ಪದ್ಯ ೪೦: ದುರ್ಯೋಧನನು ಯಾವುದಕ್ಕೆ ಡಿಕ್ಕಿ ಹೊಡೆದನು?

ನಂಬಿಸಿದುದೊಂದೆಡೆಯ ಬಾಗಿಲು
ಬಿಂಬಿಸಿತು ಭಿತ್ತಿಯಲಿ ತತ್ಪ್ರತಿ
ಬಿಂಬವೆಂದಾನರಿಯದೊಡಹಾಯಿದೆನು ಚೌಕಿಗೆಯ
ಎಂಬೆನೇನನು ಹೊರಳಿ ನಗುವ ನಿ
ತಂಬಿನಿಯರನು ಭೀಮ ಪಾರ್ಥರ
ಡಂಬರವ ಕಂಡಸುವ ಹಿಡಿದೆನು ನೋಡಿಕೊಳ್ಳೆಂದ (ಸಭಾ ಪರ್ವ, ೧೩ ಸಂಧಿ, ೪೦ ಪದ್ಯ)

ತಾತ್ಪರ್ಯ:
ಒಂದು ಕಡೆ ಬಾಗಿಲು ಗೋಡೆಯೊಂದರ ಭಿತ್ತಿಯಲ್ಲಿ ಪ್ರತಿಬಿಂಬಿಸಿ ಬಾಗಿಲಿನಂತೆ ಕಾಣಿಸಿ ನನ್ನನ್ನು ನಂಬಿಸಿತು. ಅದು ಬಾಗಿಲೆಂದು ತಿಳಿದು ನಾನು ಹೋಗಲು ಯತ್ನಿಸಿದಾಗ ಅದು ಗೋಡೆಯಾಗಿತ್ತು ಅದಕ್ಕೆ ಡಿಕ್ಕಿ ಹೊಡೆದೆ. ಇದನ್ನು ನೋಡಿದ ಹೆಂಗಸರು ಹೊರಳಿ ಹೊರಳಿ ನಕ್ಕರು. ಭೀಮಾರ್ಜುನರು ಬಿಂಕದಿಂದಿದ್ದರು. ಅದನ್ನು ನೋಡಿಯೂ ನಾನು ಜೀವ ಹಿಡಿದುಕೊಂಡೆ, ನನ್ನ ದುರವಸ್ಥೆಯನ್ನು ನೀವೇ ನೋಡಿ ಎಂದು ತನ್ನ ಅಳಲನ್ನು ತೋಡಿಕೊಂಡನು.

ಅರ್ಥ:
ನಂಬಿಕೆ: ವಿಶ್ವಾಸ, ಶ್ರದ್ಧೆ; ಒಂದೆಡೆ: ಒಂದು ಬದಿ; ಬಾಗಿಲು: ಕದ; ಬಿಂಬಿಸು: ತೋರು; ಭಿತ್ತಿ: ಒಡೆಯುವುದು, ಸೀಳುವುದು; ಪ್ರತಿ: ಸಾಟಿ, ಸಮಾನ; ಬಿಂಬ: ಪ್ರತಿರೂಪ, ಪಡಿನೆಳಲು; ಹಾಯಿ: ಹಾರು, ಜಿಗಿ; ಅರಿ: ತಿಳಿ; ಚೌಕಿ:ಮನೆಯ ಒಳ ಅಂಗಳ, ಪೀಠ, ಮಣೆ; ಹೊರಳು: ತಿರುವು, ಬಾಗು, ಉರುಳು; ನಗು: ಸಂತೋಷ; ನಿತಂಬಿನಿ: ಯುವತಿ; ಡಂಬರ: ಆಡಂಬರ, ಜಂಬ; ಕಂಡು: ನೋಡು; ಅಸು: ಪ್ರಾಣ; ಹಿಡಿ: ಬಂಧಿಸು, ತಳೆ, ಗ್ರಹಿಸು; ನೋಡು: ವೀಕ್ಷಿಸು;

ಪದವಿಂಗಡಣೆ:
ನಂಬಿಸಿದುದ್+ಒಂದೆಡೆಯ +ಬಾಗಿಲು
ಬಿಂಬಿಸಿತು+ ಭಿತ್ತಿಯಲಿ +ತತ್ಪ್ರತಿ
ಬಿಂಬವೆಂದ್+ಆನ್+ಅರಿಯದ್+ಒಡಹಾಯಿದೆನು+ ಚೌಕಿಗೆಯ
ಎಂಬೆನ್+ಏನನು+ ಹೊರಳಿ+ ನಗುವ+ ನಿ
ತಂಬಿನಿಯರನು +ಭೀಮ +ಪಾರ್ಥರ
ಡಂಬರವ+ ಕಂಡ್+ಅಸುವ +ಹಿಡಿದೆನು +ನೋಡಿಕೊಳ್ಳೆಂದ

ಅಚ್ಚರಿ:
(೧) ನಂಬಿ, ಬಿಂಬಿ, ನಿತಂಬಿ – ಪ್ರಾಸ ಪದಗಳು
(೨) ಬ ಕಾರದ ತ್ರಿವಳಿ ಪದ – ಬಾಗಿಲು ಬಿಂಬಿಸಿತು ಭಿತ್ತಿಯಲಿ

ಪದ್ಯ ೨೮: ಹಸ್ತಿನಾನಗರ ಹೇಗೆ ತೋರಿತು?

ಅರರೆ ಪಾತಾಳದ ವಿಳಾಸಿನಿ
ಯರಿಗೆ ಚೌಕಿಗೆಯೋ ಸುದುರ್ಗದ
ಹಿರಿಯಗಳೊ ಬಲುಗೋಟೆಯೋ ನಿಚ್ಚಣಿಕೆಯೋ ದಿವದ
ಮುರಿಮುರಿದ ಹುಲಿಮುಖದ ಹೇಮದ
ತರದ ತೆನೆಗಳ ವಜ್ರಮಯ ಬಂ
ಧುರ ಕವಾಟಸ್ಫುಟದಲೆಸೆದುದು ಹಸ್ತಿನಾನಗರ (ಉದ್ಯೋಗ ಪರ್ವ, ೭ ಸಂಧಿ, ೨೮ ಪದ್ಯ)

ತಾತ್ಪರ್ಯ:

ಅರ್ಥ:
ಅರರೆ: ಒಂದು ಕೊಂಡಾಟದ ನುಡಿ; ಪಾತಾಳ: ಅಧೋಲೋಕ; ವಿಳಾಸಿನಿ: ಸುಂದರಿ; ಚೌಕಿ: ಮಣೆ, ಕಾವಲು; ದುರ್ಗ: ಕೋಟೆ; ಹಿರಿಯ:ದೊಡ್ಡವನು, ಶ್ರೇಷ್ಠ; ಊಟೆ: ಝರಿ; ಬಲು: ಹೆಚ್ಚು; ನಿಚ್ಚಣಿ: ಏಣಿ; ದಿವ: ಸ್ವರ್ಗ, ದಿನ; ಮುರಿ: ಸೀಳು; ಹುಲಿ: ವ್ಯಾಘ್ರ;ಮುಖ: ಆನನ; ಹೇಮ: ಬಂಗಾರ; ತರ: ಸಾಮ್ಯ; ತೆನೆ: ಕೋಟೆಯ ಮೇಲ್ಭಾಗ, ಧಾನ್ಯದ ಹೊಡೆ; ವಜ್ರ: ಗಟ್ಟಿಯಾದ, ಬಲವಾದ, ನವರತ್ನಗಳಲ್ಲಿ ಒಂದು; ಬಂಧುರ: ಬಾಗಿರುವುದು; ಕವಾಟ: ಬಾಗಿಲು; ಸ್ಫುಟ: ಸ್ಪಷ್ಟವಾಗಿ ತಿಳಿಯುವಂತಹುದು; ಎಸೆ: ತೋರು; ನಗರ: ಊರು;

ಪದವಿಂಗಡಣೆ:
ಅರರೆ +ಪಾತಾಳದ +ವಿಳಾಸಿನಿ
ಯರಿಗೆ +ಚೌಕಿಗೆಯೋ +ಸುದುರ್ಗದ
ಹಿರಿಯಗಳೊ+ ಬಲುಗೋಟೆಯೋ +ನಿಚ್ಚಣಿಕೆಯೋ +ದಿವದ
ಮುರಿಮುರಿದ +ಹುಲಿಮುಖದ +ಹೇಮದ
ತರದ +ತೆನೆಗಳ +ವಜ್ರಮಯ +ಬಂ
ಧುರ+ ಕವಾಟ+ಸ್ಫುಟದಲ್+ಎಸೆದುದು +ಹಸ್ತಿನಾನಗರ

ಅಚ್ಚರಿ:
(೧)

ಪದ್ಯ ೪೯: ಅಗ್ನಿಯು ಯಾವ ಕಡೆ ಬೀಡು ಬಿಟ್ಟಿತು?

ಸುಳಿಸುಳಿದು ಶಶಿಕಾಂತಮಯದ
ಗ್ಗಳದ ವೇದಿಕೆಗಳಲಿ ನೀಲದ
ನೆಲೆಯ ಚೌಕಿಗೆಗಳಲಿ ಮಂಟಪದಲಿ ಲತಾವಳಿಯ
ಲಲಿತ ಸೌಧದ ಚಾರು ಚಿತ್ರಾ
ವಳಿಯ ಮೇಲ್ಕಟ್ಟುಗಳ ಭವನಂ
ಗಳಲಿ ಬಿಟ್ಟುದು ಕೂಡೆ ಪಾಳೆಯ ವಹ್ನಿಭೂಪತಿಯ (ಆದಿ ಪರ್ವ, ೨೦ ಸಂಧಿ, ೪೯ ಪದ್ಯ)

ತಾತ್ಪರ್ಯ:
ಅಗ್ನಿಯು ಖಾಂಡವವನವನ್ನೆಲ್ಲಾ ಸುಳಿಯಿತು, ಚಂದ್ರಕಾಂತದ ಶಿಲೆಗಳ ಕಟ್ಟೆಗಳು (ಬೆಟ್ಟ ಗುಡ್ಡಗಳ ಮೇಲಿದ್ದ ಮರಗಳನ್ನು ಆವರಿಸಿತು), ನೀಲಮಣಿಯ ಚೌಕಗಳು (ನೀರಿನ ದಡದಲ್ಲಿದ್ದ ಮರಗಳನ್ನು ಆವರಿಸಿತು), ವನದಲ್ಲಿದ್ದ ಮಂಟಪಗಳ (ಮೇಲೆ ಹರಡಿದ್ದ ಬಳ್ಳಿಗಳನ್ನು ಆವರಿಸಿತು), ಸುಂದರ ಬಳ್ಳಿಗಳು ಮರಗಳನ್ನು ನೆರವಾಗಿಸಿ ಕೊಂಡು ಮೇಲೇರಿರುವ ಬಳ್ಳಿಗಳ ಉಪ್ಪರಿಗೆಗಳನ್ನು ಬೆಂಕಿಯು ಆವರಿಸಿತು.

ಅರ್ಥ:
ಸುಳಿ:ಸುತ್ತು; ಶಶಿ: ಚಂದ್ರ; ಕಾಂತ: ಪ್ರಕಾಶ, ಕಾಂತಿ; ಅಗ್ಗಳ: ದೊಡ್ಡ; ವೇದಿಕೆ: ಎತ್ತರವಾದ ಪ್ರದೇಶ; ನೀಲ:ನೀಲಿ ಬಣ್ಣ; ನೆಲೆ: ಸ್ಥಳ; ಚೌಕಿ:ಚಚ್ಚೌಕವಾದ ಮಂಟಪ; ಮಂಟಪ:ಸಮತಲವಾದ ಚಾವಣಿ ಯುಳ್ಳ ಬಾಗಿಲಿಲ್ಲದ ಚಪ್ಪರದಾಕಾರದ ಕಲ್ಲಿನ ಕಟ್ಟಡ; ಲತ: ಬಳ್ಳಿ; ವಳಿ: ಸಾಲು, ಗುಂಪು; ಲಲಿತ: ಚೆಲುವು; ಸೌಧ:ಉಪ್ಪರಿಗೆ ಮನೆ;ಚಾರು: ಸುಂದರ; ಚಿತ್ರಾವಳಿ: ಬರೆದ ಆಕೃತಿಗಳ ಗುಂಪು; ಮೇಲ್ಕಟ್ಟು: ಎತ್ತಿ ಹಿಡಿ; ಭವನ: ಮನೆ; ಪಾಳೆಯ: ಬೀಡು; ಭೂಪತಿ: ರಾಜ

ಪದವಿಂಗಡಣೆ:
ಸುಳಿಸುಳಿದು +ಶಶಿ+ಕಾಂತಮಯದ
ಅಗ್ಗಳದ+ ವೇದಿಕೆಗಳಲಿ+ ನೀಲದ
ನೆಲೆಯ +ಚೌಕಿಗೆಗಳಲಿ +ಮಂಟಪದಲಿ +ಲತಾವಳಿಯ
ಲಲಿತ +ಸೌಧದ +ಚಾರು +ಚಿತ್ರಾ
ವಳಿಯ +ಮೇಲ್ಕಟ್ಟುಗಳ+ ಭವನಂ
ಗಳಲಿ +ಬಿಟ್ಟುದು +ಕೂಡೆ +ಪಾಳೆಯ +ವಹ್ನಿ+ಭೂಪತಿಯ

ಅಚ್ಚರಿ:
(೧) ಕಾಡಿನಲ್ಲಿ ವೇದಿಕೆ, ಚೌಕಿ, ಮಂಟಪ, ಸೌಧ, ಮೇಲ್ಕಟ್ಟು, ಭವನ ಇವಗಳನ್ನು ಚಿತ್ರಿಸಿರುವುದು