ಪದ್ಯ ೬೩: ಗುಜ್ಜರ ದೇಶದ ರಾವುತರು ಹೇಗೆ ಹೋರಾಡಿದರು?

ಜರೆದು ಸರಿಸದಲೇರಿದರೆ ಸಿಡಿ
ಲುರುಬಿದಂತಾಯಿತ್ತು ಘಾಯವ
ನರುಹಿದರೆ ದೂಹತ್ತಿ ರಾವ್ತರ ಮಸ್ತಕದೊಳಿಳಿದು
ಕೊರೆದುದಿಳೆಯನು ಹಯವ ನೂಕಿದ
ಡೊರಲಿದನು ತಳ ಕಮಠನೆನೆ ತ
ತ್ತರಿದರಿದು ಹೊಯ್ದಾಡಿದರು ಗುಜ್ಜರದ ರಾವುತರು (ಭೀಷ್ಮ ಪರ್ವ, ೪ ಸಂಧಿ, ೬೩ ಪದ್ಯ)

ತಾತ್ಪರ್ಯ:
ಗುಜ್ಜರ ದೇಶದ ರಾವುತರು ಎದುರಾಳಿಗಳನ್ನು ಜರೆದು ಹೊಡೆದ ಸದ್ದು ಸಿಡಿಲು ಬಡಿತದಂತೆ ಕೇಳಿತು. ದೂಹತ್ತಿಗಳ ಹೊಡೆತ ರಾವುತರ ತಲೆಗಳನ್ನು ಕಡಿದು ನೆಲಕ್ಕೆ ಅಪ್ಪಳಿಸಿತು. ಕುದುರೆಗಳನ್ನು ಅಟ್ಟಿದರೆ ಹೊಡೆತದಿಂದ ಕೂರ್ಮನು ಒರಲಿದನು. ಶತ್ರುಗಳನ್ನು ತರಿತರಿದು ಅವರು ಹೋರಾಡಿದರು.

ಅರ್ಥ:
ಜರೆ: ಬಯ್ಯುವುದು; ಸರಿಸ: ವೇಗ, ರಭಸ; ಏರು: ಮೇಲೇಳು; ಸಿಡಿಲು: ಅಶನಿ; ಉರುಬು: ಅತಿಶಯವಾದ ವೇಗ; ಘಾಯ: ಪೆಟ್ಟು; ಅರುಹು:ತಿಳಿಸು, ಹೇಳು; ದೂಹತ್ತಿ: ಎರಡು ಕಡೆಯೂ ಚೂಪಾದ ಕತ್ತಿ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಮಸ್ತಕ: ಶಿರ; ಇಳಿ: ಕೆಳಗೆ ಬಾಗು; ಕೊರೆ: ಕತ್ತರಿಸು; ಇಳೆ: ಭೂಮಿ; ಹಯ: ಕುದುರೆ; ನೂಕು: ತಳ್ಳು; ಒರಲು: ಅರಚು, ಕೂಗಿಕೊಳ್ಳು; ತಳ: ಸಮತಟ್ಟಾದ ಪ್ರದೇಶ; ಕಮಠ:ಕೂರ್ಮ; ತತ್ತರಿ: ಒಂದೇಸವನೆ ಹೊಡೆ; ಹೊಯ್ದಾಡು: ಹೋರಾಡು; ಗುಜ್ಜರ: ಒಂದು ಪ್ರಾಂತ್ಯದ ಹೆಸರು; ರಾವುತ: ಅಶ್ವಾರೋಹಿ;

ಪದವಿಂಗಡಣೆ:
ಜರೆದು +ಸರಿಸದಲ್+ಏರಿದರೆ+ ಸಿಡಿಲ್
ಉರುಬಿದಂತಾಯಿತ್ತು +ಘಾಯವನ್
ಅರುಹಿದರೆ+ ದೂಹತ್ತಿ+ ರಾವ್ತರ+ ಮಸ್ತಕದೊಳ್+ಇಳಿದು
ಕೊರೆದುದ್+ಇಳೆಯನು +ಹಯವ +ನೂಕಿದಡ್
ಒರಲಿದನು +ತಳ+ ಕಮಠನ್+ಎನೆ +ತ
ತ್ತರಿದರಿದು +ಹೊಯ್ದಾಡಿದರು +ಗುಜ್ಜರದ+ ರಾವುತರು

ಅಚ್ಚರಿ:
(೧) ಕುದುರೆಗಳು ಓಡುವ ವೇಗವನ್ನು ಹೇಳುವ ಪರಿ – ಕೊರೆದುದಿಳೆಯನು ಹಯವ ನೂಕಿದ
ಡೊರಲಿದನು ತಳ ಕಮಠನೆನೆ

ಪದ್ಯ ೧೫: ಯಾವ ದೇಶದ ರಾಜರು ಕೌರವಸೇನೆಯಲ್ಲಿದ್ದರು?

ಈತ ಮಾಳವನೀತ ಕೊಂಕಣ
ನೀತ ಗುಜ್ಜರನೀತ ಬರ್ಬರ
ನೀತ ಕೋಸಲನೀತ ಖೇಟಕನೀತ ಹಮ್ಮೀರ
ಈತ ಕೇರಳನೀತ ಸಿಂಹಳ
ನೀತ ಬೋಟಕನೀತ ಚೀನಕ
ನೀತ ಮಾಗಧನೀತ ದ್ರಾವಿಡನೀತ ಗೌಳನೃಪ (ಭೀಷ್ಮ ಪರ್ವ, ೩ ಸಂಧಿ, ೧೫ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ ನೋಡು, ಇವನು ಮಾಳವ, ಇವನು ಕೊಂಕಣ, ಈತ ಗುರ್ಜರ, ಈತ ಬರ್ಬರ, ಈತ ಕೋಸಲ, ಇವನು ಖೇಟಕ, ಇವನು ಹಮ್ಮೀರ, ಇವನು ಕೇರಳ, ಸಿಂಹಲ,ಬೋಟ, ಚೀನ, ಮಗಧ, ದ್ರವಿಡ, ಗೌಡ ದೇಶದ ರಾಜರು.

ಅರ್ಥ:
ಈತ: ಇವನು; ನೃಪ: ರಾಜ;

ಪದವಿಂಗಡಣೆ:
ಈತ +ಮಾಳವನ್+ಈತ +ಕೊಂಕಣನ್
ಈತ+ ಗುಜ್ಜರನ್+ಈತ ಬರ್ಬರನ್
ಈತ+ ಕೋಸಲನ್+ ಈತ+ ಖೇಟಕನ್+ಈತ+ ಹಮ್ಮೀರ
ಈತ+ ಕೇರಳನ್+ಈತ +ಸಿಂಹಳನ್
ಈತ+ ಬೋಟಕನ್+ಈತ +ಚೀನಕನ್
ಈತ+ ಮಾಗಧನ್+ಈತ +ದ್ರಾವಿಡನ್+ಈತ +ಗೌಳ+ನೃಪ

ಅಚ್ಚರಿ:
(೧) ಈತ ಪದದ ೧-೬ ಸಾಲಿನ ಮೊದಲ ಪದ, ೧೪ ಬಾರಿ ಪ್ರಯೋಗ
(೨) ರಾಜರ ಹೆಸರುಗಳು – ಮಾಳವ, ಕೊಂಕಣ, ಗುಜ್ಜರ, ಬರ್ಬರ, ಕೋಸಲ, ಖೇಟಕ, ಹಮ್ಮೀರ, ಕೇರಳ, ಸಿಂಹಳ, ಬೋಟಕ, ಚೀನಕ, ಮಾಗಧ, ದ್ರಾವಿಡ, ಗೌಳ – ೧೪ ರಾಜರ ಹೆಸರು