ಪದ್ಯ ೧೪: ಬಂಡಿಗಳನ್ನು ಎಳೆಯುವುದೇಕೆ ಪ್ರಯಾಸವಾಗಿತ್ತು?

ಬಳಿಯ ಚೌರಿಯ ಹೊರೆಯ ಚಿತ್ರಾ
ವಳಿ ವಿಧಾನದ ಹಾಸುಗಳ ಹೊಂ
ಬಳಿಯ ತೆರೆಸೀರೆಗಳ ಛತ್ರ ವ್ಯಜನ ಸೀಗುರಿಯ
ಹೊಳೆವ ಪಟ್ಟೆಯಲೋಡಿಗೆಯ ಹೊಂ
ಗೆಲಸದೊಳುಝಗೆಗಳ ಸುವರ್ಣಾ
ವಳಿಯ ದಿಂಡುಗಳೊಟ್ಟಿದವು ಬಂಡಿಗಳ ಜವ ಜಡಿಯೆ (ಗದಾ ಪರ್ವ, ೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ಚೌರಿಯ, ಚಿತ್ರ ರಂಜಿತವಾದ ಹಾಸುಗಳು, ಬಂಗಾರದ ಕೆಲಸದ ತೆರೆಗಳು, ಛತ್ರ, ಬೀಸಣಿಗೆ, ಚಾಮರಗಳ ಕಟ್ಟುಗಳು, ದಿಂಬುಗಳು, ಹೊಂಗೆಲಸ ಮಾಡಿದ ಹೊದಿಕೆಗಳು, ಬಂಗಾರದ ಬಣ್ನದ ದಿಂಡುಗಳ ಹೊರೆಗಳನ್ನು ಬಂಡಿಗಳ ಮೇಲೊಟ್ಟಿದರು. ಅವನ್ನೆಳೆಯುವುದೇ ಪ್ರಯಾಸದ ಕೆಲಸ.

ಅರ್ಥ:
ಬಳಿ: ಹತ್ತಿರ; ಚೌರಿ: ಚೌರಿಯ ಕೂದಲು; ಹೊರೆ: ಭಾರ; ಚಿತ್ರ:ಬರೆದ ಆಕೃತಿ; ಆವಳಿ: ಸಾಲು; ವಿಧಾನ: ರೀತಿ, ಬಗೆ; ಹಾಸು: ಹಾಸಿಗೆ, ಶಯ್ಯೆ; ಹೊಂಬಳಿ: ಚಿನ್ನದ ಕಸೂತಿ ಮಾಡಿದ ಬಟ್ಟೆ, ಜರತಾರಿ ವಸ್ತ್ರ; ತೆರೆಸೀರೆ: ಅಡ್ಡ ಹಿಡಿದಿರುವ ಬಟ್ಟೆ; ಛತ್ರ: ಕೊಡೆ; ವ್ಯಜನ: ಬೀಸಣಿಗೆ; ಸೀಗುರಿ: ಚಾಮರ; ಹೊಳೆ: ಪ್ರಕಾಶ; ಪಟ್ಟೆ: ರೇಷ್ಮೆಸೀರೆ; ಝಗೆ: ಹೊಳಪು, ಪ್ರಕಾಶ; ಸುವರ್ಣ: ಚಿನ್ನ; ಆವಳಿ: ಗುಂಪು, ಸಾಲು; ದಿಂಡು: ಬಟ್ಟೆಯ ಕಟ್ಟು, ಹೊರೆ; ಒಟ್ಟು: ರಾಶಿ; ಬಂಡಿ: ರಥ; ಜವ: ಯಮ; ಜಡಿ:ಕೊಲ್ಲು, ಗದರಿಸು;

ಪದವಿಂಗಡಣೆ:
ಬಳಿಯ +ಚೌರಿಯ +ಹೊರೆಯ +ಚಿತ್ರಾ
ವಳಿ +ವಿಧಾನದ +ಹಾಸುಗಳ +ಹೊಂ
ಬಳಿಯ +ತೆರೆ+ಸೀರೆಗಳ+ ಛತ್ರ +ವ್ಯಜನ +ಸೀಗುರಿಯ
ಹೊಳೆವ +ಪಟ್ಟೆಯಲ್+ಓಡಿಗೆಯ +ಹೊಂ
ಗೆಲಸದೊಳು +ಝಗೆಗಳ +ಸುವರ್ಣಾ
ವಳಿಯ +ದಿಂಡುಗಳ್+ಒಟ್ಟಿದವು +ಬಂಡಿಗಳ +ಜವ +ಜಡಿಯೆ

ಅಚ್ಚರಿ:
(೧) ಬಳಿ, ಆವಳಿ – ಪ್ರಾಸ ಪದ
(೨) ಹೊಂಬಳಿ, ಹೊಂಗೆಲಸ – ಚಿನ್ನ ಎಂದು ಹೇಳುವ ಪರಿ

ಪದ್ಯ ೧೮: ದ್ರೌಪದಿಯ ಸಭೆಗೆ ಹೇಗೆ ಬಂದಳು?

ಕವಿದ ಚಿತ್ರಾವಳಿಯ ದಡ್ಡಿಯ
ವಿವಿಧ ಭಟರುಗ್ಗಡಣೆಯಲಿ ವರ
ಯುವತಿ ಬಂದಳು ಸಖಿಯರೊಯ್ಯಾರದಲಿ ನೃಪಸಭೆಗೆ
ನವ ಬಲಾಹಕದೊಳಗೆ ಮಿಂಚಿನ
ಗವಿ ಸಹಿತ ಮರಿಮೋಡವಾವಿ
ರ್ಭವಿಸಿತೆನೆ ದಂಡಿಗೆಯ ನಿಳಿದಳು ಹೊಕ್ಕಳೋಲಗವ (ಉದ್ಯೋಗ ಪರ್ವ, ೬ ಸಂಧಿ, ೧೮ ಪದ್ಯ)

ತಾತ್ಪರ್ಯ:
ದ್ರೌಪದಿಯಿದ್ದ ಪಲ್ಲಕಿಯು ಬಟ್ಟೆಗಳಿಂದ ಆವೃತವಾಗಿ ಪಂಜರದಂತ್ತಿತ್ತು. ಆ ಚಿತ್ರಾವಳಿಯಿಂದ ಕವಿದ ಪಲ್ಲಕಿಯಲ್ಲಿ ಕುಳಿತಿದ್ದ ದ್ರೌಪದಿಯನ್ನು ಭಟ್ಟರು ಹಲವಾರು ಹೊಗಳಿಕೆಯಿಂದ ಕರೆತರುತ್ತಿದ್ದರು. ಅತಿ ಶ್ರೇಷ್ಠ ಹೆಣ್ಣಾದ ದ್ರೌಪದಿಯು ತನ್ನ ಒಯ್ಯಾರದ ಸಖಿಯರೊಡನೆ ಸಭೆಗೆ ಆಗಮಿಸಿದಳು. ತನ್ನ ಪಲ್ಲಕ್ಕಿಯ ಪರದೆಯನ್ನು ಸರಸಿ ಹೊರಕ್ಕೆ ಬರುವುದು, ಮಹಾಮೇಘದಿಂದ ಮಿಂಚನ್ನೊಳಗೊಂಡ ಮರಿಮೋಡವು ಬಂದಿತೋ ಎಂಬಂತೆ ಪಲ್ಲಕ್ಕಿಯಿಂದಿಳಿದು ಸಭಾಭವನಕ್ಕೆ ಬಂದಳು.

ಅರ್ಥ:
ಕವಿದ: ಮುಚ್ಚಿದ; ಚಿತ್ರ: ವಿಚಿತ್ರ, ಆಶ್ಚರ್ಯ; ಆವಳಿ: ಸಾಲು; ದಡ್ಡಿ: ಪಂಜರ, ತೆರೆ; ವಿವಿಧ: ಹಲವಾರು; ಭಟರು: ಸೇವಕರು; ಉಗ್ಗಡ: ಗಟ್ಟಿಯಾದ ಕೂಗು, ಬಿರುದಾವಳಿಯ ಹೊಗಳಿಕೆ; ವರ: ಶ್ರೇಷ್ಠ; ಯುವತಿ: ಹೆಣ್ಣು; ಬಂದಳು: ಆಗಮಿಸು; ಸಖಿ: ಸೇವಕಿ; ಒಯ್ಯಾರ: ಬೆಡಗು, ಬಿನ್ನಾಣ, ಸೊಗಸು;ನೃಪ: ರಾಜ; ಸಭೆ: ಓಲಗ; ನವ: ಹೊಸ; ಬಲಾಹಕ: ಮೋಡ; ಮಿಂಚು: ಹೊಳಪು, ಕಾಂತಿ; ಗವಿ: ಗುಹೆ; ಸಹಿತ: ಜೊರೆ; ಮರಿ: ಚಿಕ್ಕ; ಮೋಡ: ಮೇಘ; ಆವಿರ್ಭವಿಸು: ಹುಟ್ಟು, ಕಾಣಿಸಿಕೊಳ್ಳು; ದಂಡಿಗೆ: ಪಲ್ಲಕ್ಕಿ; ಇಳಿದು: ಕೆಳಗೆ ಬಂದು; ಹೊಕ್ಕು: ಸೇರು; ಓಲಗ: ದರ್ಬಾರು;

ಪದವಿಂಗಡಣೆ:
ಕವಿದ +ಚಿತ್ರಾವಳಿಯ +ದಡ್ಡಿಯ
ವಿವಿಧ +ಭಟರ್+ಉಗ್ಗಡಣೆಯಲಿ +ವರ
ಯುವತಿ +ಬಂದಳು +ಸಖಿಯರ್+ಒಯ್ಯಾರದಲಿ +ನೃಪಸಭೆಗೆ
ನವ +ಬಲಾಹಕದೊಳಗೆ+ ಮಿಂಚಿನ
ಗವಿ+ ಸಹಿತ+ ಮರಿಮೋಡವ್+ಆವಿ
ರ್ಭವಿಸಿತೆನೆ+ ದಂಡಿಗೆಯನ್ +ಇಳಿದಳು +ಹೊಕ್ಕಳ್+ಓಲಗವ

ಅಚ್ಚರಿ:
(೧) ದ್ರೌಪದಿಯ ಆಗಮನ ಮೋಡದಲಿ ಮಿಂಚಿನ ಪ್ರಕಾಶಕ್ಕೆ ಹೋಲಿಸಿರುವುದು
(೨) ಬಲಾಹಕ, ಮೋಡ – ಸಮನಾರ್ಥಕ ಪದ

ಪದ್ಯ ೪೮: ವಿಭೀಷಣನ ಸೇವಕರು ಮತ್ತಾವ ವಸ್ತುಗಳನ್ನು ತಂದರು?

ಬಲಮುರಿಯ ಶಂಖಗಳ ಗಂಧದ
ಬಲು ಹೊರೆಯ ಕೃಷ್ಣಾಗರುವಿನೊ
ಟ್ಟಿಲ ಸುರಂಗಿನ ಪಟ್ಟಿ ಪಟ್ಟಾವಳಿಯ ದಿಂಡುಗಳ
ಪುಲಿದೊಗಲ ಕೃಷ್ಣಾಜಿನಂಗಳ
ಹೊಳೆವ ಹೊಂಗೊಪ್ಪರಿಗೆ ಚಿತ್ರಾ
ವಳಿಯ ಸತ್ತಿಗೆ ಹೇಮಘಟ ಸಂತತಿಯನೊಟ್ಟಿದರು (ಸಭಾ ಪರ್ವ, ೫ ಸಂಧಿ, ೪೮ ಪದ್ಯ)

ತಾತ್ಪರ್ಯ:
ಬಲಮುರಿಯ ಶಂಖಗಳು, ಗಂಧದ ದೊಡ್ಡಹೊರೆಗಳು, ಕಪ್ಪು ಅಗರಿನ ಹೊರೆ, ಒಳ್ಳೆಯ ಬಣ್ಣದ ಪಟ್ಟಿಗಳ ದಿಂಡುಗಳು, ಹುಲಿಯಚರ್ಮ, ಕೃಷ್ಣಾಜಿನ, ಬಂಗಾರದ ಕೊಫ್ಫರಿಗೆಗಳು, ಚಿತ್ರವಿಚಿತ್ರ ಧ್ವಜಗಳು, ಬಂಗಾರದ ಕೊಡಗಳನ್ನು ತಂದಿಟ್ಟರು.

ಅರ್ಥ:
ಬಲ: ; ಬಲಮುರಿ: ಬಲಕ್ಕೆ ತೆರೆದಿರುವ; ಶಂಖ: ಕಂಬು; ಗಂಧ: ಸುಗಂಧ ದ್ರವ್ಯ; ಬಲು: ಬಹಳ; ಹೊರೆ: ಭಾರ; ಕೃಷ್ಣ: ಕಪ್ಪು; ಅಗರು: ಸುಗಂಧ ದ್ರವ್ಯ; ರಂಗು: ಬಣ್ಣ; ಆವಳಿ: ಸಾಲು, ಗುಂಪು; ದಿಂಡು: ರಾಶಿ; ಪುಲಿ: ಹುಲಿ; ತೊಗಲು: ಚರ್ಮ; ಕೃಷ್ಣಾಜಿನ: ಕೃಷ್ಣಮೃಗದ ಚರ್ಮ; ಹೊಳೆವ: ಪ್ರಕಾಶಿಸುವ; ಹೊಂಗೊಪ್ಪರಿಗೆ: ಚಿನ್ನದ ಕೊಪ್ಪರಿಗೆ; ಪಟ್ಟಿ:ಬಟ್ಟೆ, ಕಾಗದ, ಮರ, ಲೋಹಗಳ ತುಂಡು; ಚಿತ್ರ: ಬರೆದ ಆಕೃತಿ; ಸತ್ತಿಗೆ: ಛತ್ರಿ, ಕೊಡೆ; ಹೇಮ: ಚಿನ್ನ;
ಘಟ: ಕೊಡಗ; ಸಂತತಿ:ಗುಂಪು;

ಪದವಿಂಗಡಣೆ:
ಬಲಮುರಿಯ +ಶಂಖಗಳ+ ಗಂಧದ
ಬಲು +ಹೊರೆಯ +ಕೃಷ್ಣ+ಅಗರುವಿನ್
ಒಟ್ಟಿಲ+ ಸುರಂಗಿನ+ ಪಟ್ಟಿ+ ಪಟ್ಟಾವಳಿಯ+ ದಿಂಡುಗಳ
ಪುಲಿದೊಗಲ+ ಕೃಷ್ಣಾಜಿನಂಗಳ
ಹೊಳೆವ +ಹೊಂಗೊಪ್ಪರಿಗೆ+ ಚಿತ್ರಾ
ವಳಿಯ +ಸತ್ತಿಗೆ +ಹೇಮಘಟ+ ಸಂತತಿಯನ್+ಒಟ್ಟಿದರು

ಅಚ್ಚರಿ:
(೧) ಹೊನ್, ಹೇಮ – ಸಮನಾರ್ಥಕ ಪದ
(೨) ಕೃಷ್ಣಾಜಿನ, ಕೃಷ್ಣಾಗರು – ಕೃಷ್ಣ ಪದದ ಬಳಕೆ
(೩) ಆವಳಿ ಪದದ ಬಳಕೆ – ಪಟ್ಟಾವಳಿ, ಚಿತ್ರಾವಳಿ