ಪದ್ಯ ೩೨: ಭೀಮನು ಯಾರನ್ನು ಸಂಹರಿಸಿದನು?

ವಿಂದನನುವಿಂದನನು ಚಿತ್ರಕ
ನಂದನನ ಚಿತ್ರಾಂಗದನ ಸಾ
ನಂದ ದುಸ್ಸಹ ಶಂಕುಕರ್ಣ ಸುದೀರ್ಘಬಾಹುಕನ
ನಂದ ಚಿತ್ರಾಂಬಕನ ಕುಂತಿಯ
ನಂದನನು ಬರಿಕೈದು ಭಾಸ್ಕರ
ನಂದನಾಶ್ವತ್ಥಾಮರನು ಮೂದಲಿಸಿ ತಾಗಿದನು (ದ್ರೋಣ ಪರ್ವ, ೧೨ ಸಂಧಿ, ೩೨ ಪದ್ಯ)

ತಾತ್ಪರ್ಯ:
ವಿಂದ, ಅನುವಿಂದ, ಚಿತ್ರಕನ ಮಗನಾದ ಚಿತ್ರಾಂಗದ, ಸಾನಂದ, ದುಸ್ಸಹ, ಶಂಕುಕರ್ಣ, ದೀರ್ಘಬಾಹು, ಚಿತ್ರಾಂಬಕರನ್ನು ಸಂಹರಿಸಿದ ಭೀಮನು ಕರ್ಣ ಅಶ್ವತ್ಥಾಮರನ್ನು ಮೂದಲಿಸಿ ಯುದ್ಧಕ್ಕೆ ನುಗ್ಗಿದನು.

ಅರ್ಥ:
ನಂದನ: ಮಗ; ಕೈದು: ಆಯುಧ, ಶಸ್ತ್ರ; ಭಾಸ್ಕರ: ರವಿ; ಮೂದಲಿಸು: ಹಂಗಿಸು; ಗಾಗು: ಮುಟ್ಟು;

ಪದವಿಂಗಡಣೆ:
ವಿಂದನ್+ಅನುವಿಂದನನು +ಚಿತ್ರಕ
ನಂದನನ +ಚಿತ್ರಾಂಗದನ +ಸಾ
ನಂದ +ದುಸ್ಸಹ +ಶಂಕುಕರ್ಣ +ಸುದೀರ್ಘಬಾಹುಕನ
ನಂದ+ ಚಿತ್ರಾಂಬಕನ+ ಕುಂತಿಯ
ನಂದನನು +ಬರಿಕೈದು+ ಭಾಸ್ಕರ
ನಂದನ+ಅಶ್ವತ್ಥಾಮರನು +ಮೂದಲಿಸಿ +ತಾಗಿದನು

ಅಚ್ಚರಿ:
(೧) ನಂದ ಪದದ ಬಳಕೆ – ೨-೬ ಸಾಲಿನ ಮೊದಲ ಪದ
(೨) ಚಿತ್ರಕನಂದನ, ಕುಂತಿಯ ನಂದನ, ಭಾಸ್ಕರ ನಂದನ – ಪದಗಳ ಬಳಕೆ

ಪದ್ಯ ೪೩: ದ್ರೋಣನನ್ನು ಎದುರಿಸಲು ಯಾರು ಮುಂದೆ ಬಂದರು?

ಎಲೆ ಯುಧಿಷ್ಠಿರ ಬಿಲ್ಲ ಹಿಡಿ ನರ
ಹುಳುಗಳಿವದಿರ ಕವಿಸಿ ಕಾಲವ
ಕೊಲುವುದೇ ಸಾಕಿನ್ನು ಕೈವಶವಾದೆ ನಿಲೆನುತ
ಅಳವಿಗಿಟ್ಟಣಿಸಲು ಶರಾಳಿಯ
ತುಳುಕಿ ಹೊಕ್ಕನು ಸತ್ಯಜಿತು ದಳ
ವುಳಿಸಿದರು ಚಿತ್ರಕ ಶತಾನೀಕಾದಿ ನಾಯಕರು (ದ್ರೋಣ ಪರ್ವ, ೨ ಸಂಧಿ, ೪೩ ಪದ್ಯ)

ತಾತ್ಪರ್ಯ:
ದ್ರೋಣನು ಗರ್ಜಿಸುತ್ತಾ, ಎಲೇ ಯುಧಿಷ್ಠಿರ, ಬಿಲ್ಲನ್ನು ಹಿಡಿದು ಯುದ್ಧಕ್ಕೆ ಬಾ, ಈ ನರಹುಳುಗಲನ್ನು ನನ್ನ ಮೇಲೆ ಬಿಟ್ಟು ಕಾಲವನ್ನು ವ್ಯಯಮಾಡ ಬೇಡ. ಇನ್ನು ಸಾಕು, ನೀನು ನನಗೆ ಸೆರೆಸಿಕ್ಕೆ ನಿಲ್ಲು ಎನ್ನುತ್ತಾ ಯುದ್ಧಕ್ಕೆ ಬರಲು, ಸತ್ಯಜಿತು, ಚಿತ್ರಕ, ಶತಾನೀಕ ಮೊದಲಾದ ಯೋಧರು ದೋಣನನ್ನು ಇದಿರಿಸಿದರು.

ಅರ್ಥ:
ಬಿಲ್ಲು: ಚಾಪ; ಹಿಡಿ: ಗ್ರಹಿಸು; ನರ: ಮನುಷ್ಯ; ಹುಳು: ಕ್ಷುಲ್ಲಕ; ಇವದಿರು: ಇಷ್ಟುಜನ; ಕವಿಸು: ಮುಸುಕು, ದಟ್ಟವಾಗಿಸು; ಕಾಲ: ಸಮಯ; ಕೊಲು: ಸಾಯಿಸು, ಹಾಳುಮಾಡು; ಸಾಕು: ನಿಲ್ಲಿಸು; ಕೈವಶ: ಬಂಧನ; ನಿಲ್ಲು: ತಡೆ; ಅಳವಿ: ಶಕ್ತಿ, ಯುದ್ಧ; ಇಟ್ಟಣಿಸು: ದಟ್ಟವಾಗು, ಒತ್ತಾಗು; ಶರಾಳಿ: ಬಾಣಗಳ ಗುಂಪು; ತುಳುಕು: ಹೊರ ಚೆಲ್ಲು, ಕದಡು; ಹೊಕ್ಕು: ಸೇರು; ದಳ: ಗುಂಪು; ಉಳಿ: ಬಿಡು, ತೊರೆ; ಆದಿ: ಮೊದಲಾದ; ನಾಯಕ: ಒಡೆಯ;

ಪದವಿಂಗಡಣೆ:
ಎಲೆ +ಯುಧಿಷ್ಠಿರ +ಬಿಲ್ಲ +ಹಿಡಿ +ನರ
ಹುಳುಗಳ್+ಇವದಿರ +ಕವಿಸಿ +ಕಾಲವ
ಕೊಲುವುದೇ +ಸಾಕಿನ್ನು+ ಕೈವಶವಾದೆ +ನಿಲೆನುತ
ಅಳವಿಗ್+ಇಟ್ಟಣಿಸಲು +ಶರಾಳಿಯ
ತುಳುಕಿ +ಹೊಕ್ಕನು +ಸತ್ಯಜಿತು +ದಳ
ವುಳಿಸಿದರು +ಚಿತ್ರಕ +ಶತಾನೀಕಾದಿ +ನಾಯಕರು

ಅಚ್ಚರಿ:
(೧) ಯುಧಿಷ್ಠಿರನನ್ನು ಹಂಗಿಸುವ ಪರಿ – ಎಲೆ ಯುಧಿಷ್ಠಿರ ಬಿಲ್ಲ ಹಿಡಿ ನರಹುಳುಗಳಿವದಿರ ಕವಿಸಿ ಕಾಲವ
ಕೊಲುವುದೇ

ಪದ್ಯ ೨೧: ರಾಜರನ್ನು ಬಿಟ್ಟು ಸ್ವಯಂವರ ಮಂಟಪ್ಪಕ್ಕೆ ಯಾರು ಬಂದು ಸೇರಿದ್ದರು?

ತೀವಿದರು ಹೊರವಳಯದಲಿ ನಾ
ನಾವಿಧದ ನಾಟಕದ ನರ್ತನ
ಭಾವಕದ್ರಾವಕ ಸುಗಾಯಕ ಮಲ್ಲ ಚಿತ್ರಕರು
ಕೋವಿದರು ಕರುಷಕರು ಪಣ್ಯಾ
ಜೀವಿ ವಾಮನ ಮೂಕ ಬಧಿರಾಂ
ಧಾವಳಿಗಳೊಪ್ಪಿದರು ಸಕಲ ದಿಶಾ ಸಮಾಗತರು (ಆದಿ ಪರ್ವ, ೧೨ ಸಂಧಿ, ೨೧ ಪದ್ಯ)

ತಾತ್ಪರ್ಯ:
ದ್ರೌಪದಿಯ ಸ್ವಯಂವರವನ್ನು ವೀಕ್ಷಿಸಲು ಕೇವಲ ರಾಜರು ಮಾತ್ರವಲ್ಲ, ಆ ಮಂಟಪದ ಹೊರಗಡೆ ಎಲ್ಲ ದಿಕ್ಕುಗಳಿಂದಲೂ ಬಂದ ಜನರು ಸೇರಿದ್ದರು. ಅಲ್ಲಿ ನಾಟಕದವರು, ನರ್ತಕರು, ರಸಿಕರು, ಕಳ್ಳರು, ಒಳ್ಳೆಯ ಗಾಯಕರು, ಜಟ್ಟಿಗಳು, ಚಿತ್ರಕಲಾನಿಪುಣರು, ವಿದ್ವಾಂಸರು, ರೈತರು, ವ್ಯಾಪಾರಿಗಳು, ಕುಳ್ಳರು, ಮೂಕರು, ಕಿವುಡರು, ಅಂಧರು,ಹೀಗೆ ಸಮಾಜದ ಎಲ್ಲಾ ರೀತಿಯ ಜನರು ಬಂದು ಸೇರಿದ್ದರು.

ಅರ್ಥ:
ತೀವು: ತುಂಬು, ಭರ್ತಿಯಾಗು; ಹೊರವಳಯ: ಹೊರಗಡೆ, ಆಚೆ; ನಾನಾ: ಹಲವಾರು; ವಿಧ: ರೀತಿ; ನಾಟಕ: ಒಂದು ಬಗೆಯ ಪ್ರದರ್ಶನ ಕಲೆ; ನರ್ತನ: ಕುಣಿತ; ಭಾವಕ: ರಸಿಕ, ಸಹೃದಯ; ದ್ರಾವಕ: ಕಳ್ಳ, ಚೋರ; ಗಾಯಕ: ಹಾಡುಗಾರ; ಮಲ್ಲ: ಜಟ್ಟಿ; ಚಿತ್ರಕ: ಚಿತ್ರಬಿಡಿಸುವ; ಕೋವಿದ: ಪಂಡಿತ, ವಿದ್ವಾಂಸ; ಕರುಷ: ರೈತ; ಪಣ್ಯಾಜೀವಿ: ವ್ಯಾಪಾರಿ; ವಾಮನ: ಕುಳ್ಳ; ಮೂಕ: ಮಾತುಬಲ್ಲದವ; ಬಧಿರ: ಕಿವುಡ; ಅಂಧ: ಕುರುಡ; ಒಪ್ಪು: ಸಮ್ಮತಿಸು; ದಿಶಾ: ದಿಕ್ಕು; ಸಮಾಗತ: ಸೇರಿದ, ಒಟ್ಟಾಗಿ ಬಂದು; ಆವಳಿ: ಸಾಲು, ಗುಂಪು;

ಪದವಿಂಗಡಣೆ:
ತೀವಿದರು+ ಹೊರವಳಯದಲಿ+ ನಾ
ನಾ+ವಿಧದ+ ನಾಟಕದ+ ನರ್ತನ
ಭಾವಕ+ದ್ರಾವಕ+ ಸುಗಾಯಕ+ ಮಲ್ಲ+ ಚಿತ್ರಕರು
ಕೋವಿದರು+ ಕರುಷಕರು +ಪಣ್ಯಾ
ಜೀವಿ +ವಾಮನ +ಮೂಕ ಬಧಿರ+
ಅಂಧಾವಳಿಗಳ್+ಒಪ್ಪಿದರು+ ಸಕಲ+ ದಿಶಾ+ ಸಮಾಗತರು

ಅಚ್ಚರಿ:
(೧) ಸಮಾಜದ ಎಲ್ಲ ರೀತಿಯ ಜನರ ಪರಿಚಯ ಮಾಡುವ ಪದ್ಯ
(೨) “ಕ” ಕಾರದಿಂದ ಕೊನೆಗೊಳ್ಳುವ ಪದಗಳು – ಭಾವಕ, ದ್ರಾವಕ, ಗಾಯಕ, ಚಿತ್ರಕ
(೩) ೨ ಸಾಲಿನ ಎಲ್ಲಾ ಪದಗಳು “ನ” ಕಾರದಿಂದ ಪ್ರಾರಂಭ – ನಾವಿಧದ ನಾಟಕದ ನರ್ತನ