ಪದ್ಯ ೭೦: ಯಾರನ್ನು ಎದುರಿಸುವೆ ನೆಂದು ಘಟೋತ್ಕಚನು ಹೇಳಿದನು?

ಅಳಹಿರಿ ನಿಮಗಂಜುವೆನು ಕಾ
ಲಳ ಹೊಯ್ಯೆನು ಕುದುರೆಕಾರರು
ಮೇಲುವಾಯಲಿ ರಥಿಕರೊಡೆಹಾಯಿಸಲಿ ತೇರುಗಳ
ತೂಳಿಸಲಿ ಗಜದಳವನವರಿಗೆ
ಕೋಲ ತೊಡಚುವನಲ್ಲ ನೆರೆ ಹೀ
ಹಾಳಿಯುಳ್ಳರೆ ಬರಲಿ ಕರ್ಣ ದ್ರೋಣ ಕೃಪರೆನುತ (ದ್ರೋಣ ಪರ್ವ, ೧೫ ಸಂಧಿ, ೭೦ ಪದ್ಯ)

ತಾತ್ಪರ್ಯ:
ಘಟೋತ್ಕಚನು, ವೀರರಾದ ನಿಮಗೆ ನಾನು ಹೆದರುತ್ತೇನೆ. ಕಾಲಾಳುಗಳು ಮೇಲೆ ಬೀಳಲಿ, ನನ್ನ ಮೇಲೆ ರಥಗಳನ್ನು ಹಾಯಿಸಿರಿ, ಆನೆಗಳನ್ನು ನನ್ನ ಮೇಲೆ ಬಿಡಲಿ, ಅವರಾರನ್ನೂ ನನ್ನ ಬಾಣಗಳಿಂದ ಹೊಡೆಯುವುದಿಲ್ಲ, ಛಲ ಹುರುಡುಗಳಿದ್ದರೆ ಕರ್ಣ, ದ್ರೋಣ, ಕೃಪರು ನನ್ನೊಡನೆ ಯುದ್ಧಕ್ಕೆ ಬರಲಿ ಎಂದನು.

ಅರ್ಥ:
ಆಳು: ಸೇವಕ; ಹಿರಿ: ದೊಡ್ಡವ; ಅಂಜು: ಹೆದರು; ಕಾಲಾಳು: ಸೈನಿಕ; ಹೊಯ್ದು: ಹೊಡೆದು; ಕುದುರೆ: ಅಶ್ವ; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ತೇರು: ಬಂಡಿ; ತೂಳು: ಹೊಡೆ; ಗಜ: ಆನೆ; ದಳ: ಗುಂಪು, ಸೈನ್ಯ; ಕೋಲ: ಬಾಣ; ತೊಡಚು: ಕಟ್ಟು, ಬಂಧಿಸು; ನೆರೆ: ಗುಂಪು; ಹೀಹಾಳಿ: ಗಳಿಕೆ, ಅವಹೇಳನ; ಬರಲಿ: ಆಗಮಿಸು;

ಪದವಿಂಗಡಣೆ:
ಅಳಹಿರಿ +ನಿಮಗ್+ಅಂಜುವೆನು +ಕಾ
ಲಳ ಹೊಯ್ಯೆನು ಕುದುರೆಕಾರರು
ಮೇಲುವಾಯಲಿ +ರಥಿಕರೊಡೆ+ಹಾಯಿಸಲಿ +ತೇರುಗಳ
ತೂಳಿಸಲಿ +ಗಜದಳವನ್+ಅವರಿಗೆ
ಕೋಲ +ತೊಡಚುವನಲ್ಲ +ನೆರೆ+ ಹೀ
ಹಾಳಿಯುಳ್ಳರೆ +ಬರಲಿ+ ಕರ್ಣ +ದ್ರೋಣ +ಕೃಪರೆನುತ

ಅಚ್ಚರಿ:
(೧) ಹೊಯ್ಯೆನು, ಹಾಯಿಸು, ಹೀಹಾಳಿ – ಹ ಕಾರದ ಪದಗಳು

ಪದ್ಯ ೮೩: ಕೌರವ ಸೈನ್ಯವೇಕೆ ತಲ್ಲಣಿಸಿತು?

ಹೋಯಿತಾ ಮಾತೇಕೆ ಗಜದಳ
ಮಾಯವಾದುದು ವಂಗಭೂಪನ
ಬಾಯೊಳಗೆ ಬೆಟ್ಟಿದನು ಗದೆಯನು ಮಿಕ್ಕ ನಾಲ್ವರನು
ಸಾಯ ಬಡಿದನು ಮುಂದೆ ಕೌರವ
ರಾಯನನು ತಾಗಿದನು ಭೀಮನ
ದಾಯ ಬಂದುದು ಸಕಲ ಕುರು ತಳತಂತ್ರ ತಲ್ಲಣಿಸೆ (ದ್ರೋಣ ಪರ್ವ, ೨ ಸಂಧಿ, ೮೩ ಪದ್ಯ)

ತಾತ್ಪರ್ಯ:
ಗಜಸೈನ್ಯವು ಮಾಯವಾಗಿ ಹೋಯಿತು, ಅದರ ಮಾತೇಕೆ? ವಂಗರಾಜನ ಬಾಯಲ್ಲಿ ಗದೆಯನ್ನು ತುರುಕಿದನು. ಉಳಿದ ನಾಲ್ವರನ್ನು ಸಾಯಬಡಿದನು. ಕೌರವನ ಮೇಲೆ ಆಕ್ರಮಣ ಮಾಡಿದನು. ಸಮಸ್ತ ಕುರುಸೈನ್ಯವೂ ತಲ್ಲಣಿಸಿತು.

ಅರ್ಥ:
ಹೋಯಿತು: ಗಮಿಸು; ಮಾತು: ವಾಣಿ; ಗಜದಳ: ಆನೆಯ ಸೈನ್ಯ; ಮಾಯ: ಕಣ್ಣಿಗೆ ಕಾಣದಿರು; ಭೂಪ: ರಾಜ; ಬೆಟ್ಟು: ಕಡಿ, ಕತ್ತರಿಸು; ಗದೆ: ಮುದ್ಗರ; ಮಿಕ್ಕು: ಉಳಿದ; ಸಾಯು: ಸಾಯಿಸು; ಬಡಿ: ಹೊಡೆ; ಮಂದೆ: ಎದುರು; ರಾಯ: ರಾಜ; ತಾಗು: ಮುಟ್ಟು; ಆಯ: ಪರಿಮಿತಿ; ಬಂದು: ಆಗಮಿಸು; ಸಕಲ: ಎಲ್ಲಾ; ತಳತಂತ್ರ: ಕಾಲಾಳುಗಳ ಪಡೆ; ತಲ್ಲಣ: ಅಂಜಿಕೆ, ಭಯ;

ಪದವಿಂಗಡಣೆ:
ಹೋಯಿತಾ +ಮಾತೇಕೆ +ಗಜದಳ
ಮಾಯವಾದುದು+ ವಂಗ+ಭೂಪನ
ಬಾಯೊಳಗೆ +ಬೆಟ್ಟಿದನು +ಗದೆಯನು +ಮಿಕ್ಕ +ನಾಲ್ವರನು
ಸಾಯ +ಬಡಿದನು +ಮುಂದೆ+ ಕೌರವ
ರಾಯನನು+ ತಾಗಿದನು +ಭೀಮನದ್
ಆಯ +ಬಂದುದು +ಸಕಲ +ಕುರು +ತಳತಂತ್ರ +ತಲ್ಲಣಿಸೆ

ಅಚ್ಚರಿ:
(೧) ಭೀಮನ ಪರಾಕ್ರಮ – ಗಜದಳ ಮಾಯವಾದುದು, ವಂಗಭೂಪನ ಬಾಯೊಳಗೆ ಬೆಟ್ಟಿದನು ಗದೆಯನು

ಪದ್ಯ ೮: ಧೃಷ್ಟದ್ಯುಮ್ನನು ಹೇಗೆ ಕಂಡನು?

ನಸುನಗೆಯ ಚೂಣಿಯಲಿ ವದನದ
ರಸುಮೆ ಝಳಪಿಸೆ ಕೌರವೇಂದ್ರಂ
ಗುಸುರಿದನು ಕಲಿಭೀಷ್ಮನವಧರಿಸೈ ಮಹೀಪತಿಯೆ
ಪಸರಿಸಿದ ಮುಗಿಲೊಡ್ಡಿನಲಿ ಮಿಂ
ಚೆಸೆವವೊಲು ಗಜದಳದ ಮಧ್ಯದೊ
ಳೆಸೆವನಾತನು ವೀರಧೃಷ್ಟದ್ಯುಮ್ನ ನೋಡೆಂದ (ಭೀಷ್ಮ ಪರ್ವ, ೨ ಸಂಧಿ, ೮ ಪದ್ಯ)

ತಾತ್ಪರ್ಯ:
ದುರ್ಯೋಧನನ ಮಾತನ್ನು ಕೇಳಿ ಪ್ರಸನ್ನನಾದ ಭೀಷ್ಮನ ಮುಖದಲ್ಲಿ ನಸುನಗೆಯು ಆವರಿಸಿತು, ಅವನು ಕೌರವನಿಗೆ ದೊರೆಯೇ ಮನಸ್ಸಿಟ್ಟು ಕೇಳು, ಶತ್ರುಗಳ ಗಜಸೈನ್ಯದ ನಡುವೆ, ಆಕಾಶದಲ್ಲಿ ಕವಿದ ಮೋಡಗಳ ನಡುವೆ ಮಿಂಚು ಹೊಳೆಯುವಂತೆ ಪ್ರಕಾಶಿಸುತ್ತಿರುವನೇ ಪಾಂಡವರ ಸೇನಾಧಿಪತಿಯಾದ ಧೃಷ್ಟದ್ಯುಮ್ನನನ್ನು ನೋಡು ಎಂದು ತೋರಿಸಿದನು.

ಅರ್ಥ:
ನಸುನಗೆ: ಹಸನ್ಮುಖ; ಚೂಣಿ: ಮುಂದಿನ ಸಾಲು, ಮುಂಭಾಗ; ವದನ: ಮುಖ; ರಸುಮೆ: ರಶ್ಮಿ, ಕಿರಣ; ಝಳಪಿಸು: ಕಾಂತಿ, ಹೊಳೆ; ಉಸುರು: ಹೇಳು; ಕಲಿ: ಶೂರ; ಅವಧರಿಸು: ಮನಸ್ಸಿಟ್ಟು ಕೇಳು; ಮಹೀಪತಿ: ರಾಜ; ಪಸರಿಸು: ಹರಡು; ಮುಗಿಲು: ಆಗಸ; ಮಿಂಚು: ಪ್ರಕಾಶ; ಎಸೆವ: ತೋರುವ; ಗಜದಳ: ಆನೆಗಳ ಸೈನ್ಯ; ಮಧ್ಯ: ನಡುವೆ; ವೀರ: ಶೂರ; ನೋಡು: ವೀಕ್ಷಿಸು;

ಪದವಿಂಗಡಣೆ:
ನಸುನಗೆಯ +ಚೂಣಿಯಲಿ+ ವದನದ
ರಸುಮೆ +ಝಳಪಿಸೆ +ಕೌರವೇಂದ್ರಂಗ್
ಉಸುರಿದನು +ಕಲಿ+ಭೀಷ್ಮನ್+ಅವಧರಿಸೈ+ ಮಹೀಪತಿಯೆ
ಪಸರಿಸಿದ+ ಮುಗಿಲೊಡ್ಡಿನಲಿ+ ಮಿಂಚ್
ಎಸೆವವೊಲು +ಗಜದಳದ +ಮಧ್ಯದೊಳ್
ಎಸೆವನ್+ಆತನು +ವೀರ+ಧೃಷ್ಟದ್ಯುಮ್ನ +ನೋಡೆಂದ

ಅಚ್ಚರಿ:
(೧) ಕಲಿ, ವೀರ – ಸಮನಾರ್ಥಕ ಪದ
(೨) ಧೃಷ್ಟದ್ಯುಮ್ನನನ್ನು ವಿವರಿಸುವ ಪರಿ – ಪಸರಿಸಿದ ಮುಗಿಲೊಡ್ಡಿನಲಿ ಮಿಂಚೆಸೆವವೊಲು ಗಜದಳದ ಮಧ್ಯದೊಳೆಸೆವನಾತನು ವೀರಧೃಷ್ಟದ್ಯುಮ್ನ