ಪದ್ಯ ೨೦: ಕೌರವ ಸೈನ್ಯ ಹೇಗೆ ತನ್ನ ಪ್ರತಾಪವನ್ನು ತೋರಿತು?

ನೂಕಿದರು ನಿನ್ನವರು ಹಿನ್ನಲೆ
ಯಾಕೆವಾಳರ ಜೋಕೆಯಲಿ ರಣ
ವೋಕರಿಸಿತರುಣಾಂಬುವನು ಗಜಹಯದ ಮೈಗಳಲಿ
ವ್ಯಾಕುಲರ ಬಯ್ಬಯ್ದು ಚಪಲಾ
ನೀಕ ಬಂಡಿಸಿ ಚಂಡಪಾತ ನಿ
ರಾಕರಿಷ್ಣುಗಳೊಕ್ಕಲಿಕ್ಕಿತು ದಳದ ಮಧ್ಯದಲಿ (ಶಲ್ಯ ಪರ್ವ, ೨ ಸಂಧಿ, ೨೦ ಪದ್ಯ)

ತಾತ್ಪರ್ಯ:
ಎಲೈ ರಾಜನೇ, ನಿನ್ನ ಸುಭಟರು ವೀರರ ಬೆಂಬಲದಿಂದ ಮುನ್ನುಗ್ಗಿ ಸಮರದಲ್ಲಿ ಆನೆ ಕುದುರೆಗಳ ರಕ್ತವನ್ನು ಸುರಿಸಿದರು. ಯುದ್ಧ ವ್ಯಾಕುಲರನ್ನು ಬೈದು, ಸೈನ್ಯವನ್ನು ಬಡಿದು, ರಣರಂಗದಲ್ಲಿ ಅತಿಶಯ ಪರಾಕ್ರಮದಿಂದ ವೀರರನ್ನು ಹೊಡೆದು ಹಾಕಿದರು.

ಅರ್ಥ:
ನೂಕು: ತಳ್ಳು; ಆಕೆವಾಳ: ವೀರ, ಪರಾಕ್ರಮಿ; ಜೋಕೆ: ಎಚ್ಚರಿಕೆ; ರಣ: ಯುದ್ಧ; ಓಕರಿಸು: ಹೊರಹಾಕು; ಅರುಣಾಂಬು: ಕೆಂಪಾದ ನೀರು (ರಕ್ತ); ಗಜ: ಆನೆ; ಹಯ: ಕುದುರೆ; ಮೈ: ತನು, ದೇಹ; ವ್ಯಾಕುಲ: ದುಃಖ, ವ್ಯಥೆ; ಬೈದು: ಜರೆದು; ಚಪಲ: ಚಂಚಲ ಸ್ವಭಾವದವನು; ಆನೀಕ: ಗುಂಪು; ಬಂಡಿಸು: ಹೊಡೆ; ಚಂಡ: ಶೂರ, ಪರಾಕ್ರಮಿ; ನಿರಾಕರಿಷ್ಣು: ನಿರಾಕರಿಸಿ ಬಯಸಿದವನು; ದಳ: ಸೈನ್ಯ; ಮಧ್ಯ: ನಡುವೆ;

ಪದವಿಂಗಡಣೆ:
ನೂಕಿದರು +ನಿನ್ನವರು +ಹಿನ್ನಲೆ
ಆಕೆವಾಳರ+ ಜೋಕೆಯಲಿ +ರಣ
ಓಕರಿಸಿತ್+ಅರುಣಾಂಬುವನು +ಗಜ+ಹಯದ +ಮೈಗಳಲಿ
ವ್ಯಾಕುಲರ +ಬಯ್ಬಯ್ದು+ ಚಪಲ
ಆನೀಕ +ಬಂಡಿಸಿ+ ಚಂಡಪಾತ+ ನಿ
ರಾಕರಿಷ್ಣುಗಳ್+ಒಕ್ಕಲಿಕ್ಕಿತು +ದಳದ +ಮಧ್ಯದಲಿ

ಅಚ್ಚರಿ:
(೧) ರಕ್ತಹರಿಯಿತು ಎಂದು ಹೇಳುವ ಪರಿ – ರಣವೋಕರಿಸಿತರುಣಾಂಬುವನು ಗಜಹಯದ ಮೈಗಳಲಿ