ಪದ್ಯ ೨೮: ಬೇಟೆಗಾರರನ್ನು ಯಾರು ಹಿಂದಕ್ಕೆ ನೂಕಿದರು?

ಮುಳುದೊಡಕಿನೊಳು ಕೂದಲೊಂದೇ
ಸಿಲುಕಿನಿಂದವು ಚಮರಿಮೃಗ ಮರಿ
ಗಳಿಗೆ ಮೊಲೆಗೊಡುತಿರುಕಿನಲಿ ಹುದುಗಿದವು ಹುಲ್ಲೆಗಳು
ಎಳೆವರಿಯನಡಗಲಿಸಿ ನಿಂದವು
ಮಲೆತು ಸಿಂಹದ ಮಿಥುನ ಹಿಂಡಿನ
ಕಳಭವನು ಹಿಂದಿಕ್ಕಿ ವನಕರಿ ತೂಳಿದವು ಪಡೆಯ (ಅರಣ್ಯ ಪರ್ವ, ೧೪ ಸಂಧಿ, ೨೮ ಪದ್ಯ)

ತಾತ್ಪರ್ಯ:
ಮುಳ್ಳುಗಳಿಗೆ ಕೂದಲು ಸಿಕ್ಕಿಹಾಕಿಕೊಂಡಹಾಗೆ ಚಮರೀ ಮೃಗಗಳು ನಿಂತವು. ಜಿಂಕೆಗಳು ಸಂದಿನಲ್ಲಿ ಸೇರಿಕೊಂಡು ಮರಿಗಳಿಗೆ ಹಾಲುಣಿಸಿದವು. ಚಿಕ್ಕ ಮರಿಗಳಿಗೆ ಅಡ್ಡವಾಗಿ ಹೆಣ್ಣು ಗಂಡು ಸಿಂಹಗಳು ಬೇಟೆಗಾರರನ್ನು ಎದುರಿಸಿದವು. ತಮ್ಮ ಮರಿಗಳನ್ನು ಹಿಂದಿಟ್ಟು ಕಾಡಾನೆಗಳು ಬೇಟೆಗಾರರನ್ನು ಹಿಂದಕ್ಕೆಸೆದವು.

ಅರ್ಥ:
ಮುಳು: ಮುಳ್ಳು; ಒಡಕು: ಬಿರುಕು; ಕೂದಲು: ರೊಮ; ಸಿಲುಕು: ಬಂಧಿಸು; ನಿಂದವು: ನಿಲ್ಲು; ಮೃಗ: ಪ್ರಾಣಿ; ಮರಿ: ಎಳೆಯದು; ಮೊಲೆಗೊಡು: ಹಾಲನ್ನು ಉಣಿಸು; ಇರುಕು: ಅದುಮಿ ಭದ್ರವಾಗಿ ಹಿಸುಕಿ ಹಿಡಿ; ಹುದುಗು: ಅಡಗು, ಮರೆಯಾಗು; ಹುಲ್ಲೆ: ಜಿಂಕೆ, ಚಿಗುರೆ; ಎಳೆ: ಚಿಕ್ಕ; ಎಳೆವರಿ: ಚಿಕ್ಕ ಮರಿ; ಅಡಗು: ಅವಿತುಕೊಳ್ಳು, ಮರೆಯಾಗು; ಮಲೆ: ಎದುರಿಸು, ಪ್ರತಿಭಟಿಸು; ಸಿಂಹ: ಕೇಸರಿ; ಮಿಥುನ: ಜೋಡಿ; ಹಿಂಡು: ಗುಂಪು; ಕಳಭ: ಆನೆಮರಿ; ಹಿಂದಿಕ್ಕು: ಹಿಂದೆ ಸರಿಸು; ವನಕರಿ: ಕಾಡಾನೆ; ತೂಳು: ಸೋಲಿಸು, ಓಡಿಸು; ಪಡೆ: ಸೈನ್ಯ, ಗುಂಪು;

ಪದವಿಂಗಡಣೆ:
ಮುಳುದೊಡಕಿನೊಳು+ ಕೂದಲೊಂದೇ
ಸಿಲುಕಿನಿಂದವು+ ಚಮರಿಮೃಗ +ಮರಿ
ಗಳಿಗೆ+ ಮೊಲೆಗೊಡುತ್+ಇರುಕಿನಲಿ+ ಹುದುಗಿದವು +ಹುಲ್ಲೆಗಳು
ಎಳೆವರಿಯನ್+ಅಡಗಲಿಸಿ +ನಿಂದವು
ಮಲೆತು+ ಸಿಂಹದ +ಮಿಥುನ +ಹಿಂಡಿನ
ಕಳಭವನು +ಹಿಂದಿಕ್ಕಿ+ ವನಕರಿ+ ತೂಳಿದವು +ಪಡೆಯ

ಅಚ್ಚರಿ:
(೧) ಚಮರೀಮೃಗ ನಿಲ್ಲುವ ಸ್ಥಿತಿಯನ್ನು ಹೇಳುವ ಪರಿ – ಮುಳುದೊಡಕಿನೊಳು ಕೂದಲೊಂದೇ
ಸಿಲುಕಿನಿಂದವು ಚಮರಿಮೃಗ