ಪದ್ಯ ೪೪: ಶಲ್ಯನ ಮೇಲಿನ ಆಕ್ರಮಣ ಹೇಗಿತ್ತು?

ಚೂರಿಸುವ ಮೊಗಸೂನಿಗೆಯ ಕೊ
ಲ್ಲಾರಿಗಳ ಶರಬಂಡಿಗಳ ಹೊಂ
ದೇರು ಕವಿದುವು ಕೋಲಕೋಲಾಹಲದ ತೋಹಿನಲಿ
ವೀರರುಬ್ಬಿನ ಬೊಬ್ಬೆಗಳು ಜ
ಜ್ಝಾರರೇರಿತು ಸರಳ ಧಾರಾ
ಸರದಲಿ ದಕ್ಕಡರು ಬಿಲ್ಲವರಾಂತರರಿಭಟನ (ಶಲ್ಯ ಪರ್ವ, ೨ ಸಂಧಿ, ೪೪ ಪದ್ಯ)

ತಾತ್ಪರ್ಯ:
ಚುಚ್ಚುವ ಮುಖಸೂನಿಗೆಗಳನ್ನು ಕಟ್ಟಿದ ಕಮಾನುಗಳನ್ನುಳ್ಳ ಬಂಡಿಗಳು ಕೋಲಾಹಲಮಾಡುತ್ತಾ ಶಲ್ಯನನ್ನು ಮುತ್ತಿದವು. ವೀರರು ಬೊಬ್ಬೆಯಿಟ್ಟು ಮುಂದೆ ನುಗ್ಗಿದರು ಧೀರರಾದ ಬಿಲ್ಲುಗಾರರು ಶಲ್ಯನನ್ನು ಬಾಣಗಳಿಂದ ಹೊಡೆದರು.

ಅರ್ಥ:
ಚೂರಿಸು: ಚುಚ್ಚು; ಮೊಗ: ಮುಖ; ಸೂನಿಗೆ: ಒಂದು ಬಗೆಯ ಆಯುಧ; ಕೊಲ್ಲಾರಿ: ಬಂಡಿಯ ಬಿದಿರಿನ ಕಮಾನು; ಶರ: ಬಾಣ; ಬಂಡಿ: ರಥ; ಹೊಂದೇರು: ಚಿನ್ನದ ತೇರು; ಕವಿ: ಆವರಿಸು; ಕೋಲ: ಬಾಣ; ಕೋಲಾಹಲ: ಅವಾಂತರ; ತೋಹು: ಕಪಟ, ಮೋಸ; ಉಬ್ಬು: ಅಧಿಕ್ಯ; ಬೊಬ್ಬೆ: ಸುಟ್ಟ ಗಾಯ, ಗುಳ್ಳೆ; ಜಜ್ಝಾರ: ಪರಾಕ್ರಮಿ; ಸರಳ: ಬಾಣ; ಧಾರಾ: ವರ್ಷ; ದಕ್ಕಡ: ಸಮರ್ಥ, ಬಲಶಾಲಿ; ಬಿಲ್ಲು: ಚಾಪ; ಅರಿಭಟ: ವೈರಿಯ ಸೈನಿಕ;

ಪದವಿಂಗಡಣೆ:
ಚೂರಿಸುವ +ಮೊಗ+ಸೂನಿಗೆಯ +ಕೊ
ಲ್ಲಾರಿಗಳ +ಶರ+ಬಂಡಿಗಳ+ ಹೊಂ
ದೇರು +ಕವಿದುವು +ಕೋಲಕೋಲಾಹಲದ+ ತೋಹಿನಲಿ
ವೀರರ್+ಉಬ್ಬಿನ +ಬೊಬ್ಬೆಗಳು +ಜ
ಜ್ಝಾರರ್+ಏರಿತು +ಸರಳ +ಧಾರಾ
ಸರದಲಿ +ದಕ್ಕಡರು +ಬಿಲ್ಲವರಾಂತರ್+ಅರಿಭಟನ

ಅಚ್ಚರಿ:
(೧) ಕೋಲಕೋಲಾಹಲದ ತೋಹಿನಲಿ – ಕೋಲ ಪದದ ಬಳಕೆ