ಪದ್ಯ ೨೨: ಕೌರವನು ಮೂರ್ಛಿತನಾಗಲು ಕಾರಣವೇನು?

ವಟ್ಟಿ ಮುರಿದುದು ಸೀಸಕದ ಗದೆ
ನಟ್ಟುದರಸನ ನೊಸಲ ರುಧಿರದ
ಕಟ್ಟೆಯೊಡೆದಂದದಲಿ ಕವಿದುದು ನೃಪನ ತನು ನನೆಯೆ
ಕೊಟ್ಟ ಘಾಯಕೆ ಬಳಲಿ ಮರವೆಗೆ
ಬಿಟ್ಟು ಮನವನು ನಿಮಿಷದಲಿ ಜಗ
ಜಟ್ಟಿ ಕೌರವರಾಯ ಕೊಂಡನು ನಿಜಗದಾಯುಧವ (ಗದಾ ಪರ್ವ, ೭ ಸಂಧಿ, ೨೨ ಪದ್ಯ)

ತಾತ್ಪರ್ಯ:
ಕೌರವನ ಸೀಸಕವು ಮುರಿಯಿತು. ಹಣೆಯಲ್ಲಿ ಆಯುಧವು ನೆಟ್ಟು ರಕ್ತದ ಕಟ್ಟೆಯೊಡೆದಂತಾಗಿ ಕೌರವನ ಮೈನೆನೆಯಿತು. ಗಾಯದಿಂದ ಬಳಲಿ ಒಂದು ನಿಮಿಷ ಮೂರ್ಛೆ ಹೋಗಿ ಎದ್ದು ಕೌರವನು ಗದೆಯನ್ನು ತೆಗೆದುಕೊಂಡನು.

ಅರ್ಥ:
ಮುರಿ: ಸೀಳು; ಸೀಸಕ: ಶಿರಸ್ತ್ರಾಣ; ಗದೆ: ಮುದ್ಗರ; ಅರಸ: ರಾಜ; ನೊಸಲು: ಹಣೆ; ರುಧಿರ: ರಕ್ತ; ಕಟ್ಟೆ: ಒಡ್ಡು; ಒಡೆ: ಸೀಳು, ಬಿರುಕು; ಕವಿ: ಆವರಿಸು; ನೃಪ: ರಾಜ; ತನು: ದೇಹ; ನೆನೆ: ತೋಯು; ಕೊಟ್ಟು: ನೀಡು; ಘಾಯ: ಪೆಟ್ಟು; ಬಳಲಿ: ಆಯಾಸ; ಮರವೆ: ಮರವು, ಜ್ಞಾಪಕವಿಲ್ಲದಿರುವುದು; ಬಿಟ್ಟು: ತೊರೆ; ಮನ: ಮನಸ್ಸು; ನಿಮಿಷ: ಕ್ಷಣ ಮಾತ್ರದಲಿ; ಜಗಜಟ್ಟಿ: ಪರಾಕ್ರಮಿ;

ಪದವಿಂಗಡಣೆ:
ವಟ್ಟಿ +ಮುರಿದುದು +ಸೀಸಕದ +ಗದೆ
ನಟ್ಟುದ್+ಅರಸನ +ನೊಸಲ +ರುಧಿರದ
ಕಟ್ಟೆ+ಒಡೆದಂದದಲಿ +ಕವಿದುದು +ನೃಪನ +ತನು +ನನೆಯೆ
ಕೊಟ್ಟ+ ಘಾಯಕೆ +ಬಳಲಿ +ಮರವೆಗೆ
ಬಿಟ್ಟು+ ಮನವನು +ನಿಮಿಷದಲಿ +ಜಗ
ಜಟ್ಟಿ+ ಕೌರವರಾಯ+ ಕೊಂಡನು +ನಿಜ+ಗದಾಯುಧವ

ಅಚ್ಚರಿ:
(೧) ರೂಪಕದ ಪ್ರಯೋಗ – ರುಧಿರದಕಟ್ಟೆಯೊಡೆದಂದದಲಿ ಕವಿದುದು ನೃಪನ ತನು ನನೆಯೆ

ಪದ್ಯ ೫೭: ಕರ್ಣನು ಎಲ್ಲಿ ಅವಿತುಕೊಂಡನು?

ವಾಯುಸುತ ಖಾತಿಯಲಿ ಹಲಗೆಯ
ಡಾಯುಧವ ಕೊಂಡರಿಭಟನ ಮೇ
ಲ್ವಾಯಿದಡೆ ಸಮ್ಮುಖವ ಬಿಟ್ಟನು ಧ್ವಜದ ಕಂಭದಲಿ
ಆಯುಧವ ಕೊಂಡೈದಿದಡೆ ಹಗೆ
ಮಾಯವಾದನು ಪೂತುರೆನುತ ಗ
ದಾಯುಧನು ಮರಳಿದರೆ ಕೈಯೊಡನೆದ್ದನಾ ಕರ್ಣ (ದ್ರೋಣ ಪರ್ವ, ೧೩ ಸಂಧಿ, ೫೭ ಪದ್ಯ)

ತಾತ್ಪರ್ಯ:
ಭೀಮನು ಕೋಪದಿಂದ ಖಡ್ಗ ಗುರಾಣಿಗಳಿಂದ ಹಿಡಿದು ಕರ್ಣನ ಮೇಲೆ ನುಗ್ಗಲು, ಕರ್ಣನು ಧ್ವಜ ದಂಡದ ಮರೆಗೆ ಸರಿದು ನಿಂತನು. ಆಯುಧವನ್ನು ಹಿಡಿದು ಹೋದರೆ ಶತ್ರುವು ಮಾಯವಾಗಿ ಬಿಟ್ಟ ಭಲೇ! ಎಂದು ಭೀಮನು ಹಿಂದಿರುಗಿ ಬಂದೊಡನೆ ಕರ್ಣನು ಎದ್ದು ನಿಂತನು.

ಅರ್ಥ:
ವಾಯುಸುತ: ಅನಿಲಪುತ್ರ (ಭೀಮ); ಖಾತಿ: ಕೋಪ; ಹಲಗೆ: ಒಂದು ಬಗೆಯ ಗುರಾಣಿ; ಆಯುಧ: ಶಸ್ತ್ರ; ಅರಿ: ವೈರಿ; ಭಟ: ಸೈನಿಕ; ಸಮ್ಮುಖ: ಎದುರು; ಬಿಟ್ಟು: ತೊರೆ; ಧ್ವಜ: ಪತಾಕೆ; ಕಂಭ: ನಿಲ್ಲಿಸುವ ಮರ ಕಲ್ಲು; ಆಯುಧ: ಶಸ್ತ್ರ; ಕೊಂಡು: ಪಡೆ; ಐದು: ಬಂದು ಸೇರು; ಹಗೆ: ವೈರಿ; ಮಾಯ: ಇಂದ್ರಜಾಲ; ಪುತು: ಭಲೇ; ಗದೆ: ಮುದ್ಗರ; ಮರಳಿ: ಪುನಃ; ಕೈ: ಹಸ್ತ; ಎದ್ದು: ಮೇಲೇಳು;

ಪದವಿಂಗಡಣೆ:
ವಾಯುಸುತ+ ಖಾತಿಯಲಿ +ಹಲಗೆಯಡ್
ಆಯುಧವ +ಕೊಂಡ್+ಅರಿ+ಭಟನ+ ಮೇಲ್
ವಾಯಿದಡೆ+ ಸಮ್ಮುಖವ +ಬಿಟ್ಟನು +ಧ್ವಜದ +ಕಂಭದಲಿ
ಆಯುಧವ +ಕೊಂಡ್+ಐದಿದಡೆ +ಹಗೆ
ಮಾಯವಾದನು+ ಪೂತುರೆನುತ +ಗ
ದಾಯುಧನು +ಮರಳಿದರೆ +ಕೈಯೊಡನ್+ಎದ್ದನಾ +ಕರ್ಣ

ಅಚ್ಚರಿ:
(೧) ಗದಾಯುಧ, ಹಲಗೆಯಡಾಯುಧ, ಆಯುಧ – ಆಯುಧ ಪದದ ಬಳಕೆ

ಪದ್ಯ ೬: ಭೀಮನು ದ್ರೌಪದಿಗೆ ಏನು ಹೇಳಿದನು?

ಹಿರಿದು ಸೊಗಸಾಯ್ತೆನಗಪೂರ್ವದ
ಪರಿಮಳದ ಕೇಳಿಯಲಿ ನೀನಾ
ಸರಸಿಜವ ತಂದಿತ್ತು ತನ್ನ ಮನೋಗತ ವ್ಯಥೆಯ
ಪರಿಹರಿಪುದೆನಲಬುಜವದನೆಯ
ಕುರುಳನಗುರಲಿ ತಿದ್ದಿದನು ತ
ತ್ಸರಸಿಜವ ತಹೆನೆನುತ ಕೊಂಡನು ನಿಜ ಗದಾಯುಧವ (ಅರಣ್ಯ ಪರ್ವ, ೧೧ ಸಂಧಿ, ೬ ಪದ್ಯ)

ತಾತ್ಪರ್ಯ:
ದ್ರೌಪದಿಯು ಭೀಮನ ಬಳಿ ಬಂದು, ಈ ಪುಷ್ಪದ ಅಪೂರ್ವ ಪರಿಮಳವು ನನಗೆ ಬಹಳ ಇಷ್ಟವಾಗಿದೆ. ಅದನ್ನು ತಂದು ಕೊಟ್ಟು ನನ್ನ ಮನಸ್ಸಿನ ಇಚ್ಛೆಯನ್ನು ಪೂರೈಸಲೆಂದು ಕೇಳಲು, ಭೀಮನು ಪ್ರೀತಿಯಿಂದ ತನ್ನು ಉಗುರಿನಿಂದ ಆಕೆಯ ಮುಂಗುರುಳನ್ನು ಸರಿಪಡಿಸಿ, ಆ ಪದ್ಮವನ್ನು ತರುವೆನೆಂದು ಹೇಳಿ ತನ್ನ ಗದೆಯನ್ನು ತೆಗೆದುಕೊಂಡು ಹೊರಟನು.

ಅರ್ಥ:
ಹಿರಿದು: ದೊಡ್ಡದು, ಶ್ರೇಷ್ಠ; ಸೊಗಸು: ಚೆಲುವು; ಪೂರ್ವ: ಮೂಡಣ; ಪರಿಮಳ: ಸುಗಂಧ; ಕೇಳಿ:ವಿನೋದ; ಸರಸಿಜ: ಕಮಲ; ತಂದು: ಪಡೆದು; ಮನೋಗತ: ಮನಸ್ಸಿನಲ್ಲಿರುವ, ಅಭಿಪ್ರಾಯ; ವ್ಯಥೆ: ಯಾತನೆ; ಪರಿಹರಿಸು: ನಿವಾರಿಸು; ಅಬುಜ: ಕಮಲ; ವದನ: ಮುಖ; ಕುರುಳ: ಮುಂಗುರುಳು; ಉಗುರು: ನಖ; ತಿದ್ದು: ಸರಿಪಡಿಸು; ಸರಸಿಜ: ಕಮಲ; ತಹೆ: ತರುವೆ; ಕೊಂಡು: ತೆಗೆದುಕೊ; ಗಧೆ: ಮುದ್ಗರ;

ಪದವಿಂಗಡಣೆ:
ಹಿರಿದು +ಸೊಗಸಾಯ್ತ್+ಎನಗ್+ಪೂರ್ವದ
ಪರಿಮಳದ+ ಕೇಳಿಯಲಿ +ನೀನ್ +ಆ
ಸರಸಿಜವ +ತಂದಿತ್ತು +ತನ್ನ +ಮನೋಗತ+ ವ್ಯಥೆಯ
ಪರಿಹರಿಪುದ್+ಎನಲ್+ಅಬುಜವದನೆಯ
ಕುರುಳನ್+ಉಗುರಲಿ +ತಿದ್ದಿದನು +ತತ್
ಸರಸಿಜವ +ತಹೆನೆನುತ +ಕೊಂಡನು +ನಿಜ +ಗದಾಯುಧವ

ಅಚ್ಚರಿ:
(೧) ಭೀಮನ ಪ್ರೀತಿಯನ್ನು ತೋರುವ ಪರಿ – ಅಬುಜವದನೆಯ ಕುರುಳನಗುರಲಿ ತಿದ್ದಿದನು
(೨) ಸರಸಿಜ, ಅಬುಜ – ಸಮನಾರ್ಥಕ ಪದ