ಪದ್ಯ ೩೩: ಅರ್ಜುನನು ಯಾವ ಭಂಗಿಯಲ್ಲಿ ನಿಂತನು?

ಅಳಲ ಮುಕ್ಕುಳಿಸಿದನು ಮೋಹದ
ಬೆಳವಿಗೆಯ ಗವಸಣಿಸಿದನು ಕಳ
ಕಳಿಕೆ ಹಿಂಗಿದುದಶ್ರು ಜಲವನು ಕಂಗಳಲಿ ಕುಡಿದು
ಪ್ರಳಯ ರುದ್ರನ ಕೋಪಶಿಖಿ ವೆ
ಗ್ಗಳಿಸಿತೆನೆ ಕಂಗಳಲಿ ಕಿಡಿಗಳು
ತುಳುಕಿದವು ರೌದ್ರಾನುಭಾವದ ರಸದ ಭಂಗಿಯಲಿ (ದ್ರೋಣ ಪರ್ವ, ೮ ಸಂಧಿ, ೩೩ ಪದ್ಯ)

ತಾತ್ಪರ್ಯ:
ಅರ್ಜುನನು ದುಃಖವನ್ನುಗುಳಿ, ಮೋಹಾತಿರೇಕಕ್ಕೆ ತೆರೆಯನ್ನೆಳೆದನು. ಮಾತು ನಿಂತಿತು. ಕಂಬನಿಗಳನ್ನು ಕಣ್ಣಿನಲ್ಲೇ ಕುಡಿದು ಕೋಪಾಗ್ನಿ ಭುಗಿಲ್ಲನೆ ಪ್ರಜ್ವಲಿಸಿತೋ ಎಂಬಂತೆ ಕಣ್ಣಿನಲ್ಲಿ ಕಿಡಿಗಳನ್ನುಗುಳಿದನು. ರೌದ್ರಾನುಭಾವದ ಭಂಗಿಯಲ್ಲಿ ನಿಂತನು.

ಅರ್ಥ:
ಅಳಲು: ದುಃಖ; ಮುಕ್ಕುಳಿಸು: ಹೊರಹಾಕು; ಮೋಹ:ಭ್ರಾಂತಿ, ಭ್ರಮೆ; ಬೆಳವಿಗೆ: ಏಳಿಗೆ; ಗವಸಣಿಗೆ: ಮುಸುಕು; ಕಳಕಳ: ಗೊಂದಲ; ಹಿಂಗು: ಹಿಂದಕ್ಕೆ ಹೋಗು, ಹಿಂದೆ ಸರಿ; ಅಶ್ರು: ಕಣ್ಣೀರು; ಜಲ: ನೀರು; ಕಂಗಳ: ಕಣ್ಣು; ಕುಡಿ: ಪಾನ ಮಾಡು; ಪ್ರಳಯ: ಅಂತ್ಯ; ಕೋಪ: ಕ್ರೋಧ, ಸಿಟ್ಟು; ಶಿಖಿ: ಬೆಂಕಿ; ವೆಗ್ಗಳಿಸು: ಹೆಚ್ಚಾಗು, ಅಧಿಕವಾಗು; ಕಂಗಳು: ಕಣ್ಣು; ಕಿಡಿ: ಬೆಂಕಿ; ತುಳುಕು: ಹೊರಸೂಸುವಿಕೆ, ಉಕ್ಕುವಿಕೆ; ರೌದ್ರ: ಸಿಟ್ಟು, ರೋಷ; ಅನುಭಾವ: ಅತೀಂದ್ರಿಯವಾದ ಅನುಭವ, ಸಾಕ್ಷಾತ್ಕಾರ; ರಸ: ಸಾರ; ಭಂಗಿ: ಬಾಗು, ತಿರುವು;

ಪದವಿಂಗಡಣೆ:
ಅಳಲ +ಮುಕ್ಕುಳಿಸಿದನು +ಮೋಹದ
ಬೆಳವಿಗೆಯ +ಗವಸಣಿಸಿದನು +ಕಳ
ಕಳಿಕೆ +ಹಿಂಗಿದುದ್+ಅಶ್ರು +ಜಲವನು +ಕಂಗಳಲಿ +ಕುಡಿದು
ಪ್ರಳಯ +ರುದ್ರನ +ಕೋಪ+ಶಿಖಿ+ ವೆ
ಗ್ಗಳಿಸಿತೆನೆ +ಕಂಗಳಲಿ +ಕಿಡಿಗಳು
ತುಳುಕಿದವು +ರೌದ್ರಾನುಭಾವದ +ರಸದ +ಭಂಗಿಯಲಿ

ಅಚ್ಚರಿ:
(೧) ಅರ್ಜುನನು ಚೇತರಿಸಿಕೊಂಡ ಪರಿ – ಅಳಲ ಮುಕ್ಕುಳಿಸಿದನು ಮೋಹದ ಬೆಳವಿಗೆಯ ಗವಸಣಿಸಿದನು ಕಳಕಳಿಕೆ ಹಿಂಗಿದುದಶ್ರು ಜಲವನು ಕಂಗಳಲಿ ಕುಡಿದು