ಪದ್ಯ ೪೧: ಊರ್ವಶಿಯ ಎತ್ತಿದ ಕೈ ಹೇಗೆ ಹೊಳೆಯುತ್ತಿತ್ತು?

ತುಳುಕಿತದ್ಭುತ ರೋಷ ಸುಯ್ಲಿನ
ಝಳಹೊಡೆದು ಮೂಗುತಿಯ ಮುತ್ತಿನ
ಬೆಳಕು ಕಂದಿತು ಕುಂದಿತಮಲಚ್ಛವಿ ಮುಖಾಂಬುಜದ
ಹೊಳೆ ಹೊಳೆವ ಕೆಂದಳದ ಸೆಳ್ಳುಗು
ರೊಳ ಮಯೂಖದ ಮಣಿಯ ಮುದ್ರಿಕೆ
ದಳ ಮರೀಚಿಯಲೆಸೆದುದೆತ್ತಿದ ಹಸ್ತವೂರ್ವಶಿಯ (ಅರಣ್ಯ ಪರ್ವ, ೯ ಸಂಧಿ, ೪೧ ಪದ್ಯ)

ತಾತ್ಪರ್ಯ:
ಊರ್ವಶಿಗೆ ಬಹಳ ಕೋಪವು ಆವರಿಸಿತು, ಉಕ್ಕಿದ ಕೋಪಕ್ಕೆ ಆಕೆಯು ನಿಟ್ಟುಸಿರು ಬಿಟ್ಟಳು, ಆ ಕೋಪದ ಉಸಿರಿನ ಶಾಖಕ್ಕೆ ಮೂಗಿತಿಯ ಮುತ್ತಿನ ಬೆಳಕು ಕಂದಿತು, ಮುಖ ಕಮಲದ ಕಾಮ್ತಿಯು ಕುಂದಿತು, ಊರ್ವಹ್ಸಿಯು ಕೈಯೆತ್ತಲು, ಅವಳ ಹಸ್ತದ ಕೆಂಪು, ಬೆರಳುಗಳ ಉಗುರುಗಳ ಬೆಡಗು ಮಣಿ ಮುದ್ರಿಕೆಯ ಕಿರಣಗಳಿಂದ ಅವಳ ಹಸ್ತವು ಶೋಭಿಸಿತು.

ಅರ್ಥ:
ತುಳುಕು: ಹೊರಸೂಸುವಿಕೆ, ಉಕ್ಕುವಿಕೆ; ಅದ್ಭುತ: ಅತ್ಯಾಶ್ಚರ್ಯಕರವಾದ, ವಿಸ್ಮಯ; ರೋಷ: ಕೋಪ; ಸುಯ್ಲು: ನಿಟ್ಟುಸಿರು; ಝಳ: ಕಾಂತಿ, ಶಾಖ; ಹೊಡೆ: ತಾಗು; ಮೂಗುತಿ: ಮೂಗಿನ ಆಭರಣ; ಮುಖ: ಆನನ; ಅಂಬುಜ: ಕಮಲ; ಮುತ್ತು: ಬೆಲೆಬಾಳುವ ರತ್ನ; ಬೆಳಕು: ಕಾಂತಿ; ಕಂದು: ಕಡಿಮೆಯಾಗು, ಮಾಸು; ಕುಂದು: ಕೊರತೆ; ಅಮಲ: ನಿರ್ಮಲ; ಚ್ಛವಿ: ಕಾಂತಿ; ಹೊಳೆ: ಪ್ರಕಾಶಿಸು; ಕೆಂದಳದ: ಕೆಂಪಾದ; ಸೆಳ್ಳು: ಚೂಪಾದ; ಉಗುರು: ನಖ; ಮಯೂಖ: ಕಿರಣ, ರಶ್ಮಿ; ಮುದ್ರಿಕೆ: ಮುದ್ರೆಯುಳ್ಳ ಉಂಗುರ; ದಳ: ಗುಂಪು, ಸಾಲು; ಮರೀಚಿ: ಕಿರಣ, ರಶ್ಮಿ, ಕಾಂತಿ; ಹಸ್ತ: ಕೈ;

ಪದವಿಂಗಡಣೆ:
ತುಳುಕಿತ್+ಅದ್ಭುತ +ರೋಷ +ಸುಯ್ಲಿನ
ಝಳ+ಹೊಡೆದು +ಮೂಗುತಿಯ +ಮುತ್ತಿನ
ಬೆಳಕು +ಕಂದಿತು +ಕುಂದಿತ್+ಅಮಲ+ಚ್ಛವಿ +ಮುಖಾಂಬುಜದ
ಹೊಳೆ +ಹೊಳೆವ +ಕೆಂದಳದ +ಸೆಳ್ಳ್+ಉಗು
ರೊಳ+ ಮಯೂಖದ+ ಮಣಿಯ+ ಮುದ್ರಿಕೆ
ದಳ +ಮರೀಚಿಯಲ್+ಎಸೆದುದ್+ಎತ್ತಿದ +ಹಸ್ತ+ಊರ್ವಶಿಯ

ಅಚ್ಚರಿ:
(೧) ಮ ಕಾರದ ಸಾಲು ಪದಗಳು – ಮಯೂಖದ ಮಣಿಯ ಮುದ್ರಿಕೆದಳ ಮರೀಚಿಯಲೆಸೆದುದೆತ್ತಿದ
(೨) ಬೆಳಕು, ಹೊಳೆ, ಮರೀಚಿ, ಝಳ, ಚ್ಛವಿ, ಮಯೂಖ – ಸಮನಾರ್ಥಕ ಪದಗಳು

ಪದ್ಯ ೨೬: ಸಭೆಯು ಹೇಗೆ ಪ್ರಕಾಶಮಾನವಾಗಿತ್ತು?

ಕವಿದು ವರುಣಾಂಶುಗಳ ಲಹರಿಯ
ಲವಣಿ ಲಾವಣಿಗೆಯಲಿ ನೀಲ
ಚ್ಛವಿಯ ದೀಧಿತಿ ಝಳಪಿಸಿತು ದೆಸೆದೆಸೆಯ ಭಿತ್ತಿಗಳ
ತಿವಿದವೆಳಮುತ್ತುಗಳ ಚಂದ್ರಿಕೆ
ಜವಳಿಸಿದ ವೊಂದೊಂದನೌಕಿದ
ವವಿರಳಿತ ಮಣಿ ಕಿರಣ ವೇಣೀ ಬಂಧ ಬಂದುರದಿ (ಸಭಾ ಪರ್ವ, ೧೪ ಸಂಧಿ, ೨೬ ಪದ್ಯ)

ತಾತ್ಪರ್ಯ:
ಒಂದು ಭಾಗದಲ್ಲಿ ನಸುಗೆಂಪು ಬೆಳಕಿನ ಕಾಂತಿಯು ಹೊರಹೊಮ್ಮುತ್ತಿತ್ತು, ಮಗದೊಂದು ಕಡೆ ನೀಲಿ ಬಣ್ಣದ ಹವಳಗಳಿಂದ ಹೊರಹೊಮ್ಮುತ್ತಿದ್ದ ಕಾಂತಿ, ಇವೆರಡರ ಪ್ರಕಾಶದಿಂದ ಗೋಡೆಗಳು ಬೆಳಗುತ್ತಿದ್ದವು. ಮುತ್ತುಗಳ ಕಾಂತಿಯ ಬೆಳದಿಂಗಳು ಇನ್ನೊಂದು ಕಡೆ, ಇವು ಮೂರು ಜಡೆಯ ಕೂದಲುಗಳಂತೆ ಬೆರೆತು ಸಭೆ ಪ್ರಜ್ವಲಿಸುತ್ತಿತ್ತು.

ಅರ್ಥ:
ಕವಿ: ಆವರಿಸು; ಅರುಣ: ಕೆಂಪು ಬಣ್ಣ; ಅಂಶ: ಭಾಗ; ಲಹರಿ: ರಭಸ, ಆವೇಗ, ಕಾಂತಿ; ಲವಣಿ: ಕಾಂತಿ; ಲಾವಣಿಗೆ: ಆಕರ್ಷಣೆ; ಮುತ್ತಿಗೆ; ಚ್ಛವಿ: ಕಾಂತಿ; ದೀಧಿತಿ: ಹೊಳಪು, ಕಾಂತಿ, ಕಿರಣ; ಝಳಪಿಸು: ಹೊಳಪು; ದೆಸೆ: ದಿಕ್ಕು; ಭಿತ್ತಿ: ಮುರಿ, ಒಡೆ; ತಿವಿದು: ಚುಚ್ಚು; ಮುತ್ತು: ಬೆಲೆಬಾಳುವ ರತ್ನ; ಚಂದ್ರಿಕೆ: ಬೆಳದಿಂಗಳು; ಜವಳಿಸು: ಜೋಡಿಸು; ಔಕು: ತಳ್ಳು; ಅವಿರಳ: ದಟ್ಟವಾದ; ಮಣಿ: ರತ್ನ; ಕಿರಣ: ಕಾಂತಿ; ವೇಣಿ: ಕೂದಲು; ಬಂಧ: ಕಟ್ಟು; ಬಂಧುರ: ಚೆಲುವಾದುದು, ಸುಂದರವಾದುದು;

ಪದವಿಂಗಡಣೆ:
ಕವಿದುವ್+ಅರುಣಾಂಶುಗಳ+ ಲಹರಿಯ
ಲವಣಿ +ಲಾವಣಿಗೆಯಲಿ +ನೀಲ
ಚ್ಛವಿಯ+ ದೀಧಿತಿ+ ಝಳಪಿಸಿತು +ದೆಸೆದೆಸೆಯ +ಭಿತ್ತಿಗಳ
ತಿವಿದವ್+ಎಳ+ಮುತ್ತುಗಳ +ಚಂದ್ರಿಕೆ
ಜವಳಿಸಿದವ್ +ಒಂದೊಂದನ್+ಔಕಿದವ್
ಅವಿರಳಿತ +ಮಣಿ +ಕಿರಣ+ ವೇಣೀ +ಬಂಧ +ಬಂದುರದಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ವೊಂದೊಂದನೌಕಿದವವಿರಳಿತ ಮಣಿ ಕಿರಣ ವೇಣೀ ಬಂಧ ಬಂದುರದಿ
(೨) ಲ ಕಾರದ ತ್ರಿವಳಿ ಪದ – ಲಹರಿಯ ಲವಣಿ ಲಾವಣಿಗೆಯಲಿ

ಪದ್ಯ ೨೪: ದ್ರೌಪದಿಯ ಕಣ್ಣಿನ ಕಾಂತಿ ಹೇಗೆ ಹೊಳೆಯುತ್ತಿತ್ತು?

ಹೊಳೆಹೊಳೆದುದಾಭರಣ ರತ್ನಾ
ವಳಿಯರುಚಿ ತನ್ಮಣಿರುಚಿಯ ಮು
ಕ್ಕುಳಿಸಿತಂಗಚ್ಛವಿ ತದಂಗಪ್ರಭೆಯನಡಹಾಯ್ದು
ಥಳಥಳಿಸಿದುದು ವದನ ಮುಖ ಮಂ
ಡಳದ ಕಾಂತಿಯನೊದೆದು ಕಂಗಳ
ಬೆಳಗು ವಿಸಟಂಬರಿದುದೇನೆಂಬೆನು ನಿತಂಬಿನಿಯ (ಆದಿ ಪರ್ವ, ೧೩ ಸಂಧಿ, ೨೪ ಪದ್ಯ)

ತಾತ್ಪರ್ಯ:
ದ್ರೌಪದಿಯ ಆಭರಣಗಳು ಹೊಳೆಯುತ್ತಿದ್ದವು, ಆ ರತ್ನಾಭರಣಗಳ ಕಾಂತಿಯು ಆಕೆಯ ದೇಹದ ಕಾಂತಿಯ ಮುಂದೆ ಮಂಕಾಗಿತ್ತು, ಅವಳ ದೇಹದ ಕಾಂತಿಯನ್ನು ಮೀರಿಸುವಷ್ಟು ಕಾಂತಿ ಆಕೆಯ ಮುಖದಲ್ಲಿ ತೇಜಸ್ಸಿನಲ್ಲಿ ತೋರುತ್ತಿತ್ತು, ಆ ಚೆಲುವೆಯ ಮುಖದ ಕಾಂತಿಯನ್ನು ಹಿಂದಿಟ್ಟು ಆಕೆಯ ಕಣ್ಣಿನ ಕಾಂತಿ ಎಲ್ಲವನ್ನು ಮೀರಿ ಹೊಳೆಯುತ್ತಿತ್ತು, ಇಂತಹ ಸೌಂದರ್ಯವನ್ನು ಹೊಂದಿದ ದ್ರೌಪದಿಯನ್ನು ಹೇಗೆ ತಾನೆ ವರ್ಣಿಸಲು ಸಾಧ್ಯ?

ಅರ್ಥ:
ಹೊಳೆ: ಮಿಂಚು; ಆಭರಣ: ಒಡವೆ; ರತ್ನ: ಬೆಲೆಬಾಳುವ ವಸ್ತು, ಮುತ್ತು, ಹವಳ; ಆವಳಿ: ಸಾಲು, ಗುಂಪು; ರುಚಿ: ಕಾಂತಿ, ಪ್ರಕಾಶ; ಮುಕ್ಕುಳಿಸು: ಮುಗ್ಗುರಿಸು, ಎಡವು; ಅಂಗ: ದೇಹದ ಭಾಗ; ಚ್ಛವಿ: ಕಾಂತಿ; ಪ್ರಭೆ: ಕಾಂತಿ; ಅಡಹಾಯ್: ಅಡ್ಡಬರು, ಇದಿರಿಸು; ಥಳ: ಹೊಳೆ; ವದನ: ಮುಖ; ಮಂಡಳ: ವರ್ತುಲಾಕಾರವಾದುದು; ಕಾಂತಿ: ಪ್ರಕಾಶ, ಚ್ಛವಿ; ಒದೆ: ಹೊರಹಾಕು, ಕಾಲಿನಿಂದ ತಳ್ಳು; ಕಂಗಳು: ಕಣ್ಣು, ನಯನ; ಬೆಳಗು: ಕಾಂತಿ; ವಿಸಟಂಬರಿ: ಮನಬಂದಂತೆ ಹರಿ; ನಿತಂಬಿನಿ: ಹೆಣ್ಣು, ಚೆಲುವೆ;ನಿತಂಬ: ಸ್ತ್ರೀಯರ ಸೊಂಟದ ಕೆಳಗಿನ ಹಿಂಬಾಗ, ಕಟಿಪ್ರದೇಶ;

ಪದವಿಂಗಡಣೆ:
ಹೊಳೆಹೊಳೆದುದ್+ಆಭರಣ +ರತ್ನಾ
ವಳಿಯ+ರುಚಿ +ತನ್+ಮಣಿರುಚಿಯ +ಮು
ಕ್ಕುಳಿಸಿತ್+ಅಂಗಚ್ಛವಿ +ತದ್+ಅಂಗಪ್ರಭೆಯನ್+ಅಡಹಾಯ್ದು
ಥಳಥಳಿಸಿದುದು +ವದನ +ಮುಖ +ಮಂ
ಡಳದ +ಕಾಂತಿಯನ್+ಒದೆದು +ಕಂಗಳ
ಬೆಳಗು +ವಿಸಟಂಬರಿದುದ್+ಏನೆಂಬೆನು +ನಿತಂಬಿನಿಯ

ಅಚ್ಚರಿ:
(೧) ಜೋಡಿ ಪದಗಳು – ಹೊಳೆಹೊಳೆ; ರತ್ನಾವಳಿಯ ರುಚಿ, ಮಣಿರುಚಿ; ಅಂಗಚ್ಛವಿ, ತದಂಗ ಪ್ರಭೆ;
(೨) ಹೊಳೆ, ರುಚಿ, ಚ್ಛವಿ, ಪ್ರಭೆ, ಕಾಂತಿ, ಬೆಳಗು – ಸಮಾನಾರ್ಥಕ ಪದಗಳು
(೩) ವದನ ಮುಖ – ಸಮಾನಾರ್ಥಕ ಪದ, ಒಂದರ ಪಕ್ಕ ಒಂದರಂತೆ ಪದಗಳ ರಚನೆ
(೪) ಮುಕ್ಕುಳಿಸು, ಅಡಹಾಯ್, ಒದೆ, ವಿಸಟಂಬರಿ – ಸಾಮ್ಯ ಅರ್ಥವುಳ್ಳ ಪದಗಳು
(೫) ಹೊಳೆಹೊಳೆ, ಥಳಿ ಥಳಿ – ೧, ೩ ಸಾಲಿನ ಮೊದಲ ಪದಗಳು

ಪದ್ಯ ೧೬: ಯಾವ ಕವಿಯು ದ್ರೌಪದಿಯ ಸೌಂದರ್ಯವನ್ನು ವರ್ಣಿಸಲು ಏಕೆ ಸಾಧ್ಯವಿಲ್ಲ?

ಎಸೆವಧರ ರಾಗದಲಿ ಮಿಗೆ ರಂ
ಜಿಸುವವೋಲ್ ಮಾಣಿಕ್ಯಮೆರೆದವು
ದಶನ ದೀಧಿತಿಯಿಂದ ಥಳಥಳಿಸಿದವು ಮುತ್ತುಗಳು
ಮಿಸುಪದೇಹಚ್ಛವಿಗಳಲಿ ಢಾ
ಳಿಸುವ ವೋಲ್ ಭೂಷಣದ ಹೇಮ
ಪ್ರಸರ ಮೆರೆದವು ಹೊಗಳೆ ಕವಿಯಾರಬುಜಲೋಚನೆಯ (ಆದಿ ಪರ್ವ, ೧೩ ಸಂಧಿ, ೧೬ ಪದ್ಯ)

ತಾತ್ಪರ್ಯ:
ತುಟಿಯ ಕೆಂಪಾದ ಬಣ್ಣದಿಂದ ಆಕೆಯು ಧರಿಸಿದ್ದ ಮಾಣಿಕ್ಯಗಳು ಹೊಳೆದವು, ಆಕೆಯ ಹಲ್ಲುಗಳ ಬಿಳಿ ಬಣ್ಣದಿಂದ ಆಕೆ ಧರಿಸಿದ್ದ ಮುತ್ತುಗಳು ಹೊಳೆದವು, ಆಕೆಯ ದೇಹದ ಕಾಂತಿಯಿಂದ ಅವಳು ಧರಿಸಿದ್ದ ಆಭರಣಗಳ ಬಂಗಾರವು ಎದ್ದು ಕಾಣುತ್ತಿತ್ತು. ಆ ಕಮಲ ಲೋಚನೆಯನ್ನು ಹೊಗಳಲು ಬಲ್ಲ ಕವಿ ಯಾರು ತಾನೆ ಇದ್ದಾರೆ?

ಅರ್ಥ:
ಎಸೆ:ಚೆಲ್ಲು; ಅಧರ: ತುಟಿ; ರಾಗ:ಬಣ್ಣ, ರಂಗು; ಮಿಗೆ: ಮಿಗಿಲು, ಅತಿಶಯ; ರಂಜಿಸು: ಹೊಳೆ, ಪ್ರಕಾಶಿಸು, ಶೋಭಿಸು; ಮಾಣಿಕ್ಯ: ಮುತ್ತು; ಮೆರೆ: ಶೋಭಿಸು, ಹೊಳೆ; ದಶನ: ಹಲ್ಲು; ದೀಧಿತಿ: ಹೊಳಪು, ಕಾಂತಿ, ಕಿರಣ; ಥಳಥಳ: ಹೊಳೆ; ಮುತ್ತು: ಆಭರಣ, ಮಾಣಿಕ್ಯ; ಮಿಸುಪು: ಕಾಂತಿ, ಹೊಳಪು; ಚ್ಛವಿ: ಕಾಂತಿ; ದೇಹ: ತನು; ಢಾಳಿಸು: ಹೊಳೆ; ಭೂಷಣ: ಆಭರಣ; ಹೇಮ: ಚಿನ್ನ; ಪ್ರಸರ: ಕಾಂತಿ; ಹೊಗಳು: ಕೊಂಡಾಟ; ಕವಿ: ಕಬ್ಬಿಗ; ಅಬುಜ: ಕಮಲ; ಲೋಚನೆ: ಕಣ್ಣು;

ಪದವಿಂಗಡಣೆ:
ಎಸೆವ್+ಅಧರ +ರಾಗದಲಿ +ಮಿಗೆ +ರಂ
ಜಿಸುವವೋಲ್ +ಮಾಣಿಕ್ಯ+ಮೆರೆದವು
ದಶನ+ ದೀಧಿತಿಯಿಂದ +ಥಳಥಳಿಸಿದವು +ಮುತ್ತುಗಳು
ಮಿಸುಪ+ದೇಹ+ಚ್ಛವಿಗಳಲಿ +ಢಾ
ಳಿಸುವ +ವೋಲ್ +ಭೂಷಣದ +ಹೇಮ
ಪ್ರಸರ+ ಮೆರೆದವು +ಹೊಗಳೆ+ ಕವಿಯಾರ್+ಅಬುಜ+ಲೋಚನೆಯ

ಅಚ್ಚರಿ:
(೧) ಮಾಣಿಕ್ಯ, ಮುತ್ತು, ಹೇಮ -ಆಭರಣಗಳ ವಿವರ
(೨) ಮೆರೆ, ಥಳಥಳಿಸು, ಚ್ಛವಿ, ಢಾಳು – ಕಾಂತಿ, ಹೊಳೆ ಪದದ ಸಮಾನಾರ್ಥಕ ಪದ
(೩) ತುಟಿಯ ಕೆಂಪು, ಹಲ್ಲಿನ ಬಿಳುಪು, ದೇಹದ ಹೇಮವರ್ಣವನ್ನು ಉಪಯೋಗಿಸಿ ಸೌಂದರ್ಯದ ವರ್ಣನೆ