ಪದ್ಯ ೬೨: ಕುಂತಿ ಹೇಗೆ ಮರುಗಿದಳು?

ವನದೊಳತ್ಯಾಯಾಸ ನೀವೆಂ
ತನುಭವಿಸುವಿರಿ ಪಾಪಿ ದುರ್ಯೋ
ಧನನ ದುರ್ಜನ ಸಂಗ ನಿಮಗಿದು ಸಿಂಗಿಯಾದುದಲೆ
ವನಿತೆ ನಿಮ್ಮೊಡನೆಂತು ತೊಳಲುವ
ಳನವರತ ಗಿರಿ ಗುಹೆಯ ಘಟ್ಟವ
ನೆನುತ ನುಡಿದಳು ಕುಟಿಲ ಗರ್ಭದ ಗುಣದ ಬೆಳವಿಗೆಯ (ಸಭಾ ಪರ್ವ, ೧೭ ಸಂಧಿ, ೬೨ ಪದ್ಯ)

ತಾತ್ಪರ್ಯ:
ಕುಂತಿಯು ತನ್ನ ಮಕ್ಕಳ ಸ್ಥಿತಿಯನ್ನು ಕಂಡು, ಪಾಪಿಯಾದ ದುರ್ಯೋಧನನ ಸಂಗವು ನಿಮಗೆ ವಿಷಪ್ರಾಯವಾಯಿತು, ನನುಗುನ್ನಿಯಂತೆ ಮೈಯುರಿಗೆ ಕಾರಣವಯಿತು. ನೀವು ಕಾಡಿನಲಿ ಹೆಚ್ಚಿನ ಆಯಾಸವನ್ನು ಹೇಗೆ ಅನುಭವಿಸುವಿರಿ? ದ್ರೌಪದಿಯು ಗುಡ್ಡ, ಗುಹೆ, ಘಟ್ಟಗಳಲ್ಲಿ ನಿಮ್ಮೊಡನೆ ಯಾವಾಗಲೂ ಹೇಗೆ ಅಲೆದಾಡುವಳು? ದುರ್ಜನರ ಕಪಟ ನಡತೆ, ಸಂಗದೋಷವು ನಿಮ್ಮ ಈ ಕಷ್ಟಕ್ಕೆ ಕಾರಣವಾಯಿತಲಾ ಎಂದು ಮರುಗಿದಳು.

ಅರ್ಥ:
ವನ: ಕಾಡು; ಅತಿ: ಬಹಳ; ಆಯಾಸ: ಬಳಲಿಕೆ, ಶ್ರಮ; ಅನುಭವಿಸು: ಕಷ್ಟಪಡು; ಪಾಪಿ: ದುಷ್ಟ; ದುರ್ಜನ: ಕೆಟ್ಟ ಜನ; ಸಂಗ: ಜೊತೆ; ಸಿಂಗಿ: ಒಂದು ಬಗೆಯ ಘೋರ ವಿಷ; ವನಿತೆ: ಹೆಣ್ಣು; ತೊಳಲು: ಬವಣೆ, ಸಂಕಟ; ಅನವರತ: ಯಾವಾಗಲು; ಗಿರಿ: ಬೆಟ್ಟ; ಗುಹೆ: ಗವಿ; ಘಟ್ಟ: ಬೆಟ್ಟಗಳ ಸಾಲು, ಪರ್ವತ ಪಂಕ್ತಿ; ನುಡಿ: ಮಾತಾಡು; ಕುಟಿಲ: ಮೋಸ; ಗರ್ಭ: ಬಸಿರು, ಕೂಸು; ಗುಣ: ನಡತೆ; ಬೆಳವಿಗೆ: ವೃದ್ಧಿ, ಬೆಳೆಯುವಿಕೆ;

ಪದವಿಂಗಡಣೆ:
ವನದೊಳ್+ಅತಿ+ಆಯಾಸ +ನೀವೆಂತ್
ಅನುಭವಿಸುವಿರಿ+ ಪಾಪಿ+ ದುರ್ಯೋ
ಧನನ +ದುರ್ಜನ +ಸಂಗ +ನಿಮಗಿದು+ ಸಿಂಗಿಯಾದುದಲೆ
ವನಿತೆ+ ನಿಮ್ಮೊಡನೆಂತು +ತೊಳಲುವಳ್
ಅನವರತ +ಗಿರಿ +ಗುಹೆಯ +ಘಟ್ಟವನ್
ಎನುತ +ನುಡಿದಳು+ ಕುಟಿಲ+ ಗರ್ಭದ +ಗುಣದ +ಬೆಳವಿಗೆಯ

ಅಚ್ಚರಿ:
(೧) ದುರ್ಯೋಧನನನ್ನು ಬಯ್ಯುವ ಪರಿ – ಪಾಪಿ ದುರ್ಯೋಧನನ ದುರ್ಜನ ಸಂಗ ನಿಮಗಿದು ಸಿಂಗಿಯಾದುದಲೆ; ಕುಟಿಲ ಗರ್ಭದ ಗುಣದ ಬೆಳವಿಗೆಯ