ಪದ್ಯ ೬೩: ಪಾಂಡವರ ಆನಂದವು ಹೇಗಿತ್ತು?

ನೃಪನ ಮುದವನು ಭೀಮಸೇನನ
ವಿಪುಳ ಸಂತೋಷವನು ನಕುಲನ
ಚಪಳ ಮದವನು ಪುಳಕವನು ಸಹದೇವನವಯವದ
ದ್ರುಪದಸುತೆಯುತ್ಸವವ ಮುನಿಜನ
ದಪಗತ ಗ್ಲಾನಿಯನು ಪರಿಜನ
ದುಪಚಿತಾನಂದವನು ಬಣ್ಣಿಸಲರಿಯೆ ನಾನೆಂದ (ಅರಣ್ಯ ಪರ್ವ, ೧೩ ಸಂಧಿ, ೬೩ ಪದ್ಯ)

ತಾತ್ಪರ್ಯ:
ಧರ್ಮರಾಯನ ಸಂತೋಷ, ಭೀಮನ ಅತಿಶಯ ಮುದ, ನಕುಲನ ಉಬ್ಬು, ಸಹದೇವನ ರೋಮಾಂಚನ, ದ್ರೌಪದಿಯ ಮನಸ್ಸಿನ ಉತ್ಸವ, ಮುನಿಗಳು ಚಿಂತೆಯನ್ನು ಬಿಟ್ಟು ಸಮಚಿತ್ತವನ್ನು ಪಡೆದುದು, ಪರಿಜನರ ಆನಂದಗಳು ಇವನ್ನು ನಾನು ವರ್ಣಿಸಲಾರೆ.

ಅರ್ಥ:
ನೃಪ: ರಾಜ; ಮುದ: ಸಂತಸ; ವಿಪುಳ: ಬಹಳ, ಹೆಚ್ಚು; ಚಪಲ: ಚುರುಕಾದ; ಮದ: ಸೊಕ್ಕು, ಗರ್ವ; ಪುಳಕ: ಮೈನವಿರೇಳುವಿಕೆ; ಅವಯವ: ಅಂಗ; ಸುತೆ: ಮಗಳು; ಉತ್ಸವ: ಸಂಭ್ರಮ; ಮುನಿ: ಋಷಿ; ಪರಿಜನ: ಸಂಬಂಧಿಕರು; ಅಪಗತ: ದೂರ ಸರಿದ; ಗ್ಲಾನಿ: ಬಳಲಿಕೆ, ದಣಿವು; ಉಪಚಿತ: ಯೋಗ್ಯವಾದ; ಬಣ್ಣಿಸು: ವರ್ಣಿಸು; ಅರಿ: ತಿಳಿ;

ಪದವಿಂಗಡಣೆ:
ನೃಪನ +ಮುದವನು +ಭೀಮಸೇನನ
ವಿಪುಳ +ಸಂತೋಷವನು +ನಕುಲನ
ಚಪಳ +ಮದವನು +ಪುಳಕವನು +ಸಹದೇವನ್+ಅವಯವದ
ದ್ರುಪದಸುತೆ+ಉತ್ಸವವ +ಮುನಿಜನದ್
ಅಪಗತ+ ಗ್ಲಾನಿಯನು +ಪರಿಜನದ್
ಉಪಚಿತ್+ಆನಂದವನು +ಬಣ್ಣಿಸಲರಿಯೆ +ನಾನೆಂದ

ಅಚ್ಚರಿ:
(೧) ಚಪಳ, ವಿಪುಳ – ಪ್ರಾಸ ಪದಗಳು
(೨) ಮುದ, ಸಂತೋಷ – ಸಮನಾರ್ಥಕ ಪದ

ಪದ್ಯ ೨೧: ಅರ್ಜುನನು ಏಕೆ ಧೈರ್ಯ ಕಳೆದುಕೊಂಡನು?

ಏನನೆಂಬೆನು ಜೀಯ ಕರ್ಣಂ
ಗೇನಹನೊ ಫಲುಗುಣನು ಬಳಿಕಾ
ದಾನವಾರಿಯ ನುಡಿಯ ಕೇಳಿದಉ ಕೇಳಿದಾಕ್ಷಣಕೆ
ಗ್ಲಾನಿಯಲಿ ಮುಳುಗಿದನು ಮನದಭಿ
ಮಾನ ಸರ್ಪನ ಕೆಡಹಿ ಧೈರ್ಯನಿ
ಧಾನವನು ಕೈಸೂರೆಗೊಂಡುದು ಶೋಕವರ್ಜುನನ (ಕರ್ಣ ಪರ್ವ, ೨೬ ಸಂಧಿ, ೨೧ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನಿಗೆ ವಿವರಿಸುತ್ತಾ, ಒಡೆಯ ನಾನು ಏನೆಂದು ಹೇಳಲಿ, ಅರ್ಜುನನು ಕರ್ಣನಿಗೆ ಏನಾಗಬೇಕೋ ಏನೋ? ಶ್ರೀಕೃಷ್ಣನ ಮಾತನ್ನು ಕೇಳಿ, ಅವನು ಚಿಂತೆಯಿಂದ ಜಡನಾದನು. ಅವನ ಶೋಕವು ಸ್ವಾಮಿಭಾನವೆಂಬ ಸರ್ಪವನ್ನು ಕೊಂದು ಧೈರ್ಯನಿಧಿಯನ್ನು ಅಪಹರಿಸಿತು.

ಅರ್ಥ:
ಜೀಯ: ಒಡೆಯ; ಏನಹು: ಏನನ್ನೆಲಿ; ಬಳಿಕ: ನಂತರ; ದಾನವಾರಿ: ರಾಕ್ಷಸರ ವೈರಿ; ನುಡಿ: ಮಾತು; ಕೇಳು: ಆಲಿಸು; ಗ್ಲಾನಿ: ಬಳಲಿಕೆ, ದಣಿವು; ಮುಳುಗು: ಮರೆಯಾಗು, ಹುದುಗಿರು; ಮನ: ಮನಸ್ಸು; ಅಭಿಮಾನ: ಹೆಮ್ಮೆ, ಅಹಂಕಾರ; ಸರ್ಪ: ಹಾವು; ಕೆಡಹು: ಹೊಡೆ; ಧೈರ್ಯ: ಎದೆಗಾರಿಕೆ, ಕೆಚ್ಚು, ದಿಟ್ಟತನ; ನಿಧಾನ: ವಿಳಂಬ, ಸಾವಕಾಶ; ಸೂರೆ: ಕೊಳ್ಳೆ, ಲೂಟಿ; ಶೋಕ: ದುಃಖ;

ಪದವಿಂಗಡಣೆ:
ಏನನೆಂಬೆನು +ಜೀಯ +ಕರ್ಣಂಗ್
ಏನಹನೊ+ ಫಲುಗುಣನು +ಬಳಿಕ+ಆ
ದಾನವಾರಿಯ +ನುಡಿಯ +ಕೇಳಿದು+ ಕೇಳಿದಾಕ್ಷಣಕೆ
ಗ್ಲಾನಿಯಲಿ +ಮುಳುಗಿದನು +ಮನದ್+ಅಭಿ
ಮಾನ +ಸರ್ಪನ +ಕೆಡಹಿ +ಧೈರ್ಯ+ನಿ
ಧಾನವನು +ಕೈಸೂರೆಗೊಂಡುದು +ಶೋಕವ್+ಅರ್ಜುನನ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗ್ಲಾನಿಯಲಿ ಮುಳುಗಿದನು ಮನದಭಿಮಾನ ಸರ್ಪನ ಕೆಡಹಿ ಧೈರ್ಯನಿಧಾನವನು ಕೈಸೂರೆಗೊಂಡುದು ಶೋಕವರ್ಜುನನ

ಪದ್ಯ ೧೮: ಸರ್ಪಾಸ್ತ್ರವು ಹೇಗೆ ಮುನ್ನುಗ್ಗಿತು?

ಏನಹೇಳುವೆ ಬಳಿಕ ಭುವನ
ಗ್ಲಾನಿಯನು ತೆಗೆದೊಡಿದರು ವೈ
ಮಾನಿಕರು ವೆಂಠಣಿಸಿತುರಿಯಪ್ಪಳಿಸಿತಂಬರವ
ಕಾನಿಡುವ ಕಬ್ಬೊಗೆಯ ಚೂರಿಸು
ವಾನನದ ಕಟವಾಯ ಲೋಳೆಯ
ಜೇನಹುಟ್ಟಿಯ ಬಸಿವ ವಿಷದಲಿ ಬಂದುದುರಗಾಸ್ತ್ರ (ಕರ್ಣ ಪರ್ವ, ೨೫ ಸಂಧಿ, ೧೮ ಪದ್ಯ)

ತಾತ್ಪರ್ಯ:
ಕರ್ಣನು ಸರ್ಪಾಸ್ತ್ರವನ್ನು ಬಿಟ್ಟ ನಂತರ ಲೋಕದ ಕ್ಷೋಭೆಯನ್ನು ಏನೆಂದು ಹೇಳಲಿ? ದೇವತೆಗಳು ಆಕಾಶದಲ್ಲಿ ದೂರಕ್ಕೋಡಿದರು, ಅಸ್ತ್ರಾ ಉರಿಯು ಎಲ್ಲಾ ದಿಕ್ಕುಗಳನ್ನ್ನು ಆವರಿಸಿತು, ಹೇಡೆಯನ್ನು ಚಾಚಿ ಜೇನಿನ ಗೂಡಿನಿಂದ ಜಿನುಗುವ ಜೇನುತುಪ್ಪದಂತೆ ಸರ್ಪಾಸ್ತ್ರವು ವಿಷವನ್ನು ಸುರಿಸುತ್ತಾ ಮುನ್ನುಗ್ಗಿತು.

ಅರ್ಥ:
ಬಳಿಕ: ನಂತರ; ಭುವನ: ಜಗತ್ತು; ಗ್ಲಾನಿ: ಅವನತಿ, ನಾಶ; ಓಡು: ಪಲಾಯನ; ವೈಮಾನಿಕ: ದೇವತೆ; ವಂಠಣ: ಮುತ್ತಿಗೆಹಾಕು, ಸುತ್ತುವರಿ; ಉರಿ: ಬೆಂಕಿಯ ಕಿಡಿ; ಅಪ್ಪಳಿಸು: ತಟ್ಟು, ತಾಗು; ಅಂಬರ: ಆಗಸ; ಕಾನಿಡು: ದಟ್ಟವಾಗು, ಸಾಂದ್ರವಾಗು; ಕಬ್ಬೊಗೆ: ಕರಿಯಾದ ಹೊಗೆ; ಚೂರಿಸು: ಕತ್ತರಿಸು; ಆನನ: ಮುಖ; ಕಟವಾಯಿ: ಬಾಯಿ ಕೊನೆ; ಲೋಳೆ: ಅ೦ಟುಅ೦ಟಾಗಿರುವ ದ್ರವ್ಯ; ಜೇನು: ದುಂಬಿ; ಹುಟ್ಟಿ: ಜೇನಿನ ಗೂಡು; ಬಸಿ:ಜಿನುಗು ; ವಿಷ: ನಂಜು; ಉರಗಾಸ್ತ್ರ: ಸರ್ಪಾಸ್ತ್ರ;

ಪದವಿಂಗಡಣೆ:
ಏನಹೇಳುವೆ+ ಬಳಿಕ+ ಭುವನ
ಗ್ಲಾನಿಯನು +ತೆಗೆದ್+ಓಡಿದರು +ವೈ
ಮಾನಿಕರು+ ವೆಂಠಣಿಸಿತ್+ಉರಿ +ಅಪ್ಪಳಿಸಿತ್+ಅಂಬರವ
ಕಾನಿಡುವ +ಕಬ್ಬೊಗೆಯ +ಚೂರಿಸುವ್
ಆನನದ +ಕಟವಾಯ +ಲೋಳೆಯ
ಜೇನಹುಟ್ಟಿಯ +ಬಸಿವ+ ವಿಷದಲಿ+ ಬಂದುದ್+ಉರಗಾಸ್ತ್ರ

ಅಚ್ಚರಿ:
(೧) ವಿಷವು ಹೊರಹೊಮ್ಮುತ್ತಿತ್ತು ಎಂದು ಹೇಳಲು ಜೇನಿನ ಉಪಮಾನವನ್ನು ಬಳಸಿದ ಪರಿ
(೨) ಉಪಮಾನದ ಪ್ರಯೋಗ – ಕಾನಿಡುವ ಕಬ್ಬೊಗೆಯ ಚೂರಿಸುವಾನನದ ಕಟವಾಯ ಲೋಳೆಯ ಜೇನಹುಟ್ಟಿಯ ಬಸಿವ ವಿಷದಲಿ ಬಂದುದುರಗಾಸ್ತ್ರ
(೩) ದೇವತೆಗಳನ್ನು ವೈಮಾನಿಕರು ಎಂದು ಕರೆದಿರುವುದು

ಪದ್ಯ ೧೩: ಕೃಷ್ಣನು ಕರ್ಣನಿಗೆ ಏನು ಹೇಳಿದ?

ಏನು ಹೇಳೈ ಕರ್ಣ ಚಿತ್ತ
ಗ್ಲಾನಿಯಾವುದು ಮನಕೆ ಕುಂತೀ
ಸೂನುಗಳ ಬೆಸಕೈಸಿ ಕೊಂಬುದು ಸೇರದೇ ನಿನಗೆ
ಹಾನಿಯಿಲ್ಲೆನ್ನಾಣೆ ನುಡಿ ದು
ಮ್ಮಾನವೇತಕೆ ಮರುಳುತನ ಬೇ
ಡಾನು ನಿನ್ನಪದೆಸೆಯ ಬಯಸುವನಲ್ಲ ಕೇಳೆಂದ (ಉದ್ಯೋಗ ಪರ್ವ, ೧೧ ಸಂಧಿ, ೧೩ ಪದ್ಯ)

ತಾತ್ಪರ್ಯ:
ಕರ್ಣನು ಚಿಂತಾಕ್ರಾಂತನಾಗಿರುವುದನ್ನು ಕಂಡು ಕೃಷ್ಣನು, ಕರ್ಣ ಚಿತ್ತದಲ್ಲಿ ಏನು ದುಗುಡವಾಗಿದೆ ಏಕೆ ಸುಮ್ಮನೆ ಮೌನವಾಗಿದ್ದೀಯ? ಪಾಂಡವರನ್ನು ಓಲೈಸುವುದು ನಿನಗೆ ಇಷ್ಟವಲ್ಲವೇ? ಬೇಡವಾದರೆ ಏನೂ ಹಾನಿಯಿಲ್ಲ, ದುಃಖವೇಕೆ? ಮರುಳನಂತೆ ನೀನು ವರ್ತಿಸಬೇಡ, ನಿನ್ನ ಅಪದೆಸೆಯನ್ನು ನಾನು ಬಯಸುವವನಲ್ಲ ಎಂದು ಕೃಷ್ಣನು ಕರ್ಣನಿಗೆ ಹೇಳಿದನು.

ಅರ್ಥ:
ಹೇಳು: ಮಾತಾಡು; ಚಿತ್ತ: ಮನಸ್ಸು; ಗ್ಲಾನಿ:ಬಳಲಿಕೆ, ದಣಿವು, ನೋವು; ಮನ: ಮನಸ್ಸು; ಸೂನು: ಮಕ್ಕಳು; ಬೆಸ:ವಿಚಾರಿಸುವುದು; ಸೇರು: ಕೂಡು; ಹಾನಿ: ನಷ್ಟ; ಆಣೆ: ಪ್ರಮಾಣ; ನುಡಿ: ಮಾತು; ದುಮ್ಮಾನ: ದುಗುಡ, ದುಃಖ; ಮರುಳು:ಬುದ್ಧಿಭ್ರಮೆ, ಹುಚ್ಚು; ಬೇಡ: ಸಲ್ಲದು, ಕೂಡದು; ಅಪದೆಸೆ: ದುರ್ದಶೆ, ಕೆಟ್ಟ ಯೋಗ; ಬಯಸು: ಇಷ್ಟಪಡು; ಕೇಳು: ಆಲಿಸು;

ಪದವಿಂಗಡಣೆ:
ಏನು +ಹೇಳೈ +ಕರ್ಣ +ಚಿತ್ತ
ಗ್ಲಾನಿಯಾವುದು +ಮನಕೆ+ ಕುಂತೀ
ಸೂನುಗಳ +ಬೆಸಕೈಸಿ+ ಕೊಂಬುದು +ಸೇರದೇ +ನಿನಗೆ
ಹಾನಿಯಿಲ್+ಎನ್ನಾಣೆ +ನುಡಿ +ದು
ಮ್ಮಾನವೇತಕೆ +ಮರುಳುತನ +ಬೇಡ್
ಆನು +ನಿನ್+ಅಪದೆಸೆಯ +ಬಯಸುವನಲ್ಲ+ ಕೇಳೆಂದ

ಅಚ್ಚರಿ:
(೧) ಏನು, ಆನು – ಪ್ರಾಸ ಪದಗಳ ಬಳಕೆ
(೨) ಕರ್ಣನನ್ನು ಉತ್ತೇಜಿಸುವ ಮಾತು – ಹಾನಿಯಿಲ್ಲೆನ್ನಾಣೆ, ನಿನ್ನಪದೆಸೆಯ ಬಯಸುವವನಲ್ಲ