ಪದ್ಯ ೩೭: ವಿಶ್ವಕರ್ಮನು ಯಾರ ಪ್ರತಿರೂಪವನ್ನು ಮಾಡಿದನು?

ನೆನೆದ ಘಳಿಗೆಯೊಳಾತ ಕಟ್ಟು
ಕ್ಕಿನಲಿ ಸರ್ವಾವಯವವನು ಸಂ
ಜನಿಸಿದನು ಪ್ರತಿರೂಪವನು ಪವಮಾನನಂದನನ
ದನುಜರಿಪುಸಹಿತವರು ಬಂದರು
ಮುನಿಯೊಡನೆ ಬಳಿಕಂಧನೃಪತಿಗೆ
ವಿನಯದಲಿ ಮೆಯ್ಯಿಕ್ಕಿದನು ಭಕ್ತಿಯಲಿ ಯಮಸೂನು (ಗದಾ ಪರ್ವ, ೧೧ ಸಂಧಿ, ೩೭ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ನೆನೆಸಿದೊಡನೆ ವಿಶ್ವಕರ್ಮನು ಕಟ್ಟುಕ್ಕಿನಿಂದ ಭೀಮನ ಪ್ರತಿಮೆಯನ್ನು ಮಾಡಿಕೊಟ್ಟನು. ಶ್ರೀಕೃಷ್ಣ ವೇದ ವ್ಯಾಸರೊಡನೆ ಪಾಂಡವರು ಧೃತರಾಷ್ಟ್ರನ ಬಳಿಗೆ ಬಂದರು. ಧರ್ಮಜನು ಅವನಿಗೆ ಭಕ್ತಿಯಿಂದ ನಮಸ್ಕರಿಸಿದನು.

ಅರ್ಥ:
ನೆನೆದು: ಜ್ಞಾಪಿಸು; ಘಳಿಗೆ: ಕಾಲ; ಉಕ್ಕು: ಹದಮಾಡಿದ ಕಬ್ಬಿಣ; ಕಟ್ಟು: ರಚಿಸು; ಅವಯವ: ದೇಹ; ಸಂಜನಿಸು: ಉಂಟಾಗು, ಸಂಭವಿಸು; ಪ್ರತಿ: ಸಾಟಿ, ಸಮಾನ; ರೂಪ: ಆಕಾರ; ಪವಮಾನ: ವಾಯು; ನಂದನ: ಮಗ; ಪವಮಾನನಂದನ: ಭೀಮ; ದನುಜರಿಪು: ರಾಕ್ಷಸರ ವೈರಿ (ಕೃಷ್ಣ); ಸಹಿತ: ಜೊತೆ; ಬಂದು: ಆಗಮಿಸು; ಮುನಿ: ಋಷಿ; ಬಳಿಕ: ನಂತರ; ಅಂಧನೃಪ: ಕುರುಡ ರಾಜ (ಧೃತರಾಷ್ಟ್ರ); ವಿನಯ: ಒಳ್ಳೆಯತನ, ಸೌಜನ್ಯ; ಮೈಯ್ಯಿಕ್ಕು: ನಮಸ್ಕರಿಸು; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಸೂನು: ಮಗ;

ಪದವಿಂಗಡಣೆ:
ನೆನೆದ +ಘಳಿಗೆಯೊಳ್+ಆತ +ಕಟ್ಟು
ಕ್ಕಿನಲಿ+ ಸರ್ವ+ಅವಯವವನು +ಸಂ
ಜನಿಸಿದನು +ಪ್ರತಿರೂಪವನು +ಪವಮಾನ+ನಂದನನ
ದನುಜರಿಪು+ಸಹಿತ್+ಅವರು +ಬಂದರು
ಮುನಿಯೊಡನೆ +ಬಳಿಕ್+ಅಂಧ+ನೃಪತಿಗೆ
ವಿನಯದಲಿ +ಮೆಯ್ಯಿಕ್ಕಿದನು +ಭಕ್ತಿಯಲಿ +ಯಮಸೂನು

ಅಚ್ಚರಿ:
(೧) ನಮಸ್ಕರಿಸು ಎಂದು ಹೇಳುವ ಪರಿ – ನೃಪತಿಗೆ ವಿನಯದಲಿ ಮೆಯ್ಯಿಕ್ಕಿದನು ಭಕ್ತಿಯಲಿ

ಪದ್ಯ ೬: ಕೌರವವನನ್ನು ಕಂಡ ಸಂಜಯನ ಸ್ಥಿತಿ ಹೇಗಿತ್ತು?

ಕಂಡೆನರಸನ ನಿಬ್ಬರವ ಬಳಿ
ಕಂಡಲೆದುದತಿಶೋಕಶಿಖಿ ಕೈ
ಗೊಂಡುದಿಲ್ಲರೆಘಳಿಗೆ ಬಳಿಕೆಚ್ಚತ್ತು ಕಂದೆರೆದು
ಖಂಡಿಸಿದನೆನ್ನುಬ್ಬೆಯನು ಹುರಿ
ಗೊಂಡುದಾತನ ಸತ್ವವಾತನ
ದಂಡಿಯಲಿ ಬಹರಾರು ಸುರ ನರ ನಾಗಲೋಕದಲಿ (ಗದಾ ಪರ್ವ, ೪ ಸಂಧಿ, ೬ ಪದ್ಯ)

ತಾತ್ಪರ್ಯ:
ಸಂಜಯನು ಮಾತನಾಡುತ್ತಾ, ನಾನು ರಾಜನ ಕಳವಳವನ್ನು ನೋಡಿದೆ, ಅತಿಶಯ ಶೋಕಜ್ವಾಲೆಯಲ್ಲಿ ಬೆಂದಿದ್ದೆ. ಒಂದು ನಿಮಿಷ ಮೂರ್ಛಿತನಾಗಿ, ನಂತರ ಎಚ್ಚೆತ್ತು, ಕಣ್ಣುತೆರೆದು ನನ್ನ ಶೋಕವನ್ನು ನಿಲ್ಲಿಸಿದನು. ಅವನ ಸತ್ವ ಹುರಿಗೊಂಡಿತು. ಅವನಿಗೆ ಸ್ವರ್ಗ, ಮರ್ತ್ಯ, ಪಾತಾಳ ಲೋಕಗಳಲ್ಲಿ ಸಮರಾರಿದ್ದಾರೆ?

ಅರ್ಥ:
ಕಂಡು: ನೋಡು; ಅರಸ: ರಾಜ; ನಿಬ್ಬರ: ಅತಿಶಯ, ಹೆಚ್ಚಳ; ಬಳಿ: ಹತ್ತಿರ; ಅತಿ: ಬಹಳ: ಶೋಕ: ದುಃಖ; ಶಿಖಿ: ಬೆಂಕಿ; ಕೈಗೊಂಡು: ಪಡೆದು; ಅರೆ: ಅರ್ಧ; ಘಳಿಗೆ: ಸಮಯ; ಬಳಿಕ: ನಂತರ; ಎಚ್ಚತ್ತು: ಎಚ್ಚರನಾಗಿ; ಕಂದೆರೆದು: ಕಣ್ಣುಬಿಟ್ಟು; ಖಂಡಿಸು: ಕಡಿ, ಕತ್ತರಿಸು; ಉಬ್ಬೆ: ಸೆಕೆ, ಕಾವು; ಹುರಿ: ಕಾಯಿಸು, ತಪ್ತಗೊಳಿಸು; ಸತ್ವ: ಸಾರ; ದಂಡಿ: ಶಕ್ತಿ, ಸಾಮರ್ಥ್ಯ; ಬಹರು: ಆಗಮಿಸು; ಸುರ: ದೇವತೆ; ನರ: ಮನುಷ್ಯ; ನಾಗಲೋಕ: ಪಾತಾಳ;

ಪದವಿಂಗಡಣೆ:
ಕಂಡೆನ್+ಅರಸನ +ನಿಬ್ಬರವ +ಬಳಿ
ಕಂಡಲೆದುದ್+ಅತಿ+ಶೋಕಶಿಖಿ+ ಕೈ
ಗೊಂಡುದಿಲ್ಲ್+ಅರೆ+ಘಳಿಗೆ +ಬಳಿಕ್+ಎಚ್ಚತ್ತು +ಕಂದೆರೆದು
ಖಂಡಿಸಿದನ್+ಎನ್ನ್+ಉಬ್ಬೆಯನು +ಹುರಿ
ಗೊಂಡುದಾತನ +ಸತ್ವವ್+ಆತನ
ದಂಡಿಯಲಿ +ಬಹರಾರು +ಸುರ+ ನರ+ ನಾಗಲೋಕದಲಿ

ಅಚ್ಚರಿ:
(೧) ದುರ್ಯೋಧನನ ಪರಾಕ್ರಮ – ಆತನ ದಂಡಿಯಲಿ ಬಹರಾರು ಸುರ ನರ ನಾಗಲೋಕದಲಿ

ಪದ್ಯ ೩೫: ಕುರುಬಲಗೇಕೆ ಸಂತಸವಾಯಿತು?

ಸಲಿಸಹಬೇಹುದು ಭಕುತ ಮಾಡಿದ
ಛಲದ ಭಾಷೆಯನೆನುತ ರವಿಮಂ
ಡಲಕೆ ಮರೆಯೊಡ್ಡಿದನು ಮುರರಿಪು ವರಸುದರ್ಶನವ
ಕಳನೊಲಗೆ ಕತ್ತಲಿಸಿತಹಿತನ
ಕೊಲೆಗೆ ಕಾವಳ ಕವಿದವೋಲರೆ
ಘಳಿಗೆಯಲಿ ಸುಮ್ಮಾನ ಮಸಗಿತು ಸಕಲ ಕುರುಬಲಕೆ (ದ್ರೋಣ ಪರ್ವ, ೧೪ ಸಂಧಿ, ೩೫ ಪದ್ಯ)

ತಾತ್ಪರ್ಯ:
ತನ್ನ ಭಕ್ತನ ಭಾಷೆಯನ್ನು ನಡೆಸಿಕೊಡಬೇಕೆಂದು ನಿರ್ಧರಿಸಿ ಶ್ರೀಕೃಷ್ಣನು ಸೂರ್ಯಮಂಡಲಕ್ಕೆ ಸುದರ್ಶನ ಚಕ್ರವನ್ನು ಅಡ್ಡಲಾಗಿ ಹಿಡಿದನು. ಶತ್ರುವಿನ ಕೊಲೆಗಾಗಿ ಕಾವಳ ಮುಸುಕಿದಮ್ತೆ ರಣರಂಗದಲ್ಲಿ ಕತ್ತಲಾಯಿತು. ಸಮಸ್ತ ಕುರುಸೇನೆಯು ಅರೆಗಳಿಗೆ ಕಾಲ ಸಂತೋಶಭರಿತವಾಯಿತು.

ಅರ್ಥ:
ಸಲಿಸು: ದೊರಕಿಸಿ ಕೊಡು, ಪೂರೈಸು; ಭಕುತ: ಭಕ್ತ; ಛಲ: ದೃಢ ನಿಶ್ಚಯ; ಭಾಷೆ: ನುಡಿ; ರವಿ: ಸೂರ್ಯ; ಮಂಡಲ: ವರ್ತುಲಾಕಾರ; ಮರೆ: ಕಾಣದಂತಾಗು; ಮುರರಿಪು: ಕೃಷ್ಣ; ವರ: ಶ್ರೇಷ್ಠ; ಕಳ: ರಣರಂಗ; ಕತ್ತಲು: ಅಂಧಕಾರ; ಅಹಿತ: ವೈರಿ; ಕೊಲೆ: ವಧೆ; ಕಾವಳ: ಅಂಧಕಾರ; ಕವಿ: ಆವರಿಸು; ಅರೆಘಳಿಗೆ: ಅರ್ಧ ಘಂಟೆ; ಸುಮ್ಮಾನ: ಸಂತೋಷ, ಹಿಗ್ಗು; ಮಸಗು: ಹರಡು; ಸಕಲ: ಎಲ್ಲಾ;

ಪದವಿಂಗಡಣೆ:
ಸಲಿಸಹಬೇಹುದು +ಭಕುತ +ಮಾಡಿದ
ಛಲದ +ಭಾಷೆಯನ್+ಎನುತ +ರವಿಮಂ
ಡಲಕೆ +ಮರೆಯೊಡ್ಡಿದನು +ಮುರರಿಪು +ವರ+ಸುದರ್ಶನವ
ಕಳನೊಳಗೆ +ಕತ್ತಲಿಸಿತ್+ಅಹಿತನ
ಕೊಲೆಗೆ +ಕಾವಳ +ಕವಿದವೋಲ್+ಅರೆ
ಘಳಿಗೆಯಲಿ +ಸುಮ್ಮಾನ +ಮಸಗಿತು +ಸಕಲ +ಕುರುಬಲಕೆ

ಅಚ್ಚರಿ:
(೧) ಕೃಷ್ಣನ ಉಪಾಯ: ರವಿಮಂಡಲಕೆ ಮರೆಯೊಡ್ಡಿದನು ಮುರರಿಪು ವರಸುದರ್ಶನವ
(೨) ಕ ಕಾರದ ಸಾಲು ಪದ – ಕಳನೊಲಗೆ ಕತ್ತಲಿಸಿತಹಿತನ ಕೊಲೆಗೆ ಕಾವಳ ಕವಿದವೋಲ

ಪದ್ಯ ೨೯: ಕೌರವ ಸೈನ್ಯವು ತಮ್ಮೊಳಗೆ ಏನೆಂದು ಯೋಚಿಸಿದರು?

ಅಳವಿಗೊಡಲಿ ಮಹಾರಥರು ಕೈ
ಕೊಳಲಿ ಸೈಂಧವ ನೃಪನನೊಂದರೆ
ಘಳಿಗೆ ಕಾಯ್ದರೆ ನಾವು ನೆರೆ ಕೊಂದವರು ಫಲುಗುಣನ
ಹೊಳಹುಗಳೆಯುತೆ ಕಾಲವಿನ್ನರೆ
ಘಳಿಗೆ ಸೈರಿಸಿ ಶಿವ ಶಿವಾಯೆಂ
ದೊಳಗೊಳಗೆ ಮೂದಲಿಸುತಿರ್ದರು ಭಟರು ತಮ್ಮೊಳಗೆ (ದ್ರೋಣ ಪರ್ವ, ೧೪ ಸಂಧಿ, ೨೯ ಪದ್ಯ)

ತಾತ್ಪರ್ಯ:
ಕೌರವವೀರರು ಒಬ್ಬರೊಬ್ಬರಿಗೆ, ಯುದ್ಧಾರಂಭವಾಗಲಿ ಮಹಾರಥರು ತಮ್ಮ ಕೈಯನ್ನು ತೋರಿಸಲಿ, ಇನ್ನರ್ಧ ಗಳಿಗೆ ಸೈಂಧವನನ್ನು ಕಾಪಾಡಿದರೆ ನಾವು ಅರ್ಜುನನನ್ನು ಕೊಂದಹಾಗೆ, ರಥವಾಜಿಗಳ ಓಟವನ್ನು ತಡೆದು ಅರ್ಧಗಳಿಗೆ ಸೈರಿಸಿರಿ ಶಿವಶಿವಾ ಎಂದು ಹೇಳಿಕೊಂಡರು.

ಅರ್ಥ:
ಅಳವಿ: ಶಕ್ತಿ, ಯುದ್ಧ; ಮಹಾರಥ: ಪರಾಕ್ರಮಿ; ನೃಪ: ರಾಜ; ಘಳಿಗೆ: ಕಾಲ; ಕಾಯ್ದು: ಕಾಪಾಡು; ನೆರೆ: ಗುಂಫು; ಕೊಂದು: ಸಾಯಿಸು; ಹೊಳಹು: ಕಾಂತಿ, ಪ್ರಕಾಶ; ಕಾಲ: ಸಮಯ; ಸೈರಿಸು: ತಾಳು, ಸಹಿಸು; ಮೂದಲಿಸು: ಹಂಗಿಸು; ಭಟ: ಸೈನಿಕ; ಅರೆ: ಅರ್ಧ;

ಪದವಿಂಗಡಣೆ:
ಅಳವಿಗೊಡಲಿ +ಮಹಾರಥರು +ಕೈ
ಕೊಳಲಿ +ಸೈಂಧವ +ನೃಪನನ್+ಒಂದ್+ಅರೆ
ಘಳಿಗೆ+ ಕಾಯ್ದರೆ+ ನಾವು +ನೆರೆ +ಕೊಂದವರು +ಫಲುಗುಣನ
ಹೊಳಹು+ಕಳೆಯುತೆ +ಕಾಲವ್+ಇನ್ನ್+ಅರೆ
ಘಳಿಗೆ +ಸೈರಿಸಿ +ಶಿವ +ಶಿವಾಯೆಂದ್
ಒಳಗೊಳಗೆ +ಮೂದಲಿಸುತಿರ್ದರು +ಭಟರು +ತಮ್ಮೊಳಗೆ

ಅಚ್ಚರಿ:
(೧) ಅರೆಘಳಿಗೆ – ೨, ೪ ಸಾಲಿನ ಕೊನೆ ಪದ
(೨) ಒಳಗೊಳಗೆ, ತಮ್ಮೊಳಗೆ – ಪ್ರಾಸ ಪದ

ಪದ್ಯ ೩೮: ಭೀಮನೊಡನೆ ಯಾರು ಯುದ್ಧಕ್ಕಿಳಿದರು?

ಭೀಮನಿನ್ನ ರೆಘಳಿಗೆಯಲಿ ನಿ
ರ್ನಾಮನೋ ತಡವಿಲ್ಲ ದಮ್ತಿಯ
ತಾಮಸಿಕೆ ಘನ ತೆಗಿಯಿ ತಮ್ಮನನೆನುತ ಕಳವಳಿಸೆ
ಭೂಮಿಪತಿ ಕೈ ಕೊಂಡನೊಡನೆ ಸ
ನಾಮರೈದಿತು ನಕುಲ ಸಾತ್ಯಕಿ
ಭೀಮಸುತನಭಿಮನ್ಯು ದ್ರುಪದ ಶಿಖಂಡಿ ಕೈಕೆಯರು (ದ್ರೋಣ ಪರ್ವ, ೩ ಸಂಧಿ, ೩೮ ಪದ್ಯ)

ತಾತ್ಪರ್ಯ:
ಭೀಮನು ಇನ್ನು ಅರೆಗಳಿಗೆಯಲ್ಲಿ ನಿರ್ನಾಮನಾಗುತ್ತಾನೆ. ಹೆಚ್ಚು ಹೊತ್ತು ಬೇಕಾಗಿಲ್ಲ. ಆನೆಯ ಬಲ ಕೋಪಗಳು ಅತಿಶಯವಾಗಿವೆ. ಅವನನ್ನು ಯುದ್ಧದಿಂದ ಹಿಂದಕ್ಕೆ ತೆಗೆಸಿ ಎನ್ನುತ್ತಾ ಧರ್ಮಜನು ಯುದ್ಧಕ್ಕೆ ಮುಂದಾಗಲು, ನಕುಲ, ಸಾತ್ಯಕಿ, ಘಟೋತ್ಕಚ, ಅಭಿಮನ್ಯು, ದ್ರುಪದ, ಶಿಖಂಡಿ, ಕೈಕೆಯರು ಅವನೊಡನೆ ಯುದ್ಧಕ್ಕಿಳಿದರು.

ಅರ್ಥ:
ಅರೆ: ಅರ್ಧ; ಘಳಿಗೆ: ಸಮಯ; ನಿರ್ನಾಮ: ನಾಶ; ತಡ: ನಿಧಾನ; ದಂತಿ: ಆನೆ; ತಾಮಸ: ಜಾಡ್ಯ, ಜಡತೆ; ಘನ: ಶ್ರೇಷ್ಠ; ತೆಗೆ: ಹೊರತರು; ತಮ್ಮ: ಸಹೋದರ; ಕಳವಳ: ಗೊಂದಲ; ಭೂಮಿಪತಿ: ರಾಜ; ಒಡನೆ: ಕೂಡಲೆ; ಸನಾಮ: ಪ್ರಸಿದ್ಧವಾದ ಹೆಸರುಳ್ಳ; ಐದು: ಬಂದು ಸೇರು; ಸುತ: ಮಗ;

ಪದವಿಂಗಡಣೆ:
ಭೀಮನ್+ಇನ್ನ್+ಅರೆ+ಘಳಿಗೆಯಲಿ +ನಿ
ರ್ನಾಮನೋ +ತಡವಿಲ್ಲ+ ದಂತಿಯ
ತಾಮಸಿಕೆ +ಘನ +ತೆಗಿಯಿ +ತಮ್ಮನನ್+ಎನುತ +ಕಳವಳಿಸೆ
ಭೂಮಿಪತಿ +ಕೈ +ಕೊಂಡನೊಡನೆ +ಸನಾಮರ್
ಐದಿತು +ನಕುಲ +ಸಾತ್ಯಕಿ
ಭೀಮಸುತನ್+ಅಭಿಮನ್ಯು +ದ್ರುಪದ +ಶಿಖಂಡಿ +ಕೈಕೆಯರು

ಅಚ್ಚರಿ:
(೧) ಭೀಮ – ೧, ೬ ಸಾಲಿನ ಮೊದಲ ಪದ

ಪದ್ಯ ೬೦: ಧರ್ಮಜನ ರಕ್ಷಣೆಗೆ ಯಾರು ಬಂದರು?

ತೀರಿತಿನ್ನೇನರಿನೃಪನ ಸಂ
ಸಾರವಿನ್ನರೆ ಘಳಿಗೆಯಲಿ ಗಾಂ
ಧಾರಿ ನೆರೆ ನೋಂಪಿಯಲಿ ಪಡೆದಳು ಕೌರವೇಶ್ವರನ
ಸಾರ ಹೇಳೋ ಸಾಹಸಿಕರೆಂ
ದಾರುತಿರೆ ಬಲವಿತ್ತಲಾಹವ
ಧೀರ ಸಾತ್ಯಕಿ ಭೀಮ ಪಾರ್ಥಕುಮಾರರನುವಾಯ್ತು (ದ್ರೋಣ ಪರ್ವ, ೨ ಸಂಧಿ, ೬೦ ಪದ್ಯ)

ತಾತ್ಪರ್ಯ:
ಶತ್ರುರಾಜನ ಸಂಸಾರ ಇನ್ನರೆಗಳಿಗೆಯಲ್ಲಿ ಕೊನೆಯಾಗುತ್ತದೆ. ಗಾಂಧಾರಿಯು ವ್ರತಮಾಡಿ ಕೌರವೇಶ್ವರನನ್ನು ಪಡೆದಳು, ಸಾಹಸವಿರುವವರನ್ನು ಧರ್ಮಜನ ರಕ್ಷಣೆಗೆ ಕರೆಯಿರಿ ಎಂದು ಸೈನ್ಯವು ಕೂಗಿಕೊಳ್ಳಲು, ಸಾತ್ಯಕಿ, ಭೀಮ, ಅಭಿಮನ್ಯರು ಧರ್ಮಜನ ರಕ್ಷಣೆಗೆ ರಣರಂಗಕ್ಕೆ ಬಂದರು.

ಅರ್ಥ:
ತೀರು: ಮುಗಿಸು; ಅರಿ: ವೈರಿ; ನೃಪ: ರಾಜ; ಸಂಸಾರ: ಪರಿವಾರ, ಕುಟುಂಬ; ಅರೆ: ಸ್ವಲ್ಪ, ಅರ್ಧ; ಘಳಿಗೆ: ಸಮಯ; ನೆರೆ: ಗುಂಪು; ನೋಂಪು: ವ್ರತ; ಪಡೆ: ಹೊಂದು, ತಾಳು; ಸಾರ: ಶ್ರೇಷ್ಠವಾದ; ಹೇಳು: ತಿಳಿಸು; ಸಾಹಸಿ: ಪರಾಕ್ರಮಿ; ಆರು: ಘರ್ಷಿಸು, ತೃಪ್ತಿಪಡು; ಬಲ: ಸೈನ್ಯ; ಆಹವ: ಯುದ್ಧ; ಧೀರ: ಪರಾಕ್ರಮ; ಕುಮಾರ: ಮಗ; ಅನುವು: ಸೊಗಸು, ರೀತಿ;

ಪದವಿಂಗಡಣೆ:
ತೀರಿತ್+ಇನ್ನೇನ್+ಅರಿ+ನೃಪನ +ಸಂ
ಸಾರವ್+ಇನ್ನ್+ಅರೆ +ಘಳಿಗೆಯಲಿ +ಗಾಂ
ಧಾರಿ +ನೆರೆ +ನೋಂಪಿಯಲಿ +ಪಡೆದಳು +ಕೌರವೇಶ್ವರನ
ಸಾರ +ಹೇಳೋ +ಸಾಹಸಿಕರೆಂದ್
ಆರುತಿರೆ+ ಬಲವ್+ಇತ್ತಲ್+ಆಹವ
ಧೀರ +ಸಾತ್ಯಕಿ+ ಭೀಮ +ಪಾರ್ಥ+ಕುಮಾರರ್+ಅನುವಾಯ್ತು

ಅಚ್ಚರಿ:
(೧) ಅರಿ, ಅರೆ – ಪದಗಳ ಬಳಕೆ