಬಾಣ; ಮುಷ್ಟಿ: ಅಂಗೈ; ಕದಪು; ಓರೆ: ವಕ್ರ; ಕೆನ್ನೆಯೋರೆ: ಓರೆಯಾಗಿಟ್ಟುಕೊಂಡ ಕೆನ್ನೆ; ಗುರು: ಆಚಾರ್ಯ; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಧನು: ಚಾಪ; ಒದರು: ಜಾಡಿಸು, ಗರ್ಜಿಸು; ಧರಣಿಪತಿ: ರಾಜ; ಹಳಚು: ತಾಗು, ಬಡಿ; ಹೂಳು: ಹೂತು ಹಾಕು, ಮುಳುಗುವಂತೆ ಮಾಡು; ಅಂಬು: ಬಾಣ; ರಥ: ಬಂಡಿ;

ಪದವಿಂಗಡಣೆ:
ಅರಸ +ಫಡ +ಹೋಗದಿರು +ಸಾಮದ
ಸರಸ +ಕೊಳ್ಳದು +ಬಿಲ್ಲ +ಹಿಡಿ +ಹಿಡಿ
ಹರನ +ಮರೆವೊಗು +ನಿನ್ನ +ಹಿಡಿವೆನು +ಹೋಗು +ಹೋಗೆನುತ
ಸರಳ +ಮುಷ್ಟಿಯ +ಕೆನ್ನೆ+ಓರೆಯ
ಗುರು +ಛಡಾಳಿಸೆ +ಧನುವನ್+ಒದರಿಸೆ
ಧರಣಿಪತಿ+ ಹಳಚಿದನು +ಹೂಳಿದನ್+ಅಂಬಿನಲಿ +ರಥವ

ಅಚ್ಚರಿ:
(೧) ಧರಣಿಪತಿ, ಅರಸ; ಬಿಲ್ಲ, ಧನು – ಸಮಾನಾರ್ಥಕ ಪದ
(೨) ಅರಸ, ಸರಸ – ಪ್ರಾಸ ಪದಗಳು