ಪದ್ಯ ೪: ಬಲರಾಮನು ಕೃಷ್ಣನಿಗೆ ಏನು ಹೇಳಿದ?

ಆಹವದಿ ಪಾಂಡವ ಮಮ ಪ್ರಾ
ಣಾಹಿ ಎಂಬೀ ನುಡಿಯ ಸಲಿಸಿದೆ
ಬೇಹವರನುಳುಹಿದೆ ಕುಮಾರರ ನಿನ್ನ ಮೈದುನರ
ಗಾಹುಗತಕದಲೆಮ್ಮ ಶಿಷ್ಯಂ
ಗೀ ಹದನ ವಿರಚಿಸಿದೆ ನಿನ್ನಯ
ಮೋಹದವರೇ ಗೆಲಲಿಯೆಂದನು ಹರಿಗೆ ಬಲರಾಮ (ಗದಾ ಪರ್ವ, ೬ ಸಂಧಿ, ೪ ಪದ್ಯ)

ತಾತ್ಪರ್ಯ:
ಬಲರಾಮನು ಕೃಷ್ಣನಿಗೆ, ಎಲೈ ಕೃಷ್ಣ, ಮಮಪ್ರಾಣಾಹಿ ಪಾಂಡವಾಃ ಎಂಬ ನಿನ್ನ ಪ್ರತಿಜ್ಞೆಯನ್ನು ನೀನು ಉಳಿಸಿಕೊಂಡೆ. ನಿನಗೆ ಬೇಕಾದ ಮೈದುನರನ್ನು ಉಳಿಸಿಕೊಂಡೆ, ಕಪಟದಿಂದ ನನ್ನ ಶಿಷ್ಯನಿಗೆ ಈ ದುರ್ಗತಿಯನ್ನು ತಂದೆ. ನಿನ್ನ ಮೋಹದವರೇ ಗೆಲ್ಲಲಿ ಎಂದನು.

ಅರ್ಥ:
ಆಹವ: ಯುದ್ಧ; ಪ್ರಾಣ: ಜೀವ; ನುಡಿ: ಮಾತು; ಸಲಿಸು: ದೊರಕಿಸಿ ಕೊಡು; ಬೇಹ:ಬೇಕಾದ; ಉಳುಹು: ಕಾಪಾಡು; ಮೈದುನ: ತಂಗಿಯ ಗಂಡ; ಗಾಹುಗತಕ: ಮೋಸ, ಭ್ರಾಂತಿ; ಶಿಷ್ಯ: ಅಭ್ಯಾಸಿ; ಹದ: ರೀತಿ; ವಿರಚಿಸು: ಕಟ್ಟು, ನಿರ್ಮಿಸು; ಮೋಹ: ಆಸೆ; ಗೆಲಲಿ: ವಿಜಯಿಯಾಗಲಿ; ಹರಿ: ಕೃಷ್ಣ;

ಪದವಿಂಗಡಣೆ:
ಆಹವದಿ +ಪಾಂಡವ +ಮಮ +ಪ್ರಾ
ಣಾಹಿ +ಎಂಬೀ +ನುಡಿಯ +ಸಲಿಸಿದೆ
ಬೇಹವರನ್+ಉಳುಹಿದೆ +ಕುಮಾರರ +ನಿನ್ನ+ ಮೈದುನರ
ಗಾಹುಗತಕದಲ್+ಎಮ್ಮ+ ಶಿಷ್ಯಂಗ್
ಈ+ ಹದನ +ವಿರಚಿಸಿದೆ +ನಿನ್ನಯ
ಮೋಹದವರೇ +ಗೆಲಲಿಯೆಂದನು+ ಹರಿಗೆ +ಬಲರಾಮ

ಅಚ್ಚರಿ:
(೧) ಕೃಷ್ಣನ ಮಾತು – ಪಾಂಡವ ಮಮ ಪ್ರಾಣಾಹಿ – ಸಂಸ್ಕೃತದ ಪದಗಳನ್ನು ಸೇರಿಸುವ ಪರಿ