ಪದ್ಯ ೪೭: ದ್ರೌಪದಿಯ ಸುತ್ತಲ್ಲಿದ್ದ ಸಖಿಯರು ಏನು ಮಾಡುತ್ತಿದ್ದರು?

ಗಿಳಿಯ ಮೆಲುನುಡಿಗಳ ವಿನೋದದಿ
ಕೆಲರು ವೀಣಾಧ್ವನಿಯ ರಹಿಯಲಿ
ಕೆಲರು ಸರಸ ಸುಗಂಧ ಸಂಗೀತದ ಸಮಾಧಿಯಲಿ
ಕೆಲರು ನೆತ್ತದಲಮಳ ಮುಕ್ತಾ
ವಳಿಯ ಚೆಲುವಿನ ಚದುರೆಯರು ಕಂ
ಗೊಳಿಸಿತಬಲೆಯ ಮಣಿಯ ಮಂಚದ ಸುತ್ತುವಳಯದಲಿ (ಸಭಾ ಪರ್ವ, ೧೫ ಸಂಧಿ, ೪೭ ಪದ್ಯ)

ತಾತ್ಪರ್ಯ:
ದ್ರೌಪದಿಯ ಸಖಿಯರಲ್ಲಿ ಕೆಲವರು ಗಿಳಿಗಳೊಂದಿಗೆ ಮೃದು ಧ್ವನಿಯಲ್ಲಿ ಮಾತನಾಡುತ್ತಾ ಸಂತಸದಲ್ಲಿದ್ದರು, ಕೆಲವರು ವೀಣಾವಾದನದದಲ್ಲಿ ಸಂಭ್ರಮಿಸುತ್ತಿದ್ದರು, ಕೆಲವರು ಇಂಪಾದ
ಸಂಗೀತದ ನಾದದಲ್ಲಿ ಮಗ್ನರಾಗಿದ್ದರು, ಕೆಲವರು ಪಗಡೆಯಾಟದ ವಿನೋದದಲ್ಲಿ ಕ್ರೀಡಿಸುತ್ತಿದ್ದರು, ಚೆಲುವಾದ ಚೆಲುವೆಯರು ಮುತ್ತಿನ ಹಾರಗಳನ್ನು ಧರಿಸಿ ಕಂಗೊಳಿಸುತ್ತಿದ್ದ ಕೆಲವರು ದ್ರೌಪದಿಯ ಪೀಠದ ಸುತ್ತಲೂ ಕುಳಿತಿದ್ದರು.

ಅರ್ಥ:
ಗಿಳಿ: ಶುಕ; ಮೆಲು: ಮೃದು; ನುಡಿ: ಮಾತು; ವಿನೋದ: ವಿಲಾಸ, ಸಂತೋಷ; ಕೆಲರು: ಕೆಲವರು, ಸ್ವಲ್ಪ; ಧ್ವನಿ: ರವ, ಶಬ್ದ; ರಹಿ:ಪ್ರಕಾರ, ಸಂಭ್ರಮ; ಸರಸ: ಚೆಲ್ಲಾಟ, ವಿನೋದ; ಸುಗಂಧ: ಪರಿಮಳ; ಸಂಗೀತ: ಗೀತೆ; ಸಮಾಧಿ: ಮಗ್ನರಾಗಿರುವ ಸ್ಥಿತಿ; ನೆತ್ತ: ಪಗಡೆಯ ದಾಳ; ಅಮಳ: ನಿರ್ಮಲ; ಮುಕ್ತಾವಳಿ: ಮುತ್ತಿನ ಹಾರ; ಚೆಲುವು: ಸೌಂದರ್ಯ; ಚದುರೆ: ಜಾಣೆ, ಪ್ರೌಢೆ; ಕಂಗೊಳಿಸು: ಶೋಭಿಸು; ಮಣಿ: ಬೆಲೆಬಾಳುವ ರತ್ನ; ಮಂಚ: ಪಲ್ಲಂಗ; ಸುತ್ತು: ಆವರಿಸು; ವಳಯ: ಆವರಣ;

ಪದವಿಂಗಡಣೆ:
ಗಿಳಿಯ+ ಮೆಲುನುಡಿಗಳ+ ವಿನೋದದಿ
ಕೆಲರು +ವೀಣಾ+ಧ್ವನಿಯ +ರಹಿಯಲಿ
ಕೆಲರು +ಸರಸ+ ಸುಗಂಧ +ಸಂಗೀತದ +ಸಮಾಧಿಯಲಿ
ಕೆಲರು +ನೆತ್ತದಲ್+ಅಮಳ +ಮುಕ್ತಾ
ವಳಿಯ +ಚೆಲುವಿನ +ಚದುರೆಯರು +ಕಂ
ಗೊಳಿಸಿತ್+ಅಬಲೆಯ +ಮಣಿಯ +ಮಂಚದ +ಸುತ್ತು+ವಳಯದಲಿ

ಅಚ್ಚರಿ:
(೧) ಸ ಕಾರದ ಸಾಲು ಪದ – ಸರಸ ಸುಗಂಧ ಸಂಗೀತದ ಸಮಾಧಿಯಲಿ
(೨) ಜೋಡಿ ಪದಗಳು – ಚೆಲುವಿನ ಚೆದುರೆಯರು; ವಿನೋದದ ವೀಣಾಧ್ವನಿ; ಮಣಿಯ ಮಂಚದ

ಪದ್ಯ ೨೯: ದ್ರೌಪದಿಯ ಸಾರೋಟಿನಲ್ಲಿ ಯಾರನ್ನು ಕಾಣಬಹುದು?

ಸಾಲ ಝಲ್ಲರಿ ಮುಸುಕಿದವು ಸಮ
ಪಾಳಿಯಲಿ ಸೀಗುರಿಗಳಾಡಿದ
ವಾಲಿಯವಗಾಹಿಸದು ನೆಲನೆನಿತನಿತು ವಳಯದಲಿ
ಬಾಲೆಯರ ಮುಗ್ಧೆಯರನತಿಘಾ
ತಾಳೆಯರ ಕಡೆಗಣ್ಣಢಾಳದ
ಚಾಳೆಯರ ಚದುರೆಯರನಲ್ಲದೆ ಕಾಣೆ ನಾನೆಂದ (ಆದಿ ಪರ್ವ, ೧೩ ಸಂಧಿ, ೨೯ ಪದ್ಯ)

ತಾತ್ಪರ್ಯ:
ದ್ರೌಪದಿಯು ಪಲ್ಲಕ್ಕಿಯನ್ನು ಹೊತ್ತು ತರುವ ಸಾರೋಟ ನೋಡಲು ಮನೋಹರವಾಗಿತ್ತು. ಸಾಲಾಗಿ ಛತ್ರಿಗಳನ್ನು ಹಿಡಿದಿದ್ದರು, ಚಾಮರಗಳನ್ನು ಹಿಡಿದ ಸಖಿಯರು ಅದನ್ನು ಆಡಿಸುತ್ತಾ ಬರುವಾಗ ಕಣ್ಣಿಗೆ ಕಾಣಿಸುವಷ್ಟು ದೂರ ನೆಲವೇ ಕಾಣುತ್ತಿರಲಿಲ್ಲ. ಆ ಸಾರೋಟಿನಲ್ಲಿದ್ದ ಬಾಲೆಯರು, ಮುಗ್ಧೆಯರು, ಗಟವಾಣಿಯರು, ಚದುರೆಯರು, ಮೊದಲಾದವರೇ ಕಾಣುತ್ತಿದ್ದರೆ ಹೊರತು, ಬೇರೆ ಯಾರು ಕಾಣಿಸುತ್ತಿರಲಿಲ್ಲ.

ಅರ್ಥ:
ಸಾಲ: ಸಾಲು; ಝಲ್ಲರಿ:ಛತ್ರಿ, ಕೊಡೆ; ಮುಸುಕು: ಮರೆಯಾಗು, ಸುತ್ತುಗಟ್ಟು; ಸಮ: ಒಂದೆ ಬಗೆ, ನಿಶ್ಚಲ; ಪಾಳೆ: ಭಾಗ, ಗೇಣಿ; ಸೀಗುರಿ: ಚಾಮರ; ಆಡು: ಚಲಿಸು, ಕುಣಿ; ವಾಲು: ಛತ್ರಿ; ಆಲಿ:ಗೆಳತಿ, ಸಖಿ, ಸಮೂಹ; ನೆಲ: ಭೂಮಿ; ಎನಿತೆನಿತು: ಒಂದು ಚೂರು; ವಳಯ: ಪರಧಿ, ಆವರಣ; ಬಾಲೆ: ಹುಡುಗಿ; ಮುಗ್ಧೆ: ಚೆಲುವೆ, ಸುಂದರಿ, ಕಪಟವನ್ನು ತಿಳಿಯದವಳು; ಕಡೆಗಣ್ಣ: ಓರೆನೋಟ, ಕಣ್ಣಿನ ತುದಿಯ ನೋಟ; ಢಾಳ: ಹೊಳಪು, ಕಾಂತಿ; ಚಾಳೆಯ: ಕುಪ್ಪಳಿಸುತ್ತಾ ಚಲಿಸುವ ಕ್ರಮ; ಚದುರೆ: ಜಾಣೆ, ಪ್ರೌಢೆ; ಕಾಣೆ: ಕಾಣದು;

ಪದವಿಂಗಡಣೆ:
ಸಾಲ +ಝಲ್ಲರಿ +ಮುಸುಕಿದವು +ಸಮ
ಪಾಳಿಯಲಿ +ಸೀಗುರಿಗಳ್+ಆಡಿದ
ವಾಲಿಯವಗಾಹಿಸದು+ ನೆಲನ್+ಎನಿತನಿತು +ವಳಯದಲಿ
ಬಾಲೆಯರ+ ಮುಗ್ಧೆಯರ+ನತಿಘಾ
ತಾಳೆಯರ +ಕಡೆಗಣ್ಣ+ಢಾಳದ
ಚಾಳೆಯರ +ಚದುರೆಯರನ್+ಅಲ್ಲದೆ +ಕಾಣೆ +ನಾನೆಂದ

ಅಚ್ಚರಿ:
(೧) ತಾಳೆಯರ, ಚಾಳೆಯರ; ಪಾಳಿ, ವಾಲಿ – ಪ್ರಾಸ ಪದಗಳು
(೨) ಬಾಲೆ, ಮುಗ್ಧೆ, ತಾಳೆ, ಚಾಳೆ, ಚದುರೆ – ಸಾರೋಟಿನಲ್ಲಿ ಕಾಣುವ ಸಖಿಯರು