ಪದ್ಯ ೬೧: ಮಾತಲಿಯು ಅರ್ಜುನನಿಗೆ ಯಾವುದರ ಬಗ್ಗೆ ತಿಳಿಸಲು ಮುಂದಾದನು?

ಧರೆಯ ವರುಷ ದ್ವೀಪ ಗಿರಿಗಳ
ಶರಧಿಗಳ ಸುರಶೈಲದಗ್ರದ
ಹರನ ಚತುರಾನನನ ಪಟ್ಟಣದಿರವ ತಿಳುಹಿದೆನು
ಸರಸಿರುಹ ಬಂಧುವಿನ ರಥವಿಹ
ಪರಿಯ ಚರಿಸುವ ಪಥವ ತಾರೆಗ
ಳಿರವ ನೀ ಕೇಳೆಂದು ಮಾತಲಿ ನುಡಿದನರ್ಜುನಗೆ (ಅರಣ್ಯ ಪರ್ವ, ೮ ಸಂಧಿ, ೬೧ ಪದ್ಯ)

ತಾತ್ಪರ್ಯ:
ಭೂಮಿಯು ದ್ವೀಪಗಳು, ವರ್ಷಗಳು, ಪರ್ವತಗಳು, ಸಮುದ್ರಗಳು ಮೇರು ಪರ್ವತದ ಮೇಲಿರುವ ಬ್ರಹ್ಮ, ಶಿವ ಇವರ ನಗರಗಳು ಇರುವುದನ್ನು ತಿಳಿಸಿದ್ದೇನೆ. ಈಗ ಸೂರ್ಯನ ರಥವಿರುವ ಪರಿ, ಅದು ಚಲಿಸುವ ದಾರಿ, ನಕ್ಷತ್ರಗಳು ಇವನ್ನು ಕುರಿತು ಹೇಳುತ್ತೇನೆ ಕೇಳು ಎಂದು ಮಾತಲಿಯು ಅರ್ಜುನನಿಗೆ ಹೇಳಿದನು.

ಅರ್ಥ:
ಧರೆ: ಭೂಮಿ; ವರುಷ: ಭೂಭಾಗ; ದ್ವೀಪ: ನೀರಿನಿಂದ ಆವರಿಸಿದ ಭೂಭಾಗ; ಗಿರಿ: ಬೆಟ್ಟ; ಶರಧಿ: ಸಮುದ್ರ; ಸುರ: ದೇವತೆ; ಸುರಶೈಲ: ದೇವಗಿರಿ; ಅಗ್ರ: ತುದಿ, ಶ್ರೇಷ್ಠ; ಹರ: ಶಿವ; ಚತುರಾನನ: ಬ್ರಹ್ಮ; ಆನನ: ಮುಖ; ಪಟ್ಟಣ: ಊರು; ತಿಳುಹು: ತಿಳಿಸು; ಸರಸಿರುಹ: ಕಮಲ; ಬಂಧು: ನೆಂಟ, ಸಂಬಂಧಿಕ; ರಥ: ತೇರು; ಪರಿ: ರೀತಿ; ಚರಿಸು: ಚಲಿಸು; ಪಥ: ಮಾರ್ಗ; ತಾರೆ: ನಕ್ಷತ್ರ; ಕೇಳು: ಆಲಿಸು; ನುಡಿ: ಮಾತಾಡು;

ಪದವಿಂಗಡಣೆ:
ಧರೆಯ+ ವರುಷ +ದ್ವೀಪ +ಗಿರಿಗಳ
ಶರಧಿಗಳ +ಸುರಶೈಲದ್+ಅಗ್ರದ
ಹರನ +ಚತುರಾನನನ +ಪಟ್ಟಣದಿರವ+ ತಿಳುಹಿದೆನು
ಸರಸಿರುಹ +ಬಂಧುವಿನ +ರಥವಿಹ
ಪರಿಯ +ಚರಿಸುವ +ಪಥವ +ತಾರೆಗಳ್
ಇರವ +ನೀ +ಕೇಳೆಂದು +ಮಾತಲಿ +ನುಡಿದನ್+ಅರ್ಜುನಗೆ

ಅಚ್ಚರಿ:
(೧) ಸೂರ್ಯನನ್ನು ಸರಸಿರುಹಬಂಧು ಎಂದು ಕರೆದಿರುವುದು
(೨) ಶೈಲ, ಗಿರಿ – ಸಮನಾರ್ಥಕ ಪದ

ಪದ್ಯ ೩೧: ಓಲಗದಲ್ಲಿ ಯಾರಿದ್ದರು?

ಸತಿಸಹಿತ ಧೃತರಾಷ್ಟ್ರ ಭೂಪತಿ
ಸುತನ ಬಲವಂಕದಲಿ ಕನಕೋ
ಚಿತದ ಪೀಠದಲೆಸೆದನಾತನ ಬಲದ ಭಾಗದಲಿ
ಚತುರ ಚತುರಾನನರು ತರ್ಕ
ಶ್ರುತಿ ಸಮಸ್ತ ಕಳಾಸ್ವತಂತ್ರರು
ನುತಗುಣರು ನೃಪ ಸಭೆಯೊಳೆಸೆದರು ಭೂರಿ ಸಂದೋಹ (ಉದ್ಯೋಗ ಪರ್ವ, ೮ ಸಂಧಿ, ೩೧ ಪದ್ಯ)

ತಾತ್ಪರ್ಯ:
ತನ್ನ ಪತ್ನಿ ಗಾಂಧಾರಿಯ ಜೊತೆ ಧೃತರಾಷ್ಟ್ರನು ದುರ್ಯೋಧನನ ಬಲಭಾಗದಲ್ಲಿ ಚಿನ್ನದಿಂದ ಅಲಂಕೃತವಾದ ಸಿಂಹಾಸನದಲ್ಲಿ ಆಸೀನನಾದನು. ಧೃತರಾಷ್ಟ್ರನ ಬಲಭಾಗದಲ್ಲಿ ತರ್ಕ, ವೇದಗಳಲ್ಲಿ ಚತುರರಾದವರು ಸಮಸ್ತ ಕಲಾ ನಿಪುಣರು ಕುಳಿತಿರಲು, ಅಧಿಕ ಗುಣವಂತರು ಸಭೆಯಲ್ಲಿ ನೆರೆದಿದ್ದರು.

ಅರ್ಥ:
ಸತಿ: ಹೆಂಡತಿ; ಸಹಿತ: ಜೊತೆ; ಭೂಪತಿ: ರಾಜ; ಸುತ: ಮಗ; ಬಲ: ದಕ್ಷಿಣ ಪಾರ್ಶ್ವ; ವಂಕ:ಬದಿ, ಮಗ್ಗುಲು; ಕನಕ: ಚಿನ್ನ; ಉಚಿತ:ಸರಿಯಾದ; ಪೀಠ: ಆಸನ; ಎಸೆ: ಒಗೆ; ಭಾಗ: ಪಾಲು; ಚತುರ: ಜಾಣ, ನಿಪುಣ; ಆನನ: ಮುಖ; ಚತುರಾನನ: ಬ್ರಹ್ಮ, ನಾಲ್ಕು ಮುಖವುಳ್ಳವರು; ತರ್ಕ: ಊಹೆ, ಅನುಮಾನ; ವಾದ; ಶ್ರುತಿ: ವೇದ; ಸಮಸ್ತ: ಎಲ್ಲಾ; ಕಳಾಸ್ವತಂತ್ರ: ಕಲೆಯಲ್ಲಿ ನಿಪುಣರು; ನುತ: ಸ್ತುತಿಸಲ್ಪಡುವ; ಗುಣ: ನಡತೆ, ಸ್ವಭಾವ; ನೃಪ: ರಾಜ; ಸಭೆ: ದರ್ಬಾರು, ಓಲಗ; ಭೂರಿ: ಹೆಚ್ಚು, ಅಧಿಕ; ಸಂದೋಹ: ಗುಂಪು, ಸಮೂಹ;

ಪದವಿಂಗಡಣೆ:
ಸತಿ+ಸಹಿತ +ಧೃತರಾಷ್ಟ್ರ +ಭೂಪತಿ
ಸುತನ +ಬಲವಂಕದಲಿ+ ಕನಕೋ
ಚಿತದ+ ಪೀಠದಲ್+ಎಸೆದನ್+ಆತನ +ಬಲದ+ ಭಾಗದಲಿ
ಚತುರ +ಚತುರಾನನರು +ತರ್ಕ
ಶ್ರುತಿ +ಸಮಸ್ತ +ಕಳಾಸ್ವತಂತ್ರರು
ನುತಗುಣರು +ನೃಪ +ಸಭೆಯೊಳ್+ಎಸೆದರು+ ಭೂರಿ +ಸಂದೋಹ

ಅಚ್ಚರಿ:
(೧) ಬಲವಂಕ, ಬಲಭಾಗ – ಸಮನಾರ್ಥಕ ಪದ
(೨) ಚತುರ ಚತುರಾನನರು; ಬಲದ ಭಾಗದಲಿ – ‘ಚ’ಕಾರದ ಜೋಡಿ ಪದ