ಪದ್ಯ ೪: ಬಲರಾಮನು ಕೃಷ್ಣನಿಗೆ ಏನು ಹೇಳಿದ?

ಆಹವದಿ ಪಾಂಡವ ಮಮ ಪ್ರಾ
ಣಾಹಿ ಎಂಬೀ ನುಡಿಯ ಸಲಿಸಿದೆ
ಬೇಹವರನುಳುಹಿದೆ ಕುಮಾರರ ನಿನ್ನ ಮೈದುನರ
ಗಾಹುಗತಕದಲೆಮ್ಮ ಶಿಷ್ಯಂ
ಗೀ ಹದನ ವಿರಚಿಸಿದೆ ನಿನ್ನಯ
ಮೋಹದವರೇ ಗೆಲಲಿಯೆಂದನು ಹರಿಗೆ ಬಲರಾಮ (ಗದಾ ಪರ್ವ, ೬ ಸಂಧಿ, ೪ ಪದ್ಯ)

ತಾತ್ಪರ್ಯ:
ಬಲರಾಮನು ಕೃಷ್ಣನಿಗೆ, ಎಲೈ ಕೃಷ್ಣ, ಮಮಪ್ರಾಣಾಹಿ ಪಾಂಡವಾಃ ಎಂಬ ನಿನ್ನ ಪ್ರತಿಜ್ಞೆಯನ್ನು ನೀನು ಉಳಿಸಿಕೊಂಡೆ. ನಿನಗೆ ಬೇಕಾದ ಮೈದುನರನ್ನು ಉಳಿಸಿಕೊಂಡೆ, ಕಪಟದಿಂದ ನನ್ನ ಶಿಷ್ಯನಿಗೆ ಈ ದುರ್ಗತಿಯನ್ನು ತಂದೆ. ನಿನ್ನ ಮೋಹದವರೇ ಗೆಲ್ಲಲಿ ಎಂದನು.

ಅರ್ಥ:
ಆಹವ: ಯುದ್ಧ; ಪ್ರಾಣ: ಜೀವ; ನುಡಿ: ಮಾತು; ಸಲಿಸು: ದೊರಕಿಸಿ ಕೊಡು; ಬೇಹ:ಬೇಕಾದ; ಉಳುಹು: ಕಾಪಾಡು; ಮೈದುನ: ತಂಗಿಯ ಗಂಡ; ಗಾಹುಗತಕ: ಮೋಸ, ಭ್ರಾಂತಿ; ಶಿಷ್ಯ: ಅಭ್ಯಾಸಿ; ಹದ: ರೀತಿ; ವಿರಚಿಸು: ಕಟ್ಟು, ನಿರ್ಮಿಸು; ಮೋಹ: ಆಸೆ; ಗೆಲಲಿ: ವಿಜಯಿಯಾಗಲಿ; ಹರಿ: ಕೃಷ್ಣ;

ಪದವಿಂಗಡಣೆ:
ಆಹವದಿ +ಪಾಂಡವ +ಮಮ +ಪ್ರಾ
ಣಾಹಿ +ಎಂಬೀ +ನುಡಿಯ +ಸಲಿಸಿದೆ
ಬೇಹವರನ್+ಉಳುಹಿದೆ +ಕುಮಾರರ +ನಿನ್ನ+ ಮೈದುನರ
ಗಾಹುಗತಕದಲ್+ಎಮ್ಮ+ ಶಿಷ್ಯಂಗ್
ಈ+ ಹದನ +ವಿರಚಿಸಿದೆ +ನಿನ್ನಯ
ಮೋಹದವರೇ +ಗೆಲಲಿಯೆಂದನು+ ಹರಿಗೆ +ಬಲರಾಮ

ಅಚ್ಚರಿ:
(೧) ಕೃಷ್ಣನ ಮಾತು – ಪಾಂಡವ ಮಮ ಪ್ರಾಣಾಹಿ – ಸಂಸ್ಕೃತದ ಪದಗಳನ್ನು ಸೇರಿಸುವ ಪರಿ

ಪದ್ಯ ೩೫: ಯಾರು ಯಾರ ಹಿಂದೆ ನಿಂತರು?

ಮುಂದೆ ಹೊಗುವತಿಬಳರು ಹಾರಿತು
ಹಿಂದಣವರನು ಹಿಂದೆ ನಿಲುವರು
ಮುಂದಣವರಾಸೆಯಲಿ ನಿಂದುದು ಪಾರ್ಥಪರಿಯಂತ
ಅಂದು ಪಾರ್ಥನು ಕೃಷ್ಣಬಲದಲಿ
ನಿಂದನೇವೇಳುವೆನು ನಿನ್ನವ
ರೆಂದು ಗೆಲ್ಲರು ಗಾಹುಗತಕವನುಳಿದು ಕಾದುವರೆ (ದ್ರೋಣ ಪರ್ವ, ೧೮ ಸಂಧಿ, ೩೫ ಪದ್ಯ)

ತಾತ್ಪರ್ಯ:
ಮುಂದೆ ನುಗ್ಗಿದ ವೀರರು ಹಿಂದೆ ಬರುತ್ತಿದ್ದವರ ಮರೆಹೊಕ್ಕರು. ಅವರು ಹಿಂದಿದ್ದವರ ಹಿಂದೆ ಹೋಗಿ ಮುಂದಿರುವವರಿಂದ ನಾವು ಉಳಿಯಬಹುದೆಂದು ಹಾರೈಸಿದರು. ಹೀಗೆ ಒಬ್ಬರ ಹಿಂದೊಬ್ಬರು ಹೊಕ್ಕು ಇಡೀ ಸೇನೆಯೇ ಅರ್ಜುನನ ಹಿಂದೆ ನಿಂತಿತು. ಅರ್ಜುನನು ಕೃಷ್ಣನ ಬಲದಿಂದೆ ನಿಂತನು. ಕಪಟವನ್ನು ಬಿಟ್ಟು ಕಾದಿದರೆ, ನಿನ್ನವರು ಯಾವಾಗ ಬೇಕಿದ್ದರು ಗೆಲ್ಲದಿರುವರೇ? ಎಂದು ಸಂಜಯನು ವಿವರಿಸಿದನು.

ಅರ್ಥ:
ಮುಂದೆ: ಎದುರು; ಹೊಗು: ತೆರಳು; ಅತಿಬಳರು: ಪರಾಕ್ರಮಿ; ಹಾರು: ಲಂಘಿಸು; ಹಿಂದಣ: ಹಿಂಭಾಗ; ನಿಲು: ನಿಲ್ಲು; ಮುಂದಣ: ಮುಂದೆ; ಆಸೆ: ಇಚ್ಛೆ; ನಿಂದು: ನಿಲ್ಲು; ಪರಿ: ತೀರಿ; ಬಲ: ಶಕ್ತಿ; ಗಾಹುಗತ: ಮೋಸ, ಭ್ರಾಂತಿ; ಉಳಿದು: ಮಿಕ್ಕ; ಕಾದು: ಹೋರಾಡು;

ಪದವಿಂಗಡಣೆ:
ಮುಂದೆ+ ಹೊಗುವ್+ಅತಿಬಳರು+ ಹಾರಿತು
ಹಿಂದಣವರನು+ ಹಿಂದೆ+ ನಿಲುವರು
ಮುಂದಣವರ್+ಆಸೆಯಲಿ +ನಿಂದುದು +ಪಾರ್ಥ+ಪರಿಯಂತ
ಅಂದು +ಪಾರ್ಥನು +ಕೃಷ್ಣ+ಬಲದಲಿ
ನಿಂದನೇವೇಳುವೆನು +ನಿನ್ನವ
ರೆಂದು +ಗೆಲ್ಲರು+ ಗಾಹುಗತಕವನ್+ಉಳಿದು +ಕಾದುವರೆ

ಅಚ್ಚರಿ:
(೧) ಮುಂದೆ, ಹಿಂದಣ – ವಿರುದ್ಧ ಪದಗಳು
(೨) ಪಾರ್ಥನು ಯಾರ ಹಿಂದೆ ನಿಂತನು – ಪಾರ್ಥನು ಕೃಷ್ಣಬಲದಲಿ ನಿಂದನ್

ಪದ್ಯ ೨೦: ಭೀಮಾರ್ಜುನರು ಶಕುನಿಗೆ ಹೇಗೆ ಉತ್ತರಿಸಿದರು?

ದೇಹಿಗೆರವೇ ದೇಹವೆಲವೋ
ದೇಹಿಭೂಪತಿ ಧರ್ಮಪುತ್ರನ
ದೇಹವಾವಿದರೊಳಗೆ ನಿನ್ನ ಕುಮಂತ್ರಭಾಷಿತದ
ಊಹೆಗೊಂಬುದೆ ಕಪಟದಿಂದವ
ಗಾಹಿಸುವೆ ಸಾಕಿನ್ನು ಮೇಲಣ
ಗಾಹುಗತಕಗಳೆಮ್ಮೊಳೆಂದರು ಜರೆದು ಸೌಬಲನ (ಸಭಾ ಪರ್ವ, ೧೫ ಸಂಧಿ, ೨೦ ಪದ್ಯ)

ತಾತ್ಪರ್ಯ:
ಎಲವೋ ಶಕುನಿ, ದೇಹವು ದೇಹವನ್ನು ಧರಿಸಿರುವ ಜೀವವನ್ನು ಬಿಟ್ಟಿರುವುದೇ? ನಮ್ಮ ಅಣ್ಣನೇ ನಮಗೆ ಜೀವು ಅವನ ದೇಹಗಳು ನಾವು. ನಿನ್ನ ದುರ್ಮಂತ್ರದ ಮಾತು ಈ ನಮ್ಮ ನಿಲುವನ್ನು ತಿಳಿದೀತೇ? ನೀನು ಎಲ್ಲವನ್ನೂ ಕಪಟ ದೃಷ್ಟಿಯಿಂದ ನೋಡುವೆ. ಇನ್ನು ನಿನ್ನ ಭ್ರಮೆಯನ್ನು ಬಿಡು. ನಮ್ಮ ಮೇಲೆ ನಿನ್ನ ಪ್ರಯೋಗವೇನೂ ನಡೆಯುವುದಿಲ್ಲ ಎಂದು ಭೀಮಾರ್ಜುನರು ಶಕುನಿಯನ್ನು ಜರೆದರು.

ಅರ್ಥ:
ದೇಹ: ತನು, ಒಡಲು; ಎರವು: ಸಾಲು; ದೇಹಿ: ಶರೀರವನ್ನುಳ್ಳದ್ದು; ಭೂಪತಿ: ರಾಜ; ಪುತ್ರ: ಮಗ; ಒಳಗೆ: ಅಂತರ್ಯ; ಕುಮಂತ್ರ: ಕೆಟ್ಟ ವಿಚಾರ; ಭಾಷಿತ: ಹೇಳಿದ, ಪ್ರತಿಜ್ಞಮಾಡಿದ; ಊಹೆ: ಎಣಿಕೆ, ಅಂದಾಜು; ಕಪಟ: ಮೋಸ; ಅವಗಾಹ: ಮಗ್ನ, ಮುಳುಗು; ಸಾಕು: ತಡೆ; ಮೇಲಣ: ಮೇಲೆ ಹೇಳಿದ; ಗಾಹುಗತಕ: ಮೋಸ, ಭ್ರಾಂತಿ; ಜರೆ: ಬಯ್ಯು; ಸೌಬಲ: ಶಕುನಿ;

ಪದವಿಂಗಡಣೆ:
ದೇಹಿಗ್+ಎರವೇ+ ದೇಹವ್+ಎಲವೋ
ದೇಹಿಭೂಪತಿ +ಧರ್ಮಪುತ್ರನ
ದೇಹವಾವ್+ಇದರೊಳಗೆ +ನಿನ್ನ +ಕುಮಂತ್ರ+ಭಾಷಿತದ
ಊಹೆಗೊಂಬುದೆ +ಕಪಟದಿಂದ್+ಅವ
ಗಾಹಿಸುವೆ +ಸಾಕಿನ್ನು +ಮೇಲಣ+
ಗಾಹುಗತಕಗಳ್+ಎಮ್ಮೊಳ್+ಎಂದರು +ಜರೆದು +ಸೌಬಲನ

ಅಚ್ಚರಿ:
(೧) ದೇಹಿ, ದೇಹ – ೧-೩ ಸಾಲಿನ ಮೊದಲ ಪದ
(೨) ಉಪಮಾನದ ಪ್ರಯೋಗ – ದೇಹಿಗೆರವೇ ದೇಹ
(೩) ಶಕುನಿಯನ್ನು ಬಯ್ಯುವ ಪರಿ – ನಿನ್ನ ಕುಮಂತ್ರಭಾಷಿತದ ಊಹೆಗೊಂಬುದೆ ಕಪಟದಿಂದವ
ಗಾಹಿಸುವೆ

ಪದ್ಯ ೩೮: ದುರ್ಯೋಧನನು ನೀರಿನಲ್ಲಿ ಬಿದ್ದು ಒದ್ದೆಯಾದುದು ಹೇಗೆ

ಊಹೆಯಲಿ ತಡವರಿಸಿ ಹೆಜ್ಜೆಯ
ಗಾಹುಗತಕದೊಳಿಡುತ ಕಾಂತಿಯ
ಸೋಹೆಯರಿಯದೆ ಬೀದಿಯಲಿ ಕಂಡೆನು ಸರೋವರವ
ಆ ಹರಿಬವನು ಮುರಿವೆನೆಂದಿದ
ನೂಹಿಸದೆನಾ ಸ್ಫಟಿಕವೆಂದು
ತ್ಸಾಹಿಸಲು ನೀರಾಯ್ತು ನನೆದೆನು ನಾಭಿದಘ್ನದಲಿ (ಸಭಾ ಪರ್ವ, ೧೩ ಸಂಧಿ, ೩೮ ಪದ್ಯ)

ತಾತ್ಪರ್ಯ:
ಊಹೆಯಿಂದ ಕಾಲಿನಲ್ಲೇ ತಡವರಿಸಿ, ಹೊಂಚುಹಾಕಿ ಹೆಜ್ಜೆಯನ್ನಿಡುತ್ತಾ, ಬೆಳಕಿನ ಲೀಲೆಯೆಂದು ಅರಿಯದ ದಾರಿಯಲ್ಲಿ ಸರೋವರವನ್ನು ಕಂಡೆನು. ಹಿಂದೆ ಮೋಸಹೋದುದನ್ನು ತಪ್ಪಿಸಲು ಅದು ಸ್ಫಟಿಕ ಶಿಲೆಯಿರಬೇಕೆಂದು ಕಾಲನ್ನಿಟ್ಟೆನು. ಆ ಶಿಲೆಯು ನೀರಾಗಿತ್ತು, ನಾಭಿಯವರೆಗೂ ಶರೀರವೂ ವಸ್ತ್ರಗಳು ಒದ್ದೆಯಾದವು.

ಅರ್ಥ:
ಊಹೆ: ಅಂದಾಜು; ತಡವರಿಸು: ಗೊಂದಲ, ಏರುಪೇರು; ಹೆಜ್ಜೆ: ಪಾದ; ಗಾಹುಗತಕ: ಮೋಸ, ಭ್ರಾಂತಿ; ಇಡು: ಇರಿಸು; ಕಾಂತಿ: ಪ್ರಕಾಶ; ಸೋಹೆ: ಸುಳಿವು, ಸೂಚನೆ; ಅರಿ: ತಿಳಿ; ಬೀದಿ: ರಸ್ತೆ; ಕಂಡು: ನೋಡು; ಸರೋವರ: ಸರಸಿ; ಹರಿಬ: ಕಾರಣ, ಉದ್ದೇಶ; ಮುರಿ: ಸೀಳು; ಸ್ಫಟಿಕ: ನಿರ್ಮಲವೂ, ಪಾರದರ್ಶಕವೂ ಆದ ಒಂದು ಬಗೆಯ ಬಿಳಿಯ ಹೊಳಪಿನ ಕಲ್ಲು; ಉತ್ಸಾಹ: ಹುರುಪು, ಆಸಕ್ತಿ; ನೀರಾಯ್ತು: ಒದ್ದೆಯಾಗು; ನನೆ: ತೋಯು. ಒದ್ದೆ; ನಾಭಿ: ಹೊಕ್ಕಳು; ನಾಭಿದಘ್ನ: ಹೊಕ್ಕಳವರೆಗೆ ಮುಳುಗಿದವನು;

ಪದವಿಂಗಡಣೆ:
ಊಹೆಯಲಿ+ ತಡವರಿಸಿ+ ಹೆಜ್ಜೆಯ
ಗಾಹುಗತಕದೊಳ್+ಇಡುತ +ಕಾಂತಿಯ
ಸೋಹೆ+ಅರಿಯದೆ+ ಬೀದಿಯಲಿ+ ಕಂಡೆನು +ಸರೋವರವ
ಆ +ಹರಿಬವನು +ಮುರಿವೆನೆಂದ್+ಇದನ್
ಊಹಿಸದೆ+ನಾ +ಸ್ಫಟಿಕವೆಂದ್
ಉತ್ಸಾಹಿಸಲು +ನೀರಾಯ್ತು +ನನೆದೆನು+ ನಾಭಿದಘ್ನದಲಿ

ಅಚ್ಚರಿ:
(೧) ನಾಭಿದಘ್ನ – ಪದದ ಬಳಕೆ
(೨) ಊಹೆ, ಸೋಹೆ – ಪ್ರಾಸ ಪದಗಳು