ಪದ್ಯ ೩೨: ಭೀಮನನ್ನು ಕೌರವ ಸೈನ್ಯದವರು ಹೇಗೆ ಹಂಗಿಸಿದರು?

ಕಾದಲೆನ್ನಳವಲ್ಲ ಬಲ ದು
ರ್ಭೇದವಿದು ಶಿವಶಿವಯೆನುತ್ತ ವೃ
ಕೋದರನು ಮರಳಿದನು ದುಗುಡಕೆ ತೆತ್ತು ನಿಜಮುಖವ
ಕೈದೆಗೆಯೆ ರಿಪುಬಲದ ಸುಭಟರು
ಕಾದಿದನು ಕಲಿ ಭೀಮ ಗೆಲಿದನು
ಪೋದನೆಂದರು ಕೂಡೆ ಕೈಗಳ ಹೊಯ್ದು ತಮತಮಗೆ (ದ್ರೋಣ ಪರ್ವ, ೪ ಸಂಧಿ, ೩೨ ಪದ್ಯ)

ತಾತ್ಪರ್ಯ:
ಈ ವ್ಯೂಹದಲ್ಲಿ ಯುದ್ಧಮಾಡುವುದು ನನಗೆ ಅಸಾಧ್ಯ, ಇದನ್ನು ಭೇದಿಸಲು ಆಗುವುದಿಲ್ಲ, ಎಂದು ಚಿಂತಿಸಿ ಭೀಮನು ದುಃಖಿಸಿ ಹಿಂದಿರುಗಿದನು. ಅವನು ಹಿಂದಿರುಗಲು ಕೌರವ ಯೋಧರು ಮಹಾ ಪರಾಕ್ರಮಿ ಭೀಮನು ಕಾದಿ ಗೆದ್ದು ಹೋದನು ಎಂದು ಕೈತಟ್ಟಿ ಕೂಗಿದರು.

ಅರ್ಥ:
ಕಾದು: ಹೋರಾದು; ಅಳವು: ಶಕ್ತಿ; ಬಲ: ಸೈನ್ಯ; ಭೇದ: ಬಿರುಕು, ಸೀಳು; ವೃಕೋದರ: ತೋಳದಂತ ಹೊಟ್ಟೆಯುಳ್ಳವ (ಭೀಮ); ಮರಳು: ಹಿಂದಿರುಗು; ದುಗುಡ: ದುಃಖ; ತೆತ್ತು: ಕೊಡು, ನೀಡು; ಮುಖ: ಆನನ; ಕೈದು: ಆಯುಧ; ರಿಪುಬಲ: ವೈರಿ ಸೈನ್ಯ; ಸುಭಟ: ಪರಾಕ್ರಮಿ; ಕಲಿ: ಶೂರ; ಗೆಲಿದ: ಜಯಿಸಿದ; ಪೋದು: ಹೋಗು; ಕೂಡ: ಜೊತೆ; ಹೊಯ್ದು: ಹೋರಾಡು; ಹೊಡೆ;

ಪದವಿಂಗಡಣೆ:
ಕಾದಲೆನ್ನ್+ಅಳವಲ್ಲ+ ಬಲ+ ದು
ರ್ಭೇದವಿದು+ ಶಿವಶಿವ+ಎನುತ್ತ +ವೃ
ಕೋದರನು +ಮರಳಿದನು +ದುಗುಡಕೆ +ತೆತ್ತು +ನಿಜಮುಖವ
ಕೈದೆಗೆಯೆ +ರಿಪುಬಲದ+ ಸುಭಟರು
ಕಾದಿದನು+ ಕಲಿ+ ಭೀಮ +ಗೆಲಿದನು
ಪೋದನೆಂದರು +ಕೂಡೆ +ಕೈಗಳ+ ಹೊಯ್ದು +ತಮತಮಗೆ

ಅಚ್ಚರಿ:
(೧) ವೃಕೋದರ, ಭೀಮ – ಹೆಸರನ್ನು ಕರೆದ ಪರಿ
(೨) ಹಂಗಿಸುವ ಪರಿ – ಕಾದಿದನು ಕಲಿ ಭೀಮ ಗೆಲಿದನುಪೋದನೆಂದರು ಕೂಡೆ ಕೈಗಳ ಹೊಯ್ದು

ಪದ್ಯ ೫೦: ಪ್ರಾತಿಕಾಮಿಕನು ದ್ರೌಪದಿಗೆ ಏನು ತಿಳಿಸಿದನು?

ತಾಯೆ ಬಿನ್ನಹವಿಂದು ನಿಮ್ಮಯ
ರಾಯ ಸೋತನು ಜೂಜಿನಲಿ ಕುರು
ರಾಯ ಗೆಲಿದನು ಕೋಶವನು ಗಜತುರಗ ರಥ ಸಹಿತ
ನೋಯಲಾಗದು ಹಲವು ಮಾತೇ
ನಾ ಯುಧಿಷ್ಠಿರ ನೃಪತಿ ಸೋತನು
ತಾಯೆ ಭೀಮಾರ್ಜುನ ನಕುಲ ಸಹದೇವ ನೀವ್ಸಹಿತ (ಸಭಾ ಪರ್ವ, ೧೫ ಸಂಧಿ, ೫೦ ಪದ್ಯ)

ತಾತ್ಪರ್ಯ:
ಪ್ರಾತಿಕಾಮಿಕನು ದ್ರೌಪದಿಯ ಬಳಿ ಬಂದು ನಮಸ್ಕರಿಸಿ, ತಾಯೆ ನಾನು ಒಂದು ವಿಷಯವನ್ನು ನಿವೇದಿಸಲು ಬಂದಿದ್ದೇನೆ, ಇಂದು ಯುಧಿಷ್ಠಿರನು ಜೂಜಿನಲ್ಲಿ ಸೋತನು. ದುರ್ಯೋಧನನು ಗೆದ್ದನು. ಇಂದ್ರಪ್ರಸ್ಥ ರಾಜ್ಯದ ಕೋಶ, ಚತುರಂಗ ಸೈನ್ಯವೆಲ್ಲವೂ ಕೌರವನ ವಶವಾಯಿತು. ನೀವು ಮನಸ್ಸಿನಲ್ಲಿ ನೊಂದುಕೊಳ್ಳಬೇಡಿರಿ, ಹೆಚ್ಚಿಗೆ ಹೇಳುವುದೇನಿದೆ, ಯುಧಿಷ್ಠಿರನು ತನ್ನನ್ನೂ ಸೋಲುವುದಲ್ಲದೆ, ಭೀಮಾರ್ಜುನ, ನಕುಲ ಸಹದೇವ ಹಾಗೂ ನಿಮ್ಮನ್ನೂ ಜೂಜಿನಲ್ಲಿ ಪಣಕಿಟ್ಟು ಸೋತನೆಂದು ಪ್ರಾತಿಕಾಮಿಕನು ತಿಳಿಸಿದನು.

ಅರ್ಥ:
ತಾಯೆ: ಮಾತೆ; ಬಿನ್ನಹ: ಮನವಿ; ಇಂದು: ಈ ದಿನ; ರಾಯ: ಒಡೆಯ; ಸೋಲು: ಪರಾಭವ; ಜೂಜು: ದ್ಯೂತ; ಗೆಲುವು: ಜಯ; ಕೋಶ: ಖಜಾನೆ, ಭಂಡಾರ; ಗಜ: ಆನೆ; ತುರಗ: ಅಶ್ವ; ರಥ: ಬಂಡಿ; ಸಹಿತ: ಜೊತೆ; ನೋವು: ಬೇಸರ, ಸಂಕಟ; ಹಲವು: ಬಹಳ; ಮಾತು: ನುಡಿ; ನೃಪತಿ: ರಾಜ;

ಪದವಿಂಗಡಣೆ:
ತಾಯೆ+ ಬಿನ್ನಹವ್+ಇಂದು +ನಿಮ್ಮಯ
ರಾಯ +ಸೋತನು +ಜೂಜಿನಲಿ+ ಕುರು
ರಾಯ +ಗೆಲಿದನು+ ಕೋಶವನು+ ಗಜ+ತುರಗ +ರಥ +ಸಹಿತ
ನೋಯಲಾಗದು+ ಹಲವು+ ಮಾತೇನ್
ಆ+ ಯುಧಿಷ್ಠಿರ +ನೃಪತಿ +ಸೋತನು
ತಾಯೆ +ಭೀಮಾರ್ಜುನ +ನಕುಲ+ ಸಹದೇವ+ ನೀವ್+ಸಹಿತ

ಅಚ್ಚರಿ:
(೧) ತಾಯೆ – ೧, ೬ ಸಾಲಿನ ಮೊದಲ ಪದ
(೨) ಸೋತನು, ಗೆಲಿದನು – ವಿರುದ್ಧ ಪದಗಳು
(೩) ರಾಯ, ನೃಪತಿ – ಸಮನಾರ್ಥ ಪದ
(೪) ಸಹಿತ – ೩, ೬ ಸಾಲಿನ ಕೊನೆ ಪದ