ಪದ್ಯ ೫೮: ಶತ್ರುದೇಶವನ್ನು ವಿನಾಕಾರಣ ನಾಶಮಾಡಬಹುದೆ?

ದೇಶ ಹಗೆವನದೆಂದು ಕಡ್ಡಿಯ
ಘಾಸಿ ಮಾಡದೆ ಮಿಗೆ ವಿನೋದದ
ಲೈಸುಪಡೆ ನಡೆತಂದು ಬಿಟ್ಟುದು ಗಿರಿಯ ತಪ್ಪಲಲಿ
ಆ ಸರೋರುಹ ಬಂಧು ಚರಮಾ
ಶಾ ಸತಿಯ ಚುಂಬಿಸೆ ಗಿರಿವ್ರಜ
ದಾ ಶಿಖರವನು ಹತ್ತಿದರು ಹರಿಭೀಮ ಫಲುಗುಣರು (ಸಭಾ ಪರ್ವ, ೨ ಸಂಧಿ, ೫೮ ಪದ್ಯ)

ತಾತ್ಪರ್ಯ:
ಮಗಧರಾಜನನ್ನು ಸದೆಬಡೆಯಲು ಬಂದಿರುವ ಭೀಮಾರ್ಜುನರು, ಮಗಧ ದೇಶವು ಅವರ ವೈರಿರಾಜನ ದೇಶವಾಗಿದ್ದರೂ, ಆ ದೇಶದಲ್ಲಿ ಒಂದು ಕಡ್ಡಿಯನ್ನು ನಾಶಮಾಡಲಿಲ್ಲ, ಹಾಗೂ ಅಷ್ಟೂ ಸೈನ್ಯವನ್ನು ಬೆಟ್ಟದ ತಪ್ಪಲಲ್ಲಿ ಉಳಿಯಲು ಹೇಳಿ, ಸೂರ್ಯನು ಮುಳುಗಲು ಕೃಷ್ಣನ ಜೊತೆ ಭೀಮಾರ್ಜುನರು ಬೆಟ್ಟವನ್ನು ಹತ್ತಿದರು.

ಅರ್ಥ:
ದೇಶ: ರಾಷ್ಟ್ರ; ಹಗೆ: ವೈರಿ; ಕಡ್ಡಿ: ಕಾಷ್ಠ, ಮರದತುಂಡು; ಘಾಸಿ: ನಾಶ; ಮಿಗೆ: ಅಧಿಕ, ಮತ್ತು; ವಿನೋದ: ಸಂತೋಷ; ಐಸು: ಅಷ್ಟು; ಪಡೆ: ಸೈನ್ಯ; ಗಿರಿ: ಬೆಟ್ಟ; ತಪ್ಪಲು: ಕೆಳಭಾಗ; ಬಿಟ್ಟುದು: ಉಳಿದು; ಸರೋರುಹ: ಕಮಲ; ಬಂಧು: ಸಂಬಂಧಿಕ; ಚರಮ, ಚರಮಾಶೆ: ಪಶ್ಚಿಮದಿಕ್ಕಿನ; ಚುಂಬಿಸು: ಮುತ್ತಿಟ್ಟು; ವ್ರಜ: ಗುಂಪು, ಸಮೂಹ; ಗಿರಿವ್ರಜ: ಬೆಟ್ಟಗಳ ಗುಂಪು; ಶಿಖರ: ತುದಿ; ಹತ್ತು: ಏರು; ಸತಿ: ಹೆಂಡತಿ;

ಪದವಿಂಗಡಣೆ:
ದೇಶ +ಹಗೆವನದ್+ಎಂದು +ಕಡ್ಡಿಯ
ಘಾಸಿ +ಮಾಡದೆ +ಮಿಗೆ +ವಿನೋದದಲ್
ಐಸು+ಪಡೆ +ನಡೆತಂದು+ ಬಿಟ್ಟುದು +ಗಿರಿಯ +ತಪ್ಪಲಲಿ
ಆ +ಸರೋರುಹ +ಬಂಧು +ಚರಮಾಶ
ಆ+ ಸತಿಯ +ಚುಂಬಿಸೆ +ಗಿರಿವ್ರಜದ
ಆ+ ಶಿಖರವನು+ ಹತ್ತಿದರು +ಹರಿ+ಭೀಮ +ಫಲುಗುಣರು

ಅಚ್ಚರಿ:
(೧) ವೈರಿರಾಷ್ಟ್ರವೆಂದರೆ ಮೊದಲು ನಾಶಮಾಡಬೇಕು ಎಂದು ನಾವು ತಿಳಿಯುತ್ತೇವೆ, ಆದರೆ ಇಲ್ಲಿ ವೈರಿರಾಷ್ಟ್ರದಲ್ಲಿ ಒಂದು ಕಡ್ಡಿಯನ್ನು ನಾಶಮಾಡಲಿಲ್ಲ ಎಂದು ಹೇಳುವ ಮೂಲಕ, ಆಗಿನ ಕಾಲದಲ್ಲಿದ್ದ ಮೌಲ್ಯಗಳ ತುಣುಕು ನೀಡಲಾಗಿದೆ. ಯುದ್ಧಕ್ಕೆ ಬಂದಿದ್ದರು, ಆ ದೇಶದ ಸಂಪತ್ತನ್ನು ಹಾಳುಮಾಡುವಹಾಗಿಲ್ಲ – ಎಂತಹ ಅತ್ಯುನ್ನತ ಯೋಚನೆ
(೨) ಸೂರ್ಯ ಮುಳುಗಿದ ನೆಂದು ಹೇಳಲು ಬಳಸಿರುವ ಕಲ್ಪನೆ- ಸರೋರುಹ ಅಂದರೆ ಕಮಲ, ಕಮಲದ ಬಂಧು – ಸೂರ್ಯ (ಸೂರ್ಯ ಉದಯಿಸಲು ಕಮಲ ಅರಳೂತ್ತದೆ), ಸೂರ್ಯನಿಗೆ ಇಬ್ಬರು ಹೆಂಡತಿಯರು, ಛಾಯ, ಸರಣ್ಯು (ಸಂಧ್ಯಾ, ಸಂಜನ ಎಂದು ಇತರ ಹೆಸರು), ಸೂರ್ಯನು ಪಶ್ಚಿಮ ದಿಕ್ಕಿನಲ್ಲಿ ಅವನ ಹೆಂಡತಿಯನ್ನು ಚುಂಬಿಸಿದ – ಎಂದು ಸೂರ್ಯನು ಮುಳುಗಿದನೆಂದು ಹೇಳುವ ಪರಿ