ಪದ್ಯ ೫೦: ದುರ್ಯೋಧನನು ತನ್ನ ತಂದೆಗೆ ಹೇಗೆ ಉತ್ತರಿಸಿದನು?

ಅಹುದು ಬೊಪ್ಪ ವೃಥಾಭಿಮಾನದ
ಕುಹಕಿ ಹೋಗಲಿ ನಿಮ್ಮ ಚಿತ್ತಕೆ
ಬಹ ಕುಮಾರರ ಕೂಡಿ ನಡೆವುದು ಪಾಂಡುನಂದನರ
ಮಹಿಯ ಹಂಗಿಂಗೋಸುಗವೆ ಬಿ
ನ್ನಹವ ಮಾಡಿದೆನೆನಗೆ ಭಂಡಿನ
ರಹಣಿ ಬಂದುದು ಸಾಕಲೇ ಸೊಗಸಾಯ್ತು ಲೇಸೆಂದ (ಸಭಾ ಪರ್ವ, ೧೩ ಸಂಧಿ, ೫೦ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ತಂದೆಯ ಮಾತಿಗೆ ಉತ್ತರಿಸುತ್ತಾ, ಅಪ್ಪಾ, ನಿನ್ನ ಮಾತು ನಿಜ, ವೃಥಾ ಅಭಿಮಾನ ಪಡುವ ಕುಹಕಿಯಾದ ನನ್ನನ್ನು ತ್ಯಜಿಸಿರಿ, ನಿಮ್ಮ ಮನಸ್ಸಿಗೆ ಉತ್ತಮರೆನಿಸುವ ಪಾಂಡುಪುತ್ರರೊಡನೆ ಜೀವಿಸಿರಿ. ಭೂಮಿಗಾಗಿ ನಾನು ನಿಮ್ಮನ್ನು ಬೇಡಿಕೊಂಡೆ, ಆದರೆ ನಾನು ಭಂಡನೆಂಬ ಅಪಖ್ಯಾತಿ ಹೊಂದಿದೆ, ಅದೇ ಸಾಕು ಬಹಳ ಒಳ್ಳೆಯದಾಯಿತು ಎಂದನು.

ಅರ್ಥ:
ಅಹುದು: ಹೌದು; ಬೊಪ್ಪ: ತಂದೆ; ವೃಥ: ವ್ಯರ್ಥ; ಅಭಿಮಾನ: ಹೆಮ್ಮೆ, ಅಹಂಕಾರ; ಕುಹಕ: ಮೋಸ, ವಂಚನೆ; ಹೋಗು: ತೆರಳು; ಚಿತ್ತ: ಬುದ್ಧಿ; ಬಹ: ಬರುವ; ಕುಮಾರ: ಮಕ್ಕಳ; ಕೂಡಿ: ಜೊತೆ; ನಡೆ: ಚಲಿಸು; ನಂದನ: ಮಕ್ಕಳು; ಮಹಿ: ಭೀಮಿ; ಹಂಗು: ದಾಕ್ಷಿಣ್ಯ, ಆಭಾರ; ಓಸುಗ: ಕಾರಣ; ಬಿನ್ನಹ: ಕೇಳು; ಭಂಡ: ನಾಚಿಕೆ, ಲಜ್ಜೆ;

ಪದವಿಂಗಡಣೆ:
ಅಹುದು +ಬೊಪ್ಪ +ವೃಥ+ಅಭಿಮಾನದ
ಕುಹಕಿ+ ಹೋಗಲಿ +ನಿಮ್ಮ +ಚಿತ್ತಕೆ
ಬಹ +ಕುಮಾರರ +ಕೂಡಿ +ನಡೆವುದು +ಪಾಂಡು+ನಂದನರ
ಮಹಿಯ +ಹಂಗಿಂಗ್+ಓಸುಗವೆ +ಬಿ
ನ್ನಹವ +ಮಾಡಿದೆನ್+ಎನಗೆ +ಭಂಡಿನ
ರಹಣಿ +ಬಂದುದು +ಸಾಕಲೇ +ಸೊಗಸಾಯ್ತು +ಲೇಸೆಂದ