ಪದ್ಯ ೧: ಬಲರಾಮನಿಗೆ ಯಾರು ನಮಸ್ಕರಿಸಿದರು?

ಕೇಳು ಧೃತರಾಷ್ಟ್ರವನಿಪ ಸಿರಿ
ಲೋಲ ಸಹಿತ ಯುಧಿಷ್ಠಿರಾದಿ ನೃ
ಪಾಲಕರು ಕಾಣಿಕೆಯನಿತ್ತರು ನಮಿಸಿ ಹಲಧರಗೆ
ಮೇಲುದುಗುಡದ ಮುಖದ ನೀರೊರೆ
ವಾಲಿಗಳ ಕಕ್ಷದ ಗದೆಯ ಭೂ
ಪಾಲ ಬಂದನು ನೊಸಲ ಚಾಚಿದನವರ ಚರಣದಲಿ (ಗದಾ ಪರ್ವ, ೫ ಸಂಧಿ, ೧ ಪದ್ಯ)

ತಾತ್ಪರ್ಯ:
ಎಲೈ ರಾಜ ಧೃತರಾಷ್ಟ್ರ ಕೇಳು, ಧರ್ಮಜನೇ ಮೊದಲಾದ ರಾಜರು ಶ್ರೀಕೃಷ್ಣನೊಡನೆ ಬಲರಾಮನಿಗೆ ವಂದಿಸಿ ಕಾಣಿಕೆಯನ್ನು ನೀಡಿದರು. ದುರ್ಯೋಧನನ ಅಪಾರ ದುಃಖವು ಅವನ ಕಣ್ಣಿನ ಕೊನೆಯಲ್ಲಿ ತುಂಬಿದ ನೀರಿನಿಂದ ಹೊರಹೊಮ್ಮುತ್ತಿತ್ತು. ಬಗಲಿನಲ್ಲಿ ಗದೆಯನ್ನಿಟ್ಟುಕೊಂಡು ಅವನು ಬಲರಾಮನ ಪಾದಗಳಿಗೆ ಹಣೆಯನ್ನು ಚಾಚಿದನು.

ಅರ್ಥ:
ಅವನಿಪ: ರಾಜ; ಸಿರಿಲೋಲ: ಲಕ್ಷ್ಮಿಯ ಪ್ರಿಯಕರ (ಕೃಷ್ಣ); ಸಹಿತ: ಜೊತೆ; ಆದಿ: ಮುಂತಾದ; ನೃಪಾಲ: ರಾಜ; ಕಾಣಿಕೆ: ಉಡುಗೊರೆ; ನಮಿಸು: ಎರಗು; ಹಲಧರ: ಹಲವನ್ನು ಹಿಡಿದವ (ಬಲರಾಮ); ದುಗುಡ: ದುಃಖ; ಮೇಲುದುಗುಡ: ತುಂಬಾ ದುಃಖ; ಮುಖ: ಆನನ; ನೀರು: ಜಲ; ಒರೆವಾಲಿ: ಕಣ್ಣಿನ ಕೊನೆ; ಕಕ್ಷ: ಕಂಕಳು; ಗದೆ: ಮುದ್ಗರ; ಭೂಪಾಲ: ರಾಜ; ಬಂದು: ಆಗಮಿಸು; ನೊಸಲ: ಹಣೆ; ಚಾಚು: ಹರಡು; ಚರಣ: ಪಾದ;

ಪದವಿಂಗಡಣೆ:
ಕೇಳು+ ಧೃತರಾಷ್ಟ್ರ +ಅವನಿಪ +ಸಿರಿ
ಲೋಲ +ಸಹಿತ +ಯುಧಿಷ್ಠಿರಾದಿ+ ನೃ
ಪಾಲಕರು+ ಕಾಣಿಕೆಯನಿತ್ತರು+ ನಮಿಸಿ+ ಹಲಧರಗೆ
ಮೇಲು+ದುಗುಡದ +ಮುಖದ +ನೀರ್+ಒರೆ
ವಾಲಿಗಳ +ಕಕ್ಷದ+ ಗದೆಯ +ಭೂ
ಪಾಲ +ಬಂದನು +ನೊಸಲ +ಚಾಚಿದನವರ +ಚರಣದಲಿ

ಅಚ್ಚರಿ:
(೧) ಅವನಿಪ, ಭೂಪಾಲ, ನೃಪಾಲ – ಸಮಾನಾರ್ಥಕ ಪದ
(೨) ದುಃಖವನ್ನು ವಿವರಿಸುವ ಪರಿ – ಮೇಲುದುಗುಡದ ಮುಖದ ನೀರೊರೆವಾಲಿಗಳ