ಪದ್ಯ ೨೩: ದುರ್ಯೊಧನನು ಹೇಗೆ ಪಲಾಯನ ಮಾಡಿದನು?

ಬಳಿಕ ನೂರಾನೆಯಲಿ ನಿನ್ನವ
ನಳವಿಗೊಟ್ಟನು ಭೀಮಸೇನನ
ಚಲಗತಿಯ ಚಾತುರ ಚಪೇಟ ಪದಪ್ರಹಾರದಲಿ
ಕಳನೊಳಗೆ ಕೋಡೂರಿ ಮಗ್ಗುಲ
ನೆಲಕೆ ಕೀಲಿಸಲಾನೆಯಿಂದಿಳೆ
ಗಿಳಿದು ಹಾಯ್ದನು ಭಯದಿನೇಕಾಂಗದಲಿ ಕುರುರಾಯ (ಗದಾ ಪರ್ವ, ೪ ಸಂಧಿ, ೨೩ ಪದ್ಯ)

ತಾತ್ಪರ್ಯ:
ಬಳಿಕ ನಿನ್ನ ಮಗನು ನೂರು ಆನೆಗಳೊಡನೆ ಭೀಮನೊಡನೆ ಕಾಳಗಕ್ಕಿಳಿದನು. ಭೀಮನ ಅತಿ ವೇಗದ ಆತುರ್ಯ, ಪದಗಳ ಹೊಡೆತದಿಂದ ಅವನು ಹತ್ತಿದ್ದ ಆನೆಯು ದಂತವನ್ನು ಮಗ್ಗುಲಾಗಿ ನೆಲಕ್ಕೆ ಮಲಗಲು, ಆನೆಯಿಂದಿಳಿದು ಭಯದಿಂದ ಏಕಾಂಗಿಯಾಗಿ ಪಲಾಯನ ಮಾಡಿದನು.

ಅರ್ಥ:
ಬಳಿಕ: ನಂತರ; ನೂರು: ಶತ; ಆನೆ: ಗಜ; ಅಳವಿ: ಶಕ್ತಿ; ಚಲಗತಿ: ಅತಿವೇಗ; ಚಾತುರ: ನಿಪುಣತೆ; ಚಪೇಟ: ಅಭಯಹಸ್ತ; ಪದ: ಪಾದ, ಚರಣ; ಪ್ರಹಾರ: ಹೊಡೆತ, ಪೆಟ್ಟು; ಕಳ: ರಣರಂಗ; ಕೋಡೂರು: ದಂತವನ್ನು ನೆಲಕ್ಕೆ ಊರು; ಮಗ್ಗಲು: ಪಕ್ಕ, ಬದಿ; ನೆಲ: ಭೂಮಿ; ಕೀಲಿಸು: ಜೋಡಿಸು, ಚುಚ್ಚು; ಆನೆ: ಗಜ; ಇಳೆ: ಭೂಮಿ; ಇಳಿ: ಕೆಳಕ್ಕೆ ಬಾ; ಹಾಯ್ದು: ಹೊಡೆ; ಭಯ: ಅಂಜಿಕೆ; ಏಕಾಂಗ: ಒಬ್ಬನೆ; ರಾಯ: ರಾಜ;

ಪದವಿಂಗಡಣೆ:
ಬಳಿಕ +ನೂರಾನೆಯಲಿ+ ನಿನ್ನವನ್
ಅಳವಿಗೊಟ್ಟನು +ಭೀಮಸೇನನ
ಚಲಗತಿಯ +ಚಾತುರ +ಚಪೇಟ +ಪದ+ಪ್ರಹಾರದಲಿ
ಕಳನೊಳಗೆ +ಕೋಡೂರಿ+ ಮಗ್ಗುಲ
ನೆಲಕೆ+ ಕೀಲಿಸಲ್+ಆನೆಯಿಂದ್+ಇಳೆ
ಗಿಳಿದು+ ಹಾಯ್ದನು +ಭಯದಿನ್+ಏಕಾಂಗದಲಿ +ಕುರುರಾಯ

ಅಚ್ಚರಿ:
(೧) ಚ ಕಾರದ ತ್ರಿವಳಿ ಪದ – ಚಲಗತಿಯ ಚಾತುರ ಚಪೇಟ

ಪದ್ಯ ೩೨:ಭೀಮನ ಹೊಡೆತ ಹೇಗಿತ್ತು?

ಮುರುಕಿಸುವ ಪವನಜನ ನೆತ್ತಿಯ
ನೆರಗಿದನು ಬಳಿಕವನ ಹೊಯ್ಲಿನ
ಬಿರುಸಿನಯ್ಯನೊ ಸಿಡಿಲ ಶಿಷ್ಯನೊ ವಜ್ರಕರಹತಿಯೊ
ಕರಗಿದಾ ಮಯಣಾಮದಿಗಳಿಂ
ದೆರದ ಕಾಹಿನ ಕರುವೆನಲು ಕು
ಕ್ಕುರಿಸಲಸುರನ ಸಿಕ್ಕಿದನು ಚಾಪಲ ಚಪೇಟದಲಿ (ಅರಣ್ಯ ಪರ್ವ, ೧ ಸಂಧಿ, ೩೨ ಪದ್ಯ)

ತಾತ್ಪರ್ಯ:
ಸೊಕ್ಕಿನಿಂದ ಹೊಡೆದ ಭೀಮನ ನೆತ್ತಿಯನ್ನು ಕಿಮ್ಮೀರನು ಗುದ್ದಿದನು. ಅವನ ಹೊಡೆತದ ಬಿರುಸಿನ ಅಪ್ಪನೋ, ಸಿಡಿಲಿನ ಶಿಷ್ಯನೋ, ವಜ್ರದಿಂದ ಮಾಡಿದ ಕೈಯ ಹೊಡೆತವೋ, ಮೇಣವನ್ನು ಕರಗಿಸಿದಾಗ ಅದಕ್ಕಿರುವ ಕಾವಿನ ಕರುವೋ ಎಂಬಂತೆ ಭೀಮನು ಅತಿ ವೇಗ ಮತ್ತು ಬಿರುಸಿನಿಂದ ಕಿಮ್ಮೀರನನ್ನು ಗುದ್ದಲು, ಕಿಮ್ಮೀರನು ಆ ಹೊಡೆತವನ್ನು ತಾಳಲಾರದೆ ಕೆಳಕ್ಕೆ ಕುಕ್ಕುರಿಸಿದನು.

ಅರ್ಥ:
ಮುರುಕು: ಸೊಕ್ಕು, ಗರ್ವ; ಪವನಜ: ಭೀಮ; ನೆತ್ತಿ: ತಲೆ; ಎರಗು: ಆಕ್ರಮಿಸು; ಬಳಿಕ: ನಂತರ; ಹೊಯ್ಲು: ಏಟು, ಹೊಡೆತ; ಬಿರುಸು: ವೇಗ; ಸಿಡಿಲು: ಅಶನಿ; ಶಿಷ್ಯ: ಅಭ್ಯಾಸಿ, ವಿದ್ಯಾರ್ಥಿ; ವಜ್ರ: ಗಟ್ಟಿ; ಕರ: ಹಸ್ತ; ಹತಿ: ಪೆಟ್ಟು, ಹೊಡೆತ; ಕರಗು: ನೀರಾಗಿಸು; ಮಯಣ: ಮೇಣ; ಎರದ: ಕಾಹಿ: ಕಾಯುವವ; ಕರು: ಚಿಕ್ಕವ; ಕುಕ್ಕುರಿಸು: ಕೆಳಕ್ಕೆ ತಳ್ಳು; ಅಸುರ: ರಾಕ್ಷಸ; ಸಿಕ್ಕು: ಬಂಧನ; ಚಪೇಟ: ಅಭಯಹಸ್ತ;

ಪದವಿಂಗಡಣೆ:
ಮುರುಕಿಸುವ +ಪವನಜನ +ನೆತ್ತಿಯನ್
ಎರಗಿದನು +ಬಳಿಕವನ+ ಹೊಯ್ಲಿನ
ಬಿರುಸಿನ್+ಅಯ್ಯನೊ +ಸಿಡಿಲ+ ಶಿಷ್ಯನೊ+ ವಜ್ರಕರ+ಹತಿಯೊ
ಕರಗಿದಾ+ ಮಯಣಾಮದಿಗಳಿಂದ್
ಎರದ +ಕಾಹಿನ +ಕರುವ್+ಎನಲು +ಕು
ಕ್ಕುರಿಸಲ್+ಅಸುರನ+ ಸಿಕ್ಕಿದನು +ಚಾಪಲ +ಚಪೇಟದಲಿ

ಅಚ್ಚರಿ:
(೧) ಹೊಡೆತದ ಪರಿ – ಹೊಯ್ಲಿನ ಬಿರುಸಿನಯ್ಯನೊ ಸಿಡಿಲ ಶಿಷ್ಯನೊ ವಜ್ರಕರಹತಿಯೊ