ಪದ್ಯ ೧೧: ಊರ್ವಶಿಯ ಸ್ನೇಹಿತೆಯರ ಬಳಿ ಯಾರು ಬಂದರು?

ಮೆಲುನುಡಿಗೆ ಗಿಣಿ ಹೊದ್ದಿದವು ಸರ
ದುಲಿಗೆ ಕೋಗಿಲೆಯೌಕಿದವು ಪರಿ
ಮಳದ ಪಸರಕೆ ತೂಳಿದವು ತುಂಬಿಗಳು ಡೊಂಬಿಯಲಿ
ಹೊಳೆವ ಮುಖಕೆ ಚಕೋರ ಚಯವಿ
ಟ್ಟಳಿಸಿದವು ನೇವುರದ ಬೊಬ್ಬೆಗೆ
ಸಿಲುಕಿದವು ಹಂಸೆಗಳು ಕಮಲಾನನೆಯ ಕೆಳದಿಯರ (ಅರಣ್ಯ ಪರ್ವ, ೯ ಸಂಧಿ, ೧೧ ಪದ್ಯ)

ತಾತ್ಪರ್ಯ:
ಊರ್ವಶಿಯ ಕೆಳದಿಯರ ಮೆಲುನುಡಿಗಳನ್ನು ಕೇಳಿ, ಗಿಣಿಗಳು ಅವರ ಬಳಿಗೆ ಬಂದವು, ಅವರ ಸಂಗೀತವನ್ನು ಕೇಳಿ ಕೋಗಿಲೆಗಳು ಹತ್ತಿರಕ್ಕೆ ಬಂದವು, ಅವರ ಅಂಗದ ಪರಿಮಳವನ್ನು ಮೂಸಿ ದುಂಬಿಗಳ ಹಿಂಡುಗಳು ಅವರ ಹತ್ತಿರಕ್ಕೆ ಬಂದವು, ಅವರ ಹೊಳೆಯುವ ಮುಖಗಳನ್ನು ನೋಡಿ ಚಂದ್ರ ಬಂದನೆಂದು ಚಕೋರ ಪಕ್ಷಿಗಳು ಹಾರಿ ಬಂದವು, ಅವರ ಕಾಲಂದುಗೆಯ ಸದ್ದಿಗೆ ಹಂಸಗಳು ಊರ್ವಶಿಯ ಸ್ನೇಹಿತೆಯರ ಬಳಿ ಬಂದವು.

ಅರ್ಥ:
ಮೆಲುನುಡಿ: ಮೃದು ವಚನ; ಗಿಣಿ: ಶುಕ; ಹೊದ್ದು: ಹೊಂದು, ಸೇರು; ಸರ: ಸ್ವರ, ದನಿ; ಉಲಿ: ಧ್ವನಿಮಾಡು, ಕೂಗು; ಔಕು: ಗುಂಪು, ಒತ್ತು; ಪರಿಮಳ: ಸುಗಂಧ; ಪಸರು: ಹರಡು; ತೂಳು: ಬೆನ್ನಟ್ಟು, ಹಿಂಬಾಲಿಸು; ತುಂಬಿ: ದುಂಬಿ, ಜೀನು; ಡೊಂಬಿ: ಗುಂಪು, ಸಮೂಹ; ಹೊಳೆ: ಪ್ರಕಾಶ; ಮುಖ: ಆನನ; ಚಕೋರ: ಚಾತಕ ಪಕ್ಷಿ; ಚಯ: ಕಾಂತಿ; ಇಟ್ಟಳಿಸು: ದಟ್ಟವಾಗು, ಒತ್ತಾಗು; ನೇವುರ: ಅಂದುಗೆ, ನೂಪುರ; ಬೊಬ್ಬೆ: ಜೋರಾದ ಶಬ್ದ; ಸಿಲುಕು: ಬಂಧನಕ್ಕೊಳಗಾಗು; ಹಂಸ: ಮರಾಲ; ಕಮಲಾನನೆ: ಕಮಲದಂತ ಮುಖ; ಕೆಳದಿ: ಗೆಳತಿ, ಸ್ನೇಹಿತೆ;

ಪದವಿಂಗಡಣೆ:
ಮೆಲು+ನುಡಿಗೆ+ ಗಿಣಿ +ಹೊದ್ದಿದವು +ಸರದ್
ಉಲಿಗೆ+ ಕೋಗಿಲೆ+ಔಕಿದವು+ ಪರಿ
ಮಳದ +ಪಸರಕೆ+ ತೂಳಿದವು +ತುಂಬಿಗಳು+ ಡೊಂಬಿಯಲಿ
ಹೊಳೆವ +ಮುಖಕೆ +ಚಕೋರ +ಚಯವಿ
ಟ್ಟಳಿಸಿದವು ನೇವುರದ +ಬೊಬ್ಬೆಗೆ
ಸಿಲುಕಿದವು +ಹಂಸೆಗಳು+ ಕಮಲಾನನೆಯ+ ಕೆಳದಿಯರ

ಅಚ್ಚರಿ:
(೧) ಹೊದ್ದಿದವು, ಔಕಿದವು, ತೂಳಿದವು, ವಿಟ್ಟಳಿಸಿದವು, ಸಿಲುಕಿದವು – ಪದಗಳ ಬಳಕೆ
(೨) ಗಿಣಿ, ಕೋಗಿಲೆ, ತುಂಬಿ, ಚಕೋರ , ಹಂಸೆ – ಉಪಮಾನಕ್ಕೆ ಬಳಸಿದುದು

ಪದ್ಯ ೨೩: ದುರ್ಯೋಧನನ ತಮ್ಮಂದಿರ ಸತ್ವ ಭೀಮನೆದುರು ನಿಲ್ಲಬಲ್ಲುದೆ?

ಗಿಡಗನೆತ್ತಲು ಗಿಣಿಯ ಮರಿಗಳ
ಗಡಣವೆತ್ತಲು ತೋಳನೆತ್ತಲು
ತೊಡಕುವರೆ ತಗರೆತ್ತಲಿವರಿಗೆ ಗೆಲವು ಸೋಲವನು
ನುಡಿಯಲಮ್ಮೆನು ನಿನ್ನ ಮಕ್ಕಳ
ಮಿಡುಕಿನಂತರವೇನು ಪ್ರಳಯದ
ಸಿಡಿಲ ಬಲುಹೋ ಭೀಮನೋ ನಾವರಿಯೆವಿದನೆಂದ (ಕರ್ಣ ಪರ್ವ, ೧೯ ಸಂಧಿ, ೨೩ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನಿಗೆ ಯುದ್ಧದ ವಿವರವನ್ನು ತಿಳಿಸುತ್ತಾ, ಗಿಡುಗವೆಲ್ಲಿ ಗಿಣಿಮರಿಗಳ ಗುಂಪೆಲ್ಲಿ? ತೋಳದ ಜೊತೆ ಟಗರು ಹೋರಾಡಲು ಬಲ್ಲದೆ? ಇವರ ನಡುವೆ ಸೋಲು ಗೆಲುವು ಯಾರದೆಂದು ನಾನು ಹೇಳುವುದಿಲ್ಲ, ಪ್ರಳಯದ ಸಿಡಿಲಿನ ಸತ್ವವೇ ಭೀಮನು, ಅವನೆದುರಿನಲ್ಲಿ ನಿನ್ನ ಮಕ್ಕಳ ಸತ್ವವೆಲ್ಲಿ ಎಂದು ಸಂಜಯನು ಹೇಳಿದನು.

ಅರ್ಥ:
ಗಿಡಗ: ಒಂದು ಬಗೆಯ ಹಕ್ಕಿ; ಗಿಣಿ:ಶುಕ; ಮರಿ: ಚಿಕ್ಕ, ಎಳೆಯದು, ಕೂಸು; ಗಡಣ: ಗುಂಪು, ಸಮೂಹ; ತೋಳ: ವೃಕ; ತೊಡಕು:ಸಿಕ್ಕು, ಸೆಣಸು, ಅಡ್ಡಿ; ತಗರು: ಟಗರು, ಮೇಷ; ಗೆಲುವು: ಜಯ; ಸೋಲು: ಅಪಜಯ; ನುಡಿ: ಮಾತು; ಮಕ್ಕಳು: ಸುತರು; ಮಿಡುಕು: ನಡುಕ, ಕಂಪನ; ಅಂತರ: ದೂರ; ಪ್ರಳಯ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ, ಅಳಿವು; ಸಿಡಿಲು: ಚಿಮ್ಮು, ಸಿಡಿ; ಬಲು: ಶಕ್ತಿ; ಅರಿ: ತಿಳಿ;

ಪದವಿಂಗಡಣೆ:
ಗಿಡಗನ್+ಎತ್ತಲು +ಗಿಣಿಯ +ಮರಿಗಳ
ಗಡಣವೆತ್ತಲು +ತೋಳನೆತ್ತಲು
ತೊಡಕುವರೆ+ ತಗರೆತ್ತಲ್+ಇವರಿಗೆ +ಗೆಲವು +ಸೋಲವನು
ನುಡಿಯಲಮ್ಮೆನು +ನಿನ್ನ +ಮಕ್ಕಳ
ಮಿಡುಕಿನ್+ಅಂತರವೇನು +ಪ್ರಳಯದ
ಸಿಡಿಲ +ಬಲುಹೋ +ಭೀಮನೋ +ನಾವರಿಯೆವ್+ಇದನೆಂದ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಗಿಡಗನೆತ್ತಲು ಗಿಣಿಯ ಮರಿಗಳ ಗಡಣವೆತ್ತಲು ತೋಳನೆತ್ತಲು ತೊಡಕುವರೆ ತಗರೆತ್ತಲಿವರಿಗೆ ಗೆಲವು ಸೋಲವನು

ಪದ್ಯ ೪೨: ಕರ್ಣನೇಕೆ ಯುಧಿಷ್ಠಿರನೆದುರು ಯುದ್ಧ ಮಾಡಲು ಹೆದರುತ್ತಾನೆ?

ಅಂಜುವೆವು ನಿಮಗರಸರೇ ಬಲ
ಪಂಜರದ ಗಿಣಿ ನೀವು ಸೊಕ್ಕಿದ
ಮಂಜರನ ಪಡಿಮುಖಕೆ ನಿಲುವುದು ಉಚಿತವೇ ನಿಮಗೆ
ಭಂಜನೆಗೆ ಬಲುಹುಳ್ಳೊಡೆಯು ನಿಮ
ಗಂಜುವರು ಗುರು ಭೀಷ್ಮರಾಪರಿ
ರಂಜಕರು ತಾವಲ್ಲೆನುತ ತಾಗಿದನು ಭೂಪತಿಯ (ಕರ್ಣ ಪರ್ವ, ೧೧ ಸಂಧಿ, ೪೨ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ತನ್ನೆದುರು ಬಂದುದನ್ನು ಕಂಡ ಕರ್ಣನು, ಅರಸರೇ! ನಾವು ನಿಮಗೆ ಹೆದರುತ್ತೇವೆ, ಏಕೆಂದರೆ ನಿಮ್ಮ ಸೈನ್ಯದ ಪಂಜರದಲ್ಲಿಯ ಗಿಣಿಯಂತೆ ಇರುವವರು ನೀವು. ಸೊಕ್ಕಿದ ಬೆಕ್ಕಿಗೆದುರು ನಿಲ್ಲುವುದು ಉಚಿತವೇ? ನಿಮ್ಮನ್ನು ಭಂಜಿಸುವ ಶಕ್ತಿಯಿದ್ದರೂ ಭೀಷ್ಮ ದ್ರೋಣರು ನಿಮಗ ಹೆದರುತ್ತಿದ್ದರು. ಅವರಂತೆ ತೋರಿಕೆಯ ಯುದ್ಧ ಮಾದುವವರು ನಾವಲ್ಲ ಎಂದು ಕರ್ಣನು ಗುಡುಗಿದನು.

ಅರ್ಥ:
ಅಂಜು: ಹೆದರು; ಅರಸ: ರಾಜ; ಬಲ: ಸೈನ್ಯ; ಪಂಜರ: ಗೂಡು; ಗಿಣಿ: ಶುಕ; ಸೊಕ್ಕು: ಕೊಬ್ಬಿದ; ಮಂಜರ: ಬೆಕ್ಕು; ಪಡಿ; ವಿರುದ್ಧ; ಪಡಿಮುಖ: ಎದುರಾಳಿ; ಮುಖ: ಆನನ; ನಿಲುವು: ನಿಂತುಕೊಳ್ಳು; ಉಚಿತ: ಸರಿಯಾದ; ಭಂಜನೆ: ಸೀಳು, ಹೋರಾಡು; ಬಲುಹು: ಶಕ್ತಿ; ಅಂಜು: ಹೆದರು; ಗುರು: ದ್ರೋಣ; ಪರಿ: ರೀತಿ; ರಂಜಕ: ರಂಜಿಸುವವ,ಮನೋಹರ; ತಾಗು: ಮುಟ್ಟು, ಅಪ್ಪಳಿಸು; ಭೂಪತಿ: ರಾಜ (ಯುಧಿಷ್ಠಿರ);

ಪದವಿಂಗಡಣೆ:
ಅಂಜುವೆವು +ನಿಮಗ್+ಅರಸರೇ +ಬಲ
ಪಂಜರದ+ ಗಿಣಿ +ನೀವು +ಸೊಕ್ಕಿದ
ಮಂಜರನ+ ಪಡಿಮುಖಕೆ+ ನಿಲುವುದು +ಉಚಿತವೇ +ನಿಮಗೆ
ಭಂಜನೆಗೆ +ಬಲುಹುಳ್ಳೊಡೆಯು+ ನಿಮಗ್
ಅಂಜುವರು +ಗುರು +ಭೀಷ್ಮರ್+ಆ+ಪರಿ
ರಂಜಕರು+ ತಾವಲ್ಲೆನುತ +ತಾಗಿದನು +ಭೂಪತಿಯ

ಅಚ್ಚರಿ:
(೧) ಯುಧಿಷ್ಥಿರನನ್ನು ಬಲಪಂಜರದ ಗಿಣಿ ಎಂದು ಕರೆದಿರುವುದು
(೨) ಪಂಜರ, ಮಂಜರ – ಪ್ರಾಸ ಪದಗಳು