ಪದ್ಯ ೫೧: ಅಶ್ವತ್ಥಾಮನ ಸ್ಥಿತಿ ಹೇಗಿತ್ತು?

ಜಗದುಸುರು ಪಸರಿಸಿತು ಹರುಷದ
ಹೊಗರು ಮಸಗಿತು ರಿಪುನೃಪರ ನಿ
ನ್ನಗಡು ಮಗನುತ್ಸಾಹವದ್ದುದು ಖೇದಪಂಕದಲಿ
ಹೊಗೆವ ಮೋರೆಯ ಕಯ್ಯಗಲ್ಲದ
ಬಿಗಿದ ಬೆರಗಿನ ಖತಿಯೊಳುಸುರುವ
ನಗೆಯೊಳಶ್ವತ್ಥಾಮನಿದ್ದನು ಮೊಗದ ಮೋನದಲಿ (ದ್ರೋಣ ಪರ್ವ, ೧೯ ಸಂಧಿ, ೫೧ ಪದ್ಯ)

ತಾತ್ಪರ್ಯ:
ಜಗತ್ತಿಗೆ ಪ್ರಾಣವು ಬಂದಿತು. ಪಾಂಡವರ ಸಂತೋಷ ಹಬ್ಬಿ ಹೆಚ್ಚಿತು. ನಿನ್ನ ಸ್ವೇಚ್ಛಾಚಾರಿಯಾದ ಮಗನ ಉತ್ಸಾಹವು ದುಃಖದ ಕೆಸರಿನಲ್ಲಿ ಮುಳುಗಿತು. ಮುಖದಲ್ಲಿ ಹೊಗೆ ಮಸಗುತ್ತಿರಲು, ಆಶ್ಚರ್ಯದಲ್ಲಿ ಮುಳುಗಿ, ಗಲ್ಲದ ಮೇಲೆ ಕೈಯಿಟ್ಟು ಕೋಪಾತಿರೇಕದಿಂದ ನಕ್ಕ ಅಶ್ವತ್ಥಾಮನು ಮೌನದಿಂದಿದ್ದನು.

ಅರ್ಥ:
ಜಗ: ಪ್ರಪಂಚ; ಉಸುರು: ಜೀವ; ಪಸರಿಸು: ಹರಡು; ಹರುಷ: ಸಂತಸ; ಹೊಗರು: ಕಾಂತಿ, ಪ್ರಕಾಶ; ಮಸಗು: ಬಾಡು; ರಿಪು: ವೈರಿ; ನೃಪ: ರಾಜ; ಅಗಡು: ತುಂಟತನ; ಮಗ: ಸುತ; ಉತ್ಸಾಹ: ಹುರುಪು; ಅದ್ದು: ಮುಳುಗಿಸು; ಖೇದ: ದುಃಖ; ಪಂಕ: ಕೆಸರು; ಹೊಗೆ: ಧೂಮ; ಮೋರೆ: ಮುಖ; ಕಯ್ಯ: ಕೈ, ಹಸ್ತ; ಗಲ್ಲ: ಕೆನ್ನೆ; ಬಿಗಿ: ಗಟ್ಟಿ; ಬೆರಗು: ವಿಸ್ಮಯ, ಸೋಜಿಗ; ಖತಿ: ಕೋಪ; ನಗೆ: ಸಂತಸ, ಹರ್ಷ; ಮೊಗ: ಮುಖ; ಮೋನ: ಮೌನ;

ಪದವಿಂಗಡಣೆ:
ಜಗದ್+ಉಸುರು+ ಪಸರಿಸಿತು +ಹರುಷದ
ಹೊಗರು +ಮಸಗಿತು +ರಿಪುನೃಪರ +ನಿನ್ನ್
ಅಗಡು +ಮಗನ್+ಉತ್ಸಾಹವ್+ಅದ್ದುದು +ಖೇದ+ಪಂಕದಲಿ
ಹೊಗೆವ+ ಮೋರೆಯ +ಕಯ್ಯ+ಗಲ್ಲದ
ಬಿಗಿದ +ಬೆರಗಿನ+ ಖತಿಯೊಳ್+ಉಸುರುವ
ನಗೆಯೊಳ್+ಅಶ್ವತ್ಥಾಮನ್+ಇದ್ದನು +ಮೊಗದ +ಮೋನದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ನಿನ್ನಗಡು ಮಗನುತ್ಸಾಹವದ್ದುದು ಖೇದಪಂಕದಲಿ

ಪದ್ಯ ೬೩: ದ್ರೋಣನು ಅರ್ಜುನನ ಪ್ರತಿಜ್ಞೆಯನ್ನು ಹೇಗೆ ವಿಶ್ಲೇಷಿಸಿದನು?

ನರನ ನುಡಿಯೆಂದಿರದಿರವು ಮುರ
ಹರನ ನುಡಿಗಳು ಕೇಳು ಗಿರಗ
ಹ್ವರದ ನುಡಿಯೋ ಜಂಗಮ ಧ್ವನಿಯೋ ವಿಚಾರಿಸಲು
ನರನ ನುಡಿ ಹೊಳ್ಳಾಗದಾ ಮುರ
ಹರನ ಬಲುಹುಳ್ಳನ್ನಬರವೆನೆ
ಲರಸನಾಲಿಸಿ ಕೇಳುತಿರ್ದನು ಕೈಯ ಗಲ್ಲದಲಿ (ದ್ರೋಣ ಪರ್ವ, ೮ ಸಂಧಿ, ೬೩ ಪದ್ಯ)

ತಾತ್ಪರ್ಯ:
ಪ್ರತಿಜ್ಞೆ ಮಾದಿದವನು ಅರ್ಜುನನಲ್ಲ, ಶ್ರೀಕೃಷ್ಣನ ನುಡಿಗಳೇ ಅವು. ಬೆಟ್ಟದ ಗುಹೆಯಿಂದ ಬರುವ ಪ್ರತಿಧ್ವನಿ ಗುಹೆದಯೋ ಕೂಗಿದವನದೋ ವಿಚಾರ ಮಾಡು. ಎಲ್ಲಿಯವರೆಗೆ ಕೃಷ್ಣನ ಬೆಂಬಲವಿರುತ್ತದೆಯೋ ಅಲ್ಲಿಯವರೆಗೆ ಅರ್ಜುನನ ಮಾತು ವ್ಯರ್ಥವಾಗುವುದಿಲ್ಲ. ಕೌರವನ ಗಲ್ಲದ ಮೇಲೆ ಕೈಯಿಟ್ಟು ದ್ರೋಣನ ಮಾತುಗಳನ್ನು ಕೇಳುತ್ತಾ ಕುಳಿತಿದ್ದನು.

ಅರ್ಥ:
ನರ: ಅರ್ಜುನ; ನುಡಿ: ಮಾತು; ಮುರಹರ: ಕೃಷ್ಣ; ನುಡಿ: ಮಾತು; ಕೇಳು: ಆಲಿಸು; ಗಿರ: ಬೆಟ್ಟ; ಗಹ್ವರ: ಗವಿ, ಗುಹೆ; ಜಂಗಮ: ಚಲಿಸುವ; ಧ್ವನಿ: ಶಬ್ದ; ವಿಚಾರಿಸು: ಚಿಂತಿಸು, ಯೋಚಿಸು; ಹೊಳ್ಳು: ಸುಳ್ಳು, ಜೊಳ್ಳು; ಬಲುಹು: ಬಲ, ಶಕ್ತಿ; ಅರಸ: ರಾಜ; ಆಲಿಸು: ಕೇಳು; ಕೈ: ಹಸ್ತ; ಗಲ್ಲ: ಕದಪು, ಕೆನ್ನೆ;

ಪದವಿಂಗಡಣೆ:
ನರನ +ನುಡಿ+ಎಂದಿರದಿರವು +ಮುರ
ಹರನ +ನುಡಿಗಳು +ಕೇಳು +ಗಿರ+ಗ
ಹ್ವರದ +ನುಡಿಯೋ +ಜಂಗಮ +ಧ್ವನಿಯೋ +ವಿಚಾರಿಸಲು
ನರನ+ ನುಡಿ +ಹೊಳ್ಳಾಗದ್+ಆ+ ಮುರ
ಹರನ +ಬಲುಹುಳ್ಳನ್ನಬರವ್+ಎನೆಲ್
ಅರಸನಾಲಿಸಿ+ ಕೇಳುತಿರ್ದನು +ಕೈಯ +ಗಲ್ಲದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗಿರಗಹ್ವರದ ನುಡಿಯೋ ಜಂಗಮ ಧ್ವನಿಯೋ ವಿಚಾರಿಸಲು
(೨) ನರನ, ಮುರಹರನ – ಪ್ರಾಸ ಪದ ೧, ೪ ಸಾಲಿನ ಪದಗಳು

ಪದ್ಯ ೩೭: ಯುಧಿಷ್ಠಿರನು ಪ್ರೀತಿಯಿಂದ ಅರ್ಜುನನಿಗೆ ಏನು ಹೇಳಿದ?

ಕಾಕ ಬಳಸಲು ಬೇಡ ಓಹೋ
ಸಾಕು ಸಾಕೈ ತಮ್ಮ ಮಾಣು
ದ್ರೇಕವನು ನೆಲ ರಕುತಗಂಡೊಡೆ ನಿನ್ನ ಮೇಲಾಣೆ
ಈ ಕಮಲಲೋಚನೆಯ ಸೆರಗಿಗೆ
ಸೇಕವಾಯಿತು ರಕುತವತಿ ಸ
ವ್ಯಾಕುಲತೆ ಬೇಡೆಂದು ಗಲ್ಲವ ಹಿಡಿದನರ್ಜುನನ (ವಿರಾಟ ಪರ್ವ, ೧೦ ಸಂಧಿ, ೩೭ ಪದ್ಯ)

ತಾತ್ಪರ್ಯ:
ಧರ್ಮಜನು ಅರ್ಜುನ ಉದ್ವೇಗದ ಮಾತನ್ನು ಕೇಳಿ, ಸಲ್ಲದ ಮಾತುಗಳು ಬೇಡ ಅರ್ಜುನ, ಉದ್ರೇಕಗೊಳ್ಳಬೇಡ, ನಿನ್ನಾಣೆಯಾಗಿಯೂ ರಕ್ತದ ಬಿಂದುವು ನೆಲಕ್ಕೆ ಬೀಳಲಿಲ್ಲ. ದ್ರೌಪದಿಯ ಸೆರಗಿಗೆ ಅಭಿಷೇಕವಾಯಿತು. ಅತಿಯಾಗಿ ವ್ಯಾಕುಲಗೊಳ್ಳಬೇಡ, ಎಂದು ಹೇಳಿ ಪ್ರೀತಿಯಿಂದ ಅರ್ಜುನನ ಗಲ್ಲವನ್ನು ಹಿಡಿದನು.

ಅರ್ಥ:
ಕಾಕ:ಕ್ಷುಲ್ಲಕ; ಬಳಸು: ಉಪಯೋಗಿಸು; ಬೇಡ: ಸಲ್ಲದು; ಸಾಕು: ನಿಲ್ಲಿಸು; ಮಾಣು: ನಿಲ್ಲಿಸು; ಉದ್ರೇಕ: ಉದ್ವೇಗ; ನೆಲ: ಭೂಮಿ; ರಕುತ: ನೆತ್ತರು; ಆಣೆ: ಪ್ರಮಾಣ; ಕಮಲಲೋಚನೆ: ಕಮಲದಂತ ಕಣ್ಣುಳ್ಳವಳು; ಸೆರಗು: ಸೀರೆಯ ಅಂಚು; ಸೇಕ: ಚಿಮುಕಿಸುವಿಕೆ; ವ್ಯಾಕುಲತೆ: ಚಿಂತೆ, ಕಳವಳ; ಗಲ್ಲ: ಕದಪು, ಕೆನ್ನೆ; ಹಿಡಿ: ಗ್ರಹಿಸು;

ಪದವಿಂಗಡಣೆ:
ಕಾಕ +ಬಳಸಲು +ಬೇಡ +ಓಹೋ
ಸಾಕು +ಸಾಕೈ +ತಮ್ಮ +ಮಾಣ್
ಉದ್ರೇಕವನು +ನೆಲ +ರಕುತಗಂಡೊಡೆ +ನಿನ್ನ+ ಮೇಲಾಣೆ
ಈ +ಕಮಲಲೋಚನೆಯ +ಸೆರಗಿಗೆ
ಸೇಕವಾಯಿತು +ರಕುತವ್+ಅತಿ +ಸ
ವ್ಯಾಕುಲತೆ +ಬೇಡೆಂದು +ಗಲ್ಲವ +ಹಿಡಿದನ್+ಅರ್ಜುನನ

ಅಚ್ಚರಿ:
(೧) ಅಲ್ಲಸಲ್ಲದ ಮಾತು ಎಂದು ಹೇಳಲು – ಕಾಕ ಪದದ ಬಳಕೆ
(೨) ರಕ್ತ ಎಲ್ಲಿ ಬಿತ್ತು ಎಂದು ಹೇಳಲು – ಈ ಕಮಲಲೋಚನೆಯ ಸೆರಗಿಗೆ ಸೇಕವಾಯಿತು ರಕುತವ

ಪದ್ಯ ೧೭: ದ್ರೌಪದಿ ಏಕೆ ದುಃಖಿಸಿದಳು?

ಹೊಡೆ ಮರಳಿ ಮುರಿದೆದ್ದು ತುರುಬಿನ
ಹುಡಿಯ ಕೊಡಹುತ ಮೊಲೆಗೆ ಮೇಲುದು
ತೊಡಿಸಿ ಗಲ್ಲದ ರಕುತವನು ಬೆರಲಿಂದ ಮಿಡಿಮಿಡಿದು
ನುಡಿಯಲಾಗದೆ ಖಳನು ಹೆಂಗುಸ
ಬಡಿಯೆ ನೋಡುತ್ತಿಹರೆ ಹಿರಿಯರು
ಹಿಡಿದ ಮೌನವ ಹೊತ್ತು ಲೇಸೆಂದಬಲೆ ಹಲುಬಿದಳು (ವಿರಾಟ ಪರ್ವ, ೩ ಸಂಧಿ, ೧೭ ಪದ್ಯ)

ತಾತ್ಪರ್ಯ:
ದ್ರೌಪದಿಯು ಮಗ್ಗುಲಾಗಿ ಎದ್ದು ತಲೆಗೂದಲಿನ ಮಣ್ಣನ್ನು ಕೊಡುವುತ್ತಾ, ಗಲ್ಲದ ಮೇಲಿನ ರಕ್ತವನ್ನು ಬೆರಳಿನಿಂದ ಮಿಡಿದು ಆ ದುಷ್ಟನು ಒಂದು ಹೆಣ್ಣನ್ನು ಬಡಿಯುತ್ತಿರುವಾಗ, ಆಸ್ಥಾನದಲ್ಲಿರುವ ಹಿರಿಯರಾದ ನೀವು ಒಂದಾದರೂ ಮಾತನಾಡಲಿಲ್ಲವಲ್ಲಾ! ಮೌನ ವ್ರತಕ್ಕೆ ನೀವು ಆರಿಸಿಕೊಂಡ ಹೊತ್ತು ಬಹಳ ಪ್ರಶಸ್ತವಾಗಿದೆ ಎಂದಳು.

ಅರ್ಥ:
ಹೊಡೆ: ಪೆಟ್ಟು; ಮರಳಿ: ಮತ್ತೆ; ಮುರಿ: ಸೀಳು; ಎದ್ದು: ಮೇಲೇಳು; ತುರುಬು: ತಲೆಗೂದಲು; ಹುಡಿ: ಮಣ್ಣು; ಕೊಡವು:ದೂಳನ್ನು ಹೊರಹಾಕು; ಮೊಲೆ: ಸ್ತನ; ಮೇಲುದು: ವಸ್ತ್ರ; ತೊಡಿಸು: ಹೊದ್ದು; ಗಲ್ಲ: ಕೆನ್ನೆ; ರಕುತ: ನೆತ್ತರು; ಬೆರಳು: ಅಂಗುಲಿ; ಮಿಡಿ: ಹೊಮ್ಮಿಸು; ನುಡಿ: ಮಾತು; ಖಳ: ದುಷ್ಟ; ಹೆಂಗುಸು: ಸ್ತ್ರೀ; ಬಡಿ: ಹೊಡೆ; ನೋಡು: ವೀಕ್ಷಿಸು; ಹಿರಿಯ: ದೊಡ್ಡವ; ಹಿಡಿ: ಗ್ರಹಿಸು; ಮೌನ: ಮಾತನಾಡದಿರುವ ಸ್ಥಿತಿ; ಹೊತ್ತು: ಉಂಟಾಗು, ಒದಗು; ಲೇಸು: ಒಳಿತು; ಹಲುಬು: ದುಃಖಪಡು, ಬೇಡು; ಅಬಲೆ: ಹೆಣ್ಣು;

ಪದವಿಂಗಡಣೆ:
ಹೊಡೆ +ಮರಳಿ +ಮುರಿದೆದ್ದು +ತುರುಬಿನ
ಹುಡಿಯ +ಕೊಡಹುತ +ಮೊಲೆಗೆ+ ಮೇಲುದು
ತೊಡಿಸಿ+ ಗಲ್ಲದ +ರಕುತವನು +ಬೆರಲಿಂದ +ಮಿಡಿಮಿಡಿದು
ನುಡಿಯಲಾಗದೆ+ ಖಳನು +ಹೆಂಗುಸ
ಬಡಿಯೆ+ ನೋಡುತ್ತಿಹರೆ+ ಹಿರಿಯರು
ಹಿಡಿದ +ಮೌನವ +ಹೊತ್ತು +ಲೇಸೆಂದ್+ಅಬಲೆ +ಹಲುಬಿದಳು

ಅಚ್ಚರಿ:
(೧) ದ್ರೌಪದಿಯು ಸಭೆಯನ್ನು ಬಯ್ದ ಪರಿ – ಹಿರಿಯರು ಹಿಡಿದ ಮೌನವ ಹೊತ್ತು ಲೇಸೆಂದಬಲೆ ಹಲುಬಿದಳು

ಪದ್ಯ ೫: ಧರ್ಮಜನು ಭೀಮನ ಗಲ್ಲವನ್ನ ಹಿಡಿದು ಏನು ಹೇಳಿದನು?

ಏಕಿದೇಕೆ ವೃಥಾ ನಿಶಾಟ
ವ್ಯಾಕರಣ ಪಾಂಡಿತ್ಯವಕಟ ವಿ
ವೇಕರಹಿತನೆ ನೀ ವೃಕೋದರ ದ್ರುಪದ ಸುತೆಯಂತೆ
ಸಾಕು ಸಾಕೈ ತಮ್ಮ ಸತ್ಯವೆ
ಸಾಕು ನಮಗೆ ಮದೀಯ ಪುಣ್ಯ
ಶ್ಲೋಕತೆಯನುಳುಹೆಂದು ಗಲ್ಲವ ಹಿಡಿದನನಿಲಜನ (ಅರಣ್ಯ ಪರ್ವ, ೫ ಸಂಧಿ, ೫ ಪದ್ಯ)

ತಾತ್ಪರ್ಯ:
ಭೀಮನ ಕೋಪದ ನುಡಿಗಳನ್ನು ಕಂಡ ಧರ್ಮಜನು, ಭೀಮಾ, ನಿನ್ನ ರಾಕ್ಷಸೀ ಕೋಪವನ್ನ ಸಾಕು ಮಾಡು, ನೀನು ಸಹ ದ್ರೌಪದಿಯಂತೆ ವಿವೇಕವನ್ನು ಕಳೆದುಕೊಂಡಿರುವೆಯಾ? ನಮಗೆ ಸತ್ಯವೊಂದೇ ಸಾಕು, ಪುಣ್ಯಕರವಾದ ಕೀರ್ತಿಯನ್ನು ಹೊಂದಿದವನೆಂಬ ನನ್ನ ಕೀರ್ತಿಯನ್ನು ಉಳಿಸು ಎಂದು ಪ್ರೀತಿಯಿಂದ ಭೀಮನ ಗಲ್ಲವನ್ನು ಹಿಡಿದು ಕೇಳಿಕೊಂಡನು.

ಅರ್ಥ:
ಏಕೆ: ಏನು ಕಾರಣ; ವೃಥ: ಸುಮ್ಮನೆ; ನಿಶಾಟ: ರಾಕ್ಷಸ; ವ್ಯಾಕರಣ: ವಿಭಜನೆ; ಪಾಂಡಿತ್ಯ: ವಿದ್ವತ್ತು, ಜ್ಞಾನ; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ರಹಿತ: ಇಲ್ಲದವ; ಅಕಟ: ಅಯ್ಯೋ; ವೃಕೋದರ: ಭೀಮ; ವೃಕ: ತೋಳ; ಉದರ: ಹೊಟ್ಟೆ; ಸುತೆ: ಮಗಳು; ಸಾಕು: ಇನ್ನು ಬೇಡ, ನಿಲ್ಲಿಸು; ಸತ್ಯ: ದಿಟ;ಮದೀಯ: ನನ್ನ; ಪುಣ್ಯ: ಸದಾಚಾರ; ಶ್ಲೋಕ: ಕೀರ್ತಿ, ಯಶಸ್ಸು; ಉಳುಹು: ಕಾಪಾದು; ಗಲ್ಲ: ಕದಪು, ಕೆನ್ನೆ; ಹಿಡಿದು: ಗ್ರಹಿಸು; ಅನಿಲಜ: ಭೀಮ; ಅನಿಲ: ವಾಯು;

ಪದವಿಂಗಡಣೆ:
ಏಕಿದ್+ಏಕೆ+ ವೃಥಾ +ನಿಶಾಟ
ವ್ಯಾಕರಣ+ ಪಾಂಡಿತ್ಯವ್+ಅಕಟ+ ವಿ
ವೇಕರಹಿತನೆ+ ನೀ +ವೃಕೋದರ+ ದ್ರುಪದ+ ಸುತೆಯಂತೆ
ಸಾಕು+ ಸಾಕೈ+ ತಮ್ಮ+ ಸತ್ಯವೆ
ಸಾಕು +ನಮಗೆ +ಮದೀಯ +ಪುಣ್ಯ
ಶ್ಲೋಕತೆಯನ್+ಉಳುಹೆಂದು +ಗಲ್ಲವ+ ಹಿಡಿದನ್+ಅನಿಲಜನ

ಅಚ್ಚರಿ:
(೧) ಅನಿಲಜ, ವೃಕೋದರ – ಭೀಮನನ್ನು ಕರೆದ ಪರಿ
(೨) ಭೀಮನ ಕೋಪವನ್ನು ಹೇಳುವ ಪರಿ – ನಿಶಾಟ ವ್ಯಾಕರಣ ಪಾಂಡಿತ್ಯವಕಟ

ಪದ್ಯ ೪೧: ಅಶ್ವತ್ಥಾಮನು ದುರ್ಯೋಧನ ಬಳಿ ಏನು ಬೇಡಿಕೊಂಡನು?

ಸರಿಗಳೆವೆನೆರಡಂಕವನು ನಾ
ಕರಸಿ ಕೊಡುವೆನು ಧರ್ಮಜನನೆರ
ಡರಸುಗಳು ಸರಿಯಾಗಿ ಭೋಗಿಸುವುದು ಮಹೀತಳವ
ಅರಸ ಕರ್ಣನ ಕೆಡಿಸದಿರು ನಿ
ಷ್ಠುರದ ನುಡಿಯಿದು ಕೆಂಡದಲಿ ಕ
ರ್ಪುರವ ಹಾಯ್ಕದಿರೆಂದು ರಾಯನ ಗಲ್ಲವನು ಪಿಡಿದ (ಕರ್ಣ ಪರ್ವ, ೨೨ ಸಂಧಿ, ೪೧ ಪದ್ಯ)

ತಾತ್ಪರ್ಯ:
ಎರಡೂ ಪಕ್ಷಗಳೂ ಸರಿಸಮನಾಗಿ ಹೋರಾಡುತ್ತಿವೆ. ನಾನು ಧರ್ಮಜನನ್ನು ಕರೆಸುತ್ತೇನೆ, ನೀವಿಬ್ಬರೂ ಸಂಧಿಮಾಡಿಕೊಂಡು ಅರ್ಧರ್ಧ ರಾಜ್ಯವನ್ನು ಅನುಭವಿಸಿರಿ ಎಂದು ಅಶ್ವತ್ಥಾಮ ಹೇಳಿದನು. ಬಳಿಕ ದುರ್ಯೋಧನನ ಗಲ್ಲವನ್ನು ಹಿಡಿದು, ನಾನು ನಿಷ್ಠುರ ವಾಕ್ಯವನ್ನಾಡುತ್ತೇನೆ, ಕರ್ಪುರವನ್ನು ಕೆಂಡದಲ್ಲಿ ಹಾಕಿದಂತೆ ಕರ್ಣನನ್ನು ಕೆಡಿಸಬೇಡ ಎಂದು ಬೇಡಿಕೊಂಡನು.

ಅರ್ಥ:
ಸರಿ: ಸಮಾನ; ಅಳೆ: ತೂಗು, ಅಳತೆ; ಅಂಕ: ಭಾಗ; ಕರಸಿ: ಬರೆಮಾಡು; ಅರಸು: ರಾಜ; ಸರಿಯಾಗಿ: ಯೋಗ್ಯವಾದುದು; ಭೋಗಿಸು: ಅನುಭವಿಸು; ಮಹೀತಳ: ಭೂಮಿ; ಅರಸ: ರಾಜ; ಕೆಡಿಸು: ಹಾಳುಮಾಡು; ನಿಷ್ಠುರ: ಕಠಿಣವಾದ, ಒರಟಾದ; ನುಡಿ: ಮಾತು; ಕೆಂಡ: ಉರಿಯುತ್ತಿರುವ ಇದ್ದಿಲು, ಇಂಗಳ; ಕರ್ಪುರ: ಸುಗಂಧ ದ್ರವ್ಯ; ಹಾಯ್ಕು: ಹಾಕು; ಗಲ್ಲ: ಕದಪು, ಕೆನ್ನೆ; ಪಿಡಿ: ಹಿಡಿ;

ಪದವಿಂಗಡಣೆ:
ಸರಿಗಳೆವೆನ್+ಎರಡ್+ಅಂಕವನು +ನಾ
ಕರಸಿ+ ಕೊಡುವೆನು +ಧರ್ಮಜನನ್+ಎರಡ್
ಅರಸುಗಳು +ಸರಿಯಾಗಿ +ಭೋಗಿಸುವುದು +ಮಹೀತಳವ
ಅರಸ +ಕರ್ಣನ +ಕೆಡಿಸದಿರು +ನಿ
ಷ್ಠುರದ+ ನುಡಿಯಿದು +ಕೆಂಡದಲಿ+ ಕ
ರ್ಪುರವ +ಹಾಯ್ಕದಿರೆಂದು +ರಾಯನ +ಗಲ್ಲವನು +ಪಿಡಿದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೆಂಡದಲಿ ಕರ್ಪುರವ ಹಾಯ್ಕದಿರೆಂದು