ಪದ್ಯ ೨೪: ಕುರು ಪಾಂಡವರ ಸೇನೆಯನ್ನು ಹೇಗೆ ಹೋಲಿಸಬಹುದು?

ರಾಹುವೆತ್ತಲು ಲಲಿತ ತಾರಾ
ವ್ಯೂಹವೆತ್ತಲು ದಳ್ಳಿಸುವ ದವ
ದಾಹವೆತ್ತಲು ನೀರಸದ ತೃಣರಾಶಿ ತಾನೆತ್ತ
ಗಾಹುಗತಕವನುಳಿದು ಕಾದುವ
ಡಾಹವಕೆ ಗುರು ಭೀಷ್ಮರಿಗೆ ಸರಿ
ಸಾಹಸಿಕರಾರುಂಟು ಮುರಿದುದು ಪಾಂಡುಸುತಸೇನೆ (ದ್ರೋಣ ಪರ್ವ, ೧೭ ಸಂಧಿ, ೨೪ ಪದ್ಯ)

ತಾತ್ಪರ್ಯ:
ರಾಹುವೆಲ್ಲಿ? ಸುಂದರವಾದ ನಕ್ಷತ್ರಗಳೆಲ್ಲಿ? ಉರಿಯುವ ಕಾಡು ಕಿಚ್ಚೆಲ್ಲಿ, ಒಣಗಿದ ಹುಲ್ಲೆಲ್ಲಿ? ಕಪಟತನವನ್ನು ಬಿಟ್ಟು ಯುದ್ಧಮಾಡಿದರೆ ಭೀಷ್ಮದ್ರೋಣರಿಗೆ ಸರಿಯಾದ ವೀರರುಂಟೇ? ಪಾಂಡವ ಸೈನ್ಯವು ಮುರಿದುಹೋಯಿತು.

ಅರ್ಥ:
ರಾಹು: ಒಂದು ಗ್ರಹದ ಹೆಸರು; ಲಲಿತ: ಸುಂದರ; ತಾರ: ನಕ್ಷತ್ರ; ವ್ಯೂಹ: ಗುಂಪು; ದಳ್ಳಿಸು: ಧಗ್ ಎಂದು ಉರಿ; ಕಿಡಿ: ಬೆಂಕಿ; ದವದಾಹ: ಕಾಡುಕಿಚ್ಚು; ನೀರಸ: ಒಣಗಿದ; ತೃಣ: ಹುಲ್ಲು; ರಾಶಿ: ಗುಂಪು; ಗಾಹು: ಮೋಸ, ವಂಚನೆ; ಉಳಿದು: ಮಿಕ್ಕ; ಕಾದು: ಹೋರಾಡು; ಆಹವ: ಯುದ್ಧ; ಗುರು: ಆಚಾರ್ಯ; ಸರಿ: ಸಮಾನ; ಸಾಹಸಿ: ಪರಾಕ್ರಮಿ; ಮುರಿ: ಸೀಳು; ಸುತ: ಮಕ್ಕಳು; ಸೇನೆ: ಸೈನ್ಯ;

ಪದವಿಂಗಡಣೆ:
ರಾಹುವೆತ್ತಲು +ಲಲಿತ +ತಾರಾ
ವ್ಯೂಹವೆತ್ತಲು +ದಳ್ಳಿಸುವ +ದವ
ದಾಹವೆತ್ತಲು +ನೀರಸದ +ತೃಣರಾಶಿ +ತಾನೆತ್ತ
ಗಾಹುಗತಕವನ್+ಉಳಿದು +ಕಾದುವಡ್
ಆಹವಕೆ +ಗುರು +ಭೀಷ್ಮರಿಗೆ +ಸರಿ
ಸಾಹಸಿಕರ್+ಆರುಂಟು +ಮುರಿದುದು +ಪಾಂಡುಸುತಸೇನೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ರಾಹುವೆತ್ತಲು ಲಲಿತ ತಾರಾವ್ಯೂಹವೆತ್ತಲು ದಳ್ಳಿಸುವ ದವದಾಹವೆತ್ತಲು ನೀರಸದ ತೃಣರಾಶಿ ತಾನೆತ್ತ

ಪದ್ಯ ೧೨: ದುರ್ಯೋಧನನ ಸ್ಥಿತಿ ಹೇಗಿತ್ತು?

ಗಾಹು ಕೊಳ್ಳದ ಭೀಮ ಪಾರ್ಥರ
ಸಾಹಸವನೆಣಿಸುತ ಕಠಾರಿಯ
ಮೋಹಳದ ಮೇಲಿಟ್ಟ ಗಲ್ಲದ ಮಕುಟದೊಲಹುಗಳ
ಊಹೆದೆಗಹಿನ ಕಂಬನಿಯ ತನಿ
ಮೋಹರದ ಘನ ಶೋಕವಹ್ನಿಯ
ಮೇಹುಗಾಡಿನ ಮನದ ಕೌರವನಿತ್ತನೋಲಗವ (ದ್ರೋಣ ಪರ್ವ, ೧ ಸಂಧಿ, ೧೨ ಪದ್ಯ)

ತಾತ್ಪರ್ಯ:
ಶತ್ರುಗಳು ಎದುರಿಸಲಾಗದಂತಹ ಭೀಮಾರ್ಜುನರ ಪರಾಕ್ರಮವನ್ನು ನೆನೆಯುತ್ತಾ, ಕಠಾರಿಯ ಹಿಡಿಕೆಯ ಮೇಲೆ ಗಲ್ಲವನ್ನಿಟ್ಟು, ಕಿರೀಟವನ್ನು ತೂಗುತ್ತಾ, ಕಂಬನಿಗಲು ಅವಿರಳವಾಗಿ ದಲದಳನೆ ಸುರಿಯುತ್ತಿರಲು, ಶೋಕಾಗ್ನಿಯು ಸುಡುತ್ತಿರುವ ಮನಸ್ಸಿನಿಂದ ಕೌರವನು ಓಲಗನ್ನಿತ್ತನು.

ಅರ್ಥ:
ಗಾಹು: ಮೋಸ, ವಂಚನೆ; ಕೊಳ್ಳು: ತೆಗೆದುಕೋ; ಸಾಹಸ: ಪರಾಕ್ರಮ; ಎಣಿಸು: ಲೆಕ್ಕಮಾಡು; ಕಠಾರಿ: ಚೂರಿ, ಕತ್ತಿ; ಮೋಹ:ಭ್ರಾಂತಿ, ಭ್ರಮೆ; ಗಲ್ಲ: ಕೆನ್ನೆ; ಮಕುಟ: ಕಿರೀಟ; ಅಹುಗಳು: ಸರಿಯೆಂದು ತಲೆಯನ್ನು ತೂಗಾಡು; ಉಹೆ: ಎಣಿಕೆ, ಅಂದಾಜು; ತನಿ: ಹೆಚ್ಚಾಗು; ಮೋಹರ: ಯುದ್ಧ; ಘನ: ಶ್ರೇಷ್ಠ; ಶೋಕ: ದುಃಖ; ವಹ್ನಿ: ಬೆಂಕಿ; ಮೇಹುಗಾಡು: ಮೇಯುವ ಕಾಡು; ಮನ: ಮನಸ್ಸು; ಓಲಗ: ದರ್ಬಾರು;

ಪದವಿಂಗಡಣೆ:
ಗಾಹು +ಕೊಳ್ಳದ +ಭೀಮ +ಪಾರ್ಥರ
ಸಾಹಸವನ್+ಎಣಿಸುತ +ಕಠಾರಿಯ
ಮೋಹಳದ +ಮೇಲಿಟ್ಟ +ಗಲ್ಲದ +ಮಕುಟದ್+ಒಲಹುಗಳ
ಊಹೆದೆಗಹಿನ +ಕಂಬನಿಯ +ತನಿ
ಮೋಹರದ+ ಘನ +ಶೋಕ+ವಹ್ನಿಯ
ಮೇಹುಗಾಡಿನ+ ಮನದ+ ಕೌರವನಿತ್ತನ್+ಓಲಗವ

ಅಚ್ಚರಿ:
(೧) ದುರ್ಯೋಧನನ ಚಿತ್ರಣ – ಕಠಾರಿಯ ಮೋಹಳದ ಮೇಲಿಟ್ಟ ಗಲ್ಲದ ಮಕುಟದೊಲಹುಗಳ