ಪದ್ಯ ೧: ಅಶ್ವತ್ಥಾಮ ರಥವನ್ನು ಎಲ್ಲಿ ನಿಲ್ಲಿಸಿದನು?

ಕೇಳು ಧೃತರಾಷ್ಟ್ರವನಿಪ ನಿ
ನ್ನಾಳ ಚಿತ್ತದ ಚಟುಳ ಪಣದ ಚ
ಡಾಳತನವನು ಸಂಗರದೊಳುದ್ದಾಮ ಸತ್ವದಲಿ
ಪಾಳೆಯವ ಸಾರಿದರು ವಿಟಪಲ
ತಾಳಿವಿಶ್ರಮ ತಿಮಿರಗಹನವಿ
ಶಾಲ ವಟಕುಜವಿರಲು ಕಂಡರು ನಿಲಿಸಿದರು ರಥವ (ಗದಾ ಪರ್ವ, ೯ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಮಹಾಸತ್ವರಾದ ನಿನ್ನ ವೀರರು ಶಪಥವನ್ನು ಮಾಡಿ ಪಾಂಡವರ ಪಾಳೆಯಕ್ಕೆ ಬಂದರು. ಚಿಗುರಿದ ಉಪಶಾಖೆಗಳು, ಬಳ್ಳಿಗಳು ಸುತ್ತಿಕೊಂಡಿದ್ದ ಒಂದಾನೊಂದು ದೊಡ್ಡ ಆಲದ ಮರವನ್ನು ಕಂಡು ಅದರ ಕೆಳಗೆ ರಥಗಳನ್ನು ನಿಲ್ಲಿಸಿದರು.

ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ಆಳು: ವೀರ, ಸೈನಿಕ; ಚಿತ್ತ: ಮನಸ್ಸು; ಚಟುಲ: ವೇಗ; ಪಣ: ಸಂಕಲ್ಪ, ಶಪಥ; ಚಡಾಳ: ಹೆಚ್ಚಳ, ಆಧಿಕ್ಯ; ಸಂಗರ: ಯುದ್ಧ; ಉದ್ದಾಮ: ಶ್ರೇಷ್ಠ; ಸತ್ವ: ಸಾರ; ಪಾಳೆಯ: ಬಿಡಾರ; ಸಾರು: ಹರಡು; ವಿಟಪ: ಮರದ ಕೊಂಬೆ, ಟಿಸಿಲು; ಲತ: ಬಳ್ಳಿ; ಆಳಿ: ಸಾಲು, ಗುಂಪು; ವಿಶ್ರಮ: ವಿರಾಮ, ವಿಶ್ರಾಂತಿ; ತಿಮಿರ: ಅಂಧಕಾರ; ಗಹನ: ದಟ್ಟವಾದ, ಕಾಡು, ಅಡವಿ; ವಿಶಾಲ: ದೊಡ್ಡ; ವಟ: ಆಲದ ಮರ; ಕುಜ:ಗಿಡ, ಮರ; ಕಂಡು: ನೋಡು; ನಿಲಿಸು: ತಡೆ; ರಥ: ಬಂಡಿ;

ಪದವಿಂಗಡಣೆ:
ಕೇಳು+ ಧೃತರಾಷ್ಟ್ರ + ಅವನಿಪ +ನಿನ್ನ್
ಆಳ +ಚಿತ್ತದ +ಚಟುಳ +ಪಣದ +ಚ
ಡಾಳತನವನು +ಸಂಗರದೊಳ್+ಉದ್ದಾಮ +ಸತ್ವದಲಿ
ಪಾಳೆಯವ +ಸಾರಿದರು +ವಿಟಪ+ಲ
ತಾಳಿ+ವಿಶ್ರಮ+ ತಿಮಿರ+ಗಹನ+ವಿ
ಶಾಲ +ವಟಕುಜವಿರಲು +ಕಂಡರು +ನಿಲಿಸಿದರು +ರಥವ

ಅಚ್ಚರಿ:
(೧) ವಿಪಟ, ವಿಶಾಲ, ವಿಶ್ರಮ – ವ ಕಾರದ ಪದಗಳು
(೨) ಚ ಕಾರದ ಪದಗಳು – ಚಿತ್ತದ, ಚಟುಳ, ಚಡಾಳತನ