ಪದ್ಯ ೧೪: ಸಭೆಗೆ ಯಾರು ಬಂದರು?

ಶಕುನಿ ಕೃಪ ಗುರುಸೂನು ಕೃತವ
ರ್ಮಕ ಸುಕೇತು ಸುಶರ್ಮ ಸಮಸ
ಪ್ತಕರು ಮಾದ್ರೇಶ್ವರ ಸುಬಾಹು ಸುನಂದ ಚಿತ್ರರಥ
ಸಕಲ ಸುಭಟರು ಸಹಿತ ದಳನಾ
ಯಕರು ಬಂದರು ಕರ್ಣಹಾನಿ
ಪ್ರಕಟ ಕಳಿತ ಶಿರೋವಕುಂಠನ ವೈಮನಸ್ಯದಲಿ (ಶಲ್ಯ ಪರ್ವ, ೧ ಸಂಧಿ, ೧೪ ಪದ್ಯ)

ತಾತ್ಪರ್ಯ:
ಶಕುನಿ, ಕೃಪಾಚಾರ್ಯ, ಅಶ್ವತ್ಥಾಮ, ಕೃತವರ್ಮ, ಸುಕೇತು, ಸುಶರ್ಮ, ಸಂಶಪ್ತಕರು, ಶಲ್ಯ, ಸುಬಾಹು ಸುನಂದ ಚಿತ್ರರಥನೇ ಮೊದಲಾದ ಎಲ್ಲಾ ವೀರರೂ ದಳನಾಯಕರೂ ಕರ್ಣನ ಮರಣದಿಂದಾದ ಭಂಗವನ್ನು ನೆನೆದು ಮುಖಕ್ಕೆ ಮುಸುಕು ಹಾಕಿಕೊಂಡು ಸಭೆಗೆ ಬಂದರು.

ಅರ್ಥ:
ಸೂನು: ಮಗ; ಸಕಲ: ಎಲ್ಲಾ; ಸುಭಟ: ಪರಾಕ್ರಮಿ; ಸಹಿತ: ಜೊತೆ; ದಳ: ಸೈನ್ಯ; ನಾಯಕ: ಒಡೆಯ ಬಂದು: ಆಗಮಿಸು; ಹಾನಿ: ನಾಶ; ಪ್ರಕಟ: ಸ್ಪಷ್ಟ; ಕಳಿತ: ಪೂರ್ಣ ಹಣ್ಣಾದ; ಶಿರ: ತಲೆ; ಶಿರೋವಕುಂಠ: ತಲೆಯ ಮೇಲಿನ ಮುಸುಕು; ವೈಮನಸ್ಯ: ಅಪಾರವಾದ ದುಃಖ;

ಪದವಿಂಗಡಣೆ:
ಶಕುನಿ +ಕೃಪ +ಗುರುಸೂನು +ಕೃತವ
ರ್ಮಕ +ಸುಕೇತು +ಸುಶರ್ಮ +ಸಮಸ
ಪ್ತಕರು +ಮಾದ್ರೇಶ್ವರ +ಸುಬಾಹು +ಸುನಂದ +ಚಿತ್ರರಥ
ಸಕಲ +ಸುಭಟರು+ ಸಹಿತ+ ದಳ+ನಾ
ಯಕರು +ಬಂದರು +ಕರ್ಣ+ಹಾನಿ
ಪ್ರಕಟ+ ಕಳಿತ+ ಶಿರೋವಕುಂಠನ+ ವೈಮನಸ್ಯದಲಿ

ಅಚ್ಚರಿ:
(೧) ದುಃಖವನ್ನು ಹೇಳುವ ಪರಿ – ಶಿರೋವಕುಂಠನ ವೈಮನಸ್ಯದಲಿ
(೨) ಸ ಕಾರದ ಪದಗಳು – ಸುಕೇತು, ಸುಶರ್ಮ, ಸಮಸಪ್ತಕರು, ಸುಬಾಹು, ಸುನಂದ

ಪದ್ಯ ೩೧: ಭೀಮನು ಯಾವ ಕೌರವಾನುಜರನ್ನು ಸಂಹರಿಸಿದನು?

ವರ ಸುಲೋಚನ ಚಿತ್ರರಥ ದು
ರ್ಮರುಷಣ ಶತಾನೀಕ ನೀಲಾಂ
ಬರ ವಿವಿಂಶತಿ ಚಿತ್ರಸೇನರ ದೀರ್ಘಲೋಚನನ
ತರಿದು ತಿರುಗಿ ಸುಯೋಧನನ ಮೋ
ಹರಕೆ ಮೊಳಗಲು ಮತ್ತೆ ಬಲ ಸಂ
ವರಣೆಯಲಿ ಕೈಗೈದು ಭೀಮನ ಹಳಚಿದನು ಕರ್ಣ (ದ್ರೋಣ ಪರ್ವ, ೧೩ ಸಂಧಿ, ೩೧ ಪದ್ಯ)

ತಾತ್ಪರ್ಯ:
ಸುಲೋಚನ, ಚಿತ್ರರಥ, ದುರ್ಮರ್ಷಣ, ಶತಾನೀಕ, ನೀಲಾಂಬರ, ವಿವಿಂಶತಿ, ಚಿತ್ರಸೇನ, ದೀರ್ಘಲೋಚನರನ್ನು ತರಿದು ಭೀಮನು ದುರ್ಯೋಧನನ ಸೈನ್ಯಕ್ಕೆ ಅಬ್ಬರಿಸುತ್ತಾ ಹೋಗಲು ಕರ್ಣನು ಯುದ್ಧಸನ್ನದ್ಧನಾಗಿ ಅವನೊಡನೆ ಕಾದಿದನು.

ಅರ್ಥ:
ವರ: ಶ್ರೇಷ್ಠ; ತರಿ: ಕಡಿ, ಕತ್ತರಿಸು; ತಿರುಗು: ವೃತ್ತಾಕಾರವಾಗಿ ಚಲಿಸು; ಮೋಹರ: ಯುದ್ಧ; ಮೊಳಗು: ಧ್ವನಿಮಾಡು; ಮತ್ತೆ: ಪುನಃ; ಬಲ: ಸೈನ್ಯ; ಸಂವರಣೆ: ಸಜ್ಜು, ಸನ್ನಾಹ; ಕೈ: ಹಸ್ತ; ಹಳಚು: ತಾಗು, ಬಡಿ;

ಪದವಿಂಗಡಣೆ:
ವರ +ಸುಲೋಚನ +ಚಿತ್ರರಥ+ ದು
ರ್ಮರುಷಣ +ಶತಾನೀಕ+ ನೀಲಾಂ
ಬರ+ ವಿವಿಂಶತಿ +ಚಿತ್ರಸೇನರ+ ದೀರ್ಘಲೋಚನನ
ತರಿದು +ತಿರುಗಿ +ಸುಯೋಧನನ +ಮೋ
ಹರಕೆ +ಮೊಳಗಲು +ಮತ್ತೆ +ಬಲ +ಸಂ
ವರಣೆಯಲಿ +ಕೈಗೈದು +ಭೀಮನ +ಹಳಚಿದನು +ಕರ್ಣ

ಅಚ್ಚರಿ:
(೧) ಕೌರವಾನುಜರು – ಸುಲೋಚನ, ಚಿತ್ರರಥ, ದುರ್ಮರುಷಣ, ಶತಾನೀಕ, ನೀಲಾಂಬರ, ವಿವಿಂಶತಿ ಚಿತ್ರಸೇನ, ದೀರ್ಘಲೋಚನ

ಪದ್ಯ ೬೪: ಸೂರ್ಯನ ರಥದ ವಿಸ್ತಾರವೆಷ್ಟು?

ಉರಗನಾಳದ ಹೊರಜೆ ನವ ಸಾ
ಸಿರದ ಕುರಿಗುಣಿಯೀಸುಗಳು ತಾ
ವೆರಡುಮಡಿತೊಂಬತ್ತುವೊಂದು ಸಹಸ್ರದರ್ಧವದು
ಪರಿಯನೊಗನದರನಿತು ಸಂಖ್ಯೆಗೆ
ಸರಿಯೆನಿಪ ಮೇಲಚ್ಚು ಮಂಗಳ
ತರವೆನಿಪ ನವರತ್ನ ರಚನೆಯ ಚಿತ್ರರಥವೆಂದ (ಅರಣ್ಯ ಪರ್ವ, ೮ ಸಂಧಿ, ೬೪ ಪದ್ಯ)

ತಾತ್ಪರ್ಯ:
ಈ ರಥವನ್ನು ಆದಿಶೇಷನೆಂಬ ಹಗ್ಗದಿಂದ ಬಿಗಿದಿದೆ. ಕುರಿಗುಣಿಗಳು ಒಂಬತ್ತು ಸಾವಿರ ಈಚುಗಳಿವೆ. ತೊಂಬತ್ತೊಂದು ಸಾವಿರದ ಅರ್ಧ ಯೋಜನ ಉದ್ದದ ನೊಗ, ಅಷ್ಟೇ ಉದ್ದದ ಅಚ್ಚು ಮಂಗಳಕರವಾದ ನವರತ್ನ ಖಚಿತವಾದ ರಥವದು.

ಅರ್ಥ:
ಉರಗ: ಹಾವು; ನಾಳ: ಒಳಗೆ ಟೊಳ್ಳಾಗಿರುವ ದಂಟು; ಹೊರಜೆ: ದಪ್ಪವಾದ ಹಗ್ಗ; ನವ: ಒಂಬತ್ತು; ಸಾವಿರ: ಸಹಸ್ರ; ಕುರಿಗುಣಿ: ಚಿಕ್ಕದಾದ ಹಗ್ಗ, ದಾರ; ಮಡಿ: ಸಲ, ಬಾರಿ, ಪಟ್ಟು; ಅರ್ಧ: ವಸ್ತುವಿನ ಎರಡು ಸಮಪಾಲುಗಳಲ್ಲಿ ಒಂದು; ಪರಿ: ರೀತಿ; ನೊಗ: ಬಂಡಿಯನ್ನು ಎಳೆಯಲು ಕುದುರೆಗಳ ಕತ್ತಿನ ಮೇಲೆ ಇಡುವ ಉದ್ದವಾದ ಮರದ ದಿಂಡು; ಅದರನಿತು: ಅಷ್ಟೇ ಸಮನಾದ; ಸಂಖ್ಯೆ: ಎಣಿಕೆ; ಸರಿ: ಸಮನಾದ; ಅಚ್ಚು: ನಡುಗೂಟ, ಕೀಲು; ಮಂಗಳ: ಶುಭ; ನವರತ್ನ: ವಜ್ರ, ವೈಡೂರ್ಯ, ಗೋಮೇದಕ, ಪುಷ್ಯರಾಗ, ನೀಲ, ಮರಕತ, ಮಾಣಿಕ್ಯ, ಹವಳ ಮತ್ತು ಮುತ್ತು ಎಂಬ ಒಂಬತ್ತು ಮಣಿಗಳು; ರಚನೆ: ನಿರ್ಮಿಸು; ಚಿತ್ರ: ಚಮತ್ಕಾರ ಪ್ರಧಾನವಾದ; ರಥ: ಬಂಡಿ; ಈಸು: ಗಾಡಿಯ ಮೂಕಿ, ಗಾಡಿ ಹೊಡೆಯುವವನು ಕೂಡುವ ಗಾಡಿಯ ಮುಂಭಾಗದ ಮರ;

ಪದವಿಂಗಡಣೆ:
ಉರಗನಾಳದ+ ಹೊರಜೆ +ನವ +ಸಾ
ಸಿರದ +ಕುರಿಗುಣಿ+ಈಸುಗಳು +ತಾವ್
ಎರಡು+ಮಡಿ+ತೊಂಬತ್ತುವೊಂದು+ ಸಹಸ್ರದ್+ಅರ್ಧವದು
ಪರಿಯ+ ನೊಗನ್+ಅದರನಿತು +ಸಂಖ್ಯೆಗೆ
ಸರಿಯೆನಿಪ +ಮೇಲಚ್ಚು +ಮಂಗಳ
ತರವೆನಿಪ +ನವರತ್ನ+ ರಚನೆಯ +ಚಿತ್ರರಥವೆಂದ

ಅಚ್ಚರಿ:
(೧) ನವಸಾವಿರ, ೪೫.೫ ಸಾವಿರ – ಸಂಖ್ಯೆಗಳ ಬಳಕೆ

ಪದ್ಯ ೨೩: ಶಿಶುಪಾಲನು ಯಜ್ಞದಲ್ಲಿ ಯಾರಿಗೆ ಸ್ಥಾನ ಎಂದು ಆರೋಪಿಸಿದನು?

ನರನ ಸಖನೀ ಕೃಷ್ಣನೆಂದಾ
ದರಿಸುವರೆ ಗಂಧರ್ವ ನಿಮ್ಮೀ
ನರನ ಸಖನಲ್ಲಾ ವಿರೋಧಿಯೆ ಚಿತ್ರರಥ ನಿಮಗೆ
ಅರಸನಲ್ಲಾ ದ್ರುಮನು ವರ ಕಿಂ
ಪುರುಷ ಮಾನ್ಯನು ನಿಮ್ಮ ಯಜ್ಞದೊ
ಳುರುಳುಕರಿಗಲ್ಲದೆ ವಿಸಿಷ್ಟರಿಗಿಲ್ಲ ಗತಿಯೆಂದ (ಸಭಾ ಪರ್ವ, ೯ ಸಂಧಿ, ೨೩ ಪದ್ಯ)

ತಾತ್ಪರ್ಯ:
ಕೃಷ್ಣನು ಅರ್ಜುನನ ಸ್ನೇಹಿತನೆಂದು ಅವನನ್ನು ಆದರಿಸುವಿರಾ? ಸ್ನೇಹಿತ ಬೇಕಿದ್ದರೆ ಗಂಧರ್ವನಾದ ಚಿತ್ರರಥ ನಿರಲಿಲ್ಲವೆ? ಕಿಂಪುರುಷರಲ್ಲಿ ಮಾನ್ಯನಾದ ದ್ರುಮನು ಅರಸನಲ್ಲವೇ? ನಿಮ್ಮ ಯಾಗದಲ್ಲಿ ಚಂಚಲರಾದವರಿಗೇ ಸ್ಥಾನವೆ ಹೊರತು ಯೋಗ್ಯರಿಗಲ್ಲ ಎಂದು ಆರೋಪಿಸಿದನು.

ಅರ್ಥ:
ನರ: ಅರ್ಜುನ; ಸಖ: ಸ್ನೇಹಿತ; ಆದರಿಸು: ಗೌರವಿಸು; ಗಂಧರ್ವ: ದೇವತೆಗಳ ಪಂಗಡ; ವಿರೋಧಿ: ಶತ್ರು, ವೈರಿ; ಅರಸ: ರಾಜ; ವರ: ಶ್ರೇಷ್ಠ; ಮಾನ್ಯ: ಗೌರವಾನ್ವಿತನು; ಉರುಳು: ಚಂಚಲ; ವಿಶಿಷ್ಟ: ಯೋಗ್ಯ;

ಪದವಿಂಗಡಣೆ:
ನರನ +ಸಖನ್+ಈ+ ಕೃಷ್ಣನೆಂದ್
ಆದರಿಸುವರೆ +ಗಂಧರ್ವ +ನಿಮ್ಮ+
ಈ+ನರನ +ಸಖನಲ್ಲಾ +ವಿರೋಧಿಯೆ +ಚಿತ್ರರಥ+ ನಿಮಗೆ
ಅರಸನಲ್ಲಾ +ದ್ರುಮನು +ವರ+ ಕಿಂ
ಪುರುಷ +ಮಾನ್ಯನು +ನಿಮ್ಮ +ಯಜ್ಞದೊಳ್
ಉರುಳುಕರಿಗಲ್ಲದೆ+ ವಿಸಿಷ್ಟರಿಗಿಲ್ಲ+ ಗತಿಯೆಂದ

ಅಚ್ಚರಿ:
(೧) ನರನ ಸಖ – ೧, ೩ ಸಾಲಿನ ಮೊದಲೆರಡು ಪದ
(೨) ಚಿತ್ರರಥ, ದ್ರುಮ, ಅರ್ಜುನ, ಕೃಷ್ಣ – ಹೆಸರುಗಳ ಬಳಕೆ

ಪದ್ಯ ೪: ಉತ್ತರದ ಯಾವ ರಾಜರು ಯಾಗಕ್ಕೆ ಬಂದರು?

ಸಕಳ ದಳ ಮೇಳಾಪದಲಿ ಭೀ
ಷ್ಮಕನು ರುಕ್ಮನು ಚಿತ್ರರಥ ಸಾ
ಲ್ವಕನು ರೋಹಿತ ರೋಚಮಾನ ಸಮುದ್ರ ಸೇನಕರು
ಪ್ರಕಟ ಬಲರುತ್ತರ ದಿಶಾ ಪಾ
ಲಕರು ಕುರುಪರಿಯಂತ ರಾಜ
ಪ್ರಕರ ನೆರೆದುದು ವಿಳಸದಿಂದ್ರಪ್ರಸ್ಥನಗರಿಯಲಿ (ಸಭಾ ಪರ್ವ, ೮ ಸಂಧಿ, ೪ ಪದ್ಯ)

ತಾತ್ಪರ್ಯ:
ಭೀಷ್ಮಕ, ರುಕ್ಮ, ಚಿತ್ರರಥ, ಸಾಲ್ವ, ರೋಹಿತ, ರೋಚಮಾನ, ಸಮುದ್ರಸೇನ, ಉತ್ತರ ಕುರುವರ್ಷದವರೆಗಿನ ಎಲ್ಲಾ ಉತ್ತರ ರಾಜ್ಯಗಳ ದೊರೆಗಳು ತಮ್ಮ ಸೈನ್ಯದೊಂದಿಗೆ ಇಂದ್ರಪ್ರಸ್ಥ ನಗರಕ್ಕೆ ಬಂದರು.

ಅರ್ಥ:
ಸಕಳ: ಎಲ್ಲಾ; ದಳ: ಸೈನ್ಯ; ಮೇಳ:ಗುಂಪು, ಸಂದಣಿ; ಸೇನ: ಸೈನ್ಯ; ಪ್ರಕಟ: ನಿಚ್ಚಳವಾದುದು; ದಿಶ: ದಿಕ್ಕು; ಪಾಲಕ: ರಕ್ಷಕ; ಪರಿ: ಪ್ರವಹಿಸು; ಪ್ರಕರ: ಸಮೂಹ; ನೆರೆ: ಸೇರು; ನಗರ: ಊರು;

ಪದವಿಂಗಡಣೆ:
ಸಕಳ +ದಳ +ಮೇಳಾಪದಲಿ+ ಭೀ
ಷ್ಮಕನು +ರುಕ್ಮನು +ಚಿತ್ರರಥ +ಸಾ
ಲ್ವಕನು +ರೋಹಿತ +ರೋಚಮಾನ +ಸಮುದ್ರ +ಸೇನಕರು
ಪ್ರಕಟ+ ಬಲರುತ್ತರ +ದಿಶಾ +ಪಾ
ಲಕರು +ಕುರುಪರಿಯಂತ +ರಾಜ
ಪ್ರಕರ+ ನೆರೆದುದು +ವಿಳಸದ್+ಇಂದ್ರಪ್ರಸ್ಥ+ನಗರಿಯಲಿ

ಅಚ್ಚರಿ:
(೧) ೭ ರಾಜ್ಯದ ಹೆಸರುಗಳನ್ನು ಸೂಚಿಸುವ ಪದ್ಯ