ಪದ್ಯ ೮: ಅಭಿಮನ್ಯುವು ಆರು ರಥಿಕರನ್ನು ಹೇಗೆ ಹಂಗಿಸಿದನು?

ಶಿಶುತನದ ಸಾಮರ್ಥ್ಯ ಸಾಕಿ
ನ್ನೆಸದಿರೆಲವೋ ಮರಳು ಮರಳೆಂ
ದಸಮಬಲರೈದಿದರು ಷಡುರಥರೊಂದು ಮುಖವಾಗಿ
ಎಸುಗೆ ನಿಮಗೆಂದಾಯ್ತು ನಿದ್ರೆಯ
ಮುಸುಕಿನಲಿ ಗೋಗ್ರಹಣದಲಿ ಜೀ
ವಿಸಿದ ಜಾಣರು ನೀವೆನುತ್ತಿದಿರಾದನಭಿಮನ್ಯು (ದ್ರೋಣ ಪರ್ವ, ೬ ಸಂಧಿ, ೮ ಪದ್ಯ)

ತಾತ್ಪರ್ಯ:
ಎಲೋ ಶಿಶುವೇ ನಿನ್ನ ಹುಡುಗತನದ ಸಾಮರ್ಥ್ಯ ಸಾಕು, ಇನ್ನು ಬಾಣಗಳನ್ನು ಬಿಡುವುದನ್ನು ನಿಲ್ಲಿಸು, ಹಿಂದಿರುಗು, ಎಂದು ಮೂದಲಿಸುತ್ತಾ ಆರು ಜನ ರಥಿಕರೂ ಅಭಿಮನ್ಯುವಿನ ಮೇಲೆ ಬಿದ್ದರು. ಅಭಿಮನ್ಯುವು ನಿಮಗೂ ಬಾಣ ಪ್ರಯೋಗ ಗೊತ್ತಿದೆಯೇ? ಗೋಗ್ರಹಣದಲ್ಲಿ ಸಮ್ಮೋಹನಾಸ್ತ್ರದ ನಿದ್ದೆಯಿಂದ ಮಲಗಿ ಪ್ರಾಣವುಳಿಸಿಕೊಂಡ ಜಾಣರು ನೀವಲ್ಲವೇ ಎನ್ನುತ್ತಾ ಆವರಿಗಿದಿರಾದನು.

ಅರ್ಥ:
ಶಿಶು: ಬಾಲಕ; ಸಾಮರ್ಥ್ಯ: ಶಕ್ತಿ; ಸಾಕು: ನಿಲ್ಲು; ಎಸು: ಬಾಣ ಪ್ರಯೋಗ ಮಾಡು; ಮರಳು: ಹಿಂದಕ್ಕೆ ಬರು, ಹಿಂತಿರುಗು; ಅಸಮ: ಸಮವಲ್ಲದ; ಐದು: ಬಂದು ಸೇರು; ಷಡುರಥ: ಆರು ರಥ; ಮುಖ: ಆನನ; ನಿದ್ರೆ: ಶಯನ; ಮುಸುಕು: ಹೊದಿಕೆ; ಯೋನಿ; ಗೋಗ್ರಹಣ: ಗೋವುಗಳನ್ನು ಸೆರೆಹಿಡಿಯುವುದು; ಜೀವಿಸು: ಬದುಕು; ಜಾಣ: ಬುದ್ಧಿವಂತ; ಇದಿರು: ಎದುರು;

ಪದವಿಂಗಡಣೆ:
ಶಿಶುತನದ +ಸಾಮರ್ಥ್ಯ +ಸಾಕಿನ್
ಎಸದಿರ್+ಎಲವೋ +ಮರಳು +ಮರಳೆಂದ್
ಅಸಮ+ಬಲರ್+ಐದಿದರು +ಷಡುರಥರೊಂದು +ಮುಖವಾಗಿ
ಎಸುಗೆ +ನಿಮಗೆಂದಾಯ್ತು +ನಿದ್ರೆಯ
ಮುಸುಕಿನಲಿ +ಗೋಗ್ರಹಣದಲಿ+ ಜೀ
ವಿಸಿದ +ಜಾಣರು +ನೀವೆನುತ್+ಇದಿರಾದನ್+ಅಭಿಮನ್ಯು

ಅಚ್ಚರಿ:
(೧) ಅಭಿಮನ್ಯುವು ಹಂಗಿಸುವ ಪರಿ – ನಿದ್ರೆಯಮುಸುಕಿನಲಿ ಗೋಗ್ರಹಣದಲಿ ಜೀವಿಸಿದ ಜಾಣರು

ಪದ್ಯ ೩೮: ಅರ್ಜುನನು ತನ್ನ ಬಗ್ಗೆ ಏನು ಹೇಳಿದನು?

ನಾನಲಾ ದ್ರೌಪದಿಯ ಮದುವೆಯೊ
ಳಾ ನರೇಂದ್ರರ ಗೆಲಿದವನು ಬಳಿ
ಕಾ ನಿಳಿಂಪವ್ರಜವ ಮುರಿದುರುಪಿದೆನು ಖಾಂಡವವ
ಏನನೆಂಬೆನು ಸಕಲ ಕೌರವ
ಸೇನೆಯನು ಗೋಗ್ರಹಣದಲಿ ಸಲೆ
ನಾನಲೇ ರಥವೊಂದರಿಂದವೆ ಗೆಲಿದೆ ದಿಟವೆಂದ (ಕರ್ಣ ಪರ್ವ, ೧೭ ಸಂಧಿ, ೩೮ ಪದ್ಯ)

ತಾತ್ಪರ್ಯ:
ನಾನಲ್ಲವೇ ದ್ರೌಪದಿಯನ್ನು ಸ್ವಯಂವರದಲ್ಲಿ ಎಲ್ಲಾ ರಾಜರ ನಡುವೆ ಮತ್ಸ್ಯಯಂತ್ರವನ್ನು ಭೇದಿಸಿ ಗೆದ್ದವನು. ಖಾಂಡವವನ ದಹನಕಾಲದಲ್ಲಿ ಸಮಸ್ತ ದೇವತೆಗಳನ್ನು ಗೆದ್ದು ವನವನ್ನು ಸುಟ್ಟೆ. ಉತ್ತರ ಗೋಗ್ರಹಣದಲ್ಲಿ ನಾನೊಬ್ಬನೇ ಒಂದೇ ರಥದಲ್ಲಿ ಕುಳಿತು ಕೌರವ ಸೇನೆಯನ್ನೆಲ್ಲಾ ಜಯಿಸಿದೆ ಎಂದು ತನ್ನನ್ನು ಹೊಗಳಿಕೊಂಡನು.

ಅರ್ಥ:
ಮದುವೆ: ಕಲ್ಯಾಣ; ನರೇಂದ್ರ: ರಾಜ; ಗೆಲಿದು: ಜಯಗಳಿಸಿ; ಬಳಿಕ: ನಂತರ; ನಿಳಿಂಪ: ದೇವತೆ; ವ್ರಜ: ಗುಂಪು; ಮುರಿ: ಸೀಳು; ಉರುಪು:ಸುಡು; ಸಕಲ: ಎಲ್ಲಾ; ಸೇನೆ: ಸೈನ್ಯ; ಗೋಗ್ರಹಣ: ಗೋವುಗಳನ್ನು ಸೆರೆಹಿಡಿಯುವುದು; ಸಲೆ: ಸಂಪೂರ್ಣವಾಗಿ; ರಥ: ಬಂಡಿ; ದಿಟ: ಸತ್ಯ;

ಪದವಿಂಗಡಣೆ:
ನಾನಲಾ+ ದ್ರೌಪದಿಯ +ಮದುವೆಯೊಳ್
ಆ+ ನರೇಂದ್ರರ +ಗೆಲಿದವನು +ಬಳಿಕ
ಆ +ನಿಳಿಂಪವ್ರಜವ +ಮುರಿದ್+ಉರುಪಿದೆನು +ಖಾಂಡವವ
ಏನನೆಂಬೆನು +ಸಕಲ +ಕೌರವ
ಸೇನೆಯನು +ಗೋಗ್ರಹಣದಲಿ +ಸಲೆ
ನಾನಲೇ +ರಥವ್+ಒಂದರಿಂದವೆ +ಗೆಲಿದೆ +ದಿಟವೆಂದ

ಅಚ್ಚರಿ:
(೧) ಅರ್ಜುನನು ತನ್ನ ಮೂರು ಸಾಧನೆಗಳ ಬಗ್ಗೆ ಹೊಗಳಿಕೊಳ್ಳುವ ಬಗೆ
(೨) ನಾನಲಾ, ನಾನಲೇ – ೧, ೬ ಸಾಲಿನ ಮೊದಲ ಪದ

ಪದ್ಯ ೧೯: ಗೋಗ್ರಹಣದಲ್ಲಿ ಯಾರು ಕುರುಸೈನ್ಯವನ್ನು ತಡೆದಿದ್ದರು?

ಒಂದು ದೆಸೆಯಲಿ ರಾಯನಿಪ್ಪ
ತ್ತೊಂದು ಸಾವಿರ ರಥಸಹಿತುಘೇ
ಯೆಂದು ಬಿಟ್ಟನು ಭೀಮಸೇನನ ರಥದ ಸಮ್ಮುಖಕೆ
ಅಂದು ಗೋಗ್ರಹಣದಲಿ ಫಲಗುಣ
ನಿಂದನನಿಬರಿಗರಸ ಚಿತ್ತೈ
ಸಿಂದು ಸೈರಿಸಿ ನಿಂದನನಿಬರಿಗೊಬ್ಬನೇ ಭೀಮ (ಕರ್ಣ ಪರ್ವ, ೧೫ ಸಂಧಿ, ೧೯ ಪದ್ಯ)

ತಾತ್ಪರ್ಯ:
ಒಂದು ಕಡೆಯಿಂದ ದುರ್ಯೋಧನನು ಇಪ್ಪತ್ತೊಂದು ಸಾವಿರ ರಥಿಕರ ಜೊತೆ ಭೀಮನ ಮೇಲೆ ಉಘೇ ಉಘೇ ಎಂದು ಹೇಳುತ್ತಾ ಆಕ್ರಮಣ ಮಾಡಿದನು. ಈ ಹಿಂದೆ ವಿರಾಟ ರಾಜನ ಮೇಲೆ ಆಕ್ರಮಣ ಮಾಡುವಾಗ ಗೋಗ್ರಹಣದಲ್ಲಿ ಅರ್ಜುನನೊಬ್ಬನೇ ನಮ್ಮನ್ನು ಎದುರಿಸಿದನು, ಇಂದು ಭೀಮನೊಬ್ಬನೇ ಕುರುಸೇನೆಯನ್ನು ಎದುರುನೋಡುತ್ತಿದ್ದಾನೆ ಎಂದು ಸೈನ್ಯದ ರಥಿಕರು ಕುರುರಾಯನಿಗೆ ನುಡಿದನು.

ಅರ್ಥ:
ದೆಸೆ: ದಿಕ್ಕು; ರಾಯ: ರಾಜ; ರಥ: ಬಂಡಿ; ಸಹಿತ: ಜೊತೆ; ಉಘೇ: ಜಯಘೋಷದ ಪದ; ಸಮ್ಮುಖ: ಎದುರು; ಗೋಗ್ರಹಣ: ಗೋವುಗಳನ್ನು ಸರೆಹಿಡಿಯುವುದು; ಫಲುಗುಣ: ಅರ್ಜುನ; ನಿಂದನು: ನಿಲ್ಲಿಸು, ಎದುರು ನಿಲ್ಲು; ಅನಿಬರು: ಅಷ್ಟು ಜನ; ಅರಸ: ರಾಜ; ಚಿತ್ತೈಸು: ಗಮನವಿಟ್ಟು ಕೇಳು; ಇಂದು: ಇವತ್ತು; ಸೈರಿಸು: ತಾಳು;

ಪದವಿಂಗಡಣೆ:
ಒಂದು+ ದೆಸೆಯಲಿ +ರಾಯನ್+ಇಪ್ಪ
ತ್ತೊಂದು +ಸಾವಿರ +ರಥಸಹಿತ+ಉಘೇ
ಯೆಂದು +ಬಿಟ್ಟನು +ಭೀಮಸೇನನ +ರಥದ +ಸಮ್ಮುಖಕೆ
ಅಂದು +ಗೋಗ್ರಹಣದಲಿ+ ಫಲಗುಣನ್
ಇಂದನ್+ಅನಿಬರಿಗ್+ಅರಸ+ ಚಿತ್ತೈಸ್
ಇಂದು +ಸೈರಿಸಿ +ನಿಂದನ್+ಅನಿಬರಿಗ್+ಒಬ್ಬನೇ +ಭೀಮ

ಅಚ್ಚರಿ:
(೧) ಎಂದು, ಒಂದು, ಅಂದು, ಇಂದು – ಪ್ರಾಸ ಪದಗಳು

ಪದ್ಯ ೯: ಅರ್ಜುನನು ದುರ್ಯೋಧನನಿಗೆ ಏನು ಜ್ಞಾಪಿಸಲು ಹೇಳಿದ?

ನೆನೆವುದೆಂದನು ಪಾರ್ಥನಾ ಕಾ
ನನದೊಳಗೆ ಗಂಧರ್ವನೊಳು ಬಂ
ದನುವ ನಾಗೋಗ್ರಹಣದಲಿ ಮಾಡಿದ ಪಲಾಯನವ
ವನಜಮುಖಿಯನು ಬಯಸಿದೊಡೆ ಬಿ
ಲ್ಲಿನಲಿ ಬಡಿವಡೆದುದನು ಕೌರವ
ಜನಪ ಮರೆದಿರಲಾಗದೆಂದರಸಂಗೆ ಹೇಳೆಂದ (ಉದ್ಯೋಗ ಪರ್ವ, ೫ ಸಂಧಿ, ೯ ಪದ್ಯ)

ತಾತ್ಪರ್ಯ:
ಪಾರ್ಥನು ಸಂಜಯನನ್ನು ಉದ್ದೇಶಿಸಿ, ಸಂಜಯ ಕೌರವನಿಗೆ ಹೇಳು, ಗಂಧರ್ವನಿಂದ ಬಂದ ಆಪತ್ತನ್ನು ಮರೆಯಬೇಡ ನೆನಪಿಡು, ಗೋಗ್ರಹಣದಲ್ಲಿ ಓಡಿ ಹೋದುದನ್ನು ನೆನಪಿಡು, ದ್ರೌಪದಿಯ ಸ್ವಯಂವರದಲ್ಲಿ ಬಿಲ್ಲಿನಿಂದ ಹೊಡೆತ ತಿಂದುದನ್ನು ಮರೆಯಬೇಡ ಎಂದು ಅರ್ಜುನನು ದುರ್ಯೋಧನನಿಗೆ ತಿಳಿಸಲು ಸಂಜಯನಿಗೆ ಹೇಳಿದ.

ಅರ್ಥ:
ನೆನೆ: ಜ್ಞಾಪಿಸು; ಪಾರ್ಥ: ಅರ್ಜುನ; ಕಾನನ: ಕಾಡು, ಅರಣ್ಯ; ಗಂಧರ್ವ: ದೇವತೆಗಳ ಪಂಗಡ; ಅನು: ಸ್ಥಿತಿ, ಕ್ರಮ; ಗೋಗ್ರಹಣ: ಗೋವುಗಳನ್ನು ಸೆರೆಹಿಡಿಯುವುದು; ಪಲಾಯನ: ಹಿಂದಿರುಗು; ವನಜಮುಖಿ: ಕಮಲದಂತ ಮುಖವಿರುವವಳು; ಬಯಸು: ಆಸೆ ಪಡು; ಬಿಲ್ಲು: ಧನುಸ್ಸು, ಚಾಪ; ಬಡಿ: ಹೊಡೆ, ತಾಡಿಸು; ಅಡೆ:ಹೊಂದು; ಜನಪ: ರಾಜ; ಮರೆ: ನೆನಪಿನಿಂದ ದೂರ ಮಾಡು; ಅರಸ: ರಾಜ; ಹೇಳು: ತಿಳಿಸು;

ಪದವಿಂಗಡಣೆ:
ನೆನೆವುದ್+ಎಂದನು +ಪಾರ್ಥನ+ಆ+ ಕಾ
ನನದೊಳಗೆ +ಗಂಧರ್ವನೊಳು +ಬಂದ್
ಅನುವನ್ +ಆ+ಗೋಗ್ರಹಣದಲಿ+ ಮಾಡಿದ +ಪಲಾಯನವ
ವನಜಮುಖಿಯನು +ಬಯಸಿದೊಡೆ +ಬಿ
ಲ್ಲಿನಲಿ +ಬಡಿವಡೆದುದನು +ಕೌರವ
ಜನಪ +ಮರೆದಿರಲಾಗದ್+ಎಂದ್+ಅರಸಂಗೆ +ಹೇಳೆಂದ

ಅಚ್ಚರಿ:
(೧) ಜನಪ, ಅರಸ- ಸಮನಾರ್ಥಕ ಪದ
(೨) ದ್ರೌಪದಿಯನ್ನು ವನಜಮುಖಿ ಎಂದು ಕರೆದಿರುವುದು
(೩) ‘ಬ’ಕಾರದ ತ್ರಿವಳಿ ಪದ – ಬಯಸಿದೊಡೆ ಬಿಲ್ಲಿನಲಿ ಬಡಿವಡೆದುದನು

ಪದ್ಯ ೧೩೮: ಹಿಂದೆ ಯಾವ ಘಟನೆಗಳಿಂದ ಕೌರವರು ಮುಖಭಂಗವನ್ನೆದುರಿಸಿದ್ದರು?

ಹಿಂದೆ ಗೋಗ್ರಹಣದಲಿ ದ್ರುಪದನ
ನಂದನೆಯ ವೈವಾಹದಲಿ ಬಳಿ
ಸಂದ ಗಂಧರ್ವಕನ ದೆಸೆಯಲಿ ಘೋಷಯಾತ್ರೆಯಲಿ
ಬಂದ ಭಂಗವ ಕಂಡುಕಂಡೇ
ನೆಂದು ಪಾಂಡುಕುಮಾರರೊಡನನು
ಸಂಧಿಸುವೆ ಕಲಹವನು ಚಿತ್ತೈಸೆಂದನಾ ವಿದುರ (ಉದ್ಯೋಗ ಪರ್ವ, ೩ ಸಂಧಿ, ೧೩೮ ಪದ್ಯ)

ತಾತ್ಪರ್ಯ:
ಹಿಂದೆ ನಡೆದ ಘಟನೆಗಳಾದ ಗೋಗ್ರಹಣ, ದ್ರೌಪದೀ ಸ್ವಯಂವರದಲ್ಲಿ, ಘೋಷಯಾತ್ರೆಯಲಿ ನಿನಗೆ ಬಂದ ಭಂಗವನ್ನು ಕಂಡೂ ಕೂಡ ನೀನು ಪಾಂಡವರೊಡನೆ ಏನೆಂದು ಯುದ್ಧವನ್ನಾರಂಭಿಸುವೆ ಎಂದು ವಿದುರ ಧೃತರಾಷ್ಟ್ರನನ್ನು ಕೇಳಿದ.

ಅರ್ಥ:
ಹಿಂದೆ: ಪೂರ್ವ; ಗೋಗ್ರಹಣ: ಗೋವುಗಳನ್ನು ಸೆರೆಹಿಡಿಯುವುದು; ನಂದನೆ: ಮಗಳು; ವೈವಾಹ: ವಿವಾಹ; ಬಳಿ: ನಂತರ; ಸಂದ: ಕಳೆದ; ಗಂಧರ್ವ: ದೇವಲೋಕದ ಸಂಗೀತಗಾರ; ದೆಸೆ: ದೆಶೆ, ಅವಸ್ಥೆ; ಘೋಷ:ಗಟ್ಟಿಯಾದ ಶಬ್ದ; ಯಾತ್ರೆ: ಪ್ರಯಾಣ, ಸಂಚಾರ; ಬಂದ: ಆಗಮಿಸಿದ; ಭಂಗ: ತೊಂದರೆ; ಕಂಡು: ನೋಡಿ; ಕುಮಾರ: ಮಕ್ಕಳು; ಅನುಸಂಧಾನ: ಹುಡುಕು, ಏರ್ಪಾಡು; ಕಲಹ: ಯುದ್ಧ; ಚಿತ್ತೈಸು: ಗಮನವಿಡು;

ಪದವಿಂಗಡಣೆ:
ಹಿಂದೆ +ಗೋಗ್ರಹಣದಲಿ +ದ್ರುಪದನ
ನಂದನೆಯ +ವೈವಾಹದಲಿ +ಬಳಿ
ಸಂದ +ಗಂಧರ್ವಕನ +ದೆಸೆಯಲಿ +ಘೋಷಯಾತ್ರೆಯಲಿ
ಬಂದ +ಭಂಗವ +ಕಂಡುಕಂಡ್
ಏನೆಂದು +ಪಾಂಡುಕುಮಾರರ್+ಒಡನ್+ಅನು
ಸಂಧಿಸುವೆ+ ಕಲಹವನು+ ಚಿತ್ತೈಸೆಂದನಾ +ವಿದುರ

ಅಚ್ಚರಿ:
(೧) ಸಂದ, ಬಂದ – ಪ್ರಾಸ ಪದ
(೨) ನೋಡಿಯೂ ಎಂದು ಹೇಳಲು – ಕಂಡುಕಂಡೇ ಪದದ ಬಳಕೆ
(೩) ಅನುಸ್ವಾರವುಳ್ಲ ಪದಗಳ ಬಳಕೆ – ಬಂದ, ಭಂಗ, ಕಂಡು, ಕಂಡೇ – ೪ನೇ ಸಾಲು