ಪದ್ಯ ೫೮: ಗಾಂಧಾರಿಯು ಭೀಮನನ್ನು ಹೇಗೆ ಗದರಿದಳು?

ಏಳು ತಮ್ಮ ವೃಥಾ ವಿಡಂಬನ
ದಾಳಿಯಾಟವಿದೇಕೆ ಸೈರಿಸ
ಹೇಳಿದೈ ಸೈರಿಸದೆ ಮುನಿದಡೆ ನಿಮಗೆ ಕೇಡಹುದೆ
ಕಾಳೆಗದ ಕೃತಸಮಯಸತ್ಯವ
ಪಾಲಿಸಿದವರು ನೀವಲೇ ದಿಟ
ಖೂಳರಾವೈಸಲೆ ಎನುತ ಗಜರಿದಳು ಗಾಂಧಾರಿ (ಗದಾ ಪರ್ವ, ೧೧ ಸಂಧಿ, ೫೮ ಪದ್ಯ)

ತಾತ್ಪರ್ಯ:
ಗಾಂಧಾರಿಯು, ತಮ್ಮಾ, ವೃಥಾ ವಿಡಂಬನದ ವಂಚನೆಯ ಮಾತೇಕೆ? ಸೈರಿಸು ಎಂದು ಕೇಳಿಕೊಂಡೆ, ನಾನು ಸೈರಿಸದೆ ಸಿಟ್ಟಾದರೆ ನಿಮಗೆ ಕೇಡಾದೀತೇ? ಯುದ್ಧದಲ್ಲಿ ಸಂಭವಿಸಿದ ಸನ್ನಿವೇಶಕ್ಕೆ ತಕ್ಕ ಸತ್ಯವನ್ನು ನೀವು ಪಾಲಿಸಿದಿರಿ. ನಾವೇ ದುಷ್ಟರು ಅಲ್ಲವೇ ಎಂದು ಭೀಮನನ್ನು ಗದರಿಸಿದಳು.

ಅರ್ಥ:
ಏಳು: ಮೇಲೇಳು; ತಮ್ಮ: ಸಹೋದರ; ವೃಥ: ಸುಮ್ಮನೆ; ವಿಡಂಬನೆ: ಅನುಕರಣೆ; ದಾಳಿ: ಆಕ್ರಮಣ; ಆಟ: ಕ್ರೀಡೆ; ಸೈರಿಸು: ತಾಳು, ಸಹಿಸು; ಕೇಡು: ಹಾಳು, ನಾಶ; ಕಾಳೆಗ: ಯುದ್ಧ; ಕೃತ: ಮಾಡಿದ; ಸಮಯ: ಕಾಲ; ಸತ್ಯ: ದಿಟ; ಪಾಲಿಸು: ರಕ್ಷಿಸು, ಕಾಪಾಡು; ದಿಟ: ನಿಜ; ಖೂಳ: ದುಷ್ಟ; ಐಸಲೆ: ಅಲ್ಲವೇ; ಗಜರು: ಆರ್ಭಟಿಸು, ಗದರು;

ಪದವಿಂಗಡಣೆ:
ಏಳು+ ತಮ್ಮ+ ವೃಥಾ +ವಿಡಂಬನ
ದಾಳಿಯಾಟವಿದೇಕೆ +ಸೈರಿಸ
ಹೇಳಿದೈ+ ಸೈರಿಸದೆ +ಮುನಿದಡೆ +ನಿಮಗೆ +ಕೇಡಹುದೆ
ಕಾಳೆಗದ +ಕೃತ+ಸಮಯ+ಸತ್ಯವ
ಪಾಲಿಸಿದವರು +ನೀವಲೇ +ದಿಟ
ಖೂಳರ್+ಆವ್+ಐಸಲೆ+ ಎನುತ +ಗಜರಿದಳು +ಗಾಂಧಾರಿ

ಅಚ್ಚರಿ:
(೧) ತನ್ನನ್ನು ವಿಶ್ಲೇಷಿಸಿದ ಪರಿ – ದಿಟ ಖೂಳರಾವೈಸಲೆ ಎನುತ ಗಜರಿದಳು ಗಾಂಧಾರಿ
(೨) ಭೀಮನನ್ನು ಕರೆದ ಪರಿ – ಏಳು ತಮ್ಮ ವೃಥಾ ವಿಡಂಬನದಾಳಿಯಾಟವಿದೇಕೆ

ಪದ್ಯ ೧೩: ಭೀಮನು ದ್ರೋಣರ ರಥವನ್ನು ಹೇಗೆ ತಿರುಗಿಸಿದನು?

ಗಜರಿನಲಿ ಗಿರಿ ಬಿರಿಯೆ ದಿವಿಜ
ವ್ರಜ ಭಯಂಗೊಳೆ ಹೂಣೆ ಹೊಕ್ಕರಿ
ವಿಜಯನಿಟ್ಟಣಿಸಿದರೆ ಹಿಮ್ಮೆಟ್ಟಿದರೆ ಬಳಿಸಲಿಸಿ
ಸುಜನ ವಂದ್ಯನ ರಥವ ಹಿಡಿದನಿ
ಲಜನು ಮುಂಗೈಗೊಂಡು ಪಡೆ ಗಜ
ಬಜಿಸೆ ನಭಕೀಡಾಡಿದನು ಹಿಡಿ ಬುಗುರಿಯಂದದಲಿ (ದ್ರೋಣ ಪರ್ವ, ೧೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ಬೆಟ್ಟಗಳು ಬಿರಿಯುವಂತೆ, ದೇವತೆಗಳು ಭಯಗೊಳ್ಳುವಂತೆ ಭೀಮನು ಗರ್ಜಿಸಿ ಮುನ್ನುಗ್ಗಲು, ವೈರಿಗಳ ಗೆಲುವನ್ನು ಅಟ್ಟಾಡಿಸಿಕೊಂಡು ಹೋದ ಪರಿಯಲ್ಲಿ, ದ್ರೋಣನು ಹಿಮ್ಮೆಟ್ಟಿದನು. ಭೀಮನು ಹಿಂದಕ್ಕೆ ನುಗ್ಗಿ ದ್ರೋಣನ ರಥವನ್ನು ಮುಂಗೈಯಿಂದ ಹಿಡಿದು ಮೇಲಕ್ಕೆತ್ತಿ ಹಿಡಿ ಬುಗುರಿಯಂತೆ ತಿರುಗಿಸಿ ಆಕಾಶಕ್ಕೆಸೆಯಲು ಕೌರವ ಸೈನ್ಯವು ಭಯದಿಮ್ದ ಕೂಗಿಕೊಂಡಿತು?

ಅರ್ಥ:
ಗಜರು: ಆರ್ಭಟಿಸು; ಗಿರಿ: ಬೆಟ್ಟ; ಬಿರಿ: ಸೀಳು; ದಿವಿಜ: ದೇವತೆ; ವ್ರಜ: ಗುಂಪು; ಭಯ: ಅಂಜು; ಹೂಣು: ಪ್ರತಿಜ್ಞೆಮಾಡು; ಹೊಕ್ಕು: ಸೇರು; ಅರಿ: ವೈರಿ; ವಿಜಯ: ಗೆಲುವು; ಹಿಮ್ಮೆಟ್ಟು: ಹಿಂದೆ ಸರಿ; ಬಳಿ: ಹತ್ತಿರ; ಬಳಿಸಲಿಸು: ಹಿಂದಟ್ಟಿಕೊಂಡು ಹೋಗು; ಸುಜನ: ಒಳ್ಳೆಯ ಮನುಷ್ಯ; ವಂದ್ಯ: ಗೌರವಿಸು; ರಥ: ಬಂಡಿ; ಹಿಡಿ: ಗ್ರಹಿಸು; ಅನಿಲಜ: ಭೀಮ; ಮುಂಗೈ: ಮುಂದಿನ ಹಸ್ತ; ಪಡೆ: ಗುಂಪು; ಗಜಬಜ: ಗಲಾಟೆ, ಕೋಲಾಹಲ; ನಭ: ಆಗಸ; ಈಡಾಡು: ಚೆಲ್ಲು; ಹಿಡಿ: ಗ್ರಹಿಸು;

ಪದವಿಂಗಡಣೆ:
ಗಜರಿನಲಿ +ಗಿರಿ +ಬಿರಿಯೆ +ದಿವಿಜ
ವ್ರಜ +ಭಯಂಗೊಳೆ +ಹೂಣೆ +ಹೊಕ್ಕ್+ಅರಿ
ವಿಜಯನ್+ಇಟ್ಟಣಿಸಿದರೆ +ಹಿಮ್ಮೆಟ್ಟಿದರೆ +ಬಳಿಸಲಿಸಿ
ಸುಜನ +ವಂದ್ಯನ +ರಥವ +ಹಿಡಿದ್+ಅನಿ
ಲಜನು +ಮುಂಗೈಗೊಂಡು +ಪಡೆ +ಗಜ
ಬಜಿಸೆ +ನಭಕ್+ಈಡಾಡಿದನು +ಹಿಡಿ +ಬುಗುರಿಯಂದದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ನಭಕೀಡಾಡಿದನು ಹಿಡಿ ಬುಗುರಿಯಂದದಲಿ

ಪದ್ಯ ೭: ಯುದ್ಧರಂಗದಲ್ಲಿ ಯಾವ ಶಬ್ದ ಕೇಳಿತು?

ಕಾಲುಗಾಹಿನ ಕುದುರೆಗಳ ಕಾ
ಲಾಳ ಕೈವಾರಿಗಳ ಸಬಳದ
ಸೂಳಿಗೆಯ ತೇರುಗಳ ಹರಹಿನ ಹೊಂತಕಾರಿಗಳ
ಆಳ ಬಲು ಬೊಬ್ಬೆಯಲಿ ಘನ ನಿ
ಸ್ಸಾಳತತಿ ಮೊಳಗಿದವು ಡೌಡೆಯ
ತೂಳುವರೆಗಳು ಗಜರಿದವು ತಂಬಟದ ಲಗ್ಗೆಯಲಿ (ದ್ರೋಣ ಪರ್ವ, ೩ ಸಂಧಿ, ೭ ಪದ್ಯ)

ತಾತ್ಪರ್ಯ:
ಸುಪ್ರತೀಕದ ಕಾಲುಗಳ ಕಾಪಿಗೆ ಕುದುರೆಗಳು ಕಾಲಾಳುಗಳು ಸಬಳ ಸೂನಿಗೆಗಳನ್ನು ಹೇರಿದ ಬಂಡಿಗಳು, ಅನೇಕ ವೀರರು ಇದ್ದರು. ಅವರೆಲ್ಲರೂ ಕೇಕೆ ಹೊಡೆಯಲು, ನಿಸ್ಸಾಳಗಳು ಮೊರೆದವು. ಡೌಡೆ ತಮ್ಮಟೆಗಳು ಮಹಾ ಶಬ್ದವನ್ನು ಮಾಡಿದವು.

ಅರ್ಥ:
ಕಾಲುಗಾಹು: ಬೆಂಗಾವಲು; ಕುದುರೆ: ಅಶ್ವ; ಕಾಲಾಳು: ಸೈನಿಕ; ಕೈವಾರಿ: ಶೂರ, ಪರಾಕ್ರಮಿ; ಸಬಳ: ಈಟಿ, ಭರ್ಜಿ; ಸೂಲಿಗೆ: ಸೂನಿಗೆ, ಒಂದು ಬಗೆಯ ಆಯುಧ; ತೇರು: ಬಂಡಿ; ಹರಹು: ವಿಸ್ತಾರ, ವೈಶಾಲ್ಯ; ಹೊಂತಕಾರಿ: ಪ್ರತಿಸ್ಪರ್ಧಿ, ಬಲಶಾಲಿ; ಆಳು: ಸೈನಿಕ; ಬಲು: ಬಹಳ; ಬೊಬ್ಬೆ: ಕೇಕೆ; ಘನ: ದೊಡ್ಡ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ತತಿ: ಗುಂಪು, ಸಾಲು; ಮೊಳಗು: ಧ್ವನಿ, ಸದ್ದು; ಡೌಡೆ: ನಗಾರಿ; ತೂಳು: ಬೆನ್ನಟ್ಟು, ಹಿಂಬಾಲಿಸು; ಗಜರು: ಆರ್ಭಟ, ಗರ್ಜಿಸು; ತಂಬಟ: ತಮ್ಮಟೆ; ಲಗ್ಗೆ: ಮುತ್ತಿಗೆ, ಆಕ್ರಮಣ;

ಪದವಿಂಗಡಣೆ:
ಕಾಲುಗಾಹಿನ +ಕುದುರೆಗಳ+ ಕಾ
ಲಾಳ +ಕೈವಾರಿಗಳ +ಸಬಳದ
ಸೂಳಿಗೆಯ +ತೇರುಗಳ +ಹರಹಿನ +ಹೊಂತಕಾರಿಗಳ
ಆಳ +ಬಲು +ಬೊಬ್ಬೆಯಲಿ +ಘನ +ನಿ
ಸ್ಸಾಳ+ತತಿ +ಮೊಳಗಿದವು+ ಡೌಡೆಯ
ತೂಳುವರೆಗಳು+ ಗಜರಿದವು +ತಂಬಟದ +ಲಗ್ಗೆಯಲಿ

ಅಚ್ಚರಿ:
(೧) ಕ ಕಾರದ ಸಾಲು ಪದ – ಕಾಲುಗಾಹಿನ ಕುದುರೆಗಳ ಕಾಲಾಳ ಕೈವಾರಿಗಳ
(೨) ನಿಸ್ಸಾಳ, ತಂಬಟ, ಡೌಡೆ – ಯುದ್ಧರಂಗದ ವಾದ್ಯಗಳು

ಪದ್ಯ ೨೭: ಚತುರಂಗ ಸೈನ್ಯವು ಯುದ್ಧರಂಗವನ್ನು ಹೇಗೆ ಆವರಿಸಿತು?

ಉಲಿದು ಸೂಠಿಯೊಳೇರಿದರು ವೆ
ಗ್ಗಳೆಯ ರಾತ್ವರು ಗಜರಿ ಮಸ್ತಕ
ಹಿಳಿಯಲಂಕುಶವಿಕ್ಕಿ ಬಿಟ್ಟರು ಸೊಕ್ಕಿದಾನೆಗಳ
ತಳಪಟವ ತುಂಬಿದವು ತೇರುಗ
ಳಿಳೆ ಜಡಿಯೆ ಕಾಲಾಳು ಹೊಕ್ಕೊಡೆ
ಗಲಿಸಿ ಹೊಯ್ದರು ಚೂಣಿಯರೆದುದು ಕಳನ ಚೌಕದಲಿ (ದ್ರೋಣ ಪರ್ವ, ೨ ಸಂಧಿ, ೨೭ ಪದ್ಯ
)

ತಾತ್ಪರ್ಯ:
ರಾವುತರು ಕೂಗಿ ಕುದುರೆಗಳನ್ನು ಏರಿದರು. ಅಂಕುಶವಿಟ್ಟು ಗದರಿಸಿ ಜೋದರು ಆನೆಗಳನ್ನು ಮುಂದಕ್ಕೆ ಬಿಟ್ಟರು. ಸಮತಟ್ಟಾದ ನೆಲದಲ್ಲಿ ತೇರುಗಳು ತುಂಬಿದವು. ಕಾಲಾಳುಗಳು ಒಬ್ಬರೊಡನೊಬ್ಬರು ಬೆರೆಸಿ ಶತ್ರು ಸಂಹಾರ ಮಾಡಿದರು.

ಅರ್ಥ:
ಉಲಿ: ಶಬ್ದ; ಸೂಠಿ: ವೇಗ; ಏರು: ಹೆಚ್ಚಾಗು; ವೆಗ್ಗಳ: ಹೆಚ್ಚು, ಆಧಿಕ್ಯ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಗಜರು: ಬೆದರಿಸು; ಮಸ್ತಕ: ಶಿರ; ಹಿಳಿ: ಹಿಸುಕಿ ರಸವನ್ನು ತೆಗೆ, ಹಿಂಡು; ಅಂಕುಶ: ಹಿಡಿತ, ಹತೋಟಿ; ಬಿಡು: ತೊರೆ; ಸೊಕ್ಕು: ಅಹಂಕಾರ; ಆನೆ: ಗಜ; ತಳಪಟ: ಅಂಗಾತವಾಗಿ ಬೀಳು; ಸೋಲು; ತುಂಬು: ಭರ್ತಿ; ತೇರು: ಬಂಡಿ; ಇಳೆ: ಭೂಮಿ; ಜಡಿ: ಬೆದರಿಕೆ, ಹೆದರಿಕೆ; ಕಾಲಾಳು: ಸೈನಿಕ; ಹೊಕ್ಕು: ಸೇರು; ಹೊಯ್ದು: ಹೊಡೆ; ಚೂಣಿ: ಮುಂದಿನ ಸಾಲು; ಅರೆ: ನುಣ್ಣಗೆ ಮಾಡು, ತೇಯು; ಕಳ: ರಣರಂಗ; ಚೌಕ: ಬಯಲು, ಕಣ, ರಂಗ;

ಪದವಿಂಗಡಣೆ:
ಉಲಿದು +ಸೂಠಿಯೊಳ್+ಏರಿದರು +ವೆ
ಗ್ಗಳೆಯ +ರಾವ್ತರು+ ಗಜರಿ +ಮಸ್ತಕ
ಹಿಳಿಯಲ್+ಅಂಕುಶವ್+ಇಕ್ಕಿ +ಬಿಟ್ಟರು +ಸೊಕ್ಕಿದ್+ಆನೆಗಳ
ತಳಪಟವ +ತುಂಬಿದವು+ ತೇರುಗಳ್
ಇಳೆ +ಜಡಿಯೆ +ಕಾಲಾಳು +ಹೊಕ್ಕೊಡೆಗ್
ಅಲಿಸಿ +ಹೊಯ್ದರು +ಚೂಣಿ+ಅರೆದುದು +ಕಳನ +ಚೌಕದಲಿ

ಅಚ್ಚರಿ:
(೧) ತ ಕಾರದ ತ್ರಿವಳಿ ಪದ – ತಳಪಟವ ತುಂಬಿದವು ತೇರುಗಳಿಳೆ

ಪದ್ಯ ೧: ಹತ್ತನೆಯ ದಿನದ ಪ್ರಾರಂಭವು ಹೇಗಾಯಿತು?

ಸೂಳು ಮಿಗಲಳ್ಳಿರಿದವುರು ನಿ
ಸ್ಸಾಳತತಿ ಮುಂಜಾವದಲಿ ಹೆ
ಗ್ಗಾಳೆ ಮೊರೆದವು ಕುಣಿದು ಗಜರಿದವಾನೆ ಕುದುರೆಗಳು
ತೂಳುವರೆಗಳ ಭಟರ ಘೋಳಾ
ಘೋಳಿ ದೆಸೆಗಳ ಬಗಿಯೆ ಮೂಡಣ
ಶೈಲಮಂಚದಲುಪ್ಪವಡಿಸಿದನಬುಜಿನೀರಮಣ (ಭೀಷ್ಮ ಪರ್ವ ೮ ಸಂಧಿ, ೧ ಪದ್ಯ)

ತಾತ್ಪರ್ಯ:
ಯುದ್ಧದ ಹತ್ತನೆಯ ದಿನ ಮುಂಜಾವಿನಲ್ಲಿ ಹೆಗ್ಗಾಳೆಗಳು ಭೇರಿಗಳೂ ಮೊರೆದವು. ತಮ್ಮಟೆಗಳ ಸದ್ದು, ಯೋಧರ ಗರ್ಜನೆಗಳು, ಆನೆ ಕುದುರೆಗಳು ಈ ಗರ್ಜನೆಗೆ ಧ್ವನಿಗೂಡಿಸಿದವು, ಕುದುರೆಗಳ ನಡುವಿನ ಯುದ್ಧದ ಶಬ್ದವು ದಿಕ್ಕುಗಳನ್ನು ಬಿಗಿದವು. ಸೂರ್ಯನು ಪೂರ್ವ ದಿಕ್ಕಿನ ಪರ್ವತದ ಮಂಚನ ಮೇಲಿಂದ ಮೇಲೆದ್ದನು.

ಅರ್ಥ:
ಸೂಳು: ಆವೃತ್ತಿ, ಬಾರಿ; ಮಿಗಲು: ಹೆಚ್ಚು; ಇರಿ: ಚುಚ್ಚು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಮುಂಜಾವ: ಬೆಳಗಿನ ಜಾವ; ಹೆಗ್ಗಾಳೆ: ದೊಡ್ಡ ಕಹಳೆ; ಮೊರೆ: ಧ್ವನಿ ಮಾಡು, ಝೇಂಕರಿಸು; ಕುಣಿ: ನರ್ತಿಸು; ಗಜರಿ: ಗರ್ಜನೆ; ಆನೆ: ಕರಿ, ಕುದುರೆ: ಅಶ್ವ; ತೂಳು: ಬೆನ್ನಟ್ಟು, ಹಿಂಬಾಲಿಸು; ಭಟ: ಸೈನಿಕ; ಘೋಳಾಘೋಳಿ: ಕುದುರೆಗಳ ನಡುವಿನ ಯುದ್ಧ; ದೆಸೆ: ದಿಕ್ಕು; ಬಗಿ: ಸೀಳು, ಹೋಳು ಮಾಡು; ಮೂಡಣ: ಪೂರ್ವ; ಶೈಲ: ಗಿರಿ, ಬೆಟ್ಟ; ಮಂಚ: ಪರ್ಯಂಕ; ಉಪ್ಪವಡಿಸು: ಮೇಲೇಳು; ಅಬುಜಿನೀರಮಣ: ಕಮಲದ ಗಂಡ, ಸೂರ್ಯ; ಉರು: ಹೆಚ್ಚಾದ; ತತಿ: ಗುಂಪು;

ಪದವಿಂಗಡಣೆ:
ಸೂಳು +ಮಿಗಲಳ್+ಇರಿದವ್+ಉರು +ನಿ
ಸ್ಸಾಳ+ ತತಿ+ ಮುಂಜಾವದಲಿ +ಹೆ
ಗ್ಗಾಳೆ +ಮೊರೆದವು +ಕುಣಿದು +ಗಜರಿದವ್+ಆನೆ+ ಕುದುರೆಗಳು
ತೂಳುವರೆಗಳ+ ಭಟರ+ ಘೋಳಾ
ಘೋಳಿ +ದೆಸೆಗಳ +ಬಗಿಯೆ +ಮೂಡಣ
ಶೈಲ+ಮಂಚದಲ್+ಉಪ್ಪವಡಿಸಿದನ್+ಅಬುಜಿನೀರಮಣ

ಅಚ್ಚರಿ:
(೧) ಸುರ್ಯೋದಯವನ್ನು ಹೇಳುವ ಪರಿ – ಮೂಡಣ ಶೈಲಮಂಚದಲುಪ್ಪವಡಿಸಿದನಬುಜಿನೀರಮಣ

ಪದ್ಯ ೪೬: ಯಾರ ಕೂಗಿಗೆ ಪಾರ್ಥನು ಎದ್ದನು?

ಬಂದು ಗಿರಿಕಂದರದೊಳಿಹ ಮುನಿ
ವೃಂದದೊಳಗಡಹಾಯ್ದು ಕೆಡಹುತ
ಹಂದಿ ಮೋರೆಯ ನೆಗಹಿ ಮಲೆವುತ ಗಜರಿ ಗರ್ಜಿಸಿತು
ಮಂದಿ ಬೆದರುತ ಗೋಳಿಡುತಲಾ
ಇಂದುಧರನೇ ಬಲ್ಲ ಶಿವ ಶಿವ
ಯೆಂದು ಮೊರೆಯಿಡೆ ಕೇಳಿ ಕಂದೆರೆದೆದ್ದನಾ ಪಾರ್ಥ (ಅರಣ್ಯ ಪರ್ವ, ೬ ಸಂಧಿ, ೪೬ ಪದ್ಯ)

ತಾತ್ಪರ್ಯ:
ಹಂದಿಯು ಇಂದ್ರಕೀಲ ಪರ್ವತದ ಕಂದರದೊಳಗೆ ಋಷಿಮುನಿಗಳ ನಡುವೆ ಬಂದು ಅವರನ್ನು ಕೆಡವಿ ಮುಖವನ್ನು ಮೇಲಕ್ಕೆತ್ತಿ ಗರ್ವದಿಂದ ಕೂಗಾಡಿ ಹೆದರಿಸಲಾರಂಭಿಸಿತು, ಮುನಿಗಳು ಶಿವ ಶಿವ ಇದೇನೋ ಶಿವನೇ ಬಲ್ಲ ಎಂದು ಗೋಳಾಡಿದರು. ಅವರ ಆರ್ತನಾದವನ್ನು ಕೇಳಿ ಅರ್ಜುನನು ಕಣ್ಣು ತೆರೆದು ನೋಡಿ ಎದ್ದು ನಿಂತನು.

ಅರ್ಥ:
ಬಂದು: ಆಗಮಿಸು; ಗಿರಿ: ಬೆಟ್ಟ; ಕಂದರ: ಕಣಿವೆ; ಮುನಿ: ಋಷಿ; ವೃಂದ: ಗುಂಪು; ಅಡಹಾಯ್ದು: ಮಧ್ಯ ಪ್ರವೇಶಿಸಿ; ಕೆಡಹು: ಹಾಳುಮಾಡು, ತಳ್ಳು; ಹಂದಿ: ಸೂಕರ; ಮೋರೆ: ಮುಖ; ನೆಗಹು: ಮೇಲೆತ್ತು; ಮಲೆ: ಸೊಕ್ಕು, ಗರ್ವ, ಪರ್ವತ; ಗಜರು: ಗದರು, ಬೆದರಿಸು; ಗರ್ಜಿಸು: ಜೋರಾಗಿ ಕೂಗು; ಮಂದಿ: ಜನ; ಬೆದರು: ಹೆದರು, ಭಯಗೊಳ್ಳು; ಗೋಳಿಡು: ಅಳು; ಇಂದುಧರ: ಶಿವ; ಇಂದು: ಚಂದ್ರ; ಮೊರೆ: ಅಳಲು, ಗೋಳಾಟ; ಕೇಳು: ಆಲಿಸು; ಕಂದೆರೆ: ಕಣ್ಣನ್ನು ತೆರೆ; ಎದ್ದು: ಮೇಲೇಳು;

ಪದವಿಂಗಡಣೆ:
ಬಂದು+ ಗಿರಿಕಂದರದೊಳ್+ಇಹ +ಮುನಿ
ವೃಂದದೊಳಗ್+ಅಡಹಾಯ್ದು +ಕೆಡಹುತ
ಹಂದಿ +ಮೋರೆಯ +ನೆಗಹಿ+ ಮಲೆವುತ+ ಗಜರಿ +ಗರ್ಜಿಸಿತು
ಮಂದಿ +ಬೆದರುತ +ಗೋಳಿಡುತಲ್+ಆ
ಇಂದುಧರನೇ +ಬಲ್ಲ +ಶಿವ+ ಶಿವ
ಯೆಂದು +ಮೊರೆಯಿಡೆ+ ಕೇಳಿ+ ಕಂದೆರೆದ್+ಎದ್ದನಾ +ಪಾರ್ಥ

ಅಚ್ಚರಿ:
(೧) ಹಂದಿ, ಮಂದಿ – ಪ್ರಾಸ ಪದಗಳು
(೨) ಮೂಕಾಸುರನ ಅಟ್ಟಹಾಸವನ್ನು ಹೇಳುವ ಪರಿ – ಕೆಡಹುತ ಹಂದಿ ಮೋರೆಯ ನೆಗಹಿ ಮಲೆವುತ ಗಜರಿ ಗರ್ಜಿಸಿತು

ಪದ್ಯ ೧೩: ಕರ್ಣನ ಮಾತಿಗೆ ದ್ರೌಪದಿಯ ಉತ್ತರವೇನು?

ಎಲೆಗೆ ಭಜಿಸಾ ಕೌರವಾನ್ವಯ
ತಿಲಕನನು ನಿನ್ನವರ ಮರೆ ನಿ
ನ್ನುಳಿವ ನೆನೆಯೀ ಸಮಯದಲಿ ಕಾಲೋಚಿತ ಕ್ರಮವ
ಬಳಸು ನೀನೆನೆ ಗಜರಿದಳು ಕುರು
ತಿಲಕನನು ತರಿದೊಟ್ಟಿ ರಣದಲಿ
ತಿಳಿರಕುತದಲಿ ದಣಿವನನಿಲಜನೆಂದಳಿಂದುಮುಖಿ (ಸಭಾ ಪರ್ವ, ೧೬ ಸಂಧಿ, ೧೩ ಪದ್ಯ)

ತಾತ್ಪರ್ಯ:
ಕರ್ಣನು, ಎಲೆ ದ್ರೌಪದಿ ನೀನು ಕುರುಕುಲತಿಲಕನಾದ ದುರ್ಯೋಧನನನ್ನು ಸೇವಿಸು, ಪಾಂಡವರನ್ನು ಮರೆತುಬಿಡು, ಈಗು ಉಳಿದುಕೊಳ್ಳುವುದನ್ನು ನೋಡಿ, ಕಾಲಕ್ಕೆ ತಕ್ಕಂತೆ ವರ್ತಿಸು ಎನ್ನಲು, ದ್ರೌಪದಿಯು ಕರ್ಣನನ್ನು ಗದರಿಸಿ, ಆ ಕುರುಕುಲತಿಲಕನನ್ನು ಮುಂದೆ ಯುದ್ಧದಲ್ಲಿ ಸೀಳಿ ಅವನ ತಿಳಿರಕ್ತವನ್ನು ಕುಡಿದು ಭೀಮನು ತಣಿಯುತ್ತಾನೆ ಎಂದು ಗರ್ಜಿಸಿದಳು.

ಅರ್ಥ:
ಭಜಿಸು: ಆರಾಧಿಸು; ಅನ್ವಯ: ವಂಶ, ಸಂಬಂಧ; ತಿಲಕ: ಶ್ರೇಷ್ಠ; ಮರೆ: ನೆನಪಿನಿಂದ ದೂರ ಮಾಡು; ಉಳಿವು: ಬದುಕು; ನೆನೆ: ಜ್ಞಾಪಿಸಿಕೋ; ಸಮಯ: ಕಾಲ; ಉಚಿತ: ಸರಿಯಾದ; ಕ್ರಮ: ರೀತಿ; ಬಳಸು: ಸುತ್ತುವರಿ, ಸುತ್ತುಗಟ್ಟು; ಗಜರು: ಗರ್ಜಿಸು; ತರಿ: ಸೀಳು; ರಣ: ಯುದ್ಧ; ತಿಳಿ: ನಿರ್ಮಲ, ಶುದ್ಧ; ರಕುತ: ನೆತ್ತರು; ದಣಿ: ಆಯಾಸ; ಅನಿಲಜ: ವಾಯುಪುತ್ರ (ಭೀಮ); ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಎಲೆಗೆ +ಭಜಿಸಾ +ಕೌರವ+ಅನ್ವಯ
ತಿಲಕನನು +ನಿನ್ನವರ +ಮರೆ +ನಿನ್
ಉಳಿವ+ ನೆನೆ+ಈ +ಸಮಯದಲಿ+ ಕಾಲೋಚಿತ+ ಕ್ರಮವ
ಬಳಸು +ನೀನ್+ಎನೆ +ಗಜರಿದಳು +ಕುರು
ತಿಲಕನನು +ತರಿದೊಟ್ಟಿ +ರಣದಲಿ
ತಿಳಿ+ರಕುತದಲಿ +ದಣಿವನ್+ಅನಿಲಜನ್+ಎಂದಳ್+ಇಂದುಮುಖಿ

ಅಚ್ಚರಿ:
(೧) ದ್ರೌಪದಿಯ ಗರ್ಜನೆ: ಕುರುತಿಲಕನನು ತರಿದೊಟ್ಟಿ ರಣದಲಿತಿಳಿರಕುತದಲಿ ದಣಿವನನಿಲಜನೆಂದಳಿಂದುಮುಖಿ