ಪದ್ಯ ೫೩: ಅರ್ಜುನನು ಹೇಗೆ ಮುನ್ನುಗ್ಗಿದನು?

ಮುರಿಯೆಸುತ ಮಾದ್ರೇಶ್ವರನ ಹೊ
ಕ್ಕುರುಬಿದನು ಗುರುಸುತನ ಸೂತನ
ನಿರಿದು ಸಮಸಪ್ತಕರ ಸೋಲಿಸಿ ಕೃಪನನಡಹಾಯ್ಸಿ
ತರುಬಿದನು ಕುರುಪತಿಯರ್ನರ್ಜುನ
ನೊರಲಿಸಿದನೀ ಸೈನ್ಯ ಸುಭಟರ
ನೆರವಣಿಗೆ ನಿಪ್ಪಸರದಲಿ ಮುಸುಕಿತು ಧನಂಜಯನ (ಶಲ್ಯ ಪರ್ವ, ೨ ಸಂಧಿ, ೫೩ ಪದ್ಯ)

ತಾತ್ಪರ್ಯ:
ಅರ್ಜುನನು ಶಲ್ಯನ ಬಾಣಗಳನ್ನು ಖಂಡಿಸಿ, ಮುನ್ನುಗ್ಗಿದನು. ಅಶ್ವತ್ಥಾಮನ ಸಾರಥಿಯನ್ನು ಕೊಂದನು. ಸಂಶಪ್ತಕರನ್ನು ಸೋಲಿಸಿ ಕೃಪನನ್ನು ಅಡ್ಡಗಟ್ಟಿ ದುರ್ಯೋಧನನು ಒರಲುವಂತೆ ಮಾಡಿದನು. ಆಗ ಕುರುವೀರರೆಲ್ಲರೂ ರಭಸದಿಂದ ಮುಂದುವರೆದು ಅರ್ಜುನನನ್ನು ಮುತ್ತಿದರು.

ಅರ್ಥ:
ಮುರಿ: ಸೀಳು; ಎಸು: ಬಾಣ ಪ್ರಯೋಗ ಮಾಡು; ಹೊಕ್ಕು: ಸೇರು; ಉರುಬು: ಅತಿಶಯವಾದ ವೇಗ; ಸುತ: ಮಗ; ಸೂತ: ರಥವನ್ನು ನಡೆಸುವವನು, ಸಾರ; ಇರಿ: ಚುಚ್ಚು; ಸಮಸಪ್ತಕ: ಪ್ರಮಾಣ ಮಾಡಿ ಯುದ್ಧ ಮಾಡುವವ; ಸೋಲು: ಪರಾಭವ; ಅಡಹಾಯ್ಸು: ಮಧ್ಯ ಪ್ರವೇಶಿಸು; ತರುಬು: ತಡೆ, ನಿಲ್ಲಿಸು; ಒರಲು: ಅರಚು, ಕೂಗಿಕೊಳ್ಳು; ಸುಭಟ: ಪರಾಕ್ರಮಿ, ಶೂರ; ಎರವಳಿ: ತೊರೆ; ನಿಪ್ಪಸರ: ಅತಿಶಯ, ಹೆಚ್ಚಳ; ಮುಸುಕು: ಆವರಿಸು;

ಪದವಿಂಗಡಣೆ:
ಮುರಿ+ಎಸುತ +ಮಾದ್ರೇಶ್ವರನ+ ಹೊಕ್ಕ್
ಉರುಬಿದನು +ಗುರುಸುತನ+ ಸೂತನನ್
ಇರಿದು +ಸಮಸಪ್ತಕರ+ ಸೋಲಿಸಿ +ಕೃಪನನ್+ಅಡಹಾಯ್ಸಿ
ತರುಬಿದನು +ಕುರುಪತಿಯನ್+ಅರ್ಜುನನ್
ಒರಲಿಸಿದನ್+ಈ+ ಸೈನ್ಯ +ಸುಭಟರನ್
ಎರವಣಿಗೆ +ನಿಪ್ಪಸರದಲಿ +ಮುಸುಕಿತು +ಧನಂಜಯನ

ಅಚ್ಚರಿ:
(೧) ಗುರುಸುತನ ಸೂತನನಿರಿದು – ಸುತ, ಸೂತ – ಪದಗಳ ಬಳಕೆ –

ಪದ್ಯ ೪೧: ಯಾವ ಶಬ್ದವು ಬ್ರಹ್ಮಾಂಡವನ್ನು ತುಂಬಿತು?

ಉಲಿದು ಕೌರವ ಸರ್ವದಳ ಮುಂ
ಕೊಳಿಸಿ ನೂಕಿತು ಶಲ್ಯನನು ಪಡಿ
ತಳಿಸಿ ಹೊಕ್ಕುದು ಕರ್ಣಸುತ ಕೃಪ ಗುರುಸುತಾದಿಗಳು
ಪ್ರಳಯದಿನದಲಿ ಪಂಟಿಸುವ ಸಿಡಿ
ಲಿಳಿದುದೆನೆ ಬಹುವಿಧದ ವಾದ್ಯದ
ಮೊಳಗುಗಳ ತುದಿ ತುಡುಕಿತಾ ಬ್ರಹ್ಮಾಂಡಮಂಡಲವ (ಶಲ್ಯ ಪರ್ವ, ೨ ಸಂಧಿ, ೪೧ ಪದ್ಯ)

ತಾತ್ಪರ್ಯ:
ಸಮಸ್ತ ಕುರುಸೇನೆಯೂ ಶಲ್ಯನನ್ನು ಮುಂದಿಟ್ಟುಕೊಂಡು ಕೃಪ, ಅಶ್ವತ್ಥಾಮ, ಕರ್ಣನ ಮಗ ಮೊದಲಾದ ನಾಯಕರೊಂದಿಗೆ ಯುದ್ಧಕ್ಕೆ ನುಗ್ಗಿತು. ಪ್ರಳಯದ ಸಿಡಿಲಿನ ಅಬ್ಬರವು ಭೂಮಿಗಿಳಿದಂತೆ ರಣವಾದ್ಯಗಳ ಮೊಳಗು ಬ್ರಹ್ಮಾಂಡವನ್ನು ತುಂಬಿತು.

ಅರ್ಥ:
ಉಲಿ: ಶಬ್ದ; ಸರ್ವ: ಎಲ್ಲಾ; ದಳ: ಸೈನ್ಯ; ಮುಂಕೊಳಿಸು: ಮುಂದಿಟ್ಟು; ನೂಕು: ತಳ್ಳು; ಪಡಿ: ಸಮಾನವಾದುದು, ಎಣೆ, ಸಾಟಿ; ತಳಿಸು: ಕುಟ್ಟು, ಹೊಡೆ, ಚುಚ್ಚು; ಹೊಕ್ಕು: ಸೇರು; ಸುತ: ಮಗ; ಆದಿ: ಮುಂತಾದ; ಪ್ರಳಯ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ, ಅಳಿವು; ದಿನ: ವಾರ; ಪಂಟಿಸು: ಮುಚ್ಚು, ಹೊದೆಸು; ಸಿಡಿಲು: ಅಶನಿ; ಇಳಿ: ಜಾರು; ಬಹು: ಬಹಳ; ವಿಧ: ರೀತಿ; ವಾದ್ಯ: ಸಂಗೀತದ ಸಾಧನ; ಮೊಳಗು: ಹೊರಹೊಮ್ಮು; ತುದಿ: ಕೊನೆ, ಅಂತ್ಯ; ತುಡುಕು: ಹೋರಾಡು, ಸೆಣಸು; ಬ್ರಹ್ಮಾಂಡ: ವಿಶ್ವ, ಜಗತ್ತು; ಮಂಡಲ: ನಾಡಿನ ಒಂದು ಭಾಗ, ವರ್ತುಲಾಕಾರ;

ಪದವಿಂಗಡಣೆ:
ಉಲಿದು +ಕೌರವ +ಸರ್ವದಳ +ಮುಂ
ಕೊಳಿಸಿ +ನೂಕಿತು +ಶಲ್ಯನನು +ಪಡಿ
ತಳಿಸಿ +ಹೊಕ್ಕುದು +ಕರ್ಣಸುತ +ಕೃಪ +ಗುರುಸುತಾದಿಗಳು
ಪ್ರಳಯ+ದಿನದಲಿ +ಪಂಟಿಸುವ +ಸಿಡಿಲ್
ಇಳಿದುದೆನೆ +ಬಹುವಿಧದ +ವಾದ್ಯದ
ಮೊಳಗುಗಳ+ ತುದಿ +ತುಡುಕಿತಾ +ಬ್ರಹ್ಮಾಂಡ+ಮಂಡಲವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಪ್ರಳಯದಿನದಲಿ ಪಂಟಿಸುವ ಸಿಡಿಲಿಳಿದುದೆನೆ

ಪದ್ಯ ೪೦: ಶಲ್ಯನ ಬೆಂಬಲಕ್ಕೆ ಯಾರು ಬಂದರು?

ಎಲೆಲೆ ಹನುಮನ ಹಳವಿಗೆಯ ರಥ
ಹೊಳೆಯುತದೆ ದಳಪತಿಗೆ ಕಾಳೆಗ
ಬಲುಹು ಬರ ಹೇಳುವುದು ಗೌತಮ ಗುರುಸುತಾದಿಗಳ
ಬಲವ ಕರೆ ಸಮಸಪ್ತಕರನಿ
ಟ್ಟಿಳಿಸಿ ನೂಕಲಿ ಕರ್ಣಸುತನೆಂ
ದುಲಿದು ಹೊಕ್ಕನು ನಿನ್ನ ಮಗನೈನೂರು ರಥಸಹಿತ (ಶಲ್ಯ ಪರ್ವ, ೨ ಸಂಧಿ, ೪೦ ಪದ್ಯ)

ತಾತ್ಪರ್ಯ:
ಹನುಮ ಧ್ವಜದ ರಥ (ಅರ್ಜುನನ) ಬಂದಿದೆ. ಸೇನಾಪತಿಗೆ ಯುದ್ಧ ಬಲವತ್ತರವಾಯಿತು. ಕೃಪಾಶ್ವತ್ಥಾಮರನ್ನೂ, ಸಂಶಪ್ತಕರನ್ನೂ ಬರಹೇಳು. ಕರ್ಣಪುತ್ರನು ವೇಗವಾಗಿ ಬರಲಿ, ಎಂದಾಜ್ಞೆಕೊಟ್ಟು, ಎಲೈ ರಾಜ, ನಿನ್ನ ಮಗನಾದ ದುರ್ಯೋಧನನು ಐನೂರು ರಥಗಳೊಡನೆ ಶಲ್ಯನಿಗೆ ಬೆಂಬಲವಾಗಿ ಬಂದನು.

ಅರ್ಥ:
ಹನುಮ: ಆಂಜನೇಯ; ಹಳವಿ: ಧ್ವಜ ; ರಥ: ಬಂಡಿ; ಹೊಳೆ: ಪ್ರಕಾಶ; ದಳಪತಿ: ಸೇನಾಧಿಪತಿ; ಕಾಳೆಗ: ಯುದ್ಧ; ಬಲುಹು: ಬಲ, ಶಕ್ತಿ; ಬರಹೇಳು: ಆಗಮಿಸು; ಸುತ: ಮಗ; ಆದಿ: ಮುಂತಾದ; ಬಲ: ಸೈನ್ಯ; ಕರೆ: ಬರೆಮಾಡು; ಸಮಸಪ್ತಕ: ಯುದ್ಧದಲ್ಲಿ ಶಪಥ ಮಾಡಿ ಹೋರಾಡುವರು; ನೂಕು: ತಳ್ಲು; ಉಲಿ: ಧ್ವನಿ; ಹೊಕ್ಕು: ಸೇರು; ಮಗ: ಸುತ; ರಥ: ಬಂಡಿ; ಸಹಿತ: ಜೊತೆ;

ಪದವಿಂಗಡಣೆ:
ಎಲೆಲೆ +ಹನುಮನ +ಹಳವಿಗೆಯ +ರಥ
ಹೊಳೆಯುತದೆ +ದಳಪತಿಗೆ+ ಕಾಳೆಗ
ಬಲುಹು +ಬರ ಹೇಳುವುದು +ಗೌತಮ+ ಗುರುಸುತಾದಿಗಳ
ಬಲವ +ಕರೆ +ಸಮಸಪ್ತಕರನ್
ಇಟ್ಟಿಳಿಸಿ +ನೂಕಲಿ +ಕರ್ಣಸುತನೆಂದ್
ಉಲಿದು +ಹೊಕ್ಕನು +ನಿನ್ನ +ಮಗನ್+ಐನೂರು +ರಥ+ಸಹಿತ

ಅಚ್ಚರಿ:
(೧) ಅರ್ಜುನನು ಬಂದ ಎಂದು ಹೇಳುವ ಪರಿ – ಹನುಮನ ಹಳವಿಗೆಯ ರಥಹೊಳೆಯುತದೆ

ಪದ್ಯ ೧೫: ದುರ್ಯೋಧನನು ಯಾವ ಪ್ರಶ್ನೆಯನ್ನು ಕೇಳಿದನು?

ಹಿಮದ ಹೊಯ್ಲಲಿ ಸೀದು ಸಿಕ್ಕಿದ
ಕಮಲವನದಂದದಲಿ ಹತವಿ
ಕ್ರಮದ ಕೀರ್ತಿಯ ಬಹಳಭಾರಕೆ ಬಳುಕಿದಾನನದ
ಸುಮುಖತಾ ವಿಚ್ಛೇದ ಕಲುಷ
ಸ್ತಿಮಿತರಿರವನು ಕಂಡು ನಾಳಿನ
ಸಮರಕೇನುದ್ಯೋಗವೆಂದನು ಕೃಪನ ಗುರುಸುತನ (ಶಲ್ಯ ಪರ್ವ, ೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ಮಂಜಿನ ಹೊಡೆತಕ್ಕೆ ಸಿಕ್ಕು ಸೀದ ಕಮಲವನದಮ್ತೆ ತಮ್ಮ ಮಹಾಪರಾಕ್ರಮದ ಕಿರ್ತಿಯು ಭಂಗೊಂದಲಾಗಿ ಆ ನೋವಿನಿಂದ ಕುಸಿದು ವಿವರ್ಣವಾದ ಮುಖಗಳನ್ನು ಹೊತ್ತು ಸಂತೋಷವನ್ನು ತೊರೆದು ಶೋಕದಿಂದ ತಪ್ತರಾದ ತನ್ನ ವೀರರನ್ನು ಕಂಡು ದುರ್ಯೋಧನನು ಕೃಪಾಚಾರ್ಯ, ಅಶ್ವತ್ಥಾಮ, ನಾಳಿನ ಯುದ್ಧದ ಬಗೆಯೇನು ಎಂದು ಕೇಳಿದನು.

ಅರ್ಥ:
ಹಿಮ: ಮಂಜಿನಗಡ್ಡೆ; ಹೊಯ್ಲು: ಏಟು, ಹೊಡೆತ; ಸೀದು: ಕರಕಲಾಗು; ಕಮಲ: ತಾವರೆ; ವನ: ಕಾಡು; ಹತ: ಸಾವು; ವಿಕ್ರಮ: ಪರಾಕ್ರಮ; ಕೀರ್ತಿ: ಯಶಸ್ಸು; ಬಹಳ: ತುಂಬ; ಭಾರ: ಹೊರೆ, ತೂಕ; ಬಳುಕು: ನಡುಕ, ಕಂಪನ; ಆನನ: ಮುಖ; ಸುಮುಖ: ಸುಂದರವಾದ ಮುಖ; ವಿಚ್ಛೇದ: ತುಂಡು ಮಾಡುವಿಕೆ; ಕಲುಷ: ಕಳಂಕ; ಸ್ತಿಮಿತ: ಭದ್ರವಾದ ನೆಲೆ, ಸ್ಥಿರತೆ; ಕಂಡು: ನೋಡು; ಸಮರ: ಯುದ್ಧ; ಉದ್ಯೋಗ: ಕೆಲಸ; ಸುತ: ಪುತ್ರ;

ಪದವಿಂಗಡಣೆ:
ಹಿಮದ+ ಹೊಯ್ಲಲಿ +ಸೀದು +ಸಿಕ್ಕಿದ
ಕಮಲವನದಂದದಲಿ+ ಹತ+ವಿ
ಕ್ರಮದ +ಕೀರ್ತಿಯ +ಬಹಳ+ಭಾರಕೆ+ ಬಳುಕಿದ್+ಆನನದ
ಸುಮುಖತಾ +ವಿಚ್ಛೇದ +ಕಲುಷ
ಸ್ತಿಮಿತರಿರವನು +ಕಂಡು +ನಾಳಿನ
ಸಮರಕೇನ್+ಉದ್ಯೋಗವೆಂದನು +ಕೃಪನ +ಗುರುಸುತನ

ಅಚ್ಚರಿ:
(೧) ಉಪಮಾನದ ಪ್ರಯೋಗ: ಹಿಮದ ಹೊಯ್ಲಲಿ ಸೀದು ಸಿಕ್ಕಿದ ಕಮಲವನದಂದದಲಿ
(೨) ಕೌರವನ ಸ್ಥಿತಿ – ಹತವಿಕ್ರಮದ ಕೀರ್ತಿಯ ಬಹಳಭಾರಕೆ ಬಳುಕಿದಾನನದ

ಪದ್ಯ ೧೨: ಅರ್ಜುನನ ಹೊಟ್ಟೆಯಲ್ಲಿ ಯಾವ ನಿಧಿಯಿದೆ?

ಏನು ಗುರುಸುತ ಮಡಿದನೇ ತ
ನ್ನಾನೆ ಬವರದಲಕಟ ಕುಂತೀ
ಸೂನುವೇಕೈ ತಪ್ಪ ಮಾಡಿದನೇ ಮಹಾದೇವ
ಭಾನುಸನ್ನಿಭ ಸರಿದನೇ ತ
ಪ್ಪೇನು ಪಾರ್ಥನ ಬಸುರಲೆನ್ನ ನಿ
ಧಾನವಿದ್ದುದು ತೆಗೆವೆನೈಸಲೆಯೆಂದು ಕಂದೆರೆದ (ಶಲ್ಯ ಪರ್ವ, ೧ ಸಂಧಿ, ೧೨ ಪದ್ಯ)

ತಾತ್ಪರ್ಯ:
ದುರ್ಯೋಧನನು, ಏನು ಅಶ್ವತ್ಥಾಮ, ನನ್ನಾನೆ ಕರ್ಣನು ಯುದ್ಧದಲ್ಲಿ ಮಡಿದನೇ? ಅರ್ಜುನನು ಇಂತಹ ತಪ್ಪನ್ನೇಕೆ ಮಾಡಿದ, ಶಿವ ಶಿವಾ, ಸೂರ್ಯಸದೃಶನಾದ ಕರ್ಣನು ಸತ್ತನೇ? ತಪ್ಪೇನು, ನನ್ನ ನಿಧಿ ಅರ್ಜುನನ ಹೊಟ್ಟೆಯಲ್ಲಿದೆ. ಅದನ್ನು ಹೊರತೆಗೆಯುತ್ತೇನೆ ಎಂದು ದುರ್ಯೋಧನನು ಕಣ್ಣನ್ನು ಬಿಟ್ಟನು.

ಅರ್ಥ:
ಸುತ: ಮಗ; ಮಡಿ: ಸಾವು; ಆನೆ: ಕರಿ, ಬಲಶಾಲಿ; ಬವರ: ಯುದ್ಧ; ಅಕಟ: ಅಯ್ಯೋ; ಸೂನು: ಮಗ; ತಪ್ಪು: ಸರಿಯಲ್ಲದು; ಭಾನು: ಸೂರ್ಯ; ಸನ್ನಿಭ: ಹತ್ತಿರ, ಸಮಾನ; ಸರಿ: ಗಮಿಸು; ಬಸುರ: ಹೊಟ್ಟೆ; ನಿಧಾನ: ಹುದುಗಿಟ್ಟ ದ್ರವ್ಯ, ನಿಧಿ; ತೆಗೆ: ಹೊರತರು; ಐಸಲೆ: ಅಲ್ಲವೇ; ಕಂದೆರೆ: ಕಣ್ಣನ್ನು ಬಿಡು;

ಪದವಿಂಗಡಣೆ:
ಏನು +ಗುರುಸುತ+ ಮಡಿದನೇ +ತ
ನ್ನಾನೆ +ಬವರದಲ್+ಅಕಟ +ಕುಂತೀ
ಸೂನುವ್+ಏಕೈ+ ತಪ್ಪ+ ಮಾಡಿದನೇ +ಮಹಾದೇವ
ಭಾನುಸನ್ನಿಭ +ಸರಿದನೇ +ತ
ಪ್ಪೇನು +ಪಾರ್ಥನ +ಬಸುರಲ್+ಎನ್ನ +ನಿ
ಧಾನವ್+ಇದ್ದುದು +ತೆಗೆವೆನ್+ಐಸಲೆ+ಎಂದು +ಕಂದೆರೆದ

ಅಚ್ಚರಿ:
(೧) ಕರ್ಣನನ್ನು ಹೊಗಳುವ ಪರಿ – ಮಡಿದನೇ ತನ್ನಾನೆ ಬವರದಲಕಟ; ಭಾನುಸನ್ನಿಭ ಸರಿದನೇ
(೧) ಸೂನು, ಸುತ – ಸಮಾನಾರ್ಥಕ ಪದ

ಪದ್ಯ ೧೩: ಸೈನ್ಯವು ಯಾರನ್ನು ಯುದ್ಧಕ್ಕೆ ಕರೆದರು?

ಸರಕಟಸಿ ನೂಕಿತು ಚತುರ್ಬಲ
ವರರೆ ಹಾರುವನೆಲ್ಲಿಯಾದಡೆ
ದೊರೆ ಸುಯೋಧನನೆಲ್ಲಿ ರಾಧೆಯ ಮಗನ ಬರಹೇಳು
ಗುರುಸುತನ ಕರೆ ಕಾದುಹೇಳೋ
ದುರುಳ ದುಶ್ಯಾಸನನನೆನುತ
ಬ್ಬರಿಸಿ ಕವಿದುದು ವೈರಿಬಲವಾಚಾರ್ಯನಿದಿರಿನಲಿ (ದ್ರೋಣ ಪರ್ವ, ೧೮ ಸಂಧಿ, ೧೩ ಪದ್ಯ)

ತಾತ್ಪರ್ಯ:
ಆ ಚತುರಂಗ ಸೈನ್ಯವು ದಾಳಿಯಿಟ್ಟು ಅರೇ, ಆ ಬ್ರಾಹ್ಮಣ ಎಲ್ಲಿದ್ದಾನೆ. ದುರ್ಯೋಧನನೆಲ್ಲಿ, ಕರ್ಣನನ್ನು ಬರಹೇಳು, ಅಶ್ವತ್ಥಾಮನೂ ಬರಲಿ, ಆ ದುಷ್ಟ ದುಶ್ಯಾಸನನೂ ಬರಲಿ ಎಂದು ಅಬ್ಬರಿಸುತ್ತಾ ದ್ರೋಣನನ್ನು ಮುತ್ತಿತು.

ಅರ್ಥ:
ಸರಕಟಿಸು: ರಭಸದಿಂದ ನುಗ್ಗು; ನೂಕು: ತಳ್ಳು; ಚತುರ್ಬಲ: ಚತುರಂಗ ಸೈನ್ಯ; ಅರರೆ: ಅಬ್ಬಾ; ಹಾರುವ: ಬ್ರಾಹ್ಮಣ; ದೊರೆ: ರಾಜ; ಮಗ: ಸುತ; ಬರಹೇಳು: ಆಗಮಿಸು; ಸುತ: ಮಗ; ಗುರು: ಆಚಾರ್ಯ; ಕರೆ: ಬರೆಮಾಡು; ಕಾದು: ಯುದ್ಧ; ದುರುಳ: ದುಷ್ಟ; ಅಬ್ಬರಿಸು: ಗರ್ಜಿಸು; ಕವಿ: ಆವರಿಸು; ವೈರಿ: ಶತ್ರು; ಬಲ: ಸೈನ್ಯ; ಆಚಾರ್ಯ: ಗುರು; ಇದಿರು: ಎದುರು;

ಪದವಿಂಗಡಣೆ:
ಸರಕಟಸಿ +ನೂಕಿತು +ಚತುರ್ಬಲವ್
ಅರರೆ +ಹಾರುವನೆಲ್ಲಿ+ಆದಡೆ
ದೊರೆ +ಸುಯೋಧನನೆಲ್ಲಿ +ರಾಧೆಯ ಮಗನ +ಬರಹೇಳು
ಗುರುಸುತನ +ಕರೆ +ಕಾದು+ಹೇಳೋ
ದುರುಳ+ ದುಶ್ಯಾಸನನನ್+ಎನುತ್
ಅಬ್ಬರಿಸಿ +ಕವಿದುದು +ವೈರಿಬಲವ್+ಆಚಾರ್ಯನ್+ಇದಿರಿನಲಿ

ಅಚ್ಚರಿ:
(೧) ಕರ್ಣನನ್ನು ರಾಧೆಯ ಮಗ, ಅಶ್ವತ್ಥಾಮನನ್ನು ಗುರುಸುತ ಎಂದು ಕರೆದಿರುವುದು

ಪದ್ಯ ೩೩: ಎಲ್ಲರೂ ತಮಗೆ ಮಹಾನವಮಿ ಇಂದೇ ಎಂದೇಕೆ ಯೋಚಿಸಿದರು?

ನೊಂದು ಮರಳದೆ ಮಸಗಿ ಸೂರ್ಯನ
ನಂದನನು ತಾಗಿದನು ಗುರುಸುತ
ಮುಂದುವರಿದನು ತಲೆ ಹರಿದರೆನ್ನಟ್ಟೆ ಕಲಿಯೆನುತ
ಇಂದಿನಲಿ ಮಹನವಮಿ ತಲೆಗಳಿ
ಗೆಂದು ಕವಿದರು ಸಕಲ ಭಟರರ
ವಿಂದಸಖ ಹೊದ್ದಿದನು ಮೆಲ್ಲನೆ ಪಶ್ಮಿಮಾಂಬುಧಿಯ (ದ್ರೋಣ ಪರ್ವ, ೧೪ ಸಂಧಿ, ೩೩ ಪದ್ಯ)

ತಾತ್ಪರ್ಯ:
ಅರ್ಜುನನ ಬಾಣಗಳಿಂದ ನೊಂದ ಕರ್ಣನು ಹಿಂದಿರುಗದೆ ಸಿಟ್ಟಿನಿಂದ ಅರ್ಜುನನನ್ನು ಬಾಣಗಳಿಂದ ತಾಗಿದನು. ಅಶ್ವತ್ಥಾಮನು ಅರ್ಜುನನು ತನ್ನ ತಲೆಯನ್ನು ಹಾರಿಸಿದರೆ ನನ್ನ ದೇಹಕ್ಕೆ ಸಾಕಷ್ಟು ಪರಾಕ್ರಮವಿದೆ ಎಂದು ಮುಮ್ದುವರಿದನು. ಎಲ್ಲಾ ವೀರರೂ ಇಂದೆ ನಮ್ಮ ತಲೆಗಳಿಗೆ ಮಹಾನವಮಿ ಎಂದು ಅರ್ಜುನನನ್ನು ಮುತ್ತಿದರು. ಸೂರ್ಯನು ಮೆಲ್ಲಗೆ ಪಶ್ಚಿಮ ಸಮುದ್ರಕ್ಕೆ ಸಮೀಪನಾದನು.

ಅರ್ಥ:
ನೊಂದು: ನೋವನ್ನುಂಡು; ಮರಳು: ಹಿಂದಿರುಗು; ಮಸಗು: ಹರಡು; ಕೆರಳು; ಸೂರ್ಯ: ನೇಸರ; ನಂದನ: ಮಗ; ತಾಗು: ಮುಟ್ಟು; ಗುರುಸುತ: ಆಚಾರ್ಯರ ಪುತ್ರ (ಅಶ್ವತ್ಥಾಮ); ಮುಂದುವರಿ: ಮುಂದೆ ಚಲಿಸು; ತಲೆ: ಶಿರ; ಹರಿದು: ಸೀಳು; ಕಲಿ: ಶೂರ; ಇಂದು: ಇವತ್ತು; ಕವಿ: ಆವರಿಸು; ಸಕಲ: ಎಲ್ಲಾ; ಭಟ: ಸೈನಿಕ; ಅರವಿಂದ: ಕಮಲ; ಸಖ: ಮಿತ್ರ; ಹೊದ್ದು: ಸೇರು, ತಬ್ಬಿಕೊ; ಮೆಲ್ಲನೆ: ನಿಧಾನವಾಗಿ; ಪಶ್ಚಿಮ: ಪಡುವಣ; ಅಂಬುಧಿ: ಸಾಗರ;

ಪದವಿಂಗಡಣೆ:
ನೊಂದು +ಮರಳದೆ+ ಮಸಗಿ +ಸೂರ್ಯನ
ನಂದನನು +ತಾಗಿದನು +ಗುರುಸುತ
ಮುಂದುವರಿದನು +ತಲೆ +ಹರಿದರ್+ಎನ್ನಟ್ಟೆ +ಕಲಿಯೆನುತ
ಇಂದಿನಲಿ+ ಮಹನವಮಿ +ತಲೆಗಳಿ
ಗೆಂದು +ಕವಿದರು +ಸಕಲ +ಭಟರ್
ಅರವಿಂದಸಖ+ ಹೊದ್ದಿದನು +ಮೆಲ್ಲನೆ +ಪಶ್ಮಿಮ+ಅಂಬುಧಿಯ

ಅಚ್ಚರಿ:
(೧) ಸೂರ್ಯ, ಅರವಿಂದ ಸಖ – ಸಾಮ್ಯಾರ್ಥ ಪದಗಳು
(೨) ಅರ್ಜುನನ ಹಿರಿಮೆ – ಇಂದಿನಲಿ ಮಹನವಮಿ ತಲೆಗಳಿಗೆಂದು ಕವಿದರು ಸಕಲ ಭಟರರ
(೩) ಸಂಜೆಯಾಯಿತು ಎಂದು ಹೇಳಲು – ಅರವಿಂದಸಖ ಹೊದ್ದಿದನು ಮೆಲ್ಲನೆ ಪಶ್ಮಿಮಾಂಬುಧಿಯ

ಪದ್ಯ ೨: ಸಾತ್ಯಕಿಯು ತನ್ನ ರಥವನ್ನು ಯಾರ ಕಡೆಗೆ ತಿರುಗಿಸಿದನು?

ಒಂದು ಕಡೆಯಲಿ ಕರ್ಣ ಗುರುಸುತ
ರೊಂದು ದೆಸೆಯಲಿ ಶಲ್ಯ ಶಕುನಿಗ
ಳೊಂದು ದೆಸೆಯಲಿ ಭೂರಿ ಕೃತವರ್ಮಕ ಸುಯೋಧನರು
ಮುಂದುಗೆಡಿಸಿದರರ್ಜುನನನೀ
ಬಮ್ದ ಭೂರಿಶ್ರವನ ನಿಲಿಸುವೆ
ನೆಂದು ಸಾತ್ಯಕಿ ಬಿಟ್ಟನಾತನ ಹೊರೆಗೆ ನಿಜ ರಥವ (ದ್ರೋಣ ಪರ್ವ, ೧೪ ಸಂಧಿ, ೨ ಪದ್ಯ)

ತಾತ್ಪರ್ಯ:
ಒಂದು ಕಡೆಯಿಂದ ಕರ್ಣ, ಅಶ್ವತ್ಥಾಮರು, ಇನ್ನೊಂದು ಕಡೆಯಿಂದ ಶಲ್ಯ ಶಕುನಿಗಳು, ಮತ್ತೊಂದು ಕಡೆಯಿಂದ ಭೂರಿ ಕೃತವರ್ಮ ದುರ್ಯೋಧನರೂ ಅರ್ಜುನನನ್ನು ಮುತ್ತಿ ಅವನ ಗಮನವನ್ನು ತಡೆದಿದ್ದಾರೆ. ಈಗ ಈ ಭೂರಿಶ್ರವನೂ ಬಂದಿದ್ದಾನೆ, ಇವನನ್ನು ನಾನು ನಿಲ್ಲಿಸುತ್ತೇನೆ ಎಂದುಕೊಂಡು ಸಾತ್ಯಕಿಯು ತನ್ನ ರಥವನ್ನು ಅವನ ಕಡೆಗೆ ತಿರುಗಿಸಿದನು.

ಅರ್ಥ:
ಕಡೆ: ದಿಕ್ಕು, ಬದಿ; ಗುರುಸುತ: ಆಚಾರ್ಯರ ಪುತ್ರ (ಅಶ್ವತ್ಥಾಮ; ದೆಸೆ: ದಿಕ್ಕು; ಮುಂದುಗೆಡು: ದಾರಿಯನ್ನು ತೋರು; ನಿಲಿಸು: ತಡೆ; ಹೊರೆ: ರಕ್ಷಣೆ, ಆಶ್ರಯ; ರಥ: ಬಂಡಿ; ಬಂದ: ಆಗಮಿಸು;

ಪದವಿಂಗಡಣೆ:
ಒಂದು +ಕಡೆಯಲಿ +ಕರ್ಣ +ಗುರುಸುತರ್
ಒಂದು +ದೆಸೆಯಲಿ +ಶಲ್ಯ +ಶಕುನಿಗಳ್
ಒಂದು +ದೆಸೆಯಲಿ +ಭೂರಿ +ಕೃತವರ್ಮಕ +ಸುಯೋಧನರು
ಮುಂದುಗೆಡಿಸಿದರ್+ಅರ್ಜುನನನ್+ಈ
ಬಂದ +ಭೂರಿಶ್ರವನ+ ನಿಲಿಸುವೆನ್
ಎಂದು +ಸಾತ್ಯಕಿ +ಬಿಟ್ಟನ್+ಆತನ +ಹೊರೆಗೆ +ನಿಜ +ರಥವ

ಅಚ್ಚರಿ:
(೧) ಒಂದು – ೧-೩ ಸಾಲಿನ ಮೊದಲ ಪದ

ಪದ್ಯ ೨೪: ದುರ್ಯೋಧನನು ತನ್ನವರನ್ನು ಹೇಗೆ ಮೂದಲಿಸಿದನು?

ಕಾಲ ವಹಿಲವ ಕಲಿಸಲೋಸುಗ
ಕೋಲಗುರು ಜಾರಿದನು ಶಲ್ಯನ
ಮೇಲು ಮುಸುಕನುವಾಯ್ತು ಬಿರುದೇನಾಯ್ತು ಗುರುಸುತನ
ಆಳುವಾಸಿಯ ಕಡುಹು ಕರ್ಣನ
ಬೀಳುಕೊಂಡುದು ಪೂತು ಮಝರೇ
ಬಾಲ ಎಂದವನೀಶ ಮೂದಲಿಸಿದನು ತನ್ನವರ (ದ್ರೋಣ ಪರ್ವ, ೬ ಸಂಧಿ, ೨೪ ಪದ್ಯ)

ತಾತ್ಪರ್ಯ:
ಓಡುವುದು ಹೇಗೆಂದು ತೋರಿಸಲು ದ್ರೋಣನು ಓಡಿಬಂದ, ಶಲ್ಯನು ತನ್ನಲ್ಲಿದ್ದ ಉತ್ತರೀಯದ ಮುಸುಕನ್ನು ಹಾಕಿಕೊಂಡ, ಅಶ್ವತ್ಥಾಮನ ಬಿರುದು ಏನಾಯಿತು? ಹೋಗಲಿ, ತಾನು ವೀರ ಛಲಗಾರ ಎಂಬ ಪರಾಕ್ರಮ ಕರ್ಣನಿಂದ ಜಾರಿ ಹೋಯಿತು, ಭಲೇ ಬಾಲಕ ಎಂದು ದುರ್ಯೋಧನನು ನುಡಿದನು.

ಅರ್ಥ:
ಕಾಲ: ಸಮಯ; ವಹಿಲ: ಬೇಗ, ತ್ವರೆ; ಕಲಿಸು: ತಿಳಿಸು; ಓಸುಗ: ಓಸ್ಕರ; ಕೋಲಗುರು: ಬಾಣವನ್ನು ಉಪಯೋಗಿಸಲು ಕಲಿಸುವ ಆಚಾರ್ಯ (ದ್ರೋಣ); ಜಾರು: ಕೆಳಗೆ ಬೀಳು; ಮುಸುಕು: ಹೊದಿಕೆ; ಅನುವು:ಸೊಗಸು; ಬಿರುದು: ಗೌರವಸೂಚಕ ಪದ; ಗುರು: ಆಚಾರ್ಯ; ಸುತ: ಮಗ; ಆಳು: ಸೈನಿಕ, ದೂತ; ಕಡು: ವಿಶೇಷ, ಅಧಿಕ; ಬೀಳುಕೊಂಡು: ತೆರಳು; ಪೂತು: ಭಲೇ; ಮಝರೇ: ಭೇಷ; ಬಾಲ: ಚಿಕ್ಕವ; ಅವನೀಶ: ರಾಜ; ಮೂದಲಿಸು: ಹಂಗಿಸು; ತನ್ನವ: ಜೊತೆಯವರು; ಶಲ್ಯ: ಉತ್ತರೀಯ, ಮದ್ರ ದೇಶದ ರಾಜ;

ಪದವಿಂಗಡಣೆ:
ಕಾಲ +ವಹಿಲವ +ಕಲಿಸಲೋಸುಗ
ಕೋಲಗುರು +ಜಾರಿದನು+ ಶಲ್ಯನ
ಮೇಲು +ಮುಸುಕ್+ಅನುವಾಯ್ತು +ಬಿರುದೇನಾಯ್ತು +ಗುರುಸುತನ
ಆಳುವಾಸಿಯ +ಕಡುಹು +ಕರ್ಣನ
ಬೀಳುಕೊಂಡುದು +ಪೂತು +ಮಝರೇ
ಬಾಲ +ಎಂದ್+ಅವನೀಶ +ಮೂದಲಿಸಿದನು +ತನ್ನವರ

ಅಚ್ಚರಿ:
(೧) ಮೂದಲಿಸುವ ಪರಿ – ಆಳುವಾಸಿಯ ಕಡುಹು ಕರ್ಣನ ಬೀಳುಕೊಂಡುದು; ಕಾಲ ವಹಿಲವ ಕಲಿಸಲೋಸುಗ ಕೋಲಗುರು ಜಾರಿದನು

ಪದ್ಯ ೨೬: ಅಭಿಮನ್ಯುವಿನ ಶಕ್ತಿ ಹೇಗಿತ್ತು?

ಗುರುಸುತನನೊಟ್ಟೈಸಿ ಶಲ್ಯನ
ಭರವಸವ ನಿಲಿಸಿದನು ಕೃಪನು
ಬ್ಬರದ ಗರ್ವವ ಮುರಿದು ಕೃತವರ್ಮಕನ ನೋಯಿಸಿದ
ಅರಸನನುಜರ ಸದೆದು ಬಾಹ್ಲಿಕ
ದುರುಳ ಸೌಬಲ ಸೋಮದತ್ತರ
ಹುರುಳುಗೆಡಿಸಿದನೊಬ್ಬ ಶಿಶು ಗೆಲಿದನು ಮಹಾರಥರ (ದ್ರೋಣ ಪರ್ವ, ೫ ಸಂಧಿ, ೨೬ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನನ್ನು ಸುಮ್ಮನಾಗಿಸಿ, ಶಲ್ಯನ ಸಮರ ಪ್ರವೀಣತೆಯನ್ನು ಗೆಲ್ಲುವ ಭರವಸೆಯನ್ನು ನಿಲ್ಲಿಸಿ, ಕೃತವರ್ಮನನ್ನು ನೋಯಿಸಿ, ಕೌರವನ ತಮ್ಮಂದಿರನ್ನು ಹೊಡೆದು, ಬಾಹ್ಲಿಕ ಶಕುನಿ ಸೋಮದತ್ತರನ್ನು ನಿಸ್ಸಹಾಯಕರನ್ನಾಗಿ ಮಾಡಿ, ಒಬ್ಬ ಅಭಿಮನ್ಯುವು ಮಹಾರಥರೆಲ್ಲರನ್ನೂ ಗೆದ್ದನು.

ಅರ್ಥ:
ಗುರು: ಆಚಾರ್ಯ; ಸುತ: ಮಗ; ಒಟ್ಟೈಸು: ಒಟ್ಟಾಗಿ ಸೇರಿಸು; ಭರವ: ವೇಗ; ನಿಲಿಸು: ತಡೆ; ಉಬ್ಬರ: ಅತಿಶಯ; ಗರ್ವ: ಅಹಂಕಾರ; ಮುರಿ: ಸೀಳು; ನೋವು: ಪೆಟ್ಟು; ಅರಸ: ರಾಜ; ಅನುಜ: ತಮ್ಮ; ಸದೆ: ಕುಟ್ಟು, ಪುಡಿಮಾಡು; ದುರುಳ: ದುಷ್ಟ; ಹುರುಳು: ಸತ್ತ್ವ, ಸಾರ; ಕೆಡಿಸು: ಹಾಳು ಮಾಡು; ಶಿಶು: ಮಗು; ಗೆಲಿದ: ಜಯಿಸು; ಮಹಾರಥ: ಪರಾಕ್ರಮಿ;

ಪದವಿಂಗಡಣೆ:
ಗುರುಸುತನನ್+ಒಟ್ಟೈಸಿ +ಶಲ್ಯನ
ಭರವಸವ+ ನಿಲಿಸಿದನು +ಕೃಪನ್
ಉಬ್ಬರದ +ಗರ್ವವ +ಮುರಿದು +ಕೃತವರ್ಮಕನ +ನೋಯಿಸಿದ
ಅರಸನ್+ಅನುಜರ +ಸದೆದು +ಬಾಹ್ಲಿಕ
ದುರುಳ +ಸೌಬಲ +ಸೋಮದತ್ತರ
ಹುರುಳು+ಕೆಡಿಸಿದನ್+ಒಬ್ಬ +ಶಿಶು +ಗೆಲಿದನು +ಮಹಾರಥರ

ಅಚ್ಚರಿ:
(೧) ಅಭಿಮನ್ಯು ಸದೆಬಡಿದ ಮಹಾರಥರು – ಅಶ್ವತ್ಥಾಮ, ಶಲ್ಯ, ಕೃಪ, ಕೃತವರ್ಮ, ಕೌರವರು, ಬಾಹ್ಲಿಕ, ಶಕುನಿ, ಸೋಮದತ್ತ