ಪದ್ಯ ೧೫: ಯಕ್ಷನು ನಕುಲನಿಗೆ ಏನು ಹೇಳಿದನು?

ಜಲವನಂಜುಳಿಯಿಂದ ಮೊಗೆದೀಂ
ಟಲು ನೆನೆಯಲಭ್ರದಲಿ ಗುಹ್ಯಕ
ನುಲಿದನೆಲೆ ನಕುಲಾಂಕ ಮಾಣೆನಗುತ್ತರವ ರಚಿಸಿ
ಬಳಿಕ ಸಲಿಲವನೀಂಟು ಮಾತುಗ
ಳೊಳವು ಮರುಳಾಗದಿರೆನಲು ಢಗೆ
ಗಳುಕಿ ಬಳಲಿದು ಮೇಲನಾಲಿಸಿ ಮೀರಿದನು ನುಡಿಯ (ಅರಣ್ಯ ಪರ್ವ, ೨೬ ಸಂಧಿ, ೧೫ ಪದ್ಯ)

ತಾತ್ಪರ್ಯ:
ಕೈಗಳಿಂದ ನೀರನ್ನು ಆಚೆ ಈಚೆಗೊತ್ತಿ, ಬೊಗಸೆಯನ್ನು ತುಂಬಿಕೊಂಡು ನೀರನ್ನು ಕುಡಿಯಲು ತುಟಿಗೆ ತಂದನು. ಆಗ ಗುಪ್ತನಾಗಿದ್ದ ಯಕ್ಷನು ಎಲೆ ನಕುಲ, ಈಗ ನೀರನ್ನು ಕುಡಿಯ ಬೇಡ, ನನಗೆ ಉತ್ತರವನ್ನು ಕೊಟ್ಟು ಬಳಿಕ ನೀರನ್ನು ಕುಡಿ ಎನ್ನಲು, ನಕುಲನು ಆ ಮಾತಿಗೆ ಮರುಳಾಗದೆ ಬಾಯಾರಿಕೆಗೆ ಅಳುಕಿ, ನಕುಲನು ತಲೆಯೆತ್ತಿ ಮಾತನ್ನು ಕೇಳಿ ಅದನ್ನು ಮೀರಿದನು.

ಅರ್ಥ:
ಜಲ: ನೀರು; ಅಂಜುಳಿ: ಬೊಗಸೆ; ಮೊಗೆ: ತುಂಬಿಕೊಳ್ಳು, ಬಾಚು; ಈಂಟು: ಕುಡಿ, ಪಾನಮಾಡು; ನೆನೆ: ಒದ್ದೆಯಾಗು; ಅಭ್ರ: ಆಗಸ; ಗುಹ್ಯಕ:ಯಕ್ಷ; ಉಲಿ: ಧ್ವನಿ, ಮಾತು; ಅಂಕ: ವೀರ, ಯುದ್ಧ; ಮಾಣು: ನಿಲ್ಲಿಸು; ಉತ್ತರ: ಪರಿಹಾರ; ರಚಿಸು: ನಿರ್ಮಿಸು; ಬಳಿಕ: ನಂತರ; ಸಲಿಲ: ನೀರು; ಮಾತು: ನುಡಿ; ಒಳವು: ಪ್ರೀತಿ; ಮರುಳು: ಬುದ್ಧಿಭ್ರಮೆ, ಹುಚ್ಚು; ಢಗೆ: ಬಾಯಾರಿಕೆ; ಅಳುಕು: ಹೆದರು; ಬಳಲು: ಆಯಾಸ; ಆಲಿಸು: ಕೇಳು; ಮೀರು: ಉಲ್ಲಂಘಿಸು; ನುಡಿ: ಮಾತು;

ಪದವಿಂಗಡಣೆ:
ಜಲವನ್+ಅಂಜುಳಿಯಿಂದ +ಮೊಗೆದ್+ಈಂ
ಟಲು +ನೆನೆಯಲ್+ಅಭ್ರದಲಿ +ಗುಹ್ಯಕನ್
ಉಲಿದನ್+ಎಲೆ+ ನಕುಲಾಂಕ +ಮಾಣ್+ಎನಗುತ್ತರವ +ರಚಿಸಿ
ಬಳಿಕ +ಸಲಿಲವನ್+ಈಂಟು +ಮಾತುಗಳ್
ಒಳವು+ ಮರುಳಾಗದಿರ್+ಎನಲು +ಢಗೆಗ್
ಅಳುಕಿ +ಬಳಲಿದು+ ಮೇಲನಾಲಿಸಿ+ ಮೀರಿದನು +ನುಡಿಯ

ಅಚ್ಚರಿ:
(೧) ಜಲ, ಸಲಿಲ – ಸಮನಾರ್ಥಕ ಪದ

ಪದ್ಯ ೨೩: ಗಂಧರ್ವರು ಕರ್ಣನ ಜೊತೆ ಹೇಗೆ ಯುದ್ಧ ಮಾಡಿದರು?

ಕಡಿದು ಗಂಧರ್ವನ ಶರೌಘವ
ನಡಸಿ ನೆಟ್ಟವು ಕರ್ಣಶರ ಸೈ
ಹೆಡಹಿದವು ಕಿಂಪುರುಷ ಗುಹ್ಯಕ ಯಕ್ಷರಾಕ್ಷಸರ
ಹೊಡಕರಿಸಿ ಹೊದರೆದ್ದು ಬಲ ಸಂ
ಗಡಸಿ ತಲೆವರಿಗೆಯಲಿ ಕರ್ಣನ
ಬಿಡು ಸರಳ ಬೀದಿಯಲಿ ಬೆದರದೆ ನೂಕಿತಳವಿಯಲಿ (ಅರಣ್ಯ ಪರ್ವ, ೨೦ ಸಂಧಿ, ೨೩ ಪದ್ಯ)

ತಾತ್ಪರ್ಯ:
ಗಂಧರ್ವನ ಬಾಣಗಳನ್ನು ಕಡಿದ ಕರ್ಣನ ಬಾಣಗಳು ಗಂಧರ್ವನ ಪಡೆಯಲ್ಲಿದ್ದ ಕಿಂಪುರುಷ, ಗುಹ್ಯಕ, ರಾಕ್ಷಸರನ್ನು ಸಂಹರಿಸಿದವು. ಆದರೆ ಗಂಧರ್ವ ಸೈನ್ಯವು ಕರ್ಣನ ಬಾಣಗಳಿಗೆ ಹೆದರದೆ ತಲೆಗಳನ್ನೇ ಗುರಾಣಿಯಾಗಿ ಒಡ್ಡಿ ಯುದ್ಧ ಮಾಡಿದರು.

ಅರ್ಥ:
ಕಡಿ: ಸೀಳು; ಗಂಧರ್ವ: ಖಚರ, ದೇವತೆಗಳ ವರ್ಗ; ಶರ: ಬಾಣ; ಔಘ: ಗುಂಪು, ಸಮೂಹ; ಅಡಸು: ಬಿಗಿಯಾಗಿ ಒತ್ತು, ತುರುಕು; ನೆಟ್ಟು: ಹೂಳು, ನಿಲ್ಲಿಸು; ಕೆಡಹು: ಹಾಳುಮಾಡು; ಹೊಡಕರಿಸು: ಕಾಣಿಸು, ಬೇಗಬೆರೆಸು; ತಲೆ: ಶಿರ; ಹೊದರು: ತೊಡಕು, ತೊಂದರೆ; ಬಲ: ಶಕ್ತಿ, ಸೈನ್ಯ; ಸಂಗಡ: ಜೊತೆ; ಬಿಡು: ತೊರೆ; ಸರಳ: ಬಾಣ; ಬೀದಿ: ಮಾರ್ಗ; ಬೆದರು: ಹೆದರು, ಅಂಜಿಕೆ; ನೂಕು: ತಳ್ಳು; ತಳ: ಸಮತಟ್ಟಾದ ಪ್ರದೇಶ;

ಪದವಿಂಗಡಣೆ:
ಕಡಿದು +ಗಂಧರ್ವನ +ಶರೌಘವನ್
ಅಡಸಿ +ನೆಟ್ಟವು +ಕರ್ಣ+ಶರ+ ಸೈ
ಹೆಡಹಿದವು +ಕಿಂಪುರುಷ +ಗುಹ್ಯಕ +ಯಕ್ಷ+ರಾಕ್ಷಸರ
ಹೊಡಕರಿಸಿ+ ಹೊದರೆದ್ದು+ ಬಲ+ ಸಂ
ಗಡಸಿ+ ತಲೆವರಿಗೆಯಲಿ +ಕರ್ಣನ
ಬಿಡು+ ಸರಳ+ ಬೀದಿಯಲಿ +ಬೆದರದೆ +ನೂಕಿ+ತಳವಿಯಲಿ

ಅಚ್ಚರಿ:
(೧) ಗಂಧರ್ವರ ಸೈನ್ಯದಲ್ಲಿದ್ದ ಪಂಗಡಗಳು – ಕಿಂಪುರುಷ, ಗುಹ್ಯಕ, ಯಕ್ಷ, ರಾಕ್ಷಸ

ಪದ್ಯ ೨೨: ಯುದ್ಧದಲ್ಲಿ ಯಾರ ಪ್ರಾಬಲ್ಯ ಹೆಚ್ಚಿತು?

ಮುರಿದುದಮರರ ಚೂಣಿ ದಾನವ
ರುರುಬೆಗಳುಕಿತು ಸಿದ್ಧವಿದ್ಯಾ
ಧರ ಮಹೋರಗ ಯಕ್ಷ ರಾಕ್ಷಸ ಗುಹ್ಯಕಾದಿಗಳು
ಹೊರಗೆ ವನವೀಧಿಯಲಿ ಕಾಹಿನ
ಕುರುವದಲಿ ಗೋಪುರದೊಳೌಕಿತು
ಸುರರು ಮುರಿದರು ಮೇಲು ಕಾಳಗವಾದುದಸುರರಿಗೆ (ಅರಣ್ಯ ಪರ್ವ, ೧೩ ಸಂಧಿ, ೨೨ ಪದ್ಯ)

ತಾತ್ಪರ್ಯ:
ದೇವತೆಗಳ ಸೈನ್ಯವು ಸೋತು ಹೋಯಿತು. ಸಿದ್ಧ, ವಿದ್ಯಾಧರ, ಯಕ್ಷ, ರಾಕ್ಷಸ, ಗುಹ್ಯಕರು ಊರ ಹೊರಗೆ ಕಾಡಿನಲ್ಲೋ, ಕಾವಲು ಗೋಪುರಗಳಲ್ಲೋ ಮರೆಯಾದರು. ಯುದ್ಧದಲ್ಲಿ ರಾಕ್ಷಸರ ಕೈ ಮೇಲಾಯಿತು.

ಅರ್ಥ:
ಮುರಿ: ಸೀಳು; ಅಮರ: ದೇವತೆ; ಚೂಣಿ: ಮುಂಭಾಗ; ದಾನವ: ರಾಕ್ಷಸ; ಉರುಬು: ಅತಿಶಯವಾದ ವೇಗ; ಅಳುಕು: ಹೆದರು; ಉರಗ: ಹಾವು; ಮಹಾ: ಶ್ರೇಷ್ಠ; ಆದಿ: ಮುಂತಾದ; ಹೊರಗೆ: ಆಚೆ; ವನ: ಕಾಡು; ವೀಧಿ: ಮಾರ್ಗ; ಕಾಹಿ: ರಕ್ಷಿಸುವ; ಕುರುವ: ದಿಬ್ಬ, ದಿಣ್ಣೆ; ಗೋಪುರ: ಹೆಬ್ಬಾಗಿರು, ಶಿಖರ; ಔಕು: ಒತ್ತು; ಸುರರು: ದೇವತೆಗಳು; ಮುರಿ: ಸೀಳೂ; ಮೇಲು: ಮುಂಭಾಗ; ಕಾಳಗ: ಯುದ್ಧ; ಅಸುರ: ರಾಕ್ಷಸ;

ಪದವಿಂಗಡಣೆ:
ಮುರಿದುದ್+ಅಮರರ+ ಚೂಣಿ +ದಾನವರ್
ಉರುಬೆಗಳ್+ಅಳುಕಿತು+ ಸಿದ್ಧ+ವಿದ್ಯಾ
ಧರ +ಮಹೋರಗ +ಯಕ್ಷ +ರಾಕ್ಷಸ+ ಗುಹ್ಯಕಾದಿಗಳು
ಹೊರಗೆ +ವನ+ವೀಧಿಯಲಿ +ಕಾಹಿನ
ಕುರುವದಲಿ +ಗೋಪುರದೊಳ್+ಔಕಿತು
ಸುರರು +ಮುರಿದರು+ ಮೇಲು+ ಕಾಳಗವಾದುದ್+ಅಸುರರಿಗೆ

ಅಚ್ಚರಿ:
(೧) ದಾನವ, ಅಸುರ; ಅಮರ, ಸುರರು – ಸಮನಾರ್ಥಕ ಪದ