ಪದ್ಯ ೬೭: ಶಿವನು ಅರ್ಜುನನ ಮನಸ್ತಾಪವನ್ನು ಹೇಗೆ ಹೋಗಲಾಡಿಸಿದನು?

ಈ ಪರಿಯಲರ್ಜುನನ ಮನದನು
ತಾಪವನು ಕಾಣುತಾ ಶಾಬರ
ರೂಪರಚನೆಯ ತೆರೆಯ ಮರೆಯಲಿ ಮೆರೆವ ಚಿನ್ಮಯದ
ರೂಪನವ್ಯಾಹತ ನಿಜೋನ್ನತ
ರೂಪರಸದಲಿ ನರನ ಚಿತ್ತದ
ತಾಪವಡಗಲು ತಂಪನೆರೆದನು ತರುಣ ಶಶಿಮೌಳಿ (ಅರಣ್ಯ ಪರ್ವ, ೭ ಸಂಧಿ, ೬೭ ಪದ್ಯ)

ತಾತ್ಪರ್ಯ:
ಈ ರೀತಿ ಅರ್ಜುನನು ಶಿವನ ಬಗ್ಗೆ ತನ್ನ ಮನಸ್ಸಿನಲ್ಲಿದ್ದುದನ್ನು ತೋಡಿಕೊಂಡು ದುಃಖಪಡುವುದನ್ನು ಕಂಡು, ಅವನ ಮನಸ್ಸಿನ ಅನುತಾಪವನ್ನು ತಿಳಿದು, ಕಿರಾತರೂಪಿನ ಮರೆಯಲ್ಲಿದ್ದ ತನ್ನ ಉನ್ನತವಾದ ನಾಶವಿಲ್ಲದ ತರುಣ ರೂಪವನ್ನು ಶಿವನು ತೋರಿಸಿ ಅರ್ಜುನನ ಮನಸ್ಸಿನ ತಾಪವನ್ನು ಹೋಗಲಾಡಿಸಿದನು.

ಅರ್ಥ:
ಪರಿ: ರೀತಿ; ಮನ: ಮನಸ್ಸು; ಅನುತಾಪ: ಪಶ್ಚಾತ್ತಾಪ, ದುಃಖ; ಕಾಣು: ತೋರು; ಶಾಬರ: ಬೇಡ; ರೂಪ: ಆಕಾರ; ರಚನೆ: ನಿರ್ಮಾಣ; ತೆರೆ: ಬಿಚ್ಚುವಿಕೆ; ಮರೆ: ಗುಟ್ಟು, ರಹಸ್ಯ; ಮೆರೆ: ಹೊಳೆ, ಪ್ರಕಾಶಿಸು; ಚಿನ್ಮಯ: ಶುದ್ಧಜ್ಞಾನದಿಂದ ಕೂಡಿದ; ಅವ್ಯಾಹತ: ತಡೆಯಿಲ್ಲದ, ಎಡೆಬಿಡದ; ನಿಜ: ದಿಟ; ಉನ್ನತ: ಶ್ರೇಷ್ಠ; ರಸ: ಸಾರ; ನರ: ಅರ್ಜುನ; ಚಿತ್ತ: ಮನಸ್ಸು; ತಾಪ: ಬಿಸಿ, ಉಷ್ಣತೆ; ಅಡಗು: ಅವಿತುಕೊಳ್ಳು, ಮರೆಯಾಗು; ತಂಪು: ತಣಿವು, ಶೈತ್ಯ; ಎರೆ: ಸುರಿ; ತರುಣ: ಹರೆಯದವನು, ಯುವಕ ; ಶಶಿ: ಚಂದ್ರ; ಮೌಳಿ: ಶಿರ;

ಪದವಿಂಗಡಣೆ:
ಈ ಪರಿಯಲ್+ಅರ್ಜುನನ +ಮನದ್+ಅನು
ತಾಪವನು +ಕಾಣುತಾ +ಶಾಬರ
ರೂಪರಚನೆಯ+ ತೆರೆಯ+ ಮರೆಯಲಿ +ಮೆರೆವ +ಚಿನ್ಮಯದ
ರೂಪನ್+ಅವ್ಯಾಹತ +ನಿಜೋನ್ನತ
ರೂಪ+ರಸದಲಿ+ ನರನ +ಚಿತ್ತದ
ತಾಪವ್+ಅಡಗಲು +ತಂಪನ್+ಎರೆದನು +ತರುಣ +ಶಶಿಮೌಳಿ

ಅಚ್ಚರಿ:
(೧) ರೂಪ – ೩ ಸಾಲಿನ ಮೊದಲ ಪದ
(೨) ರೂಪ, ತಾಪ – ಪ್ರಾಸ ಪದಗಳು
(೩) ಶಿವನ ತೋರಿದ ಪರಿ – ನರನ ಚಿತ್ತದ ತಾಪವಡಗಲು ತಂಪನೆರೆದನು ತರುಣ ಶಶಿಮೌಳಿ

ಪದ್ಯ೩೦: ಕೃಷ್ಣನ ಗುಣಗಾನವನ್ನು ಭೀಷ್ಮರು ಹೇಗೆ ಮಾಡಿದರು?

ಆ ಮಧುವನಾ ಕೈಟಭನ ಮುರಿ
ದೀ ಮಹಾತ್ಮಕನೊಡನೆ ವಾದಿಸು
ವೀ ಮರುಳನೇನೆಂಬೆನೈ ಶಿಶುಪಾಲ ಬಾಲಕನ
ಕಾಮರಿಪು ಕಲ್ಪಾಂತವಹ್ನಿ
ವ್ಯೋಮರೂಪನುದಾರ ಸಗುಣ ಸ
ನಾಮ ಚಿನ್ಮಯನೀತನೀತನನರಿವರಾರೆಂದ (ಸಭಾ ಪರ್ವ, ೧೦ ಸಂಧಿ, ೩೦ ಪದ್ಯ)

ತಾತ್ಪರ್ಯ:
ರಾಕ್ಷಸರಾದ ಮಧು ಕೈಟಭರನ್ನು ಸಂಹರಿಸಿದ ಈ ಮಹಾತ್ಮನನೊಡನೆ ವಾದಮಾಡುವ ಮೂರ್ಖತನ ತೋರಿದ ಶಿಶುಪಾಲ ಬಾಲಕನೆಂಬ ಹುಚ್ಚನಿಗೆ ಏನೆಂದು ಹೇಳಲಿ, ಕಲ್ಪಾಂತದಲ್ಲಿ ಶಿವನ ಹಣೆಗಣ್ಣುರಿಯೂ ಇವನೇ, ಆಕಾಶದಂತೆ ನಿರ್ಲೇಪನು ಈತ, ಭಕ್ತರಿಗಾಗಿ ಔದಾರ್ಯದಿಂದ ಸಗುಣರೂಪದಲ್ಲಿ ಅವತರಿಸುತ್ತಾನೆ, ಇವನು ಪ್ರಸಿದ್ಧ ಚಿನ್ಮಯನು, ಇಂತಹವನನ್ನು ತಿಳಿಯಬಲ್ಲವರಾರು ಎಂದು ಭೀಷ್ಮರು ತಿಳಿಸಿದರು.

ಅರ್ಥ:
ಮುರಿ: ಸೀಳು; ಮಹಾತ್ಮ: ಶ್ರೇಷ್ಠ; ವಾದಿಸು: ಚರ್ಚಿಸು; ಮರುಳ: ಮೂಢ, ಹುಚ್ಚ; ಬಾಲಕ: ಶಿಶು; ಕಾಮರಿಪು: ಶಿವ; ಕಾಮ: ಮನ್ಮಥ; ರಿಪು: ವೈರಿ; ಕಲ್ಪ:ಬ್ರಹ್ಮನ ಒಂದು ದಿವಸ, ಸಹಸ್ರಯುಗ, ಪ್ರಳಯ; ಅಂತ: ಕೊನೆ; ವಹ್ನಿ: ಬೆಂಕಿ; ವ್ಯೋಮ:ಆಕಾಶ, ಗಗನ; ರೂಪ: ಆಕಾರ; ಸಗುಣ:ಯೋಗ್ಯಗುಣಗಳಿಂದ ಕೂಡಿದ; ಸನಾಮ: ಒಳ್ಳೆಯ ಹೆಸರು; ಚಿನ್ಮಯ: ಶುದ್ಧಜ್ಞಾನದಿಂದ ಕೂಡಿದ; ಅರಿ: ತಿಳಿ;

ಪದವಿಂಗಡಣೆ:
ಆ +ಮಧುವನ್+ಆ+ ಕೈಟಭನ+ ಮುರಿದ್
ಈ+ ಮಹಾತ್ಮಕನೊಡನೆ+ ವಾದಿಸುವ್
ಈ+ ಮರುಳನ್+ಏನೆಂಬೆನೈ +ಶಿಶುಪಾಲ +ಬಾಲಕನ
ಕಾಮರಿಪು+ ಕಲ್ಪಾಂತ+ವಹ್ನಿ
ವ್ಯೋಮ+ರೂಪನ್+ಉದಾರ+ ಸಗುಣ+ ಸ
ನಾಮ +ಚಿನ್ಮಯನ್+ಈತನ್+ಅರಿವರಾರೆಂದ

ಅಚ್ಚರಿ:
(೧) ಶಿಶುಪಾಲಕನನ್ನು ತೆಗಳುವ ಪರಿ – ಬಾಲಕ, ಮರುಳ
(೨) ಶಿವನನ್ನು ಕಾಮರಿಪು ಎಂದು ಕರೆದಿರುವುದು
(೩) ಕೃಷ್ಣನ ಗುಣಗಾನ: ಸಗುಣ, ಸನಾಮ, ಚಿನ್ಮಯ, ವಹ್ನಿ ವ್ಯೋಮ ರೂಪ, ಉದಾರ

ಪದ್ಯ ೬: ಕೃಷ್ಣನು ಯಾವ ರೂಪದ ವ್ಯಕ್ತಿತ್ವವೆಂದು ಭೀಷ್ಮರು ತಿಳಿಸಿದರು?

ಭೂತ ಜನನ ಸ್ಥಿತಿಗೆ ಕಾರಣ
ನೀತನೀತಂಗಿಲ್ಲ ಕಾರಣ
ನೀತ ಜಾಗ್ರತ್ ಸ್ವಪ್ನ ಸುಪ್ತಿಗಳೆಂಬವಸ್ಥೆಗಳ
ಆತುರಿಯನಾತುರಿಯ ತುರಿಯಾ
ತೀತ ಲಕ್ಷಣ ನಿತ್ಯ ನಿರ್ಮಳ
ನೀತನಮಳ ವ್ಯಕ್ತಿ ಚಿನ್ಮಯನೆಂದನಾ ಭೀಷ್ಮ (ಸಭಾ ಪರ್ವ, ೧೦ ಸಂಧಿ, ೬ ಪದ್ಯ)

ತಾತ್ಪರ್ಯ:
ಪಂಚಮಹಾಭೂತಗಳ ಹುಟ್ಟಿಗೆ ಕಾರಣನಾದವನು, ಇವನಿಗೆ ಕಾರಣವಿಲ್ಲ, ಎಚ್ಚರ, ಕನಸು, ನಿದ್ರೆಗಳೆಂಬ ಮೂರು ಅವಸ್ಥೆಗಳನ್ನು ಗಣಿಸಿದರೆ, ಇವನು ಸಹಜವಾದ ಮೂರವಸ್ಥೆಗಳಲ್ಲೂ ಬೆರಾಗದ ನಾಲ್ಕನೆಯ ಅವಸ್ಥೆ ತುರಿಯಾವಸ್ಥೆಯನ್ನು ಮೀರಿದವನು. ನಿತ್ಯನೂ ನಿರ್ಮಲನೂ ಶುದ್ಧ ಅರಿವಿನ ರೂಪದವನು ಎಂದು ಭೀಷ್ಮರು ಹೇಳಿದರು.

ಅರ್ಥ:
ಭೂತ: ಮೂಲವಸ್ತು; ಜನನ: ಹುಟ್ತು; ಸ್ಥಿತಿ: ಅವಸ್ಥೆ; ಕಾರಣ: ನಿಮಿತ್ತ, ಹೇತು, ಉದ್ದೇಶ; ಜಾಗೃತ: ಎಚ್ಚರಸ್ಥಿತಿ; ಸ್ವಪ್ನ: ಕನಸು; ಸುಪ್ತಿ: ನಿದ್ರೆ, ನಿದ್ರಾವಸ್ಥೆ; ತುರಿಯ: ನಾಲ್ಕನೇ; ಅತೀತ: ಮೀರಿದ; ಲಕ್ಷಣ: ಗುರುತು, ಚಿಹ್ನೆ; ನಿತ್ಯ: ಯಾವಾಗಲು; ನಿರ್ಮಳ: ಶುದ್ಧ; ಅಮಳ: ನಿರ್ಮಲ; ವ್ಯಕ್ತಿ: ಮನುಷ್ಯ; ಚಿನ್ಮಯ: ಶುದ್ಧಜ್ಞಾನದಿಂದ ಕೂಡಿದ;

ಪದವಿಂಗಡಣೆ:
ಭೂತ +ಜನನ +ಸ್ಥಿತಿಗೆ +ಕಾರಣನ್
ಈತನ್+ಈತಂಗಿಲ್ಲ+ ಕಾರಣನ್
ಈತ +ಜಾಗ್ರತ್+ ಸ್ವಪ್ನ +ಸುಪ್ತಿಗಳೆಂವ್+ಅವಸ್ಥೆಗಳ
ಆತುರಿಯನ್+ ಆ+ತುರಿಯ +ತುರಿಯ
ಅತೀತ +ಲಕ್ಷಣ+ ನಿತ್ಯ+ ನಿರ್ಮಳನ್
ಈತನ್+ಅಮಳ +ವ್ಯಕ್ತಿ +ಚಿನ್ಮಯನೆಂದನಾ +ಭೀಷ್ಮ

ಅಚ್ಚರಿ:
(೧) ತುರಿಯ ಪದದ ಬಳಕೆ – ಆತುರಿಯನಾತುರಿಯ ತುರಿಯಾ