ಪದ್ಯ ೨: ಶರತ್ಕಾಲವು ಹೇಗೆ ತೋರಿತು?

ಮುಗಿಲು ಬರತುದು ಬರಿಯ ಗಡಬಡೆ
ಗಗನಕುಳಿದುದು ಕೊಂಡ ನೆಲನನು
ತೆಗೆದು ನಿಂದುದು ಹೇಡಿಯಂದದಲಾ ನದೀನಿವಹ
ನಗುವ ಕೊಳನ ಚಕೋರಚಯ ಹಂ
ಸೆಗಳು ಮೆರೆದವು ನಗುವ ತುಂಬಿಯ
ಸುಗುಡತನ ತಾವರೆಯೊಳೆಸೆದುದು ಶರದ ಸಮಯದಲಿ (ಅರಣ್ಯ ಪರ್ವ, ೧೫ ಸಂಧಿ, ೨ ಪದ್ಯ)

ತಾತ್ಪರ್ಯ:
ಶರತ್ಕಾಲವು ಬರಲು ಆಕಾಶದ ಮೋಡಗಳು ಇಲ್ಲದಂತಾದವು. ಆಕಾಶದ ಆರ್ಭಟ ಮಾಯವಾಯಿತು, ಭೂಪ್ರದೇಶವನ್ನು ಆಕ್ರಮಿಸಿಕೊಂಡಿದ್ದ ನದಿಗಳ ನೀರು ಹಿಂದಕ್ಕೆ ಸರಿದು, ಹೇಡಿಯಂತೆ ವರ್ತಿಸಿತು. ಸರೋವರಗಳಲ್ಲಿ ಚಕೋರ, ಹಂಸ ಪಕ್ಷಿಗಳು ಶೋಭಿಸಿದವು. ದುಂಬಿಗಳು ತಾವರೆಹೂವುಗಳಲ್ಲಿ ಸಿಹಿಮಕರಂದವನ್ನು ಹೀರಿದವು.

ಅರ್ಥ:
ಮುಗಿಲು: ಆಗಸ; ಬರತು: ಇಲ್ಲದಂತಾಗು; ಬರಿ: ಕೇವಲ; ಗಡಬಡ: ಆರ್ಭಟ; ಗಗನ: ಆಗಸ; ಉಳಿ:ಹೊರತಾಗು, ಮಿಗು; ಕೊಂಡ: ಪಡೆದ; ನೆಲ: ಭೂಮಿ; ತೆಗೆ: ಹೊರತರು; ನಿಂದು: ನಿಲ್ಲು; ಹೇಡಿ: ಅಂಜುಕುಳಿ; ನದಿ: ಹೊಳೆ, ತೊರೆ; ನಗು: ಸಂತಸ; ಕೊಳ: ಹೊಂಡ; ಚಕೋರ: ಕಪಿಂಜಲ ಪಕ್ಷಿ; ಚಯ: ರಾಶಿ; ಹಂಸೆ: ಮರಾಲ; ಮೆರೆ: ಹೊಳೆ; ನಗು: ಸಂತಸ; ತುಂಬಿ: ದುಂಬಿ, ಭ್ರಮರ; ಸುಗುಡ: ಕಾಮುಕ; ತಾವರೆ: ಕಮಲ; ಎಸೆ: ತೋರು; ಸಮಯ: ಕಾಲ;

ಪದವಿಂಗಡಣೆ:
ಮುಗಿಲು +ಬರತುದು +ಬರಿಯ +ಗಡಬಡೆ
ಗಗನ+ಕುಳಿದುದು +ಕೊಂಡ +ನೆಲನನು
ತೆಗೆದು +ನಿಂದುದು +ಹೇಡಿಯಂದದಲಾ+ ನದೀನಿವಹ
ನಗುವ+ ಕೊಳನ+ ಚಕೋರ+ಚಯ +ಹಂ
ಸೆಗಳು +ಮೆರೆದವು +ನಗುವ +ತುಂಬಿಯ
ಸುಗುಡತನ +ತಾವರೆಯೊಳ್+ಎಸೆದುದು +ಶರದ +ಸಮಯದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೊಂಡ ನೆಲನನು ತೆಗೆದು ನಿಂದುದು ಹೇಡಿಯಂದದಲಾ ನದೀನಿವಹ

ಪದ್ಯ ೩೩: ಯಾರನ್ನು ಯಾವಾಗ ಸುಟ್ಟುಹಾಕಬೇಕು?

ಸರಸಿಜದ ಮಧು ಮಧುಕರನನನು
ಕರಿಸಿದಡೆ ಚಂದ್ರಿಕೆ ಚಕೋರನ
ವರಿಸಿದರೆ ನಿಧಿ ಲಕ್ಷ್ಮಿ ಸುಳಿದರೆ ನಯನವೀಧಿಯಲಿ
ಗರುವೆಯರು ಮೇಲಿಕ್ಕಿ ಪುರುಷನ
ನರಸಿದರೆ ಜಾರುವರೆ ಸುಡಲಾ
ಸರಸಿಜವನಾ ಚಂದ್ರಿಕೆಯನಾ ನಿಧಿಯನಾ ವಧುವ (ಅರಣ್ಯ ಪರ್ವ, ೯ ಸಂಧಿ, ೩೩ ಪದ್ಯ)

ತಾತ್ಪರ್ಯ:
ಕಮಲದ ಮಕರಂದವು ದುಂಬಿಯನ್ನು ಹುಡುಕಿಕೊಂಡು ಹೋದರೆ? ಬೆಳದಿಂಗಳು ಚಕೋರವನ್ನು ಬಯಸಿ ಹೋದರೆ? ನಿಧಿಲಕ್ಷ್ಮಿಯು ತಾನಾಗಿ ಬಂದು ಕಣ್ಣೆದುರು ಸುಳಿದರೆ? ಚೆಲುವೆಯು ಮುಂದುಬಿದ್ದು ಪುರುಷನನ್ನು ಹುಡುಕಿದರೆ, ಯಾರಾದರೂ ತಿರಸ್ಕರಿಸುವರೇ? ಹಾಗೆ ತಿರಸ್ಕರಿಸಿದರೆ, ಅಂತಹ ಕಮಲವನ್ನು, ಬೆಳದಿಂಗಳನ್ನೂ, ನಿಧಿಯನ್ನೂ, ಚೆಲುವೆಯನ್ನೂ ಸುಡಬೇಕು ಎಂದು ಊರ್ವಶಿಯು ಅರ್ಜುನನಿಗೆ ಹೇಳಿದಳು.

ಅರ್ಥ:
ಸರಸಿಜ: ಕಮಲ; ಮಧು: ಜೇನು; ಮಧುಕರ: ದುಂಬಿ, ಭ್ರಮರ; ಕರಿಸು: ಬರೆಮಾಡು; ಚಂದ್ರಿಕೆ: ಚಂದ್ರ, ಶಶಿ; ಚಕೋರ: ಚಾತಕ ಪಕ್ಷಿ; ವರಿಸು: ಬರುವಂತೆ ಮಾಡು; ನಿಧಿ: ಐಶ್ವರ್ಯ; ಲಕ್ಷ್ಮಿ: ಶ್ರೀ,ಸಿರಿ; ಸುಳಿ: ಆವರಿಸು, ಮುತ್ತು; ನಯನ: ಕಣ್ಣು; ವೀಧಿ: ದಾರಿ; ಗರುವೆ: ಚೆಲುವೆ; ಮೇಲೆ:ಸಮೀಪವರ್ತಿಯಾಗಿ; ಪುರುಷ: ಗಂಡಸು; ಅರಸು: ಬಯಸು; ಜಾರು: ಕೆಳಕ್ಕೆ ಬೀಳು; ಸುಡು: ಸುಟ್ಟು ಹಾಕು, ದಹಿಸು; ವಧು: ಹೆಣ್ಣು;

ಪದವಿಂಗಡಣೆ:
ಸರಸಿಜದ +ಮಧು +ಮಧುಕರನನನು
ಕರಿಸಿದಡೆ+ ಚಂದ್ರಿಕೆ +ಚಕೋರನ
ವರಿಸಿದರೆ+ ನಿಧಿ ಲಕ್ಷ್ಮಿ+ ಸುಳಿದರೆ +ನಯನ+ವೀಧಿಯಲಿ
ಗರುವೆಯರು +ಮೇಲಿಕ್ಕಿ+ ಪುರುಷನನ್
ಅರಸಿದರೆ +ಜಾರುವರೆ+ ಸುಡಲ್+ಆ
ಸರಸಿಜವನ್+ಆ+ ಚಂದ್ರಿಕೆಯನ್+ಆ+ ನಿಧಿಯನ್+ಆ+ ವಧುವ

ಅಚ್ಚರಿ:
(೧) ಕಣ್ಣೆದುರು ಎಂದು ಹೇಳಲು – ನಯನ ವೀಧಿಯಲಿ ಪದದ ಬಳಕೆ
(೨) ಉಪಮಾನದ ಪ್ರಯೋಗ – ಸರಸಿಜದ ಮಧು ಮಧುಕರನನನು ಕರಿಸಿದಡೆ; ಚಂದ್ರಿಕೆ ಚಕೋರನ ವರಿಸಿದರೆ; ನಿಧಿಲಕ್ಷ್ಮಿ ಸುಳಿದರೆ ನಯನವೀಧಿಯಲಿ; ಗರುವೆಯರು ಮೇಲಿಕ್ಕಿ ಪುರುಷನ ನರಸಿದರೆ
(೩) ವೀಧಿ, ನಿಧಿ – ಪ್ರಾಸ ಪದ
(೪) ಅಕ್ಷರದ ಜೋಡಿ ಪದಗಳು – ಮಧು ಮಧುಕರ; ಚಂದ್ರಿಕೆ ಚಕೋರ

ಪದ್ಯ ೧೧: ಊರ್ವಶಿಯ ಸ್ನೇಹಿತೆಯರ ಬಳಿ ಯಾರು ಬಂದರು?

ಮೆಲುನುಡಿಗೆ ಗಿಣಿ ಹೊದ್ದಿದವು ಸರ
ದುಲಿಗೆ ಕೋಗಿಲೆಯೌಕಿದವು ಪರಿ
ಮಳದ ಪಸರಕೆ ತೂಳಿದವು ತುಂಬಿಗಳು ಡೊಂಬಿಯಲಿ
ಹೊಳೆವ ಮುಖಕೆ ಚಕೋರ ಚಯವಿ
ಟ್ಟಳಿಸಿದವು ನೇವುರದ ಬೊಬ್ಬೆಗೆ
ಸಿಲುಕಿದವು ಹಂಸೆಗಳು ಕಮಲಾನನೆಯ ಕೆಳದಿಯರ (ಅರಣ್ಯ ಪರ್ವ, ೯ ಸಂಧಿ, ೧೧ ಪದ್ಯ)

ತಾತ್ಪರ್ಯ:
ಊರ್ವಶಿಯ ಕೆಳದಿಯರ ಮೆಲುನುಡಿಗಳನ್ನು ಕೇಳಿ, ಗಿಣಿಗಳು ಅವರ ಬಳಿಗೆ ಬಂದವು, ಅವರ ಸಂಗೀತವನ್ನು ಕೇಳಿ ಕೋಗಿಲೆಗಳು ಹತ್ತಿರಕ್ಕೆ ಬಂದವು, ಅವರ ಅಂಗದ ಪರಿಮಳವನ್ನು ಮೂಸಿ ದುಂಬಿಗಳ ಹಿಂಡುಗಳು ಅವರ ಹತ್ತಿರಕ್ಕೆ ಬಂದವು, ಅವರ ಹೊಳೆಯುವ ಮುಖಗಳನ್ನು ನೋಡಿ ಚಂದ್ರ ಬಂದನೆಂದು ಚಕೋರ ಪಕ್ಷಿಗಳು ಹಾರಿ ಬಂದವು, ಅವರ ಕಾಲಂದುಗೆಯ ಸದ್ದಿಗೆ ಹಂಸಗಳು ಊರ್ವಶಿಯ ಸ್ನೇಹಿತೆಯರ ಬಳಿ ಬಂದವು.

ಅರ್ಥ:
ಮೆಲುನುಡಿ: ಮೃದು ವಚನ; ಗಿಣಿ: ಶುಕ; ಹೊದ್ದು: ಹೊಂದು, ಸೇರು; ಸರ: ಸ್ವರ, ದನಿ; ಉಲಿ: ಧ್ವನಿಮಾಡು, ಕೂಗು; ಔಕು: ಗುಂಪು, ಒತ್ತು; ಪರಿಮಳ: ಸುಗಂಧ; ಪಸರು: ಹರಡು; ತೂಳು: ಬೆನ್ನಟ್ಟು, ಹಿಂಬಾಲಿಸು; ತುಂಬಿ: ದುಂಬಿ, ಜೀನು; ಡೊಂಬಿ: ಗುಂಪು, ಸಮೂಹ; ಹೊಳೆ: ಪ್ರಕಾಶ; ಮುಖ: ಆನನ; ಚಕೋರ: ಚಾತಕ ಪಕ್ಷಿ; ಚಯ: ಕಾಂತಿ; ಇಟ್ಟಳಿಸು: ದಟ್ಟವಾಗು, ಒತ್ತಾಗು; ನೇವುರ: ಅಂದುಗೆ, ನೂಪುರ; ಬೊಬ್ಬೆ: ಜೋರಾದ ಶಬ್ದ; ಸಿಲುಕು: ಬಂಧನಕ್ಕೊಳಗಾಗು; ಹಂಸ: ಮರಾಲ; ಕಮಲಾನನೆ: ಕಮಲದಂತ ಮುಖ; ಕೆಳದಿ: ಗೆಳತಿ, ಸ್ನೇಹಿತೆ;

ಪದವಿಂಗಡಣೆ:
ಮೆಲು+ನುಡಿಗೆ+ ಗಿಣಿ +ಹೊದ್ದಿದವು +ಸರದ್
ಉಲಿಗೆ+ ಕೋಗಿಲೆ+ಔಕಿದವು+ ಪರಿ
ಮಳದ +ಪಸರಕೆ+ ತೂಳಿದವು +ತುಂಬಿಗಳು+ ಡೊಂಬಿಯಲಿ
ಹೊಳೆವ +ಮುಖಕೆ +ಚಕೋರ +ಚಯವಿ
ಟ್ಟಳಿಸಿದವು ನೇವುರದ +ಬೊಬ್ಬೆಗೆ
ಸಿಲುಕಿದವು +ಹಂಸೆಗಳು+ ಕಮಲಾನನೆಯ+ ಕೆಳದಿಯರ

ಅಚ್ಚರಿ:
(೧) ಹೊದ್ದಿದವು, ಔಕಿದವು, ತೂಳಿದವು, ವಿಟ್ಟಳಿಸಿದವು, ಸಿಲುಕಿದವು – ಪದಗಳ ಬಳಕೆ
(೨) ಗಿಣಿ, ಕೋಗಿಲೆ, ತುಂಬಿ, ಚಕೋರ , ಹಂಸೆ – ಉಪಮಾನಕ್ಕೆ ಬಳಸಿದುದು