ಪದ್ಯ ೭೪: ವೀರರು ಆನೆಗಳನ್ನು ಹೇಗೆ ಯುದ್ಧಕ್ಕೆ ನೂಕಿದರು?

ಬಾರ ಸಂಕಲೆ ಪಕ್ಕ ಘಂಟೆಯ
ಚಾರು ಚಮರದ ಕೊಡತಿಗಳ ಕೈ
ಹಾರೆ ಕೂರಂಕುಶದ ಬಿರುದರು ಹೊದ್ದಿದರು ಗಜವ
ಬಾರ ದೂಹತ್ತಿಗಳ ಗುಂಡನು
ತೋರ ಲೌಡಿಯ ತೊಟ್ಟು ಕೈಯಲಿ
ವಾರಣದ ಮೋಹರವ ನೂಕಿದರುಭಯಸೇನೆಯಲಿ (ಭೀಷ್ಮ ಪರ್ವ, ೪ ಸಂಧಿ, ೭೪ ಪದ್ಯ)

ತಾತ್ಪರ್ಯ:
ತೂಕವಾದ ಸರಪಣಿ, ಗಂಟೆಗಳು, ಚಾಮರ, ಕೊಡತಿ, ಕೈಹಾರೆ, ಚೂಪಾದ ಅಂಕುಶಗಳನ್ನು ಹಿಡಿದ ವೀರರು ಆನೆಗಳ ಬಳಿ ಹೋಗಿ ಮೇಲೆ ಹತ್ತಿದರು. ದೂಹತ್ತಿ, ಗುಂಡು ಲೌಡಿಗಳನ್ನು ಹಿಡಿದು ಆನೆಗಳನ್ನು ಯುದ್ಧಕ್ಕೆ ನೂಕಿದರು.

ಅರ್ಥ:
ಬಾರ: ತೂಕವಾದುದು; ಸಂಕಲೆ: ಕಬ್ಬಿಣದ ಸರಪಣಿ; ಪಕ್ಕ: ಹತ್ತಿರ, ಸಮೀಪ; ಘಂಟೆ: ಘಣಘಣ ಎಂದು ಶಬ್ದ ಮಾಡುವ ಸಾಧನ; ಚಾರು: ಸುಂದರ; ಚಮರ: ಚಮರ ಮೃಗದ ಬಾಲದ ಕೂದಲಿನಿಂದ ತಯಾರಿಸಿದ ಕುಂಚ, ಚಾಮರ; ಕೊಡತಿ: ಕಬ್ಬಿಣದಿಂದ ಅಥಾವಾ ಮರದಿಂದ ಮಾಡಿದ ಸುಮಾರು ಒಂದು ಅಡಿ ಉದ್ದವಿರುವ ಸಲಕರಣೆ; ಕೂರಂಕುಶ: ಚೂಪಾದ ಅಂಕುಶ; ಬಿರುದರು: ಗೌರವ ಸೂಚಕ ಹೆಸರುಗಳನ್ನು ಪಡೆದವರು, ವೀರರು; ಹೊದ್ದು: ಹೊಂದು, ಸೇರು; ಗಜ: ಆನೆ; ದೂಹತ್ತಿ: ಎರಡು ಕಡೆಯೂ ಚೂಪಾದ ಕತ್ತಿ; ಗುಂಡು: ಗುಂಡುಕಲ್ಲು,ತುಪಾಕಿಯ ಗೋಲಿ; ತೋರು: ಕಾಣಿಸು; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ; ತೊಟ್ಟು: ಧರಿಸು; ವಾರಣ: ಆನೆ; ಮೋಹರ: ಸೈನ್ಯ, ದಂಡು; ನೂಕು: ತಳ್ಳು; ಉಭಯ: ಎರಡು; ಸೇನೆ: ಸೈನ್ಯ;

ಪದವಿಂಗಡಣೆ:
ಬಾರ +ಸಂಕಲೆ +ಪಕ್ಕ +ಘಂಟೆಯ
ಚಾರು +ಚಮರದ +ಕೊಡತಿಗಳ +ಕೈ
ಹಾರೆ +ಕೂರಂಕುಶದ+ ಬಿರುದರು +ಹೊದ್ದಿದರು +ಗಜವ
ಬಾರ +ದೂಹತ್ತಿಗಳ+ ಗುಂಡನು
ತೋರ +ಲೌಡಿಯ +ತೊಟ್ಟು +ಕೈಯಲಿ
ವಾರಣದ +ಮೋಹರವ+ ನೂಕಿದರ್+ಉಭಯ+ಸೇನೆಯಲಿ

ಅಚ್ಚರಿ:
(೧) ಗಜ, ವಾರಣ – ಸಮನಾರ್ಥಕ ಪದಗಳು
(೨) ಆನೆಗಳನ್ನು ಸಿಂಗರಿಸಲು ಉಪಯೋಗಿಸುವ ವಸ್ತು – ಸಂಕಲೆ, ಘಂಟೆ, ಚಮರ, ಕೊಡತಿ, ಕೂರಂಕುಶ

ಪದ್ಯ ೫೨: ಕುದುರೆಗಳನ್ನು ಹೇಗೆ ಅಲಂಕರಿಸಲಾಯಿತು?

ಹಳದಿ ಪಾರಿಯ ಪಚ್ಚೆ ಜೋನೆಗ
ಪಳಿ ಸುವರ್ಣಾವಳಿಯ ಸಂಧ್ಯಾ
ವಳಿಯುದಯರಾಗದಲಿ ರಚಿಸಿದ ಹಕ್ಕರಿಕ್ಕೆಗಳ
ಕೆಲಬಲದ ಕುಣಿಕೆಗಳ ರಚಿಸಿದ
ರುಲಿವ ಘಂಟೆಯ ಮೊಗದ ಕನ್ನಡಿ
ಗಳ ವಿಲಾಸದಲಂದಲಂಕರಿಸಿದರು ತೇಜಿಗಳ (ಭೀಷ್ಮ ಪರ್ವ, ೪ ಸಂಧಿ, ೫೨ ಪದ್ಯ)

ತಾತ್ಪರ್ಯ:
ಕುದುರೆಗೆ ಹಳದಿ, ಪಚ್ಚೆ, ಯವನ ದೇಶದ ಬಟ್ಟೆಯ ಬಣ್ಣ, ಬೆಳಗು ಬೈಗಿನ ಪ್ರಭೆಯ ಬಣ್ಣದ ಕವಚಗಳನ್ನು ಕಟ್ಟಿದರು. ಪಕ್ಕದ ಹಗ್ಗಗಳ ಕುಣಿಕೆಗಳಲ್ಲಿ ಗಂಟೆಗಳನ್ನು ಕಟ್ಟಿದರು. ಹಣೆಯ ಮೇಲೆ ಕನ್ನಡಿಗಳನ್ನು ಕಟ್ಟಿ, ಕುದುರೆಗಳನ್ನಲಂಕರಿಸಿದರು.

ಅರ್ಥ:
ಜೋನೆಗ: ಹಸಿರು ಬಣ್ಣದ ಬಟ್ಟೆ; ಪಳಿ: ಆರೋಪ, ನಿಂದೆ; ಸುವರ್ಣ: ಚಿನ್ನ, ಬಂಗಾರ; ಆವಳಿ: ಗುಂಪು, ಸಾಲು; ಸಂಧ್ಯೆ: ಸಂಜೆ, ಬೈಗು ; ಉದಯ: ಹುಟ್ಟು; ಉದಯರಾಗ: ಬೆಳಗಿನ ಜಾವದ ಬಣ್ಣ; ರಚಿಸು: ನಿರ್ಮಿಸು; ಹಕ್ಕರಿಕ್ಕೆ: ಕುದುರೆಯ ಜೀನು, ಪಕ್ಕರೆ; ಕೆಲಬಲ: ಅಕ್ಕಪಕ್ಕ, ಎಡಬಲ; ಕುಣಿಕೆ: ಹಗ್ಗದ ತುದಿಯಲ್ಲಿ ಹಾಕಿದ ಗಂಟು; ಘಂಟೆ: ಘಣಘಣ ಎಂದು ಶಬ್ದ ಮಾಡುವ ಸಾಧನ; ಮೊಗ: ಮುಖ; ಕನ್ನಡಿ: ಮುಕುರ; ವಿಲಾಸ: ಚೆಂದ; ಅಲಂಕಾರ: ಚೆಲುವು; ತೇಜಿ: ಕುದುರೆ; ಉಲಿ: ಧ್ವನಿ;

ಪದವಿಂಗಡಣೆ:
ಹಳದಿ +ಪಾರಿಯ +ಪಚ್ಚೆ +ಜೋನೆಗ
ಪಳಿ +ಸುವರ್ಣಾವಳಿಯ+ ಸಂಧ್ಯಾ
ವಳಿ+ಉದಯರಾಗದಲಿ+ ರಚಿಸಿದ +ಹಕ್ಕರಿಕ್ಕೆಗಳ
ಕೆಲಬಲದ+ ಕುಣಿಕೆಗಳ+ ರಚಿಸಿದರ್
ಉಲಿವ+ ಘಂಟೆಯ +ಮೊಗದ +ಕನ್ನಡಿ
ಗಳ +ವಿಲಾಸದಲಂದ್+ಅಲಂಕರಿಸಿದರು+ ತೇಜಿಗಳ

ಅಚ್ಚರಿ:
(೧) ಬಣ್ಣಗಳ ವರ್ಣನೆ – ಹಳದಿ, ಪಾರಿ, ಪಚ್ಚೆ ಜೋನೆಗ, ಪಳಿ, ಸುವರ್ಣ, ಸಂಧ್ಯಾವಳಿಯುದ,