ಪದ್ಯ ೪೮: ಧರ್ಮಜನ ಶಕುನಿಗೆ ಏನು ಹೇಳಿದ?

ಲಲಿತರಾಗದ ರಸದ ಗೋರಿಯ
ಬಲುಗುಡಿಯ ಮೃಗದಂತೆ ವಿಷಯದ
ಕುಳಿಯೊಳಗೆ ಕಾಲ್ದೊಡಕಿ ಬಿದ್ದ ಸುಯೋಗಿಯಂದದಲಿ
ಕಲಿತ ವಿಕಳಾವೇಶದಲಿ ವಿ
ಹ್ವಲಿತ ವಿವಿಧ ಶ್ರೋತ್ರನಯ ಸಂ
ಚಲಿತನೆಂದನು ಶಕುನಿ ನೀನುಡಿಯೊಡ್ಡವೇನೆಂದು (ಸಭಾ ಪರ್ವ, ೧೭ ಸಂಧಿ, ೪೮ ಪದ್ಯ)

ತಾತ್ಪರ್ಯ:
ಇಂಪಾದ ರಾಗದ ಆಕರ್ಷಣೆಗೆ ಸಿಕ್ಕು ಬಲೆಗೆ ಬಿದ್ದ ಜಿಂಕೆಯಂತೆ, ವಿಷಯಗಳ ಗುಂಡಿಯೊಳಗೆ ಎಡವಿ ಬಿದ್ದ ಯೋಗಿನಿಯಂತೆ, ಧರ್ಮಜನು ವಿಚಾರವಿಲ್ಲದ ಆವೇಶದಿಂದ ಹಲವು ಮಾತುಗಳ ಸವಿಗೆ, ಆವೇಶಕ್ಕೆ ಸೋತು, ಶಕುನಿ ಏನು ಪಡ ನೀನೇ ಹೇಳು ಎಂದನು.

ಅರ್ಥ:
ಲಲಿತ: ಚೆಲುವು; ರಾಗ: ಸಂಗೀತದಲ್ಲಿ ಹೊಂದಿಸಿದ ಸ್ವರಗಳ ಮೇಳೈಕೆ; ರಸ: ಸಾರ; ಗೋರಿ: ಆಕರ್ಷಣೆ, ಸೆಳೆತ; ಬಲುಗುಡಿ: ದೊಡ್ಡಬಾವುಟ; ಮೃಗ: ಜಿಂಕೆ; ವಿಷಯ: ಭೋಗಾಭಿಲಾಷೆ; ಕುಳಿ:ಗುಂಡಿ; ಕಾಲ್ದೊಡಕಿ: ಎಡವಿ ಬೀಳು; ಬಿದ್ದ: ಕುಸಿದ; ಯೋಗಿ: ಋಷಿ; ಕಲಿತ: ತಿಳಿದ, ಅಭ್ಯಾಸಮಾಡಿದ; ವಿಕಳ: ಭ್ರಮೆ, ಭ್ರಾಂತಿ, ಚಂಚಲ; ಆವೇಶ: ರೋಷ; ವಿಹ್ವಲ: ಹತಾಶ; ವಿವಿಧ: ಹಲವಾರು; ಶ್ರೋತ್ರ: ಕೇಳು; ನಯ: ನುಣುಪು, ಮೃದುತ್ವ; ಸಂಚಲ: ಚಲನೆ ಚಾಂಚಲ್ಯ; ನುಡಿ: ಮಾತಾಡು; ಒಡ್ಡು: ಜೂಜಿನಲ್ಲಿ ಒಡ್ಡುವ ಹಣ;

ಪದವಿಂಗಡಣೆ:
ಲಲಿತರಾಗದ +ರಸದ +ಗೋರಿಯ
ಬಲುಗುಡಿಯ +ಮೃಗದಂತೆ +ವಿಷಯದ
ಕುಳಿಯೊಳಗೆ+ ಕಾಲ್ದೊಡಕಿ+ ಬಿದ್ದ+ ಸುಯೋಗಿಯಂದದಲಿ
ಕಲಿತ +ವಿಕಳ+ಆವೇಶದಲಿ +ವಿ
ಹ್ವಲಿತ +ವಿವಿಧ +ಶ್ರೋತ್ರನಯ +ಸಂ
ಚಲಿತನೆಂದನು +ಶಕುನಿ+ ನೀ+ನುಡಿ+ಒಡ್ಡವೇನೆಂದು

ಅಚ್ಚರಿ:
(೧) ಉಪಮಾನದ ಪ್ರಯೋಗ – ಲಲಿತರಾಗದ ರಸದ ಗೋರಿಯ ಬಲುಗುಡಿಯ ಮೃಗದಂತೆ; ವಿಷಯದ ಕುಳಿಯೊಳಗೆ ಕಾಲ್ದೊಡಕಿ ಬಿದ್ದ ಸುಯೋಗಿಯಂದದಲಿ

ಪದ್ಯ ೬೮: ಧೃತರಾಷ್ಟ್ರನೇಕೆ ಮರುಗಿದನು?

ಅವರು ಕಪಟವನರಿಯರೀತನ
ಹವಣ ನೀನೇ ಕಂಡೆ ಕರೆಸಿದ
ಡವರು ನಿಲ್ಲರು ಗೋರಿಯಲಿ ಬಳಿಸಂದ ಮೃಗದಂತೆ
ನವಗೆ ಬಹುದಪಕೀರ್ತಿಯೀಗಿ
ನ್ನವನ ಕುಹಕವ ಲೋಕವರಿಯದು
ಶಿವ ಶಿವಾಯೆಂದಳಲಿ ಮರುಗಿದನಂದು ಧೃತರಾಷ್ಟ್ರ (ಸಭಾ ಪರ್ವ, ೧೩ ಸಂಧಿ, ೬೮ ಪದ್ಯ)

ತಾತ್ಪರ್ಯ:
ಗಾಂಧಾರಿಗೆ ತನ್ನ ಮನಸ್ಸಿನ ಮಾತುಗಳನ್ನು ಹೇಳುತ್ತಾ, ಪಾಂಡವರು ಕಪಟವನ್ನರಿಯದವರು, ಇವನ ಯೋಗ್ಯತೆಯನ್ನು ನೀನೇ ನೋಡಿದೆ, ನಾವು ಕರೆಸಿದರೆ, ಬೇಟೆಗಾರನ ಸಂಗೀತಕ್ಕೆ ಮರುಳಾಗಿ ಬರುವ ಜಿಂಕೆಯಂತೆ ಬಂದು ಬಿಡುತ್ತಾರೆ. ಮಗನ ಕುಹಕವು ಲೋಕಕ್ಕೆ ತಿಳಿಯದು. ಪಾಂಡವರನ್ನು ಕರೆಸಿದರೆ ನಮಗೆ ಅಪಖ್ಯಾತಿ ಬರುತ್ತದೆ, ಶಿವ ಶಿವಾ ಏನು ಗತಿ ಎಂದು ಧೃತರಾಷ್ಟ್ರ ಚಿಂತಿಸಿದ.

ಅರ್ಥ:
ಕಪಟ: ಮೋಸ; ಅರಿ: ತಿಳಿ; ಹವಣ: ಉಪಾಯ; ಕಂಡೆ: ನೋಡಿದೆ; ಕರೆಸು: ಬರೆಮಾಡು; ನಿಲ್ಲು: ತಡೆ, ನಿಂತುಕೊ; ಗೋರಿ: ಒಂದು ಬಗೆಯ ಬೇಟೆ, ಆಕರ್ಷಣೆ; ಬಳಿ: ಹತ್ತಿರ; ಮೃಗ: ಜಿಂಕೆ; ನವಗೆ: ನಮಗೆ; ಬಹು: ತುಂಬ; ಅಪಕೀರ್ತಿ: ಅಗೌರವ, ಅಪಖ್ಯಾತಿ; ಕುಹಕ: ಮೋಸ; ಲೋಕ: ಜಗತ್ತು; ಅರಿ: ತಿಳಿ; ಅಳಲು: ದುಃಖ; ಮರುಗು:ತಳಮಳ, ಸಂಕಟ;

ಪದವಿಂಗಡಣೆ:
ಅವರು +ಕಪಟವನ್+ಅರಿಯರ್+ಈತನ
ಹವಣ+ ನೀನೇ +ಕಂಡೆ +ಕರೆಸಿದಡ್
ಅವರು+ ನಿಲ್ಲರು+ ಗೋರಿಯಲಿ+ ಬಳಿಸಂದ +ಮೃಗದಂತೆ
ನವಗೆ+ ಬಹುದ್+ಅಪಕೀರ್ತಿಯೀಗ್
ಇನ್ನವನ+ ಕುಹಕವ+ ಲೋಕವರಿಯದು
ಶಿವ +ಶಿವಾ+ಎಂದ್+ಅಳಲಿ +ಮರುಗಿದನ್+ಅಂದು +ಧೃತರಾಷ್ಟ್ರ

ಅಚ್ಚರಿ:
(೧) ಉಪಮಾನದ ಪ್ರಯೋಗ – ಅವರು ನಿಲ್ಲರು ಗೋರಿಯಲಿ ಬಳಿಸಂದ ಮೃಗದಂತೆ