ಪದ್ಯ ೬೧: ಭೀಮನು ಕೌರವರನ್ನು ಹೇಗೆ ಹಂಗಿಸಿದನು?

ಕಪಟದಲಿ ಜೂಜಾಡಿ ರಾಜ್ಯವ
ನಪಹರಿಸಿದಡೆ ಧರ್ಮ ನಿಮ್ಮದು
ಕೃಪಣತೆಯ ನಾನೇನ ಹೇಳುವೆನಾ ಸುಯೋಧನನ
ದ್ರುಪದಪುತ್ರಿಯ ಗಾಢ ಗರುವಿಕೆ
ಗುಪಹತಿಯ ಮಾಡುವುದು ಧರ್ಮದ
ವಿಪುಳ ಪಥ ನಿಮ್ಮದು ಮಹಾಧರ್ಮಜ್ಞರಹಿರೆಂದ (ಗದಾ ಪರ್ವ, ೧೧ ಸಂಧಿ, ೬೧ ಪದ್ಯ)

ತಾತ್ಪರ್ಯ:
ಕಪಟದ ಜೂಜನ್ನಾಡಿ ರಾಜ್ಯವನ್ನು ಅಪಹರಿಸಿದುದು ನಿಮ್ಮ ಧರ್ಮ, ದುರ್ಯೋಧನನ ತುಚ್ಛ ವರ್ತನೆಯನ್ನು ಏನೆಂದು ಹೇಳಲಿ? ದ್ರೌಪದಿಯ ಮಾನವನ್ನು ಭಂಗ ಮಾಡುವ ಉತ್ತಮ ಧರ್ಮಮಾರ್ಗ ನಿಮ್ಮದು, ನೀವು ಮಹಾಧರ್ಮಜ್ಞರು ಎಂದು ಗಾಂಧಾರಿಗೆ ಹೇಳಿದನು.

ಅರ್ಥ:
ಕಪಟ: ಮೋಸ; ಜೂಜು: ದ್ಯೂತ; ರಾಜ್ಯ: ರಾಷ್ಟ್ರ; ಅಪಹರಿಸು: ಕಳ್ಳತನ, ಎಗರಿಸು; ಧರ್ಮ: ಧಾರಣೆ ಮಾಡಿದುದು, ಸನ್ಮಾರ್ಗ; ಕೃಪಣ: ದೈನ್ಯದಿಂದ ಕೂಡಿದುದು; ಪುತ್ರಿ: ಮಗಳು; ಗಾಢ: ಹೆಚ್ಚಳ, ಅತಿಶಯ; ಗರುವಿಕೆ: ದೊಡ್ಡಸ್ತಿಕೆ; ಉಪಹತಿ: ಹೊಡೆತ, ತೊಂದರೆ; ವಿಪುಳ: ಬಹಳ, ವಿಸ್ತಾರ; ಪಥ: ಮಾರ್ಗ; ಮಹಾ: ಶ್ರೇಷ್ಠ; ಧರ್ಮಜ್ಞ: ಧರ್ಮವನ್ನು ತಿಳಿದವ;

ಪದವಿಂಗಡಣೆ:
ಕಪಟದಲಿ +ಜೂಜಾಡಿ +ರಾಜ್ಯವನ್
ಅಪಹರಿಸಿದಡೆ +ಧರ್ಮ+ ನಿಮ್ಮದು
ಕೃಪಣತೆಯ +ನಾನೇನ +ಹೇಳುವೆನ್+ಆ+ ಸುಯೋಧನನ
ದ್ರುಪದಪುತ್ರಿಯ +ಗಾಢ +ಗರುವಿಕೆಗ್
ಉಪಹತಿಯ +ಮಾಡುವುದು +ಧರ್ಮದ
ವಿಪುಳ +ಪಥ +ನಿಮ್ಮದು +ಮಹಾಧರ್ಮಜ್ಞರಹಿರೆಂದ

ಅಚ್ಚರಿ:
(೧) ಗ ಕಾರದ ಜೋಡಿ ಪದ – ಗಾಢ ಗರುವಿಕೆಗುಪಹತಿಯ
(೨) ಧರ್ಮ, ಧರ್ಮದ ವಿಪುಳ ಪಥ, ಮಹಾಧರ್ಮಜ್ಞರು – ಧರ್ಮ ಪದದ ಬಳಕೆ

ಪದ್ಯ ೨೦: ನಿನ್ನದೆಂಥ ಜೀವನವೆಂದು ಧರ್ಮಜನೇಕೆ ಹಂಗಿಸಿದನು?

ಜೀವಸಖ ರಾಧೇಯನಾತನ
ಸಾವಿನಲಿ ನೀನುಳಿದೆ ಸೋದರ
ಮಾವ ಶಕುನಿಯ ಸೈಂಧವನ ದುಶ್ಯಾಸನಾದಿಗಳ
ಸಾವಿನಲಿ ಹಿಂದುಳಿದ ಜೀವನ
ಜೀವನವೆ ಜೀವನನಿವಾಸವಿ
ದಾವ ಗರುವಿಕೆ ಕೊಳನ ಹೊರವಡು ಕೈದುಗೊಳ್ಳೆಂದ (ಗದಾ ಪರ್ವ, ೫ ಸಂಧಿ, ೨೦ ಪದ್ಯ)

ತಾತ್ಪರ್ಯ:
ನಿನ್ನ ಪ್ರಾಣ ಸ್ನೇಹಿತನಾದ ಕರ್ಣನು ಸತ್ತರೂ, ನೀನು ಬದುಕಿರುವೆ, ನಿನ್ನ ಸೋದರಮಾವ ಶಕುನಿ, ಮೈದುನ ಸೈಂಧವ, ತಮ್ಮ ದುಶ್ಯಾಸನ ಇವರೆಲ್ಲ ಸತ್ತರೂ ನೀನು ಬದುಕಿರುವೆ ಇಂತಹ ಜೀವನವು ಒಂದು ಜೀವನವೇ? ಇದೆಂಥ ಸ್ವಾಭಿಮಾನ ಹೀನತೆ? ಕೊಳವನ್ನು ಬಿಟ್ಟು ಹೊರಬಂದು ಆಯುಧವನ್ನು ಹಿಡಿ ಎಂದು ಪ್ರಚೋದಿಸಿದನು.

ಅರ್ಥ:
ಜೀವ: ಜೀವನ; ರಾಧೇಯ: ಕರ್ಣ; ಸಾವು: ಮರಣ; ಉಳಿ: ಬದುಕು; ಸೋದರಮಾವ: ತಾಯಿಯ ತಮ್ಮ; ಆದಿ: ಮುಂತಾದ; ನಿವಾಸ: ಆಲಯ; ಗರುವ: ಶ್ರೇಷ್ಠ; ಕೊಳ: ಸರಸಿ; ಹೊರವಡು: ಹೊರಗೆ ಬಾ; ಕೈದು: ಆಯುಧ;

ಪದವಿಂಗಡಣೆ:
ಜೀವಸಖ +ರಾಧೇಯನ್+ಆತನ
ಸಾವಿನಲಿ +ನೀನುಳಿದೆ +ಸೋದರ
ಮಾವ +ಶಕುನಿಯ +ಸೈಂಧವನ+ ದುಶ್ಯಾಸನಾದಿಗಳ
ಸಾವಿನಲಿ +ಹಿಂದುಳಿದ +ಜೀವನ
ಜೀವನವೆ +ಜೀವನ+ನಿವಾಸವ್
ಇದಾವ +ಗರುವಿಕೆ +ಕೊಳನ +ಹೊರವಡು +ಕೈದುಗೊಳ್ಳೆಂದ

ಅಚ್ಚರಿ:
(೧) ಜೀವನ ಪದದ ಬಳಕೆ – ಸಾವಿನಲಿ ಹಿಂದುಳಿದ ಜೀವನ ಜೀವನವೆ ಜೀವನನಿವಾಸವಿದಾವ ಗರುವಿಕೆ

ಪದ್ಯ ೫೦: ಪಾಂಡವ ಸೈನ್ಯವು ಹೇಗೆ ಒಟ್ಟುಗೂಡಿತು?

ಹರೆದ ಬಲವೊಗ್ಗಾಯ್ತು ರಾಯನ
ನುರವಣಿಸಲೀಯದೆ ನೃಪಾಲಕ
ರುರುಬಿದರು ತರುಬಿದರು ಪರಬಲ ಕಾಲಭೈರವನ
ಹೊರಳಿಯೊಡೆಯದೆ ಭಾರಣೆಯಲೊ
ತ್ತರಿಸಿ ಕಲ್ಪದ ಕಡೆಯ ಕಡಲಿನ
ಗರುವಿಕೆಯ ಗಾಢದಲಿ ನಡೆದರು ತಡೆದರರಿಭಟರ (ದ್ರೋಣ ಪರ್ವ, ೨ ಸಂಧಿ, ೫೦ ಪದ್ಯ)

ತಾತ್ಪರ್ಯ:
ಚೆಲ್ಲಾಪಿಲ್ಲಿಯಾಗಿದ್ದ ಪಾಂಡವ ಸೈನ್ಯವು ಒಟ್ಟುಗೂಡಿತು. ರಾಜನನ್ನು ಯುದ್ಧಕ್ಕೆ ಬಿಡದೆ ವೈರಿಸೈನ್ಯವು ಕಾಲಭೈರವನಾದ ದ್ರೋಣನನ್ನು ತಡೆದು ನಿಂತರು. ಸಾಲುಗಳು ತಪ್ಪದೆ ವ್ಯೂಹವು ಛಿದ್ರವಾಗದಂತೆ ಕಲ್ಪಾಂತದ ಕಡಲಿನಂತೆ ಕೌರವ ಸೈನ್ಯವನ್ನೂ ದ್ರೋಣನನ್ನೂ ತಡೆದು ನಿಲ್ಲಿಸಿದರು.

ಅರ್ಥ:
ಹರೆದ: ವ್ಯಾಪಿಸಿದ; ಬಲ: ಸೈನ್ಯ; ಒಗ್ಗು: ಗುಂಪು; ರಾಯ: ರಾಜ; ಉರವಣೆ:ಆತುರ, ಅವಸರ; ನೃಪಾಲ: ರಾಜ; ಉರುಬು: ಅತಿಶಯವಾದ ವೇಗ; ತರುಬು: ತಡೆ, ನಿಲ್ಲಿಸು; ಪರಬಲ: ವೈರಿ ಸೈನ್ಯ; ಕಾಲಭೈರವ: ಶಿವನ ಒಂದು ರೂಪ; ಹೊರಳು: ತಿರುವು, ಬಾಗು; ಒಡೆ: ಸೀಳು; ಭಾರಣೆ: ಮಹಿಮೆ, ಗೌರವ; ಉತ್ತರ: ಪರಿಹಾರ; ಕಲ್ಪ: ಸಹಸ್ರಯುಗ, ಪ್ರಳಯ; ಕಡೆ: ಕೊನೆ; ಕಡಲು: ಸಾಗರ; ಗರುವಿಕೆ: ಗರ್ವ, ಜಂಭ; ಗಾಢ: ಹೆಚ್ಚಳ; ನಡೆ: ಚಲಿಸು; ತಡೆ: ನಿಲ್ಲಿಸು; ಅರಿ: ವೈರಿ; ಭಟ: ಸೈನಿಕ;

ಪದವಿಂಗಡಣೆ:
ಹರೆದ +ಬಲವ್+ಒಗ್ಗಾಯ್ತು +ರಾಯನನ್
ಉರವಣಿಸಲ್+ಈಯದೆ +ನೃಪಾಲಕರ್
ಉರುಬಿದರು +ತರುಬಿದರು +ಪರಬಲ+ ಕಾಲಭೈರವನ
ಹೊರಳಿ+ಒಡೆಯದೆ +ಭಾರಣೆಯಲ್
ಉತ್ತರಿಸಿ+ ಕಲ್ಪದ +ಕಡೆಯ +ಕಡಲಿನ
ಗರುವಿಕೆಯ +ಗಾಢದಲಿ +ನಡೆದರು +ತಡೆದರ್+ಅರಿಭಟರ

ಅಚ್ಚರಿ:
(೧) ಉರುಬಿದರು, ತರುಬಿದರು – ಪ್ರಾಸ ಪದಗಳು
(೨) ಕ ಕಾರದ ತ್ರಿವಳಿ ಪದ – ಕಲ್ಪದ ಕಡೆಯ ಕಡಲಿನ