ಪದ್ಯ ೩೭: ದುರ್ಯೋಧನನ ಕೋಪವು ಹೇಗೆ ಪ್ರಕಟಗೊಂಡಿತು?

ಧರಣಿಪತಿ ಕೇಳ್ ಕೊಳನ ತಡಿಯಲಿ
ಕುರುಕುಲಾಗ್ರಣಿ ನಿಂದು ನೋಡಿದ
ನರಿಭಟರ ಸುಮ್ಮಾನವನು ಸಂಭ್ರಾಂತಚೇತನವ
ಉರಿದುದಾ ಮಸ್ತಕದ ರೋಷೋ
ತ್ಕರದ ಝಳಝಾಡಿಸಿತು ಶುಭ್ರ
ಸ್ಫುರಣದಂತನಿಪೀಡಿತಾಧರನಾದನಾ ಭೂಪ (ಗದಾ ಪರ್ವ, ೫ ಸಂಧಿ, ೩೭ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರನೇ ಕೇಳು, ದುರ್ಯೋಧನನು ಸರೋವರದ ದಡದಮೇಲೆ ನಿಂತು ಶತ್ರುಗಳ ಸುಮ್ಮಾನವನ್ನು ಸಂಭ್ರಮವನ್ನು ನೋಡಿದನು. ಅವನ ದೇಹವು ಕಾಲಿಂದ ಮುಖದವರೆಗೆ ಕೋಪದಿಂದುರಿಯಿತು. ನಿರ್ಮಲವಾದ ಹಲ್ಲುಗಳಿಂದ ಅವನ ಕೆಳತುಟಿಯನ್ನು ಕಚ್ಚಿದನು.

ಅರ್ಥ:
ಧರಣಿಪತಿ: ರಾಜ; ಕೇಳು: ಆಲಿಸು; ಕೊಳ: ಸರೋವರ; ತಡಿ: ದಡ; ಕುಲ: ವಂಶ; ಅಗ್ರಣಿ: ಶ್ರೇಷ್ಠ, ಮೊದಲಿಗ; ನಿಂದು: ನಿಲ್ಲು; ನೋಡು: ವೀಕ್ಷಿಸು; ಅರಿ:ವೈರಿ; ಭಟ: ಸೈನಿಕ; ಸುಮ್ಮಾನ: ಸಂತೋಷ; ಸಂಭ್ರಾಂತ: ಸಂಭ್ರಮ; ಚೇತನ: ಮನಸ್ಸು, ಬುದ್ಧಿ, ಪ್ರಜ್ಞೆ; ಉರಿ: ಜ್ವಾಲೆ, ಸಂಕಟ; ಮಸ್ತಕ: ಶಿರ; ರೋಷ: ಕೋಪ; ಉತ್ಕರ: ಹೆಚ್ಚು; ಝಳ: ಶಾಖ, ಪ್ರಕಾಶ; ಶುಭ್ರ: ನಿರ್ಮಲ; ಸ್ಫುರಣ: ನಡುಗುವುದು, ಕಂಪನ; ದಂತ: ಹಲ್ಲು; ಪೀಡಿತ: ನೋವು; ಅಧರ: ಕೆಳತುಟಿ; ಭೂಪ: ರಾಜ;

ಪದವಿಂಗಡಣೆ:
ಧರಣಿಪತಿ +ಕೇಳ್ +ಕೊಳನ +ತಡಿಯಲಿ
ಕುರುಕುಲಾಗ್ರಣಿ+ ನಿಂದು +ನೋಡಿದನ್
ಅರಿ+ಭಟರ +ಸುಮ್ಮಾನವನು+ ಸಂಭ್ರಾಂತ+ಚೇತನವ
ಉರಿದುದಾ +ಮಸ್ತಕದ +ರೋಷೋ
ತ್ಕರದ +ಝಳಝಾಡಿಸಿತು+ ಶುಭ್ರ
ಸ್ಫುರಣ+ದಂತ+ನಿಪೀಡಿತ+ಅಧರನ್+ಆದನಾ +ಭೂಪ

ಅಚ್ಚರಿ:
(೧) ಒಂದೇ ಪದವಾಗಿ ರಚನೆ – ಶುಭ್ರಸ್ಫುರಣದಂತನಿಪೀಡಿತಾಧರನಾದನಾ
(೨) ಧರಣಿಪತಿ, ಭೂಪ – ಸಮಾನಾರ್ಥಕ ಪದ, ಪದ್ಯದ ಮೊದಲ ಹಾಗು ಕೊನೆ ಪದ
(೩) ದುರ್ಯೋಧನನನ್ನು ಕುರುಕುಲಾಗ್ರಣಿ ಎಂದು ಕರೆದಿರುವುದು

ಪದ್ಯ ೨೭: ಇಡೀ ವಿಶ್ವಕ್ಕೆ ಕೃಷ್ಣನು ಯಾವ ರೀತಿ ಹೊಂದಿಕೊಂಡಿದ್ದಾನೆ?

ವಿಶ್ವ ಶಿಲ್ಪದ ಕುಶಲ ಹಸ್ತನು
ವಿಶ್ವರಕ್ಷೆಯ ಮಂತ್ರವಾದಿಯು
ವಿಶ್ವ ಸಮಿಧೆಗಳಗ್ನಿಕಾರ್ಯದ ಮೊಬ್ಬಚಾರಿವಟು
ವಿಶ್ವನಾಟಕ ಸೂತ್ರಧಾರನು
ವಿಶ್ವ ವಿಸ್ಮಯದೈಂದ್ರಜಾಲಿಕ
ವಿಶ್ವದಂತಸ್ಯೂತ ಚೇತನನೀತ ನೋಡೆಂದ (ಸಭಾ ಪರ್ವ, ೧೦ ಸಂಧಿ, ೨೭ ಪದ್ಯ)

ತಾತ್ಪರ್ಯ:
ವಿಶ್ವವು ಶಿಲ್ಪವೆಂದರೆ ಅದನ್ನು ಕಟೆದ ಶಿಲ್ಪಿ ಇವನು. ವಿಶ್ವಕ್ಕೆ ಗ್ರಹಬಾಧೆ ಹಿಡಿದಿದೆಯೇ? ಅದನ್ನು ಬಿಡಿಸುವ ಮಂತ್ರವಾದಿ ಇವನು. ವಿಶ್ವದ ಸಮಿತ್ತೇ ಇವನು, ಅದನ್ನು ಹಿಡಿದು ಅಗ್ನಿಕಾರ್ಯಮಾಡುವ ಬ್ರಹ್ಮಚಾರಿವಟುವು ಸಹ ಈತನೇ, ಇವನು ವಿಶ್ವವೆಂಬ ನಾಟಕದ ಸೂತ್ರಧಾರ, ವಿಶ್ವವೊಂದು ಮಹದ್ವಿಸ್ಮಯವೆಂದರೆ ಅದನ್ನು ನಿರ್ಮಿಸಿದ ಐಂದ್ರಜಾಲಿಕನಿವನು, ವಿಶ್ವದೊಳಗಿರುವ ಚೈತನ್ಯವೂ ಇವನೇ ಎಂದು ಕೃಷ್ಣನ ಗುಣಗಾನವನ್ನು ವರ್ಣಿಸಿದರು.

ಅರ್ಥ:
ವಿಶ್ವ: ಜಗತ್ತು; ಶಿಲ್ಪ: ಕೆತ್ತನೆಯ ಕೆಲಸ; ಕುಶಲ: ಚಾತುರ್ಯ; ಹಸ್ತ: ಕರ; ರಕ್ಷೆ: ಕಾಪು, ರಕ್ಷಣೆ; ಮಂತ್ರವಾದಿ: ಜಾದೂಗಾರ; ಸಮಿಧೆ: ಸಮಿತೆ, ಯಜ್ಞಕ್ಕಾಗಿ ಬಳಸುವ ಉರುವಲು ಕಡ್ಡಿ; ಅಗ್ನಿಕಾರ್ಯ: ಯಜ್ಞ; ಬೊಮ್ಮಚಾರಿ: ಬ್ರಹ್ಮಚಾರಿ; ವಟು: ಬ್ರಹ್ಮಚಾರಿ; ನಾಟಕ: ಅಭಿನಯ ಪ್ರಧಾನವಾದ ದೃಶ್ಯ ಪ್ರಬಂಧ, ರೂಪಕ; ಸೂತ್ರಧಾರ: ನಿರ್ದೇಶಕ, ವ್ಯವಸ್ಥಾಪಕ; ವಿಸ್ಮಯ: ಆಶ್ಚರ್ಯ, ಅಚ್ಚರಿ; ಐಂದ್ರಜಾಲ: ಗಾರುಡಿ; ಸ್ಯೂತ: ಚೇತನ: ಮನಸ್ಸು, ಬುದ್ಧಿ, ಪ್ರಜ್ಞೆ;

ಪದವಿಂಗಡಣೆ:
ವಿಶ್ವ +ಶಿಲ್ಪದ +ಕುಶಲ+ ಹಸ್ತನು
ವಿಶ್ವರಕ್ಷೆಯ +ಮಂತ್ರವಾದಿಯು
ವಿಶ್ವ+ ಸಮಿಧೆಗಳ್+ಅಗ್ನಿಕಾರ್ಯದ +ಬೊಮ್ಮಚಾರಿವಟು
ವಿಶ್ವನಾಟಕ+ ಸೂತ್ರಧಾರನು
ವಿಶ್ವ +ವಿಸ್ಮಯದ್+ಐಂದ್ರಜಾಲಿಕ
ವಿಶ್ವದಂತಸ್ಯೂತ+ ಚೇತನನೀತ +ನೋಡೆಂದ

ಅಚ್ಚರಿ:
(೧) ವಿಶ್ವ – ೧-೬ ಸಾಲಿನ ಮೊದಲನೇ ಪದ