ಪದ್ಯ ೨೯: ದೂರ್ವಾಸ ಮುನಿಗಳೇಕೆ ಚಂದ್ರನಂತಾದರು?

ಬಳಿಕ ನಿನ್ನಯ ವರ ಸುದರ್ಶನ
ಸುಳಿವುದೋರಲು ಕೋಟಿಸೂರ್ಯರ
ಬೆಳಗು ಬೀರಲು ಹೊತ್ತಿವುರಿವುರಿ ಲೋಕಮೂರರಲಿ
ಬಲುಬಿಸಿಲು ಬಾಯ್ಗಾಂತ ಚಂದ್ರಿಕೆ
ವೆಳಗೆನಲು ಘನರೋಷವಹ್ನಿಯ
ಬೆಳಗು ಬೀತುದು ಚಕಿತ ಚಂದ್ರಮನಾದ ದೂರ್ವಾಸ (ಅರಣ್ಯ ಪರ್ವ, ೧೭ ಸಂಧಿ, ೨೯ ಪದ್ಯ)

ತಾತ್ಪರ್ಯ:
ನಂತರ ಶ್ರೀಕೃಷ್ಣನು ತನ್ನ ಭಕ್ತ ಅಂಬರೀಷನನ್ನು ರಕ್ಷಿಸಲು ಸುದರ್ಶನ ಚಕ್ರವನ್ನು ಕಳಿಸಿದೆ. ಅದು ಕೋಟಿ ಸೂರ್ಯ ಪ್ರಕಾಶದಿಮ್ದ ಬರಲು ಮೂರು ಲೋಕಗಳಲ್ಲೂ ಉರಿ ಹತ್ತಿ ಶಾಖವಾಗಲು, ದೂರ್ವಾಸನ ಶಾಪದ ಬೆಂಕಿಯ ಬೆಳಕು ಆರಿಹೋಯಿತು. ದೂರ್ವಾಸನು ವಿಸ್ಮಯಗೊಂಡು ಚಂದ್ರನಂತಾದನು.

ಅರ್ಥ:
ಬಳಿಕ: ನಂತರ; ವರ: ಶ್ರೇಷ್ಠ; ಸುಳಿವು: ಗುರುತು, ಕುರುಹು; ತೋರು: ಗೋಚರಿಸು; ಕೋಟಿ: ಲೆಕ್ಕವಿಲ್ಲದಷ್ಟು; ಸೂರ್ಯ: ರವಿ; ಬೆಳಗು: ಪ್ರಕಾಶ; ಬೀರು: ಹೊರಹಾಕು; ಹೊತ್ತು: ಸೀದು ಹೋದುದು, ಕರಿಕು; ಲೋಕ: ಜಗತ್ತು; ಬಲು: ತುಂಬ; ಬಿಸಿಲು: ಪ್ರಕಾಶ, ತಾಪ; ಚಂದ್ರಿಕೆ: ಬೆಳದಿಂಗಳು; ಬೆಳಗು: ಪ್ರಕಾಶ; ಘನ: ದೊಡ್ಡ; ರೋಷ: ಕೋಪ; ವಹ್ನಿ: ಬೆಂಕಿ; ಬೀತು: ಬತ್ತುಹೋಗು, ಆರಿಹೋಗು; ಚಕಿತ: ಆಶ್ಚರ್ಯ; ಚಂದ್ರ: ಶಶಿ;

ಪದವಿಂಗಡಣೆ:
ಬಳಿಕ +ನಿನ್ನಯ +ವರ +ಸುದರ್ಶನ
ಸುಳಿವು+ತೋರಲು +ಕೋಟಿ+ಸೂರ್ಯರ
ಬೆಳಗು +ಬೀರಲು +ಹೊತ್ತಿ+ವುರಿ+ವುರಿ+ ಲೋಕ+ಮೂರರಲಿ
ಬಲುಬಿಸಿಲು +ಬಾಯ್ಗ್+ಅಂತ+ ಚಂದ್ರಿಕೆ
ವೆಳಗೆನಲು +ಘನ+ರೋಷ+ವಹ್ನಿಯ
ಬೆಳಗು +ಬೀತುದು +ಚಕಿತ +ಚಂದ್ರಮನಾದ +ದೂರ್ವಾಸ

ಅಚ್ಚರಿ:
(೧) ಸುದರ್ಶನದ ಪ್ರಖರ: ಕೋಟಿಸೂರ್ಯರ ಬೆಳಗು ಬೀರಲು ಹೊತ್ತಿವುರಿವುರಿ ಲೋಕಮೂರರಲಿ
(೨) ದೂರ್ವಾಸನ ಕೋಪ ಆರಿದ ಪರಿ – ಬಲುಬಿಸಿಲು ಬಾಯ್ಗಾಂತ ಚಂದ್ರಿಕೆವೆಳಗೆನಲು ಘನರೋಷವಹ್ನಿಯ ಬೆಳಗು ಬೀತುದು ಚಕಿತ ಚಂದ್ರಮನಾದ ದೂರ್ವಾಸ

ಪದ್ಯ ೧೦: ಅರ್ಜುನನ ತಪಸ್ಸಿನ ಪ್ರಭೆ ಹೇಗಿತ್ತು?

ಮೇಲೆ ಮೇಲೀತನ ತಪೋಗ್ನಿ
ಜ್ವಾಲೆ ಜಡಿದುದು ತಡೆದುದಭ್ರ
ಸ್ಥಾಳಿಯಲಿ ಸೈವರಿವ ಸೂರ್ಯನ ಚಂದ್ರಮಪ್ರಭೆಯ
ಢಾಳಿಸುವ ಪರಿಧೌತ ಮೌನ ಕ
ರಾಳ ತೇಜೋಗರ್ಭ ತಪಧೂ
ಮಾಳಿಯಲಿ ಮೇಘಾಳಿ ಮಸಗಿದುದರಸ ಕೇಳೆಂದ (ಅರಣ್ಯ ಪರ್ವ, ೬ ಸಂಧಿ, ೧೦ ಪದ್ಯ)

ತಾತ್ಪರ್ಯ:
ಅರ್ಜುನನ ತಪಸ್ಸಿನ ಅಗ್ನಿ ಜ್ವಾಲೆಯು ಆಗಸದಲ್ಲಿ ಚರಿಸುವ ಸೂರ್ಯ ಚಂದ್ರರ ಪ್ರಭೆಯನ್ನು ತಡೆಯಿತು. ಮೇಲೆದ್ದು ಕಾಣುವ ಮೌನದ ಕರಾಳಗರ್ಭದಲ್ಲಿದ್ದ ತೇಜಸ್ಸಿನ ಹೊಗೆಯಿಂದ ಆಕಾಶದ ಮೋಡಗಳೂ ಕಪ್ಪಾದವು ಎಂದು ವೈಶಂಪಾಯನರು ಜನಮೇಜಯ ರಾಜನಿಗೆ ಹೇಳಿದರು.

ಅರ್ಥ:
ಮೇಲೆ: ಹೆಚ್ಚು; ತಪ: ತಪಸ್ಸು; ಅಗ್ನಿ: ಬೆಂಕಿ; ಜ್ವಾಲೆ: ಅಗ್ನಿಯ ನಾಲಗೆ; ಜಡಿ: ಹೊಡೆತ; ತಡೆ: ನಿಲ್ಲಿಸು; ಅಭ್ರ: ಆಗಸ; ಸ್ಥಾಳಿ: ಲೋಹದ ದುಂಡನೆಯ ಪಾತ್ರೆ; ಸೈವರಿ: ಮುಂದಕ್ಕೆ ಹೋಗು; ಸೂರ್ಯ: ರವಿ, ಭಾನು; ಚಂದ್ರ: ಶಶಿ; ಪ್ರಭೆ: ಪ್ರಕಾಶ; ಢಾಳಿಸು: ಕಾಂತಿಗೊಳ್ಳು; ಧೌತ: ಬಿಳಿ, ಶುಭ್ರ; ಮೌನ: ನಿಶ್ಯಬ್ದ; ಕರಾಳ: ಭಯಂಕರ; ತೇಜ: ಕಾಂತಿ; ಗರ್ಭ: ಒಳಭಾಗ; ಧೂಮ: ಹೊಗೆ, ಮೋಡ; ಆಳಿ: ಗುಂಪು; ಮೇಘಾಳಿ: ಮೋಡಗಳ ಗುಂಪು; ಮಸಗು: ಹರಡು; ಕೆರಳು; ಅರಸ: ರಾಜ;

ಪದವಿಂಗಡಣೆ:
ಮೇಲೆ +ಮೇಲ್+ಈತನ +ತಪೋಗ್ನಿ
ಜ್ವಾಲೆ+ ಜಡಿದುದು +ತಡೆದುದ್+ಅಭ್ರ
ಸ್ಥಾಳಿಯಲಿ +ಸೈವರಿವ+ ಸೂರ್ಯನ +ಚಂದ್ರಮ+ಪ್ರಭೆಯ
ಢಾಳಿಸುವ +ಪರಿಧೌತ +ಮೌನ +ಕ
ರಾಳ +ತೇಜೋ+ಗರ್ಭ+ ತಪ+ಧೂ
ಮಾಳಿಯಲಿ +ಮೇಘಾಳಿ +ಮಸಗಿದುದ್+ಅರಸ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಆಗಸವನ್ನು ದುಂಡನೆಯ ಪಾತ್ರೆಗೆ ಹೋಲಿಸಿರುವ ಪರಿ – ಅಭ್ರ
ಸ್ಥಾಳಿಯಲಿ ಸೈವರಿವ ಸೂರ್ಯನ ಚಂದ್ರಮಪ್ರಭೆಯ
(೨) ಅಭ್ರಸ್ಥಾಳಿ, ಡಾಳಿ, ಧೂಮಾಳಿ, ಮೇಘಾಳಿ – ಪ್ರಾಸ ಪದ
(೩) ಮೇಘಾಳಿ ಮಸಗಿದುದು, ಸೈವರಿವ ಸೂರ್ಯನ – ಜೋಡಿ ಅಕ್ಷರದ ಪದಗಳು

ಪದ್ಯ ೧೪: ವಿದುರ ಯಾವ ಉಪಮಾನವನ್ನು ನೀಡಿ ಧೃತರಾಷ್ಟ್ರನಿಗೆ ಬುದ್ಧಿ ಹೇಳಿದ?

ಎಲೆ ಮರುಳೆ ಧೃತರಾಷ್ಟ್ರ ನಂಟಿನ
ಬಳಕೆವಾತಿನ ಬಂಧುಕೃತ್ಯದ
ಬಳವಿಗೆಯೊಳೀ ನಿನ್ನ ಮಕ್ಕಳ ಬೇಡಿಕೊಳಲೇಕೆ
ಮುಳಿದು ಬಗುಳುವ ನಾಯ್ಗೆ ಚಂದ್ರಮ
ನಳುಕುವನೆ ನರಿಯೊರಲಿದೊಡೆ ಕಳ
ವಳಿಸುವುದೆ ಕಲಿ ಸಿಂಹವೆಂದನು ಖಾತಿಯೊಳು ವಿದುರ (ಉದ್ಯೋಗ ಪರ್ವ, ೧೦ ಸಂಧಿ, ೧೪ ಪದ್ಯ)

ತಾತ್ಪರ್ಯ:
ಎಲೈ ಮೂಢ ಧೃತರಾಷ್ಟ್ರ ನಂಟು, ಸಂಬಂಧ, ಬಂಧುಕೃತ್ಯಗಳ ಬಳಕೆಯ ಮಾತಿನಲ್ಲಿ ನಿನ್ನ ಮಕ್ಕಳನ್ನು ಬೇಡಿಕೊಳ್ಳುವುದರಲ್ಲಿ ಅರ್ಥವಿಲ್ಲ, ಅದು ಹುಚ್ಚುತನದ ಪ್ರಯತ್ನ. ನಾಯಿಯು ಸಿಟ್ಟಿನಿಂದ ಬೊಗಳಿದರೆ ಚಂದ್ರನು ಬೆದರುವನೆ? ನರಿಯು ಕಿರುಚಿಕೊಂಡರೆ ಸಿಂಹಕ್ಕೆ ಕಳವಳವಾಗುತ್ತದೆಯೇ? ಎಂದು ಕೋಪದಿಂದ ವಿದುರನು ಹೇಳಿದನು.

ಅರ್ಥ:
ಮರುಳು: ಮೂಢ, ಮೂರ್ಖ; ನಂಟು: ಸಂಬಂಧ; ಬಳಕೆ: ಉಪಯೋಗ; ಬಂಧು:ಸಂಬಂಧಿಕ; ಬಳಕೆ: ಗುರುತು, ಕ್ರಮ; ಮಕ್ಕಳು: ಸುತರು; ಬೇಡಿಕೊಳ್ಳು:ಯಾಚಿಸು, ಬಯಸು; ಮುಳಿ: ಸಿಟ್ಟು, ಕೋಪ; ಬಗುಳು: ಅರಚು; ನಾಯಿ: ಶ್ವಾನ; ಚಂದ್ರ: ಇಂದು, ಶಶಿ; ಅಳುಕು: ಹೆದರು; ಒರಲು: ಅರಚು; ಕಳವಳ:ಗೊಂದಲ, ಚಿಂತೆ; ಕಲಿ: ಶೂರ; ಸಿಂಹ: ಕೇಸರಿ; ಖಾತಿ: ಕೋಪ;

ಪದವಿಂಗಡಣೆ:
ಎಲೆ +ಮರುಳೆ +ಧೃತರಾಷ್ಟ್ರ +ನಂಟಿನ
ಬಳಕೆವಾತಿನ+ ಬಂಧು+ಕೃತ್ಯದ
ಬಳವಿಗೆಯೊಳ್+ಈ+ ನಿನ್ನ+ ಮಕ್ಕಳ+ ಬೇಡಿಕೊಳಲ್+ಏಕೆ
ಮುಳಿದು +ಬಗುಳುವ +ನಾಯ್ಗೆ +ಚಂದ್ರಮನ್
ಅಳುಕುವನೆ+ ನರಿ+ಒರಲಿದೊಡೆ +ಕಳ
ವಳಿಸುವುದೆ +ಕಲಿ +ಸಿಂಹವ್+ಎಂದನು +ಖಾತಿಯೊಳು +ವಿದುರ

ಅಚ್ಚರಿ:
(೧) ಉಪಮಾನಗಳ ಬಳಕೆ – ಮುಳಿದು ಬಗುಳುವ ನಾಯ್ಗೆ ಚಂದ್ರಮನಳುಕುವನೆ; ನರಿಯೊರಲಿದೊಡೆ ಕಳವಳಿಸುವುದೆ ಕಲಿ ಸಿಂಹ
(೨) ಬಂಧು, ನೆಂಟ – ಸಾಮ್ಯಾರ್ಥಪದಗಳು