ಪದ್ಯ ೬: ಶೌನಕಾದಿ ಮುನಿಗಳಿಗೆ ಸೂತನು ಯಾವ ಕಥೆಯನ್ನು ಹೇಳಿದನು?

ಹೇಳು ಸಾಕೆಲೆ ಸೂತ ದುರಿತ
ವ್ಯಾಳ ವಿಷಜಾಂಗುಳಿಕವನು ನೀ
ಕೇಳಿದಂದದೊಳಂದು ಜನಮೇಜಯನ ಯಾಗದಲಿ
ಮೌಳಿಗಳಲಾನುವೆವು ನಿನ್ನಯ
ಹೇಳಿಕೆಯನೆನೆ ನಿಖಿಳ ಮುನಿಗಳ
ನೋಲಗಿಸುವೆನು ನಿಮ್ಮನುಜ್ಞೆಯಲೆಂದು ಕೈಮುಗಿದ (ಆದಿ ಪರ್ವ, ೨ ಸಂಧಿ, ೬ ಪದ್ಯ)

ತಾತ್ಪರ್ಯ:
ಸೂತನೆ, ಕರ್ಮಗಳಲ್ಲಿ ಇರಬಹುದಾದ ಪಾಪವೆಂಬ ಸರ್ಪವಿಷಕ್ಕೆ ಚಿಕಿತ್ಸೆಯಂತಿರುವ ಮಹಾಭಾರವನ್ನು ಜನಮೇಜಯನ ಯಾಗದಲ್ಲಿ ನೀನು ಕೇಳಿದಂತೆಯೇ ನಮಗೆ ಹೇಳು. ನಿನ್ನ ಮಾತುಗಳನ್ನು ನಾವು ತಲೆಯ ಮೇಲೆ ಹೊತ್ತುಕೊಳ್ಳುತ್ತೇವೆ ಎಂದು ಶೌನಕಾದಿಗಳು ಹೇಳಲು ಸೂತನು ಅವರಿಗೆ ವಂದಿಸಿ ನಿಮ್ಮ ಅಪ್ಪಣೆಯಂತೆ ನಿಮ್ಮ ಸೇವೆಯನ್ನು ಮಾಡುತ್ತೇನೆ ಎಂದು ಹೇಳಿದನು.

ಅರ್ಥ:
ಹೇಳು: ತಿಳಿಸು; ಸೂತ: ಪುರಾಣಗಳನ್ನು ಬೋಧಿಸಿದ ಒಬ್ಬ ಋಷಿಯ ಹೆಸರು; ದುರಿತ: ಪಾಪ, ಪಾತಕ; ವ್ಯಾಳ: ಹಾವು; ವಿಷ: ಗರಳ; ಯಾಗ: ಕ್ರತು; ಮೌಳಿ: ತಲೆ; ನಿಖಿಳ: ಎಲ್ಲಾ; ಮುನಿ: ಋಷಿ; ಅನುಜ್ಞೆ: ಒಪ್ಪಿಗೆ; ಕೈಮುಗಿ: ನಮಸ್ಕರಿಸು; ಓಲಗಿಸು: ಸೇವೆ ಮಾಡು; ಗುಳಿಕ: ಔಷಧಿ;

ಪದವಿಂಗಡಣೆ:
ಹೇಳು +ಸಾಕ್+ಎಲೆ +ಸೂತ +ದುರಿತ
ವ್ಯಾಳ +ವಿಷಜಾಂಗುಳಿಕವನು+ ನೀ
ಕೇಳಿದಂದದೊಳ್+ಅಂದು +ಜನಮೇಜಯನ+ ಯಾಗದಲಿ
ಮೌಳಿಗಳಲ್+ಆನುವೆವು +ನಿನ್ನಯ
ಹೇಳಿಕೆಯನ್+ಎನೆ +ನಿಖಿಳ +ಮುನಿಗಳನ್
ಓಲಗಿಸುವೆನು +ನಿಮ್ಮ್+ಅನುಜ್ಞೆಯಲೆಂದು +ಕೈಮುಗಿದ

ಅಚ್ಚರಿ:
(೧) ರೂಪಕದ ಪ್ರಯೋಗ – ದುರಿತವ್ಯಾಳ ವಿಷಜಾಂಗುಳಿಕವನು