ಪದ್ಯ ೪೮: ಕೃಷ್ಣಾರ್ಜುನರಿಗೆ ಯಾವ ವಿಷಯಕ್ಕೆ ವಿವಾದ ಸೃಷ್ಟಿಸಿತು?

ಇಳಿ ರಥವನೆಲೆ ಪಾರ್ಥ ಬಳಿಕಾ
ನಿಳಿವೆನೆಂದನು ಶೌರಿ ನೀವ್ ಮು
ನ್ನಿಳಿವುದೆಂದನು ಪಾರ್ಥನಾಯ್ತು ವಿವಾದವಿಬ್ಬರಿಗೆ
ಎಲೆ ಮರುಳೆ ನಾ ಮುನ್ನಿಳಿಯೆ ನೀ
ನುಳಿವೆಲಾ ಸಾಕಿನ್ನು ಗರ್ವದ
ಗಳಹತತವನು ಬಳಿಕ ತೋರುವೆ ರಥವನಿಳಿಯೆಂದ (ಗದಾ ಪರ್ವ, ೮ ಸಂಧಿ, ೪೮ ಪದ್ಯ)

ತಾತ್ಪರ್ಯ:
ಕೃಷ್ಣನು ಅರ್ಜುನನಿಗೆ ರಥದಿಂದ ಇಳಿ, ಆ ನಂತರ ನಾನು ಇಳಿಯುತ್ತೇನೆ ಎಂದು ಹೇಳಲು, ಅರ್ಜುನನು ಕೃಷ್ಣನನ್ನು ಮೊದಲು ನೀವು ಇಳಿಯಿರಿ ಆ ನಂತರ ನಾನು ಇಳಿಯುತ್ತೇನೆ ಎಂದು ಹೇಳಲು, ಇಬ್ಬರಿಗೂ ವಾಗ್ವಾದ ನಡೆಯಿತು. ಕೃಷ್ಣನು ನುಡಿಯುತ್ತಾ, ಎಲೈ ಹುಚ್ಚಾ ನಾನು ಮೊದಲಿಳಿಯುವುದಿಲ್ಲ, ನೀನು ಇಳಿ ಆಮೇಲೆ ನಿನ್ನ ಗರ್ವದ ಮಾತುಗಳ ಬೆಲೆ ತಿಳಿಯುತ್ತದೆ ಎಂದು ಹೇಳಿದನು.

ಅರ್ಥ:
ಇಳಿ: ಕೆಳಕ್ಕೆ ನಡೆ; ರಥ: ಬಂದಿ; ಬಳಿಕ: ನಂತರ; ಶೌರಿ: ಕೃಷ್ಣ; ಮುನ್ನ: ಮೊದಲು; ವಿವಾದ: ವಾಗ್ವಾದ, ಚರ್ಚೆ; ಮರುಳೆ: ಮೂಢ; ಉಳಿ: ಜೀವಿಸು; ಸಾಕು: ನಿಲ್ಲು; ಗರ್ವ: ಅಹಂಕಾರ; ಗಳಹ: ಮಾತಾಳಿ; ತೋರು: ಕಾಣಿಸು, ಗೋಚರಿಸು; ರಥ: ಬಂಡಿ;

ಪದವಿಂಗಡಣೆ:
ಇಳಿ +ರಥವನ್+ಎಲೆ +ಪಾರ್ಥ +ಬಳಿಕಾ
ನಿಳಿವೆನೆಂದನು +ಶೌರಿ +ನೀವ್ +ಮು
ನ್ನಿಳಿವುದೆಂದನು +ಪಾರ್ಥನ್+ಆಯ್ತು +ವಿವಾದವ್+ಇಬ್ಬರಿಗೆ
ಎಲೆ +ಮರುಳೆ +ನಾ +ಮುನ್ನಿಳಿಯೆ +ನೀನ್
ಉಳಿವೆಲಾ +ಸಾಕಿನ್ನು+ ಗರ್ವದ
ಗಳಹತತವನು +ಬಳಿಕ +ತೋರುವೆ +ರಥವನ್+ಇಳಿಯೆಂದ

ಅಚ್ಚರಿ:
(೧) ಇಳಿ – ೧-೩ ಸಾಲಿನ ಮೊದಲ ಪದ
(೨) ಇಳಿ, ಉಳಿ – ಪ್ರಾಸ ಪದಗಳು
(೩) ಕೃಷ್ಣನು ಬಯ್ಯುವ ಪರಿ – ಎಲೆ ಮರುಳೆ ನಾ ಮುನ್ನಿಳಿಯೆ ನೀನುಳಿವೆಲಾ ಸಾಕಿನ್ನು ಗರ್ವದಗಳಹ

ಪದ್ಯ ೧೫: ಧೃಷ್ಟದ್ಯುಮ್ನನು ದ್ರೋಣರಿಗೆ ಏನೆಂದು ಹೇಳಿದನು?

ಗಳಹತನ ನಿಮ್ಮಲ್ಲಿ ನೆಲೆ ನೀವ್
ಕಲಿತ ವಿದ್ಯವು ಮಾತಿನಲಿ ನೀವ್
ಗೆಲುವುದಿದು ತಪ್ಪಲ್ಲ ಮುಖದಿಂ ದ್ವಿಜರು ಜನಿಸಿದಿರಿ
ಗೆಲವು ತೋಳಿಂದೆಮಗೆ ಜನ್ಮ
ಸ್ಥಳವಲೇ ಭುಜವರಸುಗಳಿಗಿ
ನ್ನಳುಕದಿದಿರಲಿ ನಿಂದಿರಾದಡೆ ಗೆಲವು ನಿಮಗೆಂದ (ದ್ರೋಣ ಪರ್ವ, ೧೮ ಸಂಧಿ, ೧೫ ಪದ್ಯ)

ತಾತ್ಪರ್ಯ:
ಧೃಷ್ಟದ್ಯುಮ್ನನು ಮಾತನಾಡುತ್ತಾ, ಬಾಯಿ ಬಡಿಕತನವು ನಿಮ್ಮಲ್ಲಿ ನೆಲೆ ನಿಂತಿದೆ. ನೀವು ಮುಖದಿಂದ ಹುಟ್ಟಿದವರದುದರಿಂದ ನಿಮ್ಮ ವಿದ್ಯೆ ಮಾತಿನಲ್ಲಿದೆ, ಕ್ಷತ್ರಿಯರಾದ ನಾವು ಅವನ ಬಾಹುಗಳಿಂದ ಹುಟ್ಟಿದವರಾದುದರಿಂದ ನಾವು ಬಾಹುಗಳಿಂದ ಜಯಿಸುತ್ತೇವೆ. ಅಳುಕದೆ ಇದಿರಿನಲ್ಲಿ ನೀವು ನಿಂತರೆ ಖಂಡಿತ ಗೆಲ್ಲುವಿರಿ ಎಂದು ಹೇಳಿದನು.

ಅರ್ಥ:
ಗಳಹ: ಮಾತಾಳಿ; ನೆಲೆ: ಭೂಮಿ; ಕಲಿತ: ಕೂಡಿದ; ವಿದ್ಯ: ಜ್ಞಾನ; ಮಾತು: ವಾಣಿ; ಗೆಲುವು: ಜಯ; ಮುಖ: ಆನನ; ದ್ವಿಜ: ಬ್ರಾಹ್ಮಣ; ಜನಿಸು: ಹುಟ್ಟು; ತೋಳು: ಬಾಹು; ಜನ್ಮ: ಜನನ; ಸ್ಥಳ: ಜಾಗ; ಭುಜ: ಬಾಹು; ಅರಸು: ರಾಜ; ಅಳುಕು: ಹೆದರು; ನಿಂದು: ನಿಲ್ಲು;

ಪದವಿಂಗಡಣೆ:
ಗಳಹತನ +ನಿಮ್ಮಲ್ಲಿ +ನೆಲೆ +ನೀವ್
ಕಲಿತ +ವಿದ್ಯವು +ಮಾತಿನಲಿ +ನೀವ್
ಗೆಲುವುದಿದು +ತಪ್ಪಲ್ಲ +ಮುಖದಿಂ +ದ್ವಿಜರು +ಜನಿಸಿದಿರಿ
ಗೆಲವು+ ತೋಳಿಂದ್+ಎಮಗೆ +ಜನ್ಮ
ಸ್ಥಳವಲೇ +ಭುಜವ್+ಅರಸುಗಳಿಗಿನ್ನ್
ಅಳುಕದ್+ಇದಿರಲಿ +ನಿಂದಿರಾದಡೆ +ಗೆಲವು +ನಿಮಗೆಂದ

ಅಚ್ಚರಿ:
(೧) ನೀವ್ – ೧,೨ ಸಾಲಿನ ಕೊನೆಯ ಪದ
(೨) ದ್ರೋಣರನ್ನು ಹಂಗಿಸುವ ಪರಿ – ಮಾತಿನಲಿ ನೀವ್ ಗೆಲುವುದಿದು ತಪ್ಪಲ್ಲ ಮುಖದಿಂ ದ್ವಿಜರು ಜನಿಸಿದಿರಿ

ಪದ್ಯ ೨೩: ಕರ್ಣನನ್ನು ಭೀಮನು ಹೇಗೆ ಆಕ್ರಮಣ ಮಾಡಿದನು?

ದೇವ ದಾನವ ಭಟರು ನುಗ್ಗೆಂ
ದಾವು ಬಗೆದಿಹೆವುಳಿದ ಮರ್ತ್ಯರು
ನೀವು ತಾವೇಸರ ಸಮರ್ಥರು ಕರ್ಣ ಗಳಹದಿರು
ಡಾವರಿಗತನವಾರ ಕೂಡೆ ವೃ
ಥಾ ವಿಲಾಸಿಗಳೆಲವೊ ಸುಭಟರೆ
ನೀವೆನುತ ಹದಿನೈದು ಶರದಿಂದೆಚ್ಚನಿನಸುತನ (ದ್ರೋಣ ಪರ್ವ, ೧೩ ಸಂಧಿ, ೨೩ ಪದ್ಯ)

ತಾತ್ಪರ್ಯ:
ದೇವ ದೈತ್ಯರ ಸೈನಿಕರು ನುಗ್ಗಿದವು ಎಂದು ನಾವು ಭಾವಿಸಿದೆವು, ಇನ್ನು ನೀವು ಮನುಷ್ಯರು, ತಾವು ಎಂತಹ ಸಮರ್ಥರಿದ್ದೀರಿ? ಕರ್ಣ ವ್ಯರ್ಥವಾಗಿ ಮಾತಾಡಬೇಡ. ಯಾರ ಹತ್ತಿರ ನಿನ್ನ ಪ್ರತಾಪವನ್ನು ತೋರಿಸುವೆ? ನೀವು ವಿಲಾಸ ಜೀವಿಗಳೇ ಹೊರತು ಸಮರ್ಥ ಯೋಧರಲ್ಲ. ಹೀಗೆ ಹೇಳಿ ಭೀಮನು ಹದಿನೈದು ಬಾಣಗಳಿಂದ ಕರ್ಣನನ್ನು ಹೊಡೆದನು.

ಅರ್ಥ:
ದೇವ: ಭಗವಂತ, ಅಮರರು; ದಾನವ: ರಾಕ್ಷಸ; ಭಟ: ಸೈನಿಕ; ನುಗ್ಗು: ತಳ್ಳು; ಬಗೆ: ಆಲೋಚನೆ; ಉಳಿದ: ಮಿಕ್ಕ; ಮರ್ತ್ಯ: ಮನುಷ್ಯ; ಏಸರ: ಎಷ್ಟು; ಸಮರ್ಥ: ಬಲಶಾಲಿ, ಗಟ್ಟಿಗ; ಗಳಹ: ಅತಿಯಾಗಿ ಹರಟುವವ; ಡಾವರಿಗ: ಯೋಧ; ಕೂಡೆ: ಜೊತೆ; ವೃಥ: ಸುಮ್ಮನೆ; ವಿಲಾಸಿ: ಹುಡುಗಾಟಿಕೆಯ; ಸುಭಟ: ಪರಾಕ್ರಮಿ; ಶರ: ಬಾಣ; ಎಚ್ಚು: ಬಾಣ ಪ್ರಯೋಗ ಮಾಡು; ಇನಸುತ: ಸೂರ್ಯಪುತ್ರ;

ಪದವಿಂಗಡಣೆ:
ದೇವ+ ದಾನವ +ಭಟರು +ನುಗ್ಗೆಂದ್
ಆವು +ಬಗೆದಿಹೆವ್+ಉಳಿದ +ಮರ್ತ್ಯರು
ನೀವು +ತಾವ್+ಏಸರ +ಸಮರ್ಥರು +ಕರ್ಣ+ ಗಳಹದಿರು
ಡಾವರಿಗತನವ್+ಆರ +ಕೂಡೆ +ವೃ
ಥಾ +ವಿಲಾಸಿಗಳ್+ಎಲವೊ +ಸುಭಟರೆ
ನೀವೆನುತ +ಹದಿನೈದು +ಶರದಿಂದ್+ಎಚ್ಚನ್+ಇನಸುತನ

ಅಚ್ಚರಿ:
(೧) ಕರ್ಣನನ್ನು ಜರಿದ ಪರಿ – ಡಾವರಿಗತನವಾರ ಕೂಡೆ ವೃಥಾ ವಿಲಾಸಿಗಳೆಲವೊ ಸುಭಟರೆ ನೀವೆನುತ

ಪದ್ಯ ೩೯: ಭೀಷ್ಮರು ಕರ್ಣನನ್ನು ಹೇಗೆ ಜರೆದರು?

ಗಳಹದಿರು ರಾಧೇಯ ನಿನ್ನಯ
ಕುಲವನೋಡದೆ ಮೇರೆದಪ್ಪುವ
ಸಲುಗೆಯಿದಲೇ ಸ್ವಾಮಿಸಂಪತ್ತಿನ ಸಗಾಢತನ
ಕಲಿಗಳುಳಿದಂತೆನ್ನ ಸರಿಸಕೆ
ನಿಲುವನಾವನು ದೇವದಾನವ
ರೊಳಗೆ ನಿನ್ನೊಡನೊರಲಿ ಫಲವೇನೆಂದನಾ ಭೀಷ್ಮ (ಭೀಷ್ಮ ಪರ್ವ, ೧ ಸಂಧಿ, ೩೯ ಪದ್ಯ)

ತಾತ್ಪರ್ಯ:
ಎಲೈ ಕರ್ಣ, ಬಾಯಿಗೆ ಬಂದಂತೆ ಒದರಬೇಡ. ನಿನ್ನ ಕುಲವನ್ನು ನೋಡಿಕೊಳ್ಳದೆ, ಸ್ವಾಮಿಗೆ ಆಪ್ತನೆಂಬ ಸಲಗೆಯಿಂದ ಹೀಗೆ ಹೇಳುತ್ತಿರುವೆ, ದೇವತೆಗಳು, ದಾನವರಲ್ಲಿ ನನಗೆ ಸರಿಸಮಾನನಾದ ವೀರನು ಯಾರು? ನಿನ್ನೊಡನೆ ಸುಮ್ಮನೆ ಅರಚುವುದರಿಂದ ಏನು ಪ್ರಯೋಜನ ಎಂದು ಭೀಷ್ಮನು ಹೇಳಿದನು.

ಅರ್ಥ:
ಗಳಹು: ಪ್ರಲಾಪಿಸು, ಹೇಳು; ರಾಧೇಯ: ಕರ್ಣ; ಕುಲ: ವಂಶ; ನೋಡು: ತೋರು, ವೀಕ್ಷಿಸು; ಮೇರೆ: ಎಲ್ಲೆ, ಗಡಿ; ತಪ್ಪು: ಸರಿಯಿಲ್ಲದ; ಸಲುಗೆ: ಸದರ; ಸ್ವಾಮಿ: ಒಡೆಯ; ಸಂಪತ್ತು: ಐಶ್ವರ್ಯ; ಸಗಾಢ: ಜೋರು, ರಭಸ; ಕಲಿ: ಪರಾಕ್ರಮಿ; ಉಳಿ: ಜೀವಿಸು; ಸರಿಸಕೆ: ಸಮಾನ; ನಿಲುವ: ಎದುರು ನಿಲ್ಲುವ; ದೇವ: ಸುರರು; ದಾನವ: ರಾಕ್ಷಸ; ಒರಲು: ಅರಚು, ಕೂಗಿಕೊಳ್ಳು; ಫಲ: ಪ್ರಯೋಜನ;

ಪದವಿಂಗಡಣೆ:
ಗಳಹದಿರು+ ರಾಧೇಯ +ನಿನ್ನಯ
ಕುಲವ+ನೋಡದೆ +ಮೇರೆ +ತಪ್ಪುವ
ಸಲುಗೆಯಿದಲೇ+ ಸ್ವಾಮಿ+ಸಂಪತ್ತಿನ+ ಸಗಾಢತನ
ಕಲಿಗಳ್+ಉಳಿದಂತ್+ಎನ್ನ +ಸರಿಸಕೆ
ನಿಲುವನ್+ಆವನು +ದೇವ+ದಾನವ
ರೊಳಗೆ +ನಿನ್ನೊಡನ್+ಒರಲಿ +ಫಲವೇನೆಂದನಾ +ಭೀಷ್ಮ

ಅಚ್ಚರಿ:
(೧) ಸ ಕಾರದ ಸಾಲು ಪದ – ಸಲುಗೆಯಿದಲೇ ಸ್ವಾಮಿಸಂಪತ್ತಿನ ಸಗಾಢತನ

ಪದ್ಯ ೧೮: ಅಶ್ವತ್ಥಾಮನು ಕರ್ಣನನ್ನು ಹೇಗೆ ಗದರಿಸಿದನು?

ಪರರು ಪತಿಕರಿಸಿದೊಡೆ ಲಜ್ಜೆಗೆ
ಶಿರವ ನಸುಬಾಗುವರು ಗರುವರು
ದುರುಳ ನೀ ದುರುದುಂಬಿತನದಲಿ ನಿನ್ನ ಹೊಗಳಿದೊಡೆ
ಗರುವ ಮಾನ್ಯರು ಮೆಚ್ಚುವರೆ ಸಸಿ
ನಿರು ಮಹಾತ್ಮರು ನಿನ್ನೊಡನೆ ಉ
ತ್ತರವಕೊಡುವರೆ ಗಳಹತನ ನಮ್ಮೊಡನೆ ಬೇಡೆಂದ (ವಿರಾಟ ಪರ್ವ, ೮ ಸಂಧಿ, ೧೮ ಪದ್ಯ)

ತಾತ್ಪರ್ಯ:
ಇತರರು ತಮ್ಮನ್ನು ಹೊಗಳಿದರೆ ತಿಳಿದವರು ಲಜ್ಜೆಯಿಂದ ತಲೆಬಾಗಿಸುತ್ತಾರೆ. ದುಷ್ಟನಾದ ನೀನು ಕೇಡುಗತನದಿಂದ ನಿನ್ನನ್ನು ನೀನೇ ಹೊಗಳಿಕೊಂಡರೆ ಹಿರಿಯರಾದವರು ಮೆಚ್ಚಿಕೊಳ್ಳುವರೇ ಹಿರಿಯರೂ, ಮಹಾತ್ಮರೂ ನಿನ್ನ ಮಾತಿಗೆ ಉತ್ತರಕೊಡಲು ಬರುವರೇ? ಬಾಯಿಬಡುಕತನ ನಮ್ಮೊಡನೆ ಸಲ್ಲದು ಎಂದು ಅಶ್ವತ್ಥಾಮನು ಗದರಿಸಿದನು.

ಅರ್ಥ:
ಪರರು: ಹೊರಗಿನವರು; ಪತಿಕರಿಸು: ಅನುಗ್ರಹಿಸು; ಲಜ್ಜೆ: ನಾಚಿಕೆ; ಶಿರ: ತಲೆ; ನಸು: ಸ್ವಲ್ಪ; ಬಾಗು:ಮಣಿ; ಗರುವ: ಹಿರಿಯ, ಶ್ರೇಷ್ಠ; ದುರುಳ: ದುಷ್ಟ; ದುರುದುಂಬಿತನ: ದುಷ್ಟತನ; ಹೊಗಳು: ಪ್ರಶಂಶಿಸು; ಮಾನ್ಯ: ಶ್ರೇಷ್ಠ; ಮೆಚ್ಚು: ಹೊಗಳು; ಸಸಿನ: ಕ್ಷೇಮ; ಮಹಾತ್ಮ: ಶ್ರೇಷ್ಠ; ಉತ್ತರ: ಪರಿಹಾರ; ಗಳಹ: ಅತಿಯಾಗಿ ಹರಟತನ; ಬೇಡ: ಸಲ್ಲದು;

ಪದವಿಂಗಡಣೆ:
ಪರರು +ಪತಿಕರಿಸಿದೊಡೆ +ಲಜ್ಜೆಗೆ
ಶಿರವ +ನಸುಬಾಗುವರು+ ಗರುವರು
ದುರುಳ+ ನೀ +ದುರುದುಂಬಿತನದಲಿ+ ನಿನ್ನ+ ಹೊಗಳಿದೊಡೆ
ಗರುವ +ಮಾನ್ಯರು +ಮೆಚ್ಚುವರೆ+ ಸಸಿ
ನಿರು +ಮಹಾತ್ಮರು +ನಿನ್ನೊಡನೆ+ ಉ
ತ್ತರವಕೊಡುವರೆ+ ಗಳಹತನ+ ನಮ್ಮೊಡನೆ +ಬೇಡೆಂದ

ಅಚ್ಚರಿ:
(೧) ಸಜ್ಜನರ ನಡತೆ – ಪರರು ಪತಿಕರಿಸಿದೊಡೆ ಲಜ್ಜೆಗೆ ಶಿರವ ನಸುಬಾಗುವರು ಗರುವರು

ಪದ್ಯ ೪೭: ಯಾವ ಮಾತುಗಳನ್ನು ಹೇಳಿ ಕೃಷ್ಣನು ಹೊರಡಲು ಸಿದ್ಧನಾದ?

ಎಲವೊ ನಿನ್ನಯ ಭಂಗ ಕೋಟಿಗ
ಳಳತೆಗೆಯ್ದವು ಕೈದುಗೊಂಡೊಡೆ
ಯುಳಿಯಲಾಪವರುಂಟೆ ಕುಂತಿಯ ಮಕ್ಕಳಿದಿರಿನೊಳು
ಗಳಹತನವನು ಮಾಡದಿರು ಕುರು
ಕುಲವ ಕೆಡಿಸದಿರಕಟ ಕುಟಿಲನೆ
ತಿಳಿಯೆ ಕೈಸಾರಿದೆನು ತೊಡಕಿದೊಡರಿಯದಿರೆಯೆಂದ (ಉದ್ಯೋಗ ಪರ್ವ, ೯ ಸಂಧಿ, ೪೭ ಪದ್ಯ)

ತಾತ್ಪರ್ಯ:
ಪಾಂಡವರನ್ನು ಎದುರುಹಾಕಿಕೊಂಡು ನೀನು ಅನುಭವಿಸಿದ ಭಂಗಗಳು ಎಷ್ಟೆಂದು ನಾನು ಹೇಳಲಿ, ಕುಂತಿಯ ಮಕ್ಕಳು ಕೈಗೆ ಆಯುಧವನ್ನು ಹಿಡಿದು ನಿಂತರೆ ಬದುಕಿ ಉಳಿಯುವವರು ಇರುವರೇ? ಅರ್ಥವಿಲ್ಲದ ಮಾತುಗಳನ್ನು ಬಿಡು. ಕುರುಕುಲವನ್ನು ಹಾಳುಮಾಡಬೇದ. ಅಯ್ಯೋ ವಂಚಕನೇ ಎಲ್ಲರೆದುರಿಗೆ ಹೇಳಿ, ಇದೋ ನಾನು ಹೊರಟೆ. ಯುದ್ಧ ಮಾಡಿದರೆ ನಿನಗೆ ತಿಳಿಯದೇ ಬಿಡುವುದಿಲ್ಲ.

ಅರ್ಥ:
ಭಂಗ: ಮೋಸ, ವಂಚನೆ; ಕೋಟಿ: ಹಲವಾರು, ಲೆಕ್ಕವಿಲ್ಲದಷ್ಟು; ಅಳತೆ: ಪರಿಮಾಣ; ಕೈದು: ಆಯುಧ, ಶಸ್ತ್ರ; ಉಳಿ: ಬದುಕು; ಮಕ್ಕಳು: ಸುತರು; ಇದಿರು: ಎದುರು; ಗಳ: ಕೊರಳು; ಹತ: ಕೊಲ್ಲಲ್ಪಟ್ಟವನು; ಕುಲ: ವಂಶ; ಕೆಡಿಸು: ನಾಶಮಾಡು; ಅಕಟ: ಅಯ್ಯೋ; ಕುಟಿಲ: ಮೋಸಗಾರ; ತಿಳಿ: ಅರಿ; ತೊಡಕು: ಸಿಕ್ಕು, ಗೋಜು;

ಪದವಿಂಗಡಣೆ:
ಎಲವೊ +ನಿನ್ನಯ +ಭಂಗ +ಕೋಟಿಗಳ್
ಅಳತೆಗೆಯ್ದವು +ಕೈದು+ಕೊಂಡೊಡೆ
ಯುಳಿಯಲಾಪವರ್+ಉಂಟೆ +ಕುಂತಿಯ +ಮಕ್ಕಳ್+ಇದಿರಿನೊಳು
ಗಳಹತನವನು +ಮಾಡದಿರು+ ಕುರು
ಕುಲವ+ ಕೆಡಿಸದಿರ್+ಅಕಟ+ ಕುಟಿಲನೆ
ತಿಳಿಯೆ +ಕೈಸಾರಿದೆನು+ ತೊಡಕಿದೊಡ್+ಅರಿಯದಿರೆ+ಯೆಂದ

ಅಚ್ಚರಿ:
(೧) ದುರ್ಯೋಧನನನ್ನು ಬಯ್ಯುವ ಬಗೆ – ಅಕಟ ಕುಟಿಲನೆ