ಪದ್ಯ ೧೧: ವಿಶ್ವಾಮಿತ್ರರ ಯಾರ ಬಳಿ ಯಾವ ರೀತಿ ಗುರುದಕ್ಷಿಣೆ ಕೇಳಿದರು?

ಅಹುದು ಕಣ್ವನ ಮಾತು ಕೃಷ್ಣನ
ಮಹಿಮೆ ಘನವಿದನರಿದುಗರ್ವ
ಗ್ರಹವಿಡಿದು ಮರುಳಾಗದಿರು ಮುನ್ನೋರ್ವಗಾಲವನು
ಬಹಳ ಗುರುದಕ್ಷಿಣೆಗೆ ತೊಳಲಿದು
ಮಹಿಯೊಳೆಲ್ಲಿಯು ಘಟಿಸದಿರಲವ
ನಹವ ಮುರಿದನು ಬಳಿಕ ವಿಶ್ವಾಮಿತ್ರ ಮುನಿಯಂದು (ಉದ್ಯೋಗ ಪರ್ವ, ೯ ಸಂಧಿ, ೧೧ ಪದ್ಯ)

ತಾತ್ಪರ್ಯ:
ಕಣ್ವ ಮುನಿಗಳ ಮಾತು ನಿಜ. ಕೃಷ್ಣನ ಮಹಿಮೆ ಬಹಳ ಘನವಾದದ್ದು. ಹೆಚ್ಚಿನ ಗರ್ವವೆಂಬ ಗ್ರಹ ಹಿಡಿದು ಹುಚ್ಚಾಗಬೇಡ. ಹಿಂದೆ ಗಾಲವನು ವಿಶ್ವಾಮಿತ್ರರಲ್ಲಿ ವಿದ್ಯಾಭ್ಯಾಸ ಮಾಡಿ, ಗುರುವು ಬೇಡವೆಂದರೂ ಬಹಳವಾಗಿ ಪೀಡಿಸಿದನು. ಅವನ ಗರ್ವವನ್ನು ಮುರಿಯಲು ವಿಶ್ವಾಮಿತ್ರನು ಮೈಯಲ್ಲ ಬೆಳ್ಳಗೆ ಆದರೆ ಒಂದು ಕಿವಿ ಕಪ್ಪಗೆ ಇರುವ ಎಂಟುನೂರು ಕುದುರೆಗಳನ್ನು ತಂದುಕೊಡು ಎಂದನು. ಅಂತಹ ಕುದುರೆಗಳಿಗೆ ಗಾಲವನು ಪಟ್ಟ ಬವಣೆ ಯಾರಿಗೂ ಬೇಡ. ಹೀಗೆ ವಿಶ್ವಾಮಿತ್ರನು ಅಂದು ಗಾಲವನ ಗರ್ವವನು ಮುರಿದನು ಎಂದು ನಾರದರು ಹೇಳಿದರು.

ಅರ್ಥ:
ಅಹುದು: ಹೌದು; ಮಾತು: ನುಡಿ; ಮಹಿಮೆ: ಶ್ರೇಷ್ಠತೆ, ಔನ್ನತ್ಯ; ಘನ: ಶ್ರೇಷ್ಠ; ಅರಿ: ತಿಳಿ; ಗರ್ವ: ಅಹಂಕಾರ; ಮರುಳು:ಬುದ್ಧಿಭ್ರಮೆ, ಹುಚ್ಚು; ಮುನ್ನ: ಹಿಂದೆ; ಬಹಳ: ತುಂಬ; ಗುರು: ಆಚಾರ್ಯ; ದಕ್ಷಿಣೆ: ಕಾಣಿಕೆ, ಸಂಭಾವನೆ; ತೊಳಲು:ಬವಣೆ, ಸಂಕಟ; ಮಹಿ: ಭೂಮಿ; ಘಟಿಸು: ಸಂಭವಿಸು, ಉಂಟಾಗು; ಅಹ: ಅಹಂಕಾರ; ಮುರಿ: ಸೀಳು; ಬಳಿಕ: ನಂತರ;

ಪದವಿಂಗಡಣೆ:
ಅಹುದು+ ಕಣ್ವನ +ಮಾತು +ಕೃಷ್ಣನ
ಮಹಿಮೆ +ಘನ+ವಿದನ್+ಅರಿದು+ಗರ್ವ
ಗ್ರಹವಿಡಿದು +ಮರುಳಾಗದಿರು +ಮುನ್+ಓರ್ವ+ಗಾಲವನು
ಬಹಳ+ ಗುರುದಕ್ಷಿಣೆಗೆ+ ತೊಳಲಿದು
ಮಹಿಯೊಳ್+ಎಲ್ಲಿಯು +ಘಟಿಸದಿರಲ್+ಅವನ್
ಅಹವ +ಮುರಿದನು +ಬಳಿಕ +ವಿಶ್ವಾಮಿತ್ರ +ಮುನಿಯಂದು

ಅಚ್ಚರಿ:
(೧) ಮಹಿಮೆ, ಮಹಿ – ಮಹಿ ಪದದ ಬಳಕೆ
(೨) ಗಾಲ ಮತ್ತು ವಿಶ್ವಾಮಿತ್ರರ ಕಥೆಯನ್ನು ಸಂಕ್ಷಿಪ್ತದಲ್ಲಿ ಹೇಳುವ ಪದ್ಯ

ಪದ್ಯ ೬೬:ಪಾಂಡವರು ಗುರುದಕ್ಷಿಣೆಯನ್ನು ಹೇಗೆ ಈಡೇರಿಸಿದರು?

ಆತುಕೊಂಡರು ಪಾಂಡುಸುತರಭಿ
ಜಾತಸಮರವನಿವರ ಕೈಯಲಿ
ಮಾತು ಹಲವಿಲ್ಲೆನುತ ಹೊಕ್ಕರು ಕೊಂದು ಪರಬಲವ
ಘಾತಿಗಾನುವರಿಲ್ಲ ದೊರೆಯೆನು
ತಾತನನು ಮುತ್ತಿದರು ಗುರುಗಳಿ
ಗೀತನೇ ದಕ್ಶಿಣೆಯೆನುತ ಹಿಡಿದರು ಮಹೀಪತಿಯ (ಆದಿ ಪರ್ವ, ೭ ಸಂಧಿ, ೬೬ ಪದ್ಯ)

ತಾತ್ಪರ್ಯ:
ಪಾಂಡವರು ದಾಳಿಗೆ ಬೆಂಬಲವಾಗಿ ಹೋದರು, ಇವರೊಡನೆ ಮಾತನಾಡುವುದು ವ್ಯರ್ಥವೆಂದು ತಿಳಿದು, ಪಾಂಚಾಲ ಸೈನ್ಯವನ್ನು ಸಂಹರಿಸಿದರು, ಈ ದಾಳಿಯನ್ನು ಎದುರಿಸುವವರು ಯಾರು ಕಾಣಲಿಲ್ಲ, ಮುಂದೆ ದ್ರುಪದನನ್ನು ಮುತ್ತಿದರು, ಮತ್ತು ಇವನನ್ನು ತಮ್ಮ ಗುರುಗಳಿಗೆ ದಕ್ಷಿಣೆಯಾಗಿ ನೀಡುವುದಾಗಿ ಅವನನ್ನು ಸೆರೆಹಿಡಿದರು.

ಅರ್ಥ:
ಆತು: ಎದುರಿಸು, ಆಶ್ರಯಿಸು; ಸುತ: ಮಗ;ಅಭಿಜಾತ: ಉತ್ತಮಕುಲದಲ್ಲಿ ಹುಟ್ಟಿದವ, ವಿದ್ಯಾವಂತ; ಸಮರ: ಜಗಳ, ಯುದ್ಧ; ಮಾತು: ವಾಣಿ, ಭಾಷೆ; ಹಲವಿಲ್ಲ: ಸರಿಯಿಲ್ಲ, ಸೂಕ್ತವಲ್ಲ; ಹೊಕ್ಕು: ನುಗ್ಗು; ಕೊಂದು: ಅಳಿ, ಸಾಯಿಸು; ಪರಬಲವ: ಶತ್ರುಸೈನ್ಯ, ವೈರಿಬಲ; ಘಾತ: ಹೊಡೆತ, ಪೆಟ್ಟು, ಅಪಾಯ; ದೊರೆಯೆನು: ಸಿಕ್ಕನು, ಸಿಗಲಿಲ್ಲ; ತಾತ: ತಂದೆ, ಜನಕ; ಮುತ್ತು: ಸುತ್ತುವರಿ; ಗುರು: ಆಚಾರ್ಯ; ದಕ್ಷಿಣೆ: ಸಂಭಾವನೆ; ಹಿಡಿ: ಬಂಧಿಸು; ಮಹಿ: ಭೂಮಿ; ಮಹೀಪತಿ: ರಾಜ;

ಪದವಿಂಗಡನೆ:
ಆತು+ಕೊಂಡರು +ಪಾಂಡು+ಸುತರ್+ಅಭಿ
ಜಾತ+ಸಮರವನ್+ಇವರ ಕೈಯಲಿ
ಮಾತು +ಹಲವಿಲ್ಲ್+ಎನುತ+ ಹೊಕ್ಕರು+ ಕೊಂದು +ಪರಬಲವ
ಘಾತಿಗಾನುವರಿಲ್ಲ+ ದೊರೆಯೆನು
ತಾತನನು +ಮುತ್ತಿದರು+ ಗುರುಗಳಿಗ್
ಈತನೇ +ದಕ್ಶಿಣೆ+ಯೆನುತ+ ಹಿಡಿದರು +ಮಹೀಪತಿಯ

ಅಚ್ಚರಿ:
(೧) ಆತು, ಮಾತು; ತಾತ್, ಜಾತ: ಪ್ರಾಸ ಪದಗಳು