ಪದ್ಯ ೮: ಅಶ್ವತ್ಥಾಮನು ಹೇಗೆ ದುಃಖಿಸಿದನು?

ಅವರು ಕಂಬನಿದುಂಬಿದರು ಕೌ
ರವ ಮಹಾವಂಶಾಭಿಚಾರ
ವ್ಯವಸಿತಕೆ ಫಲವಾಯ್ತಲಾ ಯಮನಂದನಾದಿಗಳ
ಶಿವಶಿವಾ ಪವಡಿಸಿತೆ ಚತುರ
ರ್ಣವ ವಿಪರೀಧಾನ ಪೃಥ್ವೀ
ಧವನ ಬಾಳಿಕೆ ನೀರೊಳೆಂದಳಲಿದನು ಗುರುಸೂನು (ಗದಾ ಪರ್ವ, ೪ ಸಂಧಿ, ೮ ಪದ್ಯ)

ತಾತ್ಪರ್ಯ:
ಕೃಪಚಾರ್ಯ, ಅಶ್ವತ್ಥಾಮ, ಕೃತವರ್ಮರು ಕಣ್ಣೀರಿಟ್ಟರು, ಕೌರವ ವಂಶವು ಮಾಡಿದ ಅಭಿಚಾರಕ್ಕೆ ಇಂದು ಫಲದೊರೆಯಿತಲಾ? ಇದು ಯುಧಿಷ್ಠಿರಾದಿಗಳಿಗೆ ಅನುಕೂಲವಾಯಿತು. ಚತುಸ್ಸಮುದ್ರ ಸೀಮಾಧಿಪತಿಯಾದ ದುರ್ಯೋಧನನ ಬಾಳು ನೀರಿನಲ್ಲಿ ಮುಳುಗಿತೇ ಎಂದು ದುಃಖಿತಪ್ತನಾಗಿ ಅಶ್ವತ್ಥಾಮನು ನುಡಿದನು.

ಅರ್ಥ:
ಕಂಬನಿ: ಕಣ್ಣೀರು; ತುಂಬು: ಭರ್ತಿಯಾಗು; ವಂಶ: ಕುಲ; ಅಭಿಚಾರ: ಮಾಟ; ಫಲ: ಪ್ರಯೋಜನ ಯಮನಂದನ: ಧರ್ಮಜ; ಆದಿ: ಮುಂತಾದ; ಪವಡಿಸು: ನಿದ್ರಿಸು; ಚತುರ್: ನಾಲ್ಕು; ಅರ್ಣವ: ಸಾಗರ; ವಿಪರೀಧಾನ: ; ಪೃಥ್ವಿ: ಭೂಮಿ; ಬಾಳು: ಜೀವನ; ನೀರು: ಜಲ; ಅಳಲು: ಗೋಳಿಡು, ದುಃಖಿಸು; ಸೂನು: ಮಗ;

ಪದವಿಂಗಡಣೆ:
ಅವರು +ಕಂಬನಿ+ತುಂಬಿದರು+ ಕೌ
ರವ +ಮಹಾ+ವಂಶ+ಅಭಿಚಾರ
ವ್ಯವಸಿತಕೆ+ ಫಲವಾಯ್ತಲಾ +ಯಮನಂದನ+ಆದಿಗಳ
ಶಿವಶಿವಾ +ಪವಡಿಸಿತೆ +ಚತುರ
ರ್ಣವ +ವಿಪರೀಧಾನ+ ಪೃಥ್ವೀ
ಧವನ +ಬಾಳಿಕೆ +ನೀರೊಳೆಂದ್+ಅಳಲಿದನು +ಗುರುಸೂನು

ಅಚ್ಚರಿ:
(೧) ದುರ್ಯೋಧನನ ಸ್ಥಿತಿಯನ್ನು ನೆನೆದ ಪರಿ – ಪವಡಿಸಿತೆ ಚತುರರ್ಣವ ವಿಪರೀಧಾನ ಪೃಥ್ವೀ
ಧವನ ಬಾಳಿಕೆ ನೀರೊಳ್