ಪದ್ಯ ೭೧: ಅರ್ಜುನನೇಕೆ ಕಳವಳಗೊಂಡನು?

ಪರುಷ ಕಲ್ಲೆಂದಳುಕಿ ಸುರತರು
ಮರನು ತೆಗೆಯೆಂದಮರಧೇನುವ
ಪರರ ಮನೆಯಲಿ ಮಾರಿ ಚಿಂತಾಮಣಿಗೆ ಕೈದುಡುಕಿ
ಹರಳು ತೆಕ್ಕೆಯಿದೆಂಬ ಪಾಪಿಗೆ
ಪರಮಗುರು ನಾನಾದೆನೈ ಮುರ
ಹರನ ಮೈದುನನೆಂದು ಗರ್ವಿಸಿ ಕೆಟ್ಟೆನಕಟೆಂದ (ಭೀಷ್ಮ ಪರ್ವ, ೩ ಸಂಧಿ, ೭೧ ಪದ್ಯ)

ತಾತ್ಪರ್ಯ:
ಪರುಷವನ್ನು ಕಲ್ಲೆಂದು, ಕಲ್ಪವೃಕ್ಷವನ್ನು ಮರವೆಂದೂ ತಿಳಿದು ಉಪೇಕ್ಷಿಸಿ, ಕಾಮಧೇನುವು ಹಸುವೆಂದು ಮಾರರಿಗೆ ಮಾರಿ, ಚಿಂತಾಮಣಿಯನ್ನು ಹಿಡಿದು ಗಾಜೆಂದು ಭಾವಿಸುವ ಪಾಪಿಗೆ ನಾನು ಗುರುವಾದೆ, ಕೃಷ್ಣನ ಮೈದುನನೆಂದು ಗರ್ವಿಸಿ ಕೆಟ್ಟೆ ಎಂದು ಅರ್ಜುನನು ಕಳವಳಗೊಂಡನು.

ಅರ್ಥ:
ಪರುಷ: ಸ್ಪರ್ಷಮಣಿ; ಕಲ್ಲು: ಶಿಲೆ; ಅಳುಕು: ಹೆದರು; ಸುರತರು: ಕಲ್ಪವೃಕ್ಷ; ಮರ: ತರು; ಅಮರದೇನು: ಕಾಮಧೇನು; ಪರ: ಬೇರೆ; ಮನೆ: ಆಲಯ; ಮಾರು: ವಿಕ್ರಯಿಸು; ಚಿಂತಾಮಣಿ: ಸ್ವರ್ಗಲೋಕದ ಒಂದು ದಿವ್ಯ ರತ್ನ; ದುಡುಕು: ಉದ್ಧಟತನ, ಆತುರ; ಹರಳು: ಕಲ್ಲಿನ ಚೂರು; ತೆಕ್ಕೆ: ಗುಂಪು; ಪಾಪಿ: ದುಷ್ಟ; ಪರಮ: ಶ್ರೇಷ್ಠ; ಗುರು: ಆಕಾರ್ಯ; ಮುರಹರ: ಕೃಷ್ಣ; ಮೈದುನ: ತಂಗಿಯ ಗಂಡ; ಗರ್ವ: ಅಹಂಕಾರ; ಕೆಟ್ಟೆ: ಹಾಳಾದೆ; ಏಕತಾ: ಅಯ್ಯೋ;

ಪದವಿಂಗಡಣೆ:
ಪರುಷ +ಕಲ್ಲೆಂದ್ +ಅಳುಕಿ +ಸುರತರು
ಮರನು+ ತೆಗೆಯೆಂದ್ +ಅಮರಧೇನುವ
ಪರರ+ ಮನೆಯಲಿ +ಮಾರಿ +ಚಿಂತಾಮಣಿಗೆ+ ಕೈದುಡುಕಿ
ಹರಳು +ತೆಕ್ಕೆಯಿದ್+ಎಂಬ + ಪಾಪಿಗೆ
ಪರಮಗುರು+ ನಾನಾದೆನೈ + ಮುರ
ಹರನ+ ಮೈದುನನೆಂದು +ಗರ್ವಿಸಿ+ ಕೆಟ್ಟೆನ್ +ಅಕಟೆಂದ

ಅಚ್ಚರಿ:
(೧) ಉಪಮಾನಗಳ ಬಳಕೆ: ಪರುಷ ಕಲ್ಲೆಂದಳುಕಿ, ಸುರತರು ಮರನು ತೆಗೆಯೆಂದಮರಧೇನುವ ಪರರ ಮನೆಯಲಿ ಮಾರಿ, ಚಿಂತಾಮಣಿಗೆ ಕೈದುಡುಕಿ ಹರಳು ತೆಕ್ಕೆಯಿದ್

ಪದ್ಯ ೨೭: ವಿರಾಟನು ಉತ್ತರನನ್ನು ಹೇಗೆ ಸ್ವಾಗತಿಸಿದನು?

ಬಾ ಮಗನೆ ವಸುಕುಲದ ನೃಪ ಚಿಂ
ತಾಮಣಿಯೆ ಕುರುರಾಯ ಮೋಹರ
ಧೂಮಕೇತುವೆ ಕಂದ ಬಾಯೆಂದಪ್ಪಿ ಕುಳ್ಳಿರಿಸೆ
ಕಾಮಿನಿಯರುಪ್ಪಾರತಿಗಳಭಿ
ರಾಮವಸ್ತ್ರ ನಿವಾಳಿ ರತ್ನ
ಸ್ತೋಮ ಬಣ್ಣದ ಸೊಡರು ಸುಳಿದವು ಹರುಷದೊಗ್ಗಿನಲಿ (ವಿರಾಟ ಪರ್ವ, ೧೦ ಸಂಧಿ, ೨೭ ಪದ್ಯ)

ತಾತ್ಪರ್ಯ:
ವಿರಾಟನು ಮಗನನ್ನು ಸ್ವಾಗತಿಸುತ್ತಾ, ಮನಗೇ, ನೀನು ವಸುಕುಲದ ರಾಜರಲ್ಲಿ ಚಿಂತಾಮಣಿಯಂತೆ ಅನರ್ಘ್ಯರತ್ನ, ನೀನು ಕೌರವ ಸೈನ್ಯಕ್ಕೆ ಧೂಮಕೇತು, ಮಗೂ ಬಾ ಎಂದು ಕರೆದು, ಆಲಿಂಗಿಸಿ ಕುಳ್ಳಿರಿಸಿದನು. ಸ್ತ್ರೀಯರು ಇವನ ದೃಷ್ಟಿನಿವಾರಣೆಗಾಗಿ ಉಪ್ಪಿನಾರತಿ ಎತ್ತಿದರು, ಉತ್ತಮ ವಸ್ತ್ರಗಳ ನಿವಾಳಿ , ರತ್ನಗಳ ಕಾಣಿಕೆ, ಬಣ್ಣದ ದೀಪಗಳನ್ನು ತಂದು ಸ್ವಾಗತಿಸಿದರು.

ಅರ್ಥ:
ಮಗ: ಪುತ್ರ; ವಸು: ಐಶ್ವರ್ಯ, ಸಂಪತ್ತು; ಕುಲ: ವಂಶ; ನೃಪ: ರಾಜ; ಚಿಂತಾಮಣಿ: ಸ್ವರ್ಗಲೋಕದ ಒಂದು ದಿವ್ಯ ರತ್ನ; ರಾಯ: ರಾಜ; ಮೋಹರ: ಯುದ್ಧ; ಧೂಮಕೇತು: ಅಮಂಗಳಕರವಾದುದು, ಉಲ್ಕೆ; ಕಂದ: ಮಗು; ಬಾ: ಆಗಮಿಸು; ಅಪ್ಪು: ಆಲಿಂಗನ; ಕುಳ್ಳಿರಿಸು: ಆಸೀನನಾಗು; ಕಾಮಿನಿ: ಹೆಣ್ಣು; ಉಪ್ಪಾರತಿ: ಉಪ್ಪನ್ನು ನಿವಾಳಿಸಿ ದೃಷ್ಟಿ ತೆಗೆಯುವುದು; ಅಭಿರಾಮ: ಸುಂದರವಾದ; ವಸ್ತ್ರ: ಬಟ್ಟೆ; ನಿವಾಳಿ: ದೃಷ್ಟಿದೋಷ ಪರಿಹಾರಕ್ಕಾಗಿ ಇಳಿ ತೆಗೆಯುವುದು; ರತ್ನ: ಬೆಲೆಬಾಳುವ ಮಣಿ; ಸ್ತೋಮ: ಗುಂಪು; ಬಣ್ಣ: ವರ್ಣ; ಸೊಡರು: ದೀಪ; ಸುಳಿ: ಆವರಿಸು, ಮುತ್ತು; ಹರುಷ: ಸಂತಸ; ಒಗ್ಗು: ಗುಂಪು, ಸಮೂಹ;

ಪದವಿಂಗಡಣೆ:
ಬಾ +ಮಗನೆ +ವಸುಕುಲದ +ನೃಪ +ಚಿಂ
ತಾಮಣಿಯೆ +ಕುರುರಾಯ +ಮೋಹರ
ಧೂಮಕೇತುವೆ +ಕಂದ +ಬಾಯೆಂದಪ್ಪಿ+ ಕುಳ್ಳಿರಿಸೆ
ಕಾಮಿನಿಯರ್+ಉಪ್ಪಾರತಿಗಳ್+ಅಭಿ
ರಾಮ+ವಸ್ತ್ರ +ನಿವಾಳಿ +ರತ್ನ
ಸ್ತೋಮ +ಬಣ್ಣದ +ಸೊಡರು +ಸುಳಿದವು+ ಹರುಷದೊಗ್ಗಿನಲಿ

ಅಚ್ಚರಿ:
(೧) ಮಗನನ್ನು ಹೊಗಳಿದ ಪರಿ – ವಸುಕುಲದ ನೃಪ ಚಿಂತಾಮಣಿಯೆ ಕುರುರಾಯ ಮೋಹರ
ಧೂಮಕೇತುವೆ