ಪದ್ಯ ೪೫: ಧರ್ಮರಾಯನು ಶಿಶುಪಾಲನನ್ನು ಹೇಗೆ ಕರೆತಂದನು?

ಅರಿಯರೇ ಮುನಿ ಮುಖ್ಯರೀತನ
ನುರುವ ದೈವವಿದೆಂದು ನೀ ಕ
ಟ್ಟರಿತಗಾರನೆ ರಾಯರಿದೆಲಾ ಸಕಲ ಗುಣಯುತರು
ಕರುಬತನದಲಿ ನೀನಕಟ ತೆರ
ನರಿಯದೆಂಬರೆ ಬಾರೆನುತ ಮುಂ
ಜೆರಗ ಹಿಡಿದೆಳೆದವನ ತಂದನು ಭೂಪಜನ ಸಹಿತ (ಸಭಾ ಪರ್ವ, ೯ ಸಂಧಿ, ೪೫ ಪದ್ಯ)

ತಾತ್ಪರ್ಯ:
ಶಿಶುಪಾಲನೇ, ಇಲ್ಲಿರುವ ಪ್ರಮುಖ ಋಷಿಮುನಿಗಳು ಶೀಕೃಷ್ಣನು ಹೆಚ್ಚಿನ ದೇವರೆಂದು ತಿಳಿದಿಲ್ಲವೇ? ನೀಣು ಅಂತಹ ಮಹಾವೀರನೇ, ಸಕಲಗುಣಗಳನ್ನುಳ್ಳ ರಾಜರು ಸುಮ್ಮನೇ ಇಲ್ಲವೇ? ಹೊಟ್ಟೆಯಕಿಚ್ಚಿನಿಂದ ನೀನು ತಿಳಿಯದೇ ಮಾತನಾಡಬಹುದೇ? ಎನ್ನುತ್ತಾ ಧರ್ಮರಾಜನು ಶಿಶುಪಾಲನ ಉತ್ತರೀಯವನ್ನು ಹಿಡಿದೆಳೆದು ಉಳಿದ ರಾಜರೊಡನೆ ಹಿಂದಕ್ಕೆ ಕರೆತಂದನು.

ಅರ್ಥ:
ಅರಿ: ತಿಳಿ; ಮುನಿ: ಋಷಿ; ಮುಖ್ಯ: ಪ್ರಮುಖ; ಉರು: ಹೆಚ್ಚಾದ, ಶ್ರೇಷ್ಠ; ದೈವ: ಭಗವಮ್ತ; ಕಟ್ಟರಿತಗಾರ: ವಿಶೇಷಜ್ಞಾನವುಳ್ಳ; ರಾಯ: ರಾಜ; ಸಕಲ: ಎಲ್ಲಾ; ಗುಣ: ನಡತೆ, ಸ್ವಭಾವ; ಕರುಬು: ಹೊಟ್ಟೆಕಿಚ್ಚುಪಡು; ಅಕಟ: ಅಯ್ಯೋ; ತೆರ: ಪದ್ಧತಿ; ಅರಿ: ತಿಳಿ; ಎಂಬರೆ: ಹೇಳಿದರೆ; ಬಾ: ಆಗಮಿಸು; ಮುಂಜೆರಗ: ಉತ್ತರೀಯ; ಹಿಡಿದು: ಗ್ರಹಿಸು,ಕೈಕೊಳ್ಳು; ಎಳೆ: ತನ್ನ ಕಡೆಗೆ ಸೆಳೆದುಕೊ; ತಂದನು: ಬರೆಮಾಡು; ಭೂಪ: ರಾಜ; ಜನ: ಸಮುದಾಯ; ಸಹಿತ: ಜೊತೆ;

ಪದವಿಂಗಡಣೆ:
ಅರಿಯರೇ +ಮುನಿ +ಮುಖ್ಯರ್+ಈತನನ್
ಉರುವ +ದೈವವಿದೆಂದು +ನೀ +ಕ
ಟ್ಟರಿತಗಾರನೆ+ ರಾಯರ್+ಇದೆಲಾ +ಸಕಲ+ ಗುಣಯುತರು
ಕರುಬತನದಲಿ+ ನೀನ್+ಅಕಟ +ತೆರನ್
ಅರಿಯದ್+ಎಂಬರೆ+ ಬಾರೆನುತ +ಮುಂ
ಜೆರಗ+ ಹಿಡಿದೆಳೆದವನ+ ತಂದನು+ ಭೂಪಜನ +ಸಹಿತ

ಅಚ್ಚರಿ:
(೧) ಕಟ್ಟರಿತಗಾರ – ಪದದ ಬಳಕೆ

ಪದ್ಯ ೩೯: ಸಿರಿಯುಳ್ಳವನನ್ನು ಲೋಕ ಹೇಗೆ ಭಾವಿಸುತ್ತದೆ?

ಸಿರಿಯನುಳ್ಳವನವನೆ ಕುಲಜನು
ಸಿರಿಯನುಳ್ಳವನೇ ವಿದಗ್ಧನು
ಸಿರಿಯನುಳ್ಳವನೇ ಮಹಾತ್ಮನು ಸಕಲ ಗುಣಯುತನು
ಸಿರಿಯನುಳ್ಳವನೇ ಸುಶೀಲನು
ಸಿರಿರಹಿತ ಶಿವನಾದೊಡಾಗಲಿ
ಸರಕು ಮಾಡದು ಲೋಕವವನೀಪಾಲ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೩೯ ಪದ್ಯ)

ತಾತ್ಪರ್ಯ:
ಐಶ್ವರ್ಯವನ್ನು ಸಮಾಜ ಹೇಗೆ ನೋಡುತ್ತದೆಂದು ವಿದುರ ಈ ಪದ್ಯದಲ್ಲಿ ತಿಳಿಸಿದ್ದಾನೆ. ಐಶ್ವರ್ಯವಿದ್ದವನೇ ಒಳ್ಳೆಯ ಕುಲದಲ್ಲಿ ಜನಿಸಿದವನು, ಐಶ್ವರ್ಯವಿದ್ದವನೇ ಪಂಡಿತನು, ಅವನೆ ಮಹಾತ್ಮನು, ಅವನಲ್ಲಿ ಸಕಲ ಸದ್ಗುಣಗಳೂ ಇವೆ, ಅವನೇ ಒಳ್ಳೆಯ ಶೀಲವಂತ ಎಂದು ಲೋಕ ಭಾವಿಸುತ್ತದೆ. ಐಶ್ವರ್ಯವಿಲ್ಲದವನು ಸ್ವಯಂ ಶಿವನೇ ಆಗಿದ್ದರೂ ಅವನನ್ನು ಲಕ್ಷಿಸುವುದಿಲ್ಲ.

ಅರ್ಥ:
ಸಿರಿ: ಐಶ್ವರ್ಯ; ಉಳ್ಳವ: ಇರುವ; ಕುಲಜ: ಒಳ್ಳೆಕುಲದಲ್ಲಿ ಹುಟ್ಟಿದ; ವಿದಗ್ಧ: ವಿದ್ವಾಂಸ; ಮಹಾತ್ಮ: ಶ್ರೇಷ್ಠ; ಸಕಲ: ಎಲ್ಲಾ; ಗುಣ: ನಡತೆ, ಸ್ವಭಾವ; ಸುಶೀಲ: ಒಳ್ಳೆಯ ನಡತೆ, ಸದಾಚಾರ; ರಹಿತ: ಇಲ್ಲದ ಸ್ಥಿತಿ; ಶಿವ: ಈಶ್ವರ; ಸರಕು:ಲಕ್ಷ್ಯ; ಲೋಕ: ಜಗತ್ತು; ಅವನೀಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಸಿರಿಯನ್+ಉಳ್ಳವನವನೆ+ ಕುಲಜನು
ಸಿರಿಯನ್+ಉಳ್ಳವನೇ +ವಿದಗ್ಧನು
ಸಿರಿಯನ್+ಉಳ್ಳವನೇ +ಮಹಾತ್ಮನು +ಸಕಲ +ಗುಣಯುತನು
ಸಿರಿಯನ್+ಉಳ್ಳವನೇ +ಸುಶೀಲನು
ಸಿರಿರಹಿತ+ ಶಿವನಾದೊಡ್+ಆಗಲಿ
ಸರಕು +ಮಾಡದು +ಲೋಕವ್+ಅವನೀಪಾಲ+ ಕೇಳೆಂದ

ಅಚ್ಚರಿ:
(೧) ಸಿರಿ – ೫ ಸಾಲಿನ ಮೊದಲ ಪದ
(೨) ಸಿರಿಯಿದ್ದವರನ್ನು ೫ ರೀತಿ ಸಮಾಜ ಗುರುತಿಸುತ್ತದೆ, ಕುಲಜ, ವಿದಗ್ಧ, ಮಹಾತ್ಮ, ಗುಣಯುತ, ಸುಶೀಲ