ಪದ್ಯ ೩೨: ಕರ್ಣನು ತನ್ನ ಅಹಂಕಾರವನ್ನು ಹೇಗೆ ಬಿಡಬೇಕಾಯಿತು?

ಮರಳಿ ಶಲ್ಯನನೆಚ್ಚನಾತನ
ಕರದ ವಾಘೆಯ ಕಡಿದನಾ ರಥ
ತುರಗದೊಡಲಲಿ ಹೂಳಿದನು ಹೇರಾಳದಂಬುಗಳ
ಹೊರೆಯ ಹಡಪಿಗ ಚಾಹಿಯರ ಚಾ
ಮರಿಯರನು ನೋಯಿಸಿದ ಗೆಲವಿನ
ಗರುವತನವನು ಬಡ್ಡಿಸಹಿತುಗುಳಿಚಿದನಾ ಪಾರ್ಥ (ಕರ್ಣ ಪರ್ವ, ೨೪ ಸಂಧಿ, ೩೨ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಬಾಣ ಪ್ರತಾಪವನ್ನು ಮುಂದುವರೆಸುತ್ತಾ, ಶಲ್ಯನನ್ನು ಹೊಡೆದನು, ಅವನ ಕೈಯಲ್ಲಿದ್ದ ವಾಘೆಯನ್ನು ಕತ್ತರಿಸಿ, ರಥದ ಕುರುರೆಗಳ ಮೈಯಲ್ಲಿ ಬಾಣಗಳನ್ನು ನೆಟ್ಟನು. ಅಕ್ಕ ಪಕ್ಕದ ತಾಂಬೂಲ ಛತ್ರ ಚಾಮರಧಾರಿಗಳನ್ನು ನೋಯಿಸಿದನು. ಗೆದ್ದೆನೆಂಬ ಅಹಂಕಾರವನ್ನು ಕರ್ಣನು ಬಡ್ಡಿಸಮೇತ ಉಗುಳಬೇಕಾಯಿತು.

ಅರ್ಥ:
ಮರಳಿ: ಮತ್ತೆ, ಪುನಃ; ಎಚ್ಚು: ಬಾಣಬಿಡು; ಕರ: ಕೈ; ವಾಘೆ: ಲಗಾಮು; ಕಡಿ: ಚೂರಾಗು, ತುಂಡು, ಹೋಳು; ರಥ: ಬಂಡಿ; ತುರಗ: ಕುದುರೆ; ಒಡಲು: ದೇಹ; ಹೂಳು: ಹೂತು ಹಾಕು, ಮುಚ್ಚು; ಹೇರಾಳು: ದೊಡ್ಡ, ವಿಶೇಷ; ಅಂಬು: ಬಾಣ; ಹೊರೆ: ರಕ್ಷಣೆ, ಆಶ್ರಯ; ಹಡಪಿಗ: ಚೀಲವನ್ನಿಟ್ಟುಕೊಂಡಿರುವವನು; ಚಾಹಿ: ಛತ್ರಹಿಡಿದವ; ಚಾಮರಿ: ಚಾಮರ ಬೀಸುವವ; ನೋವು: ಪೆಟ್ಟು; ಗೆಲುವು: ಜಯ; ಗರುವ: ಅಹಂಕಾರ; ಬಡ್ಡಿ:ಸಾಲವಾಗಿ ಕೊಡುವ ಯಾ ಪಡೆಯುವ ಹಣದ ಮೇಲೆ ತೆರುವ ಯಾ ಪಡೆಯುವ ಹೆಚ್ಚಿನ ಹಣ; ಸಹಿತ: ಜೊತೆ; ಉಗುಳಿಸು: ಹೊರಹಾಕು;

ಪದವಿಂಗಡಣೆ:
ಮರಳಿ +ಶಲ್ಯನನ್+ಎಚ್ಚನ್+ಆತನ
ಕರದ+ ವಾಘೆಯ +ಕಡಿದನಾ +ರಥ
ತುರಗದ್+ಒಡಲಲಿ +ಹೂಳಿದನು +ಹೇರಾಳದ್+ಅಂಬುಗಳ
ಹೊರೆಯ +ಹಡಪಿಗ+ ಚಾಹಿಯರ +ಚಾ
ಮರಿಯರನು +ನೋಯಿಸಿದ+ ಗೆಲವಿನ
ಗರುವತನವನು+ ಬಡ್ಡಿ+ಸಹಿತ್+ಉಗುಳಿಚಿದನಾ +ಪಾರ್ಥ

ಅಚ್ಚರಿ:
(೧) ಅಹಂಕಾರವನ್ನು ಮಣ್ಣುಮಾಡಿದನು ಎಂದು ಹೇಳುವ ಪರಿ, ಬಡ್ಡಿ ಪದದ ಬಳಕೆ – ಗೆಲವಿನ ಗರುವತನವನು ಬಡ್ಡಿಸಹಿತುಗುಳಿಚಿದನಾ ಪಾರ್ಥ
(೨) ಜೋಡಿ ಪದಗಳು – ಹೊರೆಯ ಹಡಪಿಗ; ಚಾಹಿಯರ ಚಾಮರಿಯರನು