ಪದ್ಯ ೮೮: ಭೀಮನ ಕೀಚಕನ ಕಾದಾಟ ಹೇಗೆ ಪ್ರಾರಂಭವಾಯಿತು?

ಚಪಳೆ ಫಡ ಹೋಗೆನುತ ಹಾಯ್ದನು
ಕೃಪಣಮತಿ ಮುಂಗೈಯಲನಿಲಜ
ನಪರಭಾಗಕೆ ಹಾಯ್ದು ಹಿಡಿದನು ಕೀಚಕನ ತುರುಬ
ವಿಪುಳಬಲ ಕಳವಳಿಸಿದನು ಕಡು
ಕುಪಿತನಾದನು ಹೆಂಗುಸಲ್ಲಿವ
ನಪಸದನು ತೆಗೆ ಕರುಳನೆನುತೊಳಹೊಕ್ಕು ಹೆಣಗಿದನು (ವಿರಾಟ ಪರ್ವ, ೩ ಸಂಧಿ, ೮೮ ಪದ್ಯ)

ತಾತ್ಪರ್ಯ:
ಕಾಮದಿಂದ ದೀನನಾಗಿದ್ದ ಕೀಚಕನು ಎಲೇ ಚಪಲೆ ಇದೇನು, ಹೋಗು ಎಂದು ಮುಂಗೈಯಲ್ಲಿ ಭೀಮನನ್ನು ಸರಿಸಿದನು. ಭೀಮನು ಕಿಚಕನ ಹಿಂದೆ ನುಗ್ಗಿ ಅವನ ತುರುಬನ್ನು ಹಿಡಿದನು, ಆ ಹಿಡಿತದಿಂದ ಕಳವಳಿಸಿದ ಕೀಚಕನಿಗೆ ಪರಿಸ್ಥಿತಿಯ ಅರಿವಾಯಿತು, ಇದು ಹೆಂಗಸಲ್ಲ, ಯಾರೋ ಮೋಸಗಾರನಾದ ದ್ರೋಹಿ, ಎಂದು ತಿಳಿದು ಕೀಚಕನು ಇವನ ಕರುಳನ್ನು ಬಿಗಿ ಎಂದು ಒಳಹೊಕ್ಕು ಕಾದಿದನು.

ಅರ್ಥ:
ಚಪಳೆ: ಚಂಚಲೆ; ಫಡ: ತಿರಸ್ಕಾರದ ಮಾತು; ಹೋಗು: ತೆರಳು; ಹಾಯ್ದು: ಮೇಲೆ ಬೀಳು; ಕೃಪಣ: ದುಷ್ಟ; ಮತಿ: ಬುದ್ಧಿ; ಮುಂಗೈ: ಮುಂದಿನ ಹಸ್ತ; ಅನಿಲಜ: ವಾಯು ಪುತ್ರ; ಅಪರ: ಬೇರೆಯ; ಭಾಗ: ಅಂಶ, ಪಾಲು; ಹಿಡಿ: ಬಂಧಿಸು; ತುರುಬು: ಕೂದಲಿನ ಗಂಟು, ಮುಡಿ; ವಿಪುಳ: ಹೆಚ್ಚು, ಜಾಸ್ತಿ; ಬಲ: ಶಕ್ತಿ; ವಿಪುಳಬಲ: ಪರಾಕ್ರಮಿ; ಕಳವಳ: ತಳಮಳ, ಗೊಂದಲ; ಕುಪಿತ: ಕೋಪ; ಹೆಂಗುಸು: ಹೆಣ್ಣು; ಅಪಸದ: ನೀಚ; ತೆಗೆ: ಈಚೆಗೆ ತರು, ಹೊರತರು; ಕರುಳು: ಪಚನಾಂಗದ ಭಾಗ; ಹೊಕ್ಕು: ಸೇರು; ಹೆಣಗು: ಹೋರಾಡು, ಕಾಳಗ ಮಾಡು;

ಪದವಿಂಗಡಣೆ:
ಚಪಳೆ +ಫಡ +ಹೋಗೆನುತ +ಹಾಯ್ದನು
ಕೃಪಣಮತಿ +ಮುಂಗೈಯಲ್+ಅನಿಲಜನ್
ಅಪರಭಾಗಕೆ+ ಹಾಯ್ದು +ಹಿಡಿದನು +ಕೀಚಕನ +ತುರುಬ
ವಿಪುಳಬಲ +ಕಳವಳಿಸಿದನು +ಕಡು
ಕುಪಿತನಾದನು +ಹೆಂಗುಸಲ್+ಇವನ್
ಅಪಸದನು +ತೆಗೆ +ಕರುಳನ್+ಎನುತ್+ಒಳಹೊಕ್ಕು +ಹೆಣಗಿದನು

ಅಚ್ಚರಿ:
(೧) ಕೀಚಕನು ಬಯ್ದ ಪರಿ – ಚಪಳೆ ಫಡ ಹೋಗೆನುತ ಹಾಯ್ದನು ಕೃಪಣಮತಿ

ಪದ್ಯ ೯: ಕೀಚಕನೇಕೆ ನಡುಗಿದನು?

ಕುಡಿತೆಗಂಗಳ ಚಪಳೆಯುಂಗುರ
ವಿಡಿಯನಡುವಿನ ನೀರೆ ಹಂಸೆಯ
ನಡೆಯ ನವಿಲಿನ ಮೌಳಿಕಾತಿ ಪಯೋಜ ಪರಿಮಳದ
ಕಡು ಚೆಲುವೆ ಬರಲವನು ತನು ನಡ
ನಡುಗಿನಿಂದನದಾವ ಹೆಂಗುಸು
ಪಡೆದಳೀ ಚೆಲುವಿಕೆಯನೆನುತಡಿಗಡಿಗೆ ಬೆರಗಾದ (ವಿರಾಟ ಪರ್ವ, ೩ ಸಂಧಿ, ೯ ಪದ್ಯ)

ತಾತ್ಪರ್ಯ:
ಬೊಗಸೆಕಣ್ಣಿನ ಚೆಲುವೆ, ನಾಲ್ಕು ಬೆರಳುಗಳಿಂದ ಹಿಡಿಮಾಡಿದರೆ ಅಷ್ಟು ಚಿಕ್ಕ ನಡುವಿನ ಸುಂದರಿ, ಹಂಸಗಮನೆ, ನವಿಲಿನ ತಲೆಯಂತಹ ತಲೆಯುಳ್ಳವಳು, ಕಮಲಗಂಧಿನಿಯಾದ ಬಹಳ ಸುಂದರಿಯಾದ ದ್ರೌಪದಿಯು ಬರಲು, ಇನ್ನಾವ ಹೆಂಗಸು ಇವಳ ಸೌಂದರ್ಯವನ್ನು ಹೊಂದಲು ಸಾಧ್ಯ ಎನ್ನಿಸಿ ಕೀಚಕನು ನಡುಗಿದನು.

ಅರ್ಥ:
ಕುಡಿತೆ: ಬೊಗಸೆ, ಸೇರೆ; ಕಂಗಳು: ಕಣ್ಣು; ಚಪಲೆ: ಚಂಚಲ ಸ್ವಭಾವ; ಉಂಗುರ: ಬೆರಳಲ್ಲಿ ಧರಿಸುವ ಆಭರಣ; ವಿಡಿ: ಹಿಡಿ, ಗ್ರಹಿಸು; ನಡು: ಮಧ್ಯ; ನೀರೆ: ಸ್ತ್ರೀ, ಚೆಲುವೆ; ಹಂಸ: ಮರಾಲ; ನಡೆ: ಓಡಾಟ; ಮೌಳಿ: ಶಿರ; ನವಿಲು: ಮಯೂರ; ಕಾತಿ: ಗರತಿ; ಪಯೋಜ: ಕಮಲ; ಪರಿಮಳ: ಸುಗಂಧ; ಕಡು: ಬಹಳ; ಚೆಲುವು: ಅಂದ; ಬರಲು: ಆಗಮಿಸು; ತನು: ದೇಹ; ನಡುಗು: ಕಂಪಿಸು; ನಿಂದು: ನಿಲ್ಲು; ಹೆಂಗುಸು: ಸ್ತ್ರೀ; ಪಡೆ: ಹೊಂದು, ತಾಳು; ಚೆಲುವು: ಸೌಂದರ್ಯ; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೂ; ಬೆರಗು: ಆಶ್ಚರ್ಯ;

ಪದವಿಂಗಡಣೆ:
ಕುಡಿತೆ+ಕಂಗಳ +ಚಪಳೆ+ಉಂಗುರ
ವಿಡಿಯ+ನಡುವಿನ+ ನೀರೆ+ ಹಂಸೆಯ
ನಡೆಯ+ ನವಿಲಿನ+ ಮೌಳಿ+ಕಾತಿ +ಪಯೋಜ +ಪರಿಮಳದ
ಕಡು +ಚೆಲುವೆ +ಬರಲವನು +ತನು +ನಡ
ನಡುಗಿ+ನಿಂದನ್+ಅದಾವ +ಹೆಂಗುಸು
ಪಡೆದಳೀ +ಚೆಲುವಿಕೆಯನ್+ಎನುತ್+ಅಡಿಗಡಿಗೆ +ಬೆರಗಾದ

ಅಚ್ಚರಿ:
(೧) ದ್ರೌಪದಿಯ ಸೌಂದರ್ಯವನ್ನು ವಿವರಿಸುವ ಪರಿ – ಕುಡಿತೆಗಂಗಳ ಚಪಳೆ; ಉಂಗುರ ವಿಡಿಯನಡುವಿನ ನೀರೆ; ಹಂಸೆಯ ನಡೆಯ, ನವಿಲಿನ ಮೌಳಿಕಾತಿ, ಪಯೋಜ ಪರಿಮಳದ ಕಡು ಚೆಲುವೆ

ಪದ್ಯ ೮೩: ಕರ್ಣನು ದ್ರೌಪದಿಗೆ ಏನು ಹೇಳಿದ?

ಚಪಳೆ ಫಡ ಹೋಗಿವಳು ಹಲಬರ
ನುಪಚರಿಸಿದುದನರಿಯಲಾದುದು
ದ್ರುಪದ ನಂದನೆ ನಡೆ ವಿಳಾಸಿನಿಯರ ನಿವಾಸದಲಿ
ಕೃಪಣನೇ ಕುರುರಾಯ ನಿನಗಿ
ನ್ನಪದೆಸೆಯ ಹೊಲೆ ಹೋಯ್ತು ರಾಯನ
ವಿಪುಳ ವಿಭವವನನುಭವಿಸು ನಡೆಯೆಂದನಾಕರ್ಣ (ಸಭಾ ಪರ್ವ, ೧೫ ಸಂಧಿ, ೮೩ ಪದ್ಯ)

ತಾತ್ಪರ್ಯ:
ದ್ರೌಪದಿಯು ಸಬಿಕರಿಗೆ ಪ್ರಶ್ನೆಯನ್ನು ಕೇಳಲು, ಕರ್ಣನು ಎಲೈ ದ್ರುಪದ ನಂದನೆ, ನೀನು ಚಪಲೆ, ನಡೆ, ಹಲವರನ್ನು ಉಪಚರಿಸಿ ಹೀಗೆಲ್ಲಾ ಮಾತನಾಡುವುದನ್ನು ಕಲಿತಿದ್ದೀಯ, ನೀನು ವಿಲಾಸಿನಿಯರ ಮನೆಗೆ ಹೋಗು, ದುರ್ಯೋದನನೇನು ಜಿಪುಣನೇ ಅಥವ ದರಿದ್ರನೆ, ಇನ್ನು ನಿನ್ನ ಅಪದೆಸೆ ಕಳೆಯಿತೆಂದು ತಿಳಿದುಕೋ, ರಾಜನ ಸಮಸ್ತ ಐಶ್ವರ್ಯವನ್ನು ಅನುಭವಿಸು ಎಂದು ಕರ್ಣನು ಹೇಳಿ ದ್ರೌಪದಿಯನ್ನು ಹಂಗಿಸಿದನು.

ಅರ್ಥ:
ಚಪಳೆ: ಆಸೆಪಡುವವಳು; ಫಡ; ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಪದ; ಹಲಬರು: ಹಲವಾರು; ಉಪಚಾರ: ಶೂಶ್ರೂಷೆ, ಹತ್ತಿರ ನಡೆಯುವುದು; ಅರಿ: ತಿಳಿ; ನಂದನೆ: ಮಗಳು; ನಡೆ: ಹೋಗು; ವಿಳಾಸಿನಿ: ದಾಸಿ; ನಿವಾಸ: ಮನೆ; ಕೃಪಣ: ಜಿಪುಣ, ಬಡವ; ರಾಯ: ರಾಜ; ಅಪದೆಸೆ: ದುರ್ದೆಸೆ; ಹೊಲೆ: ಕೊಳಕು, ಕೀಳುತನ; ಹೋಯ್ತು: ದೂರಹೋಗು; ವಿಪುಳ: ಬಹಳ; ವಿಭವ: ಸಿರಿ, ಸಂಪತ್ತು; ಅನುಭವಿಸು: ಭೋಗಿಸು; ನಡೆ: ತೆರಳು;

ಪದವಿಂಗಡಣೆ:
ಚಪಳೆ+ ಫಡ +ಹೋಗ್+ಇವಳು +ಹಲಬರನ್
ಉಪಚರಿಸಿದುದನ್+ಅರಿಯಲಾದುದು
ದ್ರುಪದ +ನಂದನೆ +ನಡೆ +ವಿಳಾಸಿನಿಯರ +ನಿವಾಸದಲಿ
ಕೃಪಣನೇ +ಕುರುರಾಯ +ನಿನಗಿನ್ನ್
ಅಪದೆಸೆಯ +ಹೊಲೆ +ಹೋಯ್ತು +ರಾಯನ
ವಿಪುಳ +ವಿಭವವನ್+ಅನುಭವಿಸು +ನಡೆ+ಎಂದನಾ+ಕರ್ಣ

ಅಚ್ಚರಿ:
(೧) ದ್ರೌಪದಿಯನ್ನು ಬಯ್ಯುವ ಪರಿ – ಚಪಳೆ, ಫಡ, ಹಲಬರನುಪಚರಿಸಿದುದ
(೨) ನಡೆ ಪದದ ಬಳಕೆ – ನಡೆ ವಿಳಾಸಿನಿಯರ ನಿವಾಸದಲಿ; ರಾಯನ ವಿಪುಳ ಭವವನನುಭವಿಸು ನಡೆ