ಪದ್ಯ ೭: ಉತ್ತರನು ಬೃಹನ್ನಳೆಗೆ ಏನು ಹೇಳಿದ?

ಹಸಿದ ಮಾರಿಯ ಮಂದೆಯಲಿ ಕುರಿ
ನುಸುಳಿದಂತಾದೆನು ಬೃಹನ್ನಳೆ
ಯೆಸಗದಿರು ತೇಜಿಗಳ ತಡೆ ಚಮ್ಮಟಿಗೆಯನು ಬಿಸುಡು
ಮಿಸುಗಬಾರದು ಪ್ರಳಯಕಾಲನ
ಮುಸುಕನುಗಿವವರಾರು ಕೌರವ
ನಸಮಬಲನೈ ರಥವ ಮರಳಿಸು ಜಾಳಿಸುವೆನೆಂದ (ವಿರಾಟ ಪರ್ವ, ೭ ಸಂಧಿ, ೭ ಪದ್ಯ)

ತಾತ್ಪರ್ಯ:
ಹಸಿದಿರುವ ಮಾರಿಗಳ ಗುಂಪಿನಲ್ಲಿ ಕುರಿಯು ಬಂದು ಹೊಕ್ಕಂತೆ ಆಗಿದೆ ನನ್ನ ಸ್ಥಿತಿ ಬೃಹನ್ನಳೆ, ಕುದುರೆಗಳ ಓಟವನ್ನು ನಿಲ್ಲಿಸು, ಬಾರುಕೋಲನ್ನು ಕೆಳಕ್ಕೆ ಬಿಸಾಡು, ಈ ಸೈನ್ಯದೆದುರಿಗೆ ಕದಲಲೂ ಬಾರದು, ಪ್ರಳಯಕಾಲದ ಯಮನು ಮುಖಕ್ಕೆ ಹಾಕಿಕೊಂಡಿರುವ ಮುಸುಕನ್ನು ಯಾರಾದರೂ ತೆಗೆಯುವರೇ? ಕೌರವನು ಮಹಾ ಬಲಶಾಲಿ, ರಥವನ್ನು ಹಿಮ್ದಕ್ಕೆ ತಿರುಗಿಸು, ಓಡಿ ಹೋಗೋಣವೆಂದು ಉತ್ತರನು ಬೃಹನ್ನಳೆಗೆ ಹೇಳಿದನು.

ಅರ್ಥ:
ಹಸಿ: ಆಹಾರವನ್ನು ಬಯಸು; ಮಾರಿ: ಕ್ಷುದ್ರದೇವತೆ; ಮಂದೆ: ಗುಂಪು, ಸಮೂಹ; ಕುರಿ: ಮೇಷ; ನುಸುಳು: ತೂರುವಿಕೆ, ನುಣುಚಿಕೊಳ್ಳುವಿಕೆ; ಎಸಗು: ಮಾಡು, ವ್ಯವಹರಿಸು; ತೇಜಿ: ಕುದುರೆ; ತಡೆ: ನಿಲ್ಲಿಸು; ಚಮ್ಮಟಗೆ: ಚಾವಟಿ; ಬಿಸುಡು: ತೊರೆ, ಹೊರಹಾಕು; ಮಿಸುಗು: ಕದಲು, ಅಲುಗು; ಪ್ರಳಯಕಾಲ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶದ ಸಮಯ; ಮುಸುಕು: ಹೊದಿಕೆ; ಉಗಿ: ಹೊರಹಾಕು; ಅಸಮಬಲ: ಅಪ್ರತಿಮ ಬಲಶಾಲಿ; ರಥ: ಬಂಡಿ; ಮರಳು: ಹಿಂದಿರುಗಿಸು; ಜಾಳಿಸು: ಚಲಿಸು, ನಡೆ;

ಪದವಿಂಗಡಣೆ:
ಹಸಿದ +ಮಾರಿಯ +ಮಂದೆಯಲಿ +ಕುರಿ
ನುಸುಳಿದಂತಾದೆನು+ ಬೃಹನ್ನಳೆ
ಯೆಸಗದಿರು +ತೇಜಿಗಳ+ ತಡೆ+ ಚಮ್ಮಟಿಗೆಯನು +ಬಿಸುಡು
ಮಿಸುಗಬಾರದು+ ಪ್ರಳಯಕಾಲನ
ಮುಸುಕನ್+ಉಗಿವವರಾರು+ ಕೌರವನ್
ಅಸಮಬಲನೈ+ ರಥವ+ ಮರಳಿಸು+ ಜಾಳಿಸುವೆನೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಸಿದ ಮಾರಿಯ ಮಂದೆಯಲಿ ಕುರಿನುಸುಳಿದಂತಾದೆನು

ಪದ್ಯ ೩೬: ದೇವತೆಗಳು ಹೇಗೆ ಕಂಡರು?

ಅಡಿಗಡಿಗೆ ಚಮ್ಮಟಿಗೆಯಳ್ಳೆಯ
ತುಡುಕೆ ಕುಣಿದವು ವೇದಹಯ ಬಲ
ನೆಡ ಪುರಃಪಶ್ಚಿಮದಲೆರಗುವ ಮಂತ್ರ ಕೋಟಿಗಳ
ನುಡಿಯಲರಿದಾಕಾಶ ಸರಸಿಯೊ
ಳಿಡಿದ ತಾವರೆಮುಗುಳುಗಳೊ ಸುರ
ಪಡೆಯೊಳೊತ್ತಿದ ಮುಗಿದ ಕೈಗಳೊ ಚಿತ್ರವಾಯ್ತೆಂದ (ಕರ್ಣ ಪರ್ವ, ೭ ಸಂಧಿ, ೩೬ ಪದ್ಯ)

ತಾತ್ಪರ್ಯ:
ಬ್ರಹ್ಮನು ಚಾವಟಿಯಿಂದ ಕುದುರೆಗಳ ಹೊಟ್ಟೆಯ ಭಾಗವನ್ನು ತಿವಿಯಲು, ವೇದಹಯಗಳು ಕುಣಿದವು, ಬಲ ಎಡ, ಪೂರ್ವ, ಪಶ್ಚಿಮ (ಎಲ್ಲಾ ದಿಕ್ಕುಗಳಿಂದಲೂ) ಬಂದ ಅಗಣಿತ ಮಂತ್ರಗಳ ಶಬ್ದವನ್ನು ಹೇಳಲು ಸಾಧ್ಯವಿಲ್ಲ, ದೇವತೆಗಳೆಲ್ಲಾ ತೋಳುಗಳನೆತ್ತಿ ಮುಗಿದ ಕೈಗಳು ಆಕಾಶ ಸರೋವರದ ಕಮಲಗಳಂತೆ ಕಾಣಿಸಿಕೊಂಡರು.

ಅರ್ಥ:
ಅಡಿಗಡಿಗೆ: ಹೆಜ್ಜೆಹೆಜ್ಜೆಗೆ; ಚಮ್ಮಟಿಗೆ: ಚಾವಟಿ;ಅಳ್ಳೆ: ಹೊಟ್ಟೆಯ ಒಂದು ಪಕ್ಕ; ತುಡುಕು: ಮುಟ್ಟು, ತಾಗು; ಕುಣಿ: ಎಗರು; ವೇದಹಯ: ವೇದಕುದುರೆ; ಬಲ: ಬಲಭಾಗ, ದಕ್ಷಿಣ; ಎಡ: ವಾಮಭಾಗ; ಪುರಃ: ಪೂರ್ವ; ಪಶ್ಚಿಮ: ಪಡುವಣ; ಎರಗು: ಹೊರಹೊಮ್ಮು; ಮಂತ್ರ: ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಕೋಟಿ: ಅಗಣಿತ; ನುಡಿ: ಮಾತು; ಅರಿ: ತಿಳಿ; ಆಕಾಶ: ಗಗನ; ಸರಸಿ: ಸರೋವರ; ತಾವರೆ: ಕಮಲ; ಮುಗುಳು: ಮೊಗ್ಗು; ಸುರಪಡೆ: ದೇವತೆಗಳ ಸೈನ್ಯ; ಒತ್ತು: ಹತ್ತಿರ; ಮುಗಿದ: ಎರಗಿದ; ಕೈ: ಕರ, ಹಸ್ತ; ಚಿತ್ರ: ಆಕೃತಿ;

ಪದವಿಂಗಡಣೆ:
ಅಡಿಗಡಿಗೆ +ಚಮ್ಮಟಿಗೆ+ಯಳ್ಳೆಯ
ತುಡುಕೆ +ಕುಣಿದವು +ವೇದಹಯ +ಬಲನ್
ಎಡ+ ಪುರಃ+ಪಶ್ಚಿಮದಲ್+ಎರಗುವ +ಮಂತ್ರ +ಕೋಟಿಗಳ
ನುಡಿಯಲರಿದ್+ಆಕಾಶ +ಸರಸಿಯೊಳ್
ಇಡಿದ +ತಾವರೆ+ಮುಗುಳುಗಳೊ +ಸುರ
ಪಡೆಯೊಳ್+ಒತ್ತಿದ +ಮುಗಿದ +ಕೈಗಳೊ+ ಚಿತ್ರವಾಯ್ತೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ನುಡಿಯಲರಿದಾಕಾಶ ಸರಸಿಯೊಳಿಡಿದ ತಾವರೆಮುಗುಳುಗಳೊ ಸುರಪಡೆಯೊಳೊತ್ತಿದ ಮುಗಿದ ಕೈಗಳೊ ಚಿತ್ರವಾಯ್ತೆಂದ